Monday, June 17, 2024

ಸತ್ಯ | ನ್ಯಾಯ |ಧರ್ಮ

ಬಲಿರಾಜ ಮರಳಿ ಬಾರಯ್ಯ!

ಆರ್ಯರು ಮಧ್ಯ ಏಷ್ಯಾದಿಂದ ಬಂದ ಚರಿತ್ರೆ ಎಲ್ಲರಿಗೂ ತಿಳಿದಿದೆ. ಮಧ್ಯ ಏಷ್ಯಾ ಅಂದರೆ ಇಂದಿನ ಇರಾನ್- ಇರಾಕ್ ಪ್ರದೇಶ ಆಗಿದೆ. ಅದಕ್ಕೆ ‘ಇರಾನಿಯನ್ನರು’ ಮತ್ತು ‘ಆರ್ಯನ್ನರು’ ಎಂಬ ಹೋಲಿಕೆ ಪದಗಳ ಸಹಿತ ಇವರಿಬ್ಬರ ಜನಾಂಗೀಯ ರೂಪ ಮೂಲ ಕೂಡ ಒಂದೇ ಆಗಿದೆ ಎಂಬುದು ಇತಿಹಾಸದ ಮತ್ತು ಮಾನವಶಾಸ್ತ್ರದ ವಿವರಣೆ. ಹೀಗೆ ಆರ್ಯರು ಮಧ್ಯ ಏಷ್ಯಾದಿಂದ ಬರುವಾಗ ಭಾರತದಲ್ಲಿ ಒಂದು ಜನಾಂಗ, ಆ ಜನಾಂಗಕ್ಕೊಬ್ಬ ರಾಜ ಇತ್ಯಾದಿ ಇರಬೇಕಿತ್ತಲ್ಲವೆ? ಹೌದು, ಹಾಗೆ ಇದ್ದ ರಾಜರುಗಳೇ ಈ ದೇಶದ ಮೂಲನಿವಾಸಿ ಅಸುರ ರಾಜರುಗಳು ಮತ್ತು ಅವರನ್ನು ದ್ರಾವಿಡ, ನಾಗ ಹೀಗೆ ಬೇರೆ ಬೇರೆ ಹೆಸರುಗಳಿಂದ ಇತಿಹಾಸ ಗುರುತಿಸುತ್ತದೆ. ಅದು ಅಲ್ಲದೆ ಆರ್ಯರು ಭಾರತಕ್ಕೆ ದಂಡೆತ್ತಿ ಬಂದರು. ಈ ನಿಟ್ಟಿನಲ್ಲಿ ಅವರಲ್ಲಿ ದಂಡನಾಯಕರುಗಳು ಇದ್ದಿರಬೇಕಲ್ಲವೆ? ಖಂಡಿತ ಇದ್ದರು. ಪುರಾಣಗಳಲ್ಲಿ ಕಂಡುಬರುವ ದಶಾವತಾರ ಆರ್ಯರ ಈ ದಂಡನಾಯಕರುಗಳ ನೈಜ ಕತೆಯಾಗಿದೆ. ಇದು ಈ ದೇಶದ ಸತ್ಯ ಇತಿಹಾಸವನ್ನು ಶೋಧಿಸಲೆಂದೇ ‘ಸತ್ಯ ಶೋಧಕ ಸಮಾಜ’ ಕಟ್ಟಿದ ಖ್ಯಾತ ಸಮಾಜ ಸುಧಾರಕರಾದ ಮಹಾತ್ಮ ಜ್ಯೋತಿಬಾಫುಲೆಯವರ ವಾದ. ಇದನ್ನೆ ಡಾ. ಅಂಬೇಡ್ಕರರು ‘ಬ್ರಾಹ್ಮಣ ಇತಿಹಾಸಕಾರರು ಭಾರತದ ಚರಿತ್ರೆಯನ್ನು (ಪುರಾಣಗಳ ರೂಪದಲ್ಲಿ) ಹೆಂಗಸರು ಮತ್ತು ಮಕ್ಕಳನ್ನು ರಂಜಿಸುವ ಕಥೆಗಳನ್ನಾಗಿ ಮಾಡಿದ್ದಾರೆ’ ಎಂದಿರುವುದು.

ಅಂದಹಾಗೆ ಆರ್ಯರು ಭಾರತಕ್ಕೆ ಹೇಗೆ ಬಂದರು? ಯಾವ ರೂಪಗಳಲ್ಲಿ ಬಂದರು? ಸಣ್ಣ ಸಣ್ಣ ದೋಣಿಗಳ ಮೂಲಕ ಅರೇಬಿಯನ್ ಸಮುದ್ರ ದಾಟಿ ಅವರು ಭಾರತದ ಪಶ್ಚಿಮ ತೀರಕ್ಕೆ ಬಂದರು. ಸಣ್ಣ ಸಣ್ಣ ದೋಣಿಗಳಲ್ಲಿ ಮೀನಿನ ಹಾಗೆ ದಂಡೆತ್ತಿ ಬಂದ ಆರ್ಯರ ಆ ಗುಂಪಿನ ನೇತಾರ ‘ಮತ್ಸ್ಯ’ ಎಂಬುವವನಾಗಿದ್ದ ಮತ್ತು ಆ ಕಾರಣಕ್ಕೆ ದಶಾವತಾರದ ಮೊದಲ ಅವತಾರ ಮತ್ಸ್ಯಾವತಾರ! (ಜ್ಯೋತಿಬಾಫುಲೆಯವರ ಬರಹಗಳು, ಇಂಗ್ಲಿಷ್ ಸಂ.1, ಪು.5). ಮತ್ಸ್ಯನ ನೇತೃತ್ವದ ಆರ್ಯರ ಈ ದಂಡನ್ನು ಮೂಲನಿವಾಸಿ ಅರಸ ಶಂಕಾಸುರ ಸೋಲಿಸಿ ಅರಣ್ಯದ ಕಡೆ ಓಡಿಸಿದ.

ತದನಂತರ ಆರ್ಯರ ಮತ್ತೊಂದು ದಂಡು ಮೊದಲಿಗಿಂತ ದೊಡ್ಡ ದೊಡ್ಡ ದೋಣಿಗಳಲ್ಲಿ ಮೀನಿಗಿಂತ ದೊಡ್ಡದಾದ ಆಮೆಗಳಂತೆ ಬಂತು.. ಆಮೆ ಅಂದರೆ ಕೂರ್ಮ. ಅದಕ್ಕೆ ದಶಾವತಾರದ ಎರಡನೇ ಅವತಾರ ಕೂರ್ಮಾವತಾರ! ಆರ್ಯರ ಈ ತಂಡದ ನೇತಾರ ‘ಕಚ್ಛ’ ಎಂಬುವವನಾಗಿದ್ದ. ಆತ ಮತ್ಸ್ಯನನ್ನು ಸೋಲಿಸಿದ್ದ ಮೂಲನಿವಾಸಿ ಶಂಕಾಸುರನ ನಂತರದ ರಾಜ ಕಶ್ಯಪ ಎಂಬುವವನನ್ನು ಸೋಲಿಸಿದ. ಅಂದಹಾಗೆ ಕಚ್ಛನ ನಂತರ ಆರ್ಯರ ನಡುವೆ ಬಂದ ಮತ್ತೊಬ್ಬ ನೇತಾರ ‘ವರಾಹ’ ಎಂಬುವವನಾಗಿದ್ದ. ವರಾಹ ಎಂದರೆ ಹಂದಿ. ಈತನ್ನು ವಿವರಿಸುತ್ತಾ ಜ್ಯೋತಿಬಾಫುಲೆಯವರು “ಈತನ ಗುಣ ಮತ್ತು ರೂಪ ತುಂಬಾ ಕೊಳಕಾಗಿದ್ದಿರಬೇಕು. ಗೆಲುವಿಗಾಗಿ ಯದ್ವಾತದ್ವಾ ಮುನ್ನುಗ್ಗುತ್ತಿದ್ದ ಈತನನ್ನು ಹಿರಣ್ಯಾಕ್ಷ ಮತ್ತು ಹಿರಣ್ಯ ಕಶ್ಯಪುವಿನ ಸಾಮ್ರಾಜ್ಯದ ಪ್ರಜೆಗಳು ತಿರಸ್ಕಾರದ ಭಾಷೆಯಲ್ಲಿ ವರಾಹ ಅಥವಾ ಹಂದಿ ಎಂದು ಕರೆದಿರಬೇಕು” ಎನ್ನುತ್ತಾರೆ. (ಅದೇ ಕೃತಿ, ಪು.9). ವರಾಹ ಎಂಬ ಈ ಕಾರಣಕ್ಕೆ ದಶಾವತಾರದ ವರಹಾವತಾರ ಎಂಬುದಿಲ್ಲಿ ಸ್ಪಷ್ಟ. ಅಂದಹಾಗೆ ಈ ವರಾಹ ಕಶ್ಯಪನ ನಂತರದ ಮೂಲನಿವಾಸಿ ರಾಜ ಹಿರಣ್ಯಾಕ್ಷನನ್ನು ಯುದ್ಧದಲ್ಲಿ ಸೋಲಿಸಿ ಕೊಂದು ಹಾಕುತ್ತಾನೆ. ಈ ಸರಣಿಯನ್ನು ಹೀಗೆಯೇ ಮುಂದುವರಿಸುವುದಾದರೆ, ಹಿರಣ್ಯಾಕ್ಷನ ಸಹೋದರ ಹಿರಣ್ಯ ಕಶ್ಯಪು. ಆತನನ್ನು ಮೋಸದಿಂದ ಕೊಂದ ಆರ್ಯರ ಅರಸ ನರಸಿಂಹ (ನರಸಿಂಹಾವತಾರ). ತದನಂತರ ಬಂದ ಹಿರಣ್ಯ ಕಶ್ಯಪುವಿನ ಮಗ ಪ್ರಹ್ಲಾದ, ಪ್ರಹ್ಲಾದನ ನಂತರ ವಿರೋಚನ, ವಿರೋಚನನ ನಂತರ ಆತನ ಮಗ ಬಲಿ…. ಒಟ್ಟಾರೆ ದಂಡೆತ್ತಿ ಬಂದ ಆರ್ಯರು ಮತ್ತು ಈ ದೇಶದ ಮೂಲನಿವಾಸಿ ಅಸುರ ಅರಸರುಗಳ ನಡುವೆ ಭಾರೀ ಕಾದಾಟ ನಡೆಯುತ್ತದೆ. ಅಸುರ ರಾಜರ ಈ ಸರಣಿಯಲ್ಲಿ ಆರ್ಯರಿಗೆ ಅತಿ ಪ್ರತಿರೋಧ ತೋರಿದವನೇ ಬಲಿ ಅರ್ಥಾತ್ ಬಲಿ ಚಕ್ರವರ್ತಿ.

ಬಲಿ ಚಕ್ರವರ್ತಿ; ಆತನ ಸಾಮ್ರಾಜ್ಯ ವಿಶಾಲವಾದುದಾಗಿತ್ತು. ಈ ಬಗ್ಗೆ ಬರೆಯುತ್ತಾ ಮಹಾತ್ಮ ಜ್ಯೋತಿಬಾಫುಲೆಯವರು “ಬಲಿಯ ಸಾಮ್ರಾಜ್ಯ ಬಹಳ ವಿಸ್ತಾರವಾದುದಾಗಿತ್ತು. ಸಿಂಹಳ ಸೇರಿದಂತೆ ಒಂದೆರಡು ದ್ವೀಪಗಳನ್ನೂ ಆತ ತನ್ನ ಸಾಮ್ರಾಜ್ಯದಲ್ಲಿ ಹೊಂದಿದ್ದ. ಈ ದ್ವೀಪಗಳಲ್ಲಿ ಮಲೇಷಿಯಾದ ‘ಬಾಲಿ’ ಅಥವಾ ‘ಬಲಿ’ ಕೂಡ ಒಂದು”. ಈ ಮೂಲಕ ಬಲಿಯ ಸಾಮ್ರಾಜ್ಯ ಅಗಾಧವಾದುದಾಗಿತ್ತು ಎಂಬುದು ತಿಳಿಯುತ್ತದೆ. ಇನ್ನು ಆತನ ಆಡಳಿತ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ, ತನ್ನ ಅಗಾಧವಾದ ಸಾಮ್ರಾಜ್ಯವನ್ನು ಒಂಭತ್ತು ಖಂಡಗಳಾಗಿ ವಿಭಜಿಸಿದ್ದ ಬಲಿ ಪ್ರತಿಯೊಂದು ಖಂಡಕ್ಕೂ ‘ಖಂಡೋಬಾ’ ಎಂಬ ಅಧಿಕಾರಿಯನ್ನು ನೇಮಿಸಿದ್ದ. ಇಬ್ಬರು ಅಧೀನ ಪ್ರಧಾನಮಂತ್ರಿಗಳನ್ನು ಸಹಾಯಕರಾಗಿ ಹೊಂದಿದ್ದ ಆತ ಕಂದಾಯ ಮತ್ತು ಕಾನೂನು ಇಲಾಖೆಗಳನ್ನು ನೋಡಿಕೊಳ್ಳಲು ‘ಮಹಾಸುಭ’ ಎಂಬ ಅಧಿಕಾರಿಗಳನ್ನೂ ನೇಮಿಸಿದ್ದ. ಈ ಮಹಾಸುಭ ಎಂಬ ಅಧಿಕಾರಿಗಳು ರೈತರ ಬೆಳೆಗಳನ್ನು ಪರಿಶೀಲಿಸುತ್ತಾ ಪ್ರತಿನಿತ್ಯ ಅವರ ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಲಿಚಕ್ರವರ್ತಿಯ ಆಡಳಿತ ಸುವ್ಯವಸ್ಥಿತವಾಗಿತ್ತು, ಸುಖ ಸಮೃದ್ಧಿಯಿಂದ ಕೂಡಿತ್ತು ಎಂಬುದು ತಿಳಿಯುತ್ತದೆ. ಈ ವಿವರಣೆಯನ್ನು ದಾಖಲಿಸುತ್ತಾ ಜ್ಯೋತಿಬಾಫುಲೆಯವರು ‘ಜನಾನುರಾಗಿಯಾಗಿದ್ದ ಬಲಿ ಚಕ್ರವರ್ತಿ ಬಡವರ ಮತ್ತು ದುರ್ಬಲ ವರ್ಗಗಳ ಸ್ನೇಹಿತನಂತಿದ್ದ’ ಎನ್ನುತ್ತಾರೆ. 

ಬಲಿಪಾಡ್ಯಮಿಯಂದು ತುಳುವರು ಬಲಿಯೇಂದ್ರನನ್ನು ಕರೆಯುವುದು

ಬಲಿಗೆ ‘ಮಾರ್ತಾಂಡ’ ಎಂಬ ಮತ್ತೊಂದು ಹೆಸರೂ ಇತ್ತು. ಇದರರ್ಥ ‘ಬಾಯಿ ಅಥವಾ ಮುಭಾಗದ ಮೂಲಕ ಹೊಡೆಯವವನು” ಎಂದು. ಕ್ಷತ್ರಿಯ ಧರ್ಮದ ಪರಿಪಾಲನೆಯಾಗಿದ್ದ ಇದು ಶತ್ರುಗಳ ಮೇಲೆ ಹಿಂಬದಿಯಿಂದ ದಾಳಿ ಮಾಡುವುದನ್ನು ನಿಷೇಧಿಸಿತ್ತು ಮತ್ತು ಸ್ವತಃ ಬಲಿ ಚಕ್ರವರ್ತಿ ಈ ಕ್ಷತ್ರಿಯ ಧರ್ಮವನ್ನು ಕಟ್ಟುನಿಟ್ಟಾಗಿ ಆಚರಿಸುತ್ತಿದ್ದ. ಅಂದರೆ ನ್ಯಾಯ-ನೀತಿ ಆತನ ಆಡಳಿತದ ಅಸ್ತ್ರವಾಗಿತ್ತು. ಈ ಸಂದರ್ಭದಲ್ಲಿ ವಾಮನನ ಕಥೆ ಬರುತ್ತದೆ. ವಾಮನ ಎಂಬುವವನು ಕುಳ್ಳಗಿನ ಭಿಕ್ಷುಕನ ರೂಪದಲ್ಲಿ ಬಲಿಯ ಮುಂದೆ ಬಂದು ಆತನಿಂದ ಮೂರು ಹೆಜ್ಜೆಗಳ ದಾನ ಕೇಳುತ್ತಾನೆ. ಮೊದಲನೇ ಹೆಜ್ಜೆಯನ್ನು ಭೂಮಿಯ ಮೇಲೆ, ಎರಡನೇ ಹೆಜ್ಜೆಯನ್ನು ಆಕಾಶದ ಮೇಲೆ, ಮೂರನೇ ಹೆಜ್ಜೆಯನ್ನು ಸ್ವತಃ ಬಲಿಚಕ್ರವರ್ತಿಯ ಮೇಲೆ ಇಟ್ಟು ಆತನನ್ನು ಕೊಲ್ಲುತ್ತಾನೆ ಎಂಬುದು. ಆದರೆ ವಾಸ್ತವ? 

ವಾಮನ ಆರ್ಯರ ಮತ್ತೊಬ್ಬ ದಂಡನಾಯಕ (ವಾಮನಾವತಾರ) ನಾಗಿದ್ದ! ಆತ ತನ್ನ ದಂಡಿನೊಂದಿಗೆ ಬಲಿರಾಜನ ಮೇಲೆ ದಾಳಿ ಮಾಡಿದ್ದ. ಭಾದ್ರಪದ ಮಾಸದ ಎರಡನೇ ಪಕ್ಷದಲ್ಲಿ ನಡೆದ ವಾಮನನ ಈ ದಾಳಿಯಲ್ಲಿ ಪ್ರತಿ ದಿನ ಬಲಿಚಕ್ರವರ್ತಿ ತನ್ನ ವೈಯಕ್ತಿಕ ಸೇನೆಯೊಂದಿಗೆ ವಾಮನನ ಜೊತೆ ಯುದ್ಧ ಮಾಡಿ ಅರಮನೆಗೆ ಮರಳುತ್ತಿದ್ದ. ಹಾಗೆ ತನಗೆ ಸಹಾಯ ಮಾಡುವಂತೆ ಆತ ತನ್ನ ಸಾಮ್ರಾಜ್ಯದ ಇತರೆಡೆ ಬಿಡಾರ ಹೂಡಿದ್ದ ತನ್ನ ಅಧೀನ ಸೇನಾಧಿಕಾರಿಗಳಿಗೂ ಸೂಚನೆ ಕಳುಹಿಸಿದ್ದ. ಆದರೆ ಅವರು ಬರುವುದು ತಡವಾಗಿ ಸಕಾಲದಲ್ಲಿ ಅಧೀನ ಸೇನೆಯ ನೆರವು ದೊರೆಯದೆ ಬಲಿ ಚಕ್ರವರ್ತಿ ಅಶ್ವಯುಜ ಹುಣ್ಣಿಮೆಯ ಎರಡನೇ ದಿನ ವಾಮನನ ಸೈನ್ಯಕ್ಕೆ ಸೋತು ಪ್ರಾಣ ಬಿಟ್ಟಿದ್ದ. ಇದು ಇತಿಹಾಸ. 

ಮತ್ತೆ ಕೇಳುವುದಾದರೆ, ಪುರಾಣ ಹೇಳುವುದು? ಬಲಿ ಚಕ್ರವರ್ತಿಯ ತಲೆಯ ಮೇಲೆ ದೈತ್ಯಾಕಾರದ ರೂಪ ತಳೆದಿದ್ದ ವಾಮನ ತನ್ನ ಮೂರನೇ ಹೆಜ್ಜೆ ಇಟ್ಟಿದ್ದ ಎಂದು! ಈ ಬಗ್ಗೆ ಬರೆಯುತ್ತ ಮಹಾತ್ಮ ಜ್ಯೋತಿಬಾಫುಲೆಯವರು “ಮೊದಲನೆ ಹೆಜ್ಜೆಯನ್ನು ಭೂಮಿಯ ಮೇಲೆ, ಎರಡನೇ ಹೆಜ್ಜೆಯನ್ನು ಆಕಾಶದ ಮೇಲೆ ಇಟ್ಟ ವಾಮನನ ದೈತ್ಯಾಕಾರದ ರೂಪ ಆಕಾಶವನ್ನು ಸೀಳಿಕೊಂಡು ಹೋಗಿರುವ ಸಾಧ್ಯತೆ ಇರುತ್ತದೆ ಮತ್ತು ಅದು ಸ್ವರ್ಗದ ಸಮೀಪ ತಲುಪಿರುವ ಸಾಧ್ಯತೆ ಕೂಡ ಇತ್ತು. ಈ ಸಂದರ್ಭದಲ್ಲಿ ಭೂಮಿಯ ಮೇಲಿನ ಹುಲುಮಾನವ ಬಲಿಯನ್ನುದ್ದೇಶಿಸಿ ವಾಮನ, ‘ನನ್ನ ಎರಡು ಹೆಜ್ಜೆಗಳು ಭೂಮಿ ಮತ್ತು ಆಕಾಶವನ್ನು ಆಕ್ರಮಿಸಿವೆ, ಇನ್ನು ನನ್ನ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಲಿ?’ ಎಂದು ಕೂಗಿ ಕೇಳುತ್ತಾನೆ. ಪ್ರಶ್ನೆಯೇನೆಂದರೆ, ಹೀಗೆ ಆಕಾಶದಿಂದ ಜೋರಾಗಿ ಕೂಗಿದ ದೈತ್ಯಾಕಾರದ ವಾಮನನ ಕೂಗು ಭಾರತದಲ್ಲಿದ್ದ ಬಲಿಚಕ್ರವರ್ತಿಯ ಜೊತೆಗೆ ಭೂಮಿಯ ಮೇಲಿನ ಇತರೆ ದೇಶಗಳ ಜನರಾದ ರಷ್ಯನ್ನರು, ಫ್ರೆಂಚರು, ಇಂಗ್ಲೀಷರು ಮತ್ತು ಅಮೆರಿಕನ್ನರಿಗೆ ಏಕೆ ಕೇಳಲಿಲ್ಲ?” ಎನ್ನುತ್ತಾರೆ! ಹೌದು, ಏಕೆ ಕೇಳಲಿಲ್ಲ?

ಖಂಡಿತ, ಜ್ಯೋತಿಬಾಫುಲೆಯವರಂತೆ ಹೀಗೆ ಪುರಾಣದ ಪೊಳ್ಳುಗಳನ್ನು ಪ್ರಶ್ನಿಸಬೇಕಾಗುತ್ತದೆ. ಆ ಮೂಲಕ ಆ ಪೊಳ್ಳುಗಳ ಹಿಂದಿರುವ ವಾಸ್ತವವನ್ನು ಹೆಕ್ಕಿ ತೆಗೆಯಬೇಕಾಗುತ್ತದೆ. ಒಂದಂತು ಸ್ಪಷ್ಟ, ಸುವ್ಯವಸ್ಥಿತ ಆಡಳಿತ ನಡೆಸುತ್ತಿದ್ದ, ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ, ಮೂಲನಿವಾಸಿ ಅರಸ ಬಲಿ ಚಕ್ರವರ್ತಿ ಆರ್ಯರ ದಂಡನಾಯಕನಿಗೆ ಮೋಸದಿಂದ ಬಲಿಯಾಗಿದ್ದ. ಈ ಮೂರು ಹೆಜ್ಜೆಗಳ ಕತೆಯೇ ಅಂತಹ ಮೋಸವನ್ನು ಬಿಡಿಸಿ ಹೇಳುತ್ತದೆಯೆಂದರೆ… ಆಶ್ಚರ್ಯವೆಂದರೆ ಬಲಿರಾಜನ ಈ ಕತೆ ಹೇಳುವ ಪುರಾಣ ಪ್ರಭೃತಿಗಳು ಆ ನಂತರ ವಾಮನನ ಕತೆ ಏನಾಯಿತು ಎಂದು ಹೇಳುವುದಿಲ್ಲ! ಏನಾಯಿತು ಅಂದರೆ, ಬಲಿರಾಜನ ಆಹ್ವಾನದ ಮೇರೆಗೆ ತಡವಾಗಿ ಬಂದ ಆತನ ಪುತ್ರ ಬಾಣಾಸುರ ವಾಮನನ ಸೇನೆಯ ಮೇಲೆ ಭಾರೀ ದಾಳಿ ನಡೆಸಿ ಆತನನ್ನು ಸೋಲಿಸುತ್ತಾನೆ. ಅಲ್ಲದೆ ವಾಮನನ ಆಸ್ತಿಯನ್ನು ಕೊಳ್ಳೆಹೊಡೆಯುವ ಬಾಣಾಸುರ ಆತನನ್ನು ಹಿಮಾಲಯದ ತಪ್ಪಲಿಗೆ ಓಡಿಸಿ ಅವನ ಸೇನೆಗೆ ಆಹಾರ, ನೀರು ಸಿಗದಂತೆ ಮಾಡಿ, ಅವರೆಲ್ಲ ಹಸಿವಿನಿಂದ ಸಾಯುವಂತೆ ಮಾಡುತ್ತಾನೆ. ಇಂತಹ ದಯನೀಯ ಸ್ಥಿತಿಯಲ್ಲಿ ವಾಮನ ಕೊನೆಯುಸಿರೆಳೆಯುತ್ತಾನೆ. ಬಾಣಾಸುರ ತನ್ನ ತಂದೆಗಾದ ಅಪಮಾನದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. 

ಮುಂದುವರಿದು ವಾಮನನ್ನು ಸೋಲಿಸಿದ ಬಾಣಾಸುರ ಆಸ್ಥಾನಕ್ಕೆ ಮರಳುತ್ತಲೇ ಬಲಿರಾಜ್ಯದ ಅಧಿಪತಿಯಾಗುತ್ತಾನೆ. ತನ್ನ ವಿಜಯದ ನೆನಪಿಗಾಗಿ ಆತ ಅಶ್ವಯುಜ ಮಾಸದ ಕೊನೆಯ ದಿನ ಸೈನಿಕರಿಗೆ ಭರ್ಜರಿ ಔತಣಕೂಟ ಏರ್ಪಡಿಸುತ್ತಾನೆ. ಈಗ ‘ಬಲಿ ಪಾಡ್ಯಮಿ’ ಎಂದು ಹೆಸರಾಗಿರುವ ಕಾರ್ತಿಕ ಮಾಸದ ಮೊದಲನೆ ದಿನ ಬಾಣಾಸುರ ತನ್ನ ಆಸ್ಥಾನದ ಉನ್ನತ ವ್ಯಕ್ತಿಗಳಿಗೆ ಕೊಡುಗೆಗಳನ್ನು ನೀಡುತ್ತಾನೆ. ಈ ಸಂಭ್ರಮದಲ್ಲಿ ಪಾಲ್ಗೊಂಡ ಮಹಿಳೆಯರು ವಾಮನನ ವಿರುದ್ಧ ಜಯ ಸಾಧಿಸಿದ ತಮ್ಮ ಸಹೋದರರಿಗೆ ಎರಡು ದೀಪಗಳ ಆರತಿ ಎತ್ತಿ “ಇಂದಿನಿಂದ ಎಲ್ಲ ದುಷ್ಟ ಶಕ್ತಿಗಳು ನಾಶವಾಗಲಿ. ಬಲಿರಾಜ್ಯ ಮರಳಿ ಬರಲಿ” ಎಂದು ಹಾರೈಸುತ್ತಾರೆ. 

ಬಾಣಾಸುರನ ಆಸ್ಥಾನದ ಆ ಮಹಿಳೆಯರ ಹಾರೈಕೆಯನ್ನು ನಾವು ಪ್ರಸ್ತುತ ದೃಷ್ಟಿಕೋನದಲ್ಲಿ ನೋಡುವುದಾದರೆ ಶಾಂತಿ ಸುಭಿಕ್ಷೆಯ ಬಲಿರಾಜ್ಯ ಅಥವಾ ಬಲಿರಾಜ ಮರಳಿ ಬರಬೇಕು. ಮರಳಿ ಬರಬೇಕು ಅಂದರೆ ಹುದುಗಿಹೋಗಿರುವ ಅಸುರ ಇತಿಹಾಸ ಪುನರ್ಮನನವಾಗಬೇಕು. ಏಕೆಂದರೆ ಅಂತಹ ಇತಿಹಾಸ ಏಕಪಕ್ಷೀಯ ಭಾರತೀಯ ಇತಿಹಾಸದ ಅಂತಹ ಪಕ್ಷಪಾತ ಧೋರಣೆಯನ್ನು ಹೊಡೆದೋಡಿಸುತ್ತದೆ.

(ಚಿತ್ರ ಕೃಪೆ: ಗೂಗಲ್)

ರಘೋತ್ತಮ ಹೊ.ಬ

ಚಿಂತಕರು

ಇದನ್ನೂ ಓದಿ- ತುಳುನಾಡಿನ ‘ಪರ್ಬ’ ‘ದೊಡ್ಡಬ್ಬ’ ಎಂಬ ಜನ ಮೂಲ ಹಬ್ಬ. https://peepalmedia.com/tulunaadina-parba-doddabba-emba-jana-mula-habba/

Related Articles

ಇತ್ತೀಚಿನ ಸುದ್ದಿಗಳು