Saturday, June 29, 2024

ಸತ್ಯ | ನ್ಯಾಯ |ಧರ್ಮ

ಮುಸ್ಲಿಂ ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆಸಿದ ಪ್ರಕರಣ: ಯುಪಿ ಸರ್ಕಾರಕ್ಕೆ ಛೀಮಾರಿ ಹಾಕಿದ ಕೋರ್ಟ್

ಹೊಸ ದೆಹಲಿ: ಮುಜಾಫರ್‌ ನಗರದ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಶಿಕ್ಷಕಿಯೊಬ್ಬರು ಸಹಪಾಠಿಗಳ ಕೈಯಲ್ಲಿ ಹೊಡೆಸಿ, ನಿಂದಿಸಿದ ಪ್ರಕರಣದಲ್ಲಿ ಉತ್ತರ ಪ್ರದೇಶ ಸರ್ಕಾರದ ಧೋರಣೆ “ಆಘಾತಕಾರಿ” ಎಂದು ಸುಪ್ರೀಂಕೋರ್ಟ್ ಹೇಳಿದೆ. (approach of the Uttar Pradesh Government in the #Muzaffarpur student slapping case “shocking”.)

ನ್ಯಾಯಾಲಯದ ಆದೇಶದ ಹೊರತಾಗಿಯೂ ಸಂತ್ರಸ್ತ ವಿದ್ಯಾರ್ಥಿಗೆ ಸಮಾಲೋಚನೆ ನೀಡದಿದ್ದಕ್ಕಾಗಿ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಡಿಸೆಂಬರ್ 11ರಂದು ವರ್ಚುವಲ್‌ ವಿಚಾರಣೆಗೆ ಹಾಜರಿರಬೇಕು ಎಂದು ಕೋರ್ಟ್‌ ಆದೇಶಿಸಿದೆ.

“ಸೆಪ್ಟೆಂಬರ್ 25ರಿಂದ ಆರಂಭಗೊಂಡು ಕಾಲಕಾಲಕ್ಕೆ ನ್ಯಾಯಾಲಯವು ಹೊರಡಿಸಿದ ವಿವಿಧ ಆದೇಶಗಳನ್ನು ಯುಪಿ ಸರ್ಕಾರ ಮತ್ತು ವಿಶೇಷವಾಗಿ ಶಿಕ್ಷಣ ಇಲಾಖೆಯು ಪಾಲಿಸಿಲ್ಲವೆನ್ನುವುದು ನಮ್ಮ ಗಮನಕ್ಕೆ ಬಂದಿದೆ. ಸಂತ್ರಸ್ತ ಬಾಲಕ ಮತ್ತು ಇತರ ಮಕ್ಕಳಿಗೆ ಈ ವಿಷಯದಲ್ಲಿ ಸರಿಯಾದ ಕೌನ್ಸೆಲಿಂಗ್ ನಡೆಸಲಾಗಿಲ್ಲ” ಎಂದು ನ್ಯಾಯಾಲಯ ಹೇಳಿದೆ.

“ರಾಜ್ಯ ಸಲ್ಲಿಸಿರುವ ಅಫಿಡವಿಟ್‌ ನೋಡಿ ಹೇಳುವುದಾದರೆ, ಅದರ ಧೋರಣೆ ಆಘಾತಕಾರಿಯಾಗಿದೆ” ಎಂದು ನ್ಯಾಯಮೂರ್ತಿ ಎಎಸ್ ಓಕಾ (Justice AS Oka) ನೇತೃತ್ವದ ಪೀಠವು ಹೇಳಿದೆ.

ಸರ್ಕಾರದ ನಿಷ್ಕ್ರಿಯತೆಯ ಕಾರಣಕ್ಕಾಗಿ, ಕೌನ್ಸೆಲಿಂಗ್ ನೀಡುವ ವಿಧಾನ ಮತ್ತು ರೀತಿಯನ್ನು ಸೂಚಿಸಲು ಪೀಠವು TISS ಅನ್ನು ನೇಮಿಸುವುದಾಗಿ ಹೇಳಿದೆ.

ಕೆಲವು ತಿಂಗಳುಗಳ ಹಿಂದೆ ಶಿಕ್ಷಕಿಯೊಬ್ಬರು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗೆ ಅವನ ಸಹಪಾಠಿಗಳಿಂದ ಕಪಾಳಕ್ಕೆ ಹೊಡೆಸಿದ್ದಲ್ಲದೆ ಆ ಹುಡುಗನನ್ನು ಧಾರ್ಮಿಕವಾಗಿ ನಿಂದನೆಯ ಮಾತುಗಳನ್ನು ಆಡಿದ್ದರು. ಇದಕ್ಕೆ ಸಂಬಂಧಿಸಿದ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ ಕೂಡಾ ಆಘಾತ ವ್ಯಕ್ತಪಡಿಸಿ ಸ್ವಯಂ ಪ್ರೇರಣೆಯಿಂದ ಕೇಸ್‌ ದಾಖಲಿಸಿಕೊಂಡಿತ್ತು. ಈ ಘಟನೆ ನಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿದೆ ಎಂದು ಅಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

Related Articles

ಇತ್ತೀಚಿನ ಸುದ್ದಿಗಳು