Thursday, June 27, 2024

ಸತ್ಯ | ನ್ಯಾಯ |ಧರ್ಮ

ಸಕ್ರೆಬೈಲು | ಆನೆ ಬಾಲ ಕತ್ತರಿಸಿದ ಆರೋಪ: ಕಾವಾಡಿಗರಿಬ್ಬರ ಅಮಾನತು

ಶಿವಮೊಗ್ಗ: ಇಲಾಖೆಯ ಆನೆ ಭಾನುಮತಿಯ ಬಾಲವನ್ನು ತುಂಡರಿಸಿದ ಆರೋಪದ ಮೇಲೆ ಸಕ್ರೆಬೈಲು ಆನೆ ಶಿಬಿರದ ಇಬ್ಬರು ಕಾವಾಡಿಗರನ್ನು ಅರಣ್ಯಾಧಿಕಾರಿಗಳು ಸೋಮವಾರ ಅಮಾನತುಗೊಳಿಸಿದ್ದಾರೆ.

ಶಿವಮೊಗ್ಗ ಅರಣ್ಯ ಉಪ ಸಂರಕ್ಷಣಾಧಿಕಾರಿ (ಡಿಸಿಎಫ್) (ವನ್ಯಜೀವಿ ವಿಭಾಗ) ಪ್ರಸನ್ನ ಪಟಗಾರ್ ಮಾತನಾಡಿ, ಕಳೆದ ತಿಂಗಳು (ಅಕ್ಟೋಬರ್) ಭಾನುಮತಿ ಎನ್ನುವ ಆನೆಯ ಬಾಲ ಭಾಗಶಃ ತುಂಡಾಗಿರುವುದು ಗಮನಕ್ಕೆ ಬಂದಿದ್ದು, ವಿಚಾರಣೆ ನಡೆಸಿದಾಗ ಅದರ ಪಾಲಕರು [ಸುದೀಪ್ ಮತ್ತು ಮೊಹಮದ್] ಆನೆ ಮೇಯಲು ಹೋದಾಗ ಬಾಲ ತುಂಡಾಗಿರುವುದಾಗಿ ಹೇಳಿದ್ದರು.

ಈ ಹೆಣ್ಣಾನೆಯು ಗರ್ಭಿಣಿಯಾಗಿದ್ದು, ಅಕ್ಟೋಬರ್‌ 27ರಂದು ಬಾಲ ತುಂಡಾದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಕುರಿತು ತನಿಖೆ ನಡೆಸಲು ಸಕ್ರೆಬೈಲು ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ (ಎಸಿಎಫ್) ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಡಿಸಿಎಫ್ ಆದೇಶಿಸಿದ್ದರು.

ಕಾವಾಡಿಗರು ನೀಡಿದ ವಿವರಣೆ ತೃಪ್ತಿಕರವಾಗಿಲ್ಲದ ಕಾರಣ ಈ ಬಗ್ಗೆ ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ. ಎಸಿಎಫ್ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಕಾವಾಡಿಗರ ನಿರ್ಲಕ್ಷ್ಯವೇ ಘಟನೆಯ ಹಿಂದಿನ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಆ ವರದಿಯ ಆಧಾರದ ಮೇಲೆ ನಾನು ಕಾವಾಡಿಗರಿಬ್ಬರನ್ನೂ ಅಮಾನತು ಮಾಡಿದ್ದೇನೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

ಆನೆಗೆ ತರಬೇತಿ ನೀಡುವಾಗ ಆರೋಪಿಗಳು ಹರಿತವಾದ ಆಯುಧದಿಂದ ಪೂರ್ಣ ಬಲ ಬಳಸಿ ಹೊಡೆದಿರುವ ಶಂಕೆಯಿದೆ ಎಂದು ಪ್ರಸನ್ನ ತಿಳಿಸಿದರು.

ಅಮಾನತುಗೊಂಡಿರುವ ಕಾವಾಡಿಗರ ಹೆಚ್ಚಿನ ವಿಚಾರಣೆಗೆ ತನಿಖಾ ತಂಡವನ್ನು ರಚಿಸಲಾಗಿದ್ದು, ತನಿಖೆ ಮುಗಿಯುವವರೆಗೆ ಅವರನ್ನು ಅಮಾನತಿನಲ್ಲಿಡಲಾಗುವುದು ಎಂದು ಡಿಸಿಎಫ್ ತಿಳಿಸಿದ್ದಾರೆ. ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲಿಯವರೆಗೂ ಭಾನುಮತಿಯನ್ನು ಬೇರೊಬ್ಬ ಪಾಲಕನ ಉಸ್ತುವಾರಿಯಲ್ಲಿಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಭಾನುಮತಿಗೆ ಚಿಕಿತ್ಸೆ ನೀಡಿ ಬಾಲ ತುಂಡಾದ ಭಾಗಕ್ಕೆ ಮತ್ತೆ ಹೊಲಿಗೆ ಹಾಕಲಾಗಿದ್ದು, ಆನೆ ಚೇತರಿಸಿಕೊಳ್ಳುತ್ತಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು