Thursday, June 13, 2024

ಸತ್ಯ | ನ್ಯಾಯ |ಧರ್ಮ

ವಿಶ್ವಕಪ್‌ ಫೈನಲ್:‌ ಆಸ್ಟ್ರೇಲಿಯಾ ತಂಡವನ್ನು ಹಂಗಿಸಿದ್ದೇಕೆ ಐಸ್‌ ಲ್ಯಾಂಡ್‌ ಕ್ರಿಕೆಟ್?

ಆಸ್ಟ್ರೇಲಿಯಾಗೆ ಸಂದೇಶ: ಫೈನಲ್‌ ಗೂ ಮುನ್ನ ಎಲ್ಲವನ್ನು ಒಮ್ಮೆ ಚೆಕ್‌ ಮಾಡಿಕೊಳ್ಳಿ. ಟಾಸ್‌ ಗೆ ಬಳಸುವ ನಾಣ್ಯದ ಲೋಹವನ್ನು ಪರಿಶೀಲಿಸಿ, ಅದರ ಮೇಲಿನ ಮಾರ್ಕ್‌ ಗಳನ್ನು ನೋಡಿಕೊಳ್ಳಿ. ಪಿಚ್‌ ಮೇಲೆ ಉರುಳಿಸುವ ರೋಲರ್‌ ಗಳ ತೂಕವನ್ನೊಮ್ಮೆ ನೋಡಿಕೊಂಡುಬಿಡಿ. ಡ್ರೆಸ್ಸಿಂಗ್‌ ರೂಮ್‌ ನ ಗೋಡೆಗಳಿಗೆ ಬಳಿಯಲಾದ ಪೇಂಟ್‌ ನಲ್ಲಿ ವಿಷಕಾರಿ ವಸ್ತುಗಳು ಇವೆಯಾ ನೋಡಿಕೊಳ್ಳಿ. ಹಾಗೇ ಚಂದ್ರ ಮತ್ತು ಬುಧ ಗ್ರಹಗಳ ಸಂಯೋಜನೆಯನ್ನೂ ಒಮ್ಮೆ ಗಮನಿಸಿಕೊಳ್ಳಿ. ಏನನ್ನೂ ಬಿಡಬೇಡಿ. ಕೊನೆಗೆ ನೀವು ಅಭದ್ರತಾ ಭಾವದಲ್ಲಿ ನರಳುವುದು ಬೇಡ ನೋಡಿ.

ಹೀಗೊಂದು ಪೋಸ್ಟ್‌ ಎಕ್ಸ್‌ (ಟ್ವಿಟರ್)‌ ನಲ್ಲಿ ಸಂಚಲನ ಮೂಡಿಸಿದೆ. ಹೀಗೆ ಪೋಸ್ಟ್‌ ಮಾಡಿರುವುದು ಐಸ್‌ ಲ್ಯಾಂಡ್‌ ಕ್ರಿಕೆಟ್‌ ಸಂಸ್ಥೆ. ನಾಳೆ (19-11-2023)ರಂದು ಅಹಮದಾಬಾದ್‌ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ ನಡೆಯಲಿದೆ. ಇಡೀ ಜಗತ್ತಿನ ಕಣ್ಣು ಇಲ್ಲಿದೆ. ಹೀಗಿರುವಾಗ ಐಸ್‌ ಲ್ಯಾಂಡ್‌ ಇಂಥ ಸಂದೇಶವನ್ನು ನೀಡಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪಂದ್ಯಾವಳಿ ಸಂದರ್ಭದಲ್ಲಿ ಹಲವು ಬಗೆಯ ವಿವಾದಗಳು ಉದ್ಭವವಾಗಿವೆ. ಭಾರತ ಕ್ರಿಕೆಟ್‌ ತಂಡ ಆಡುವಾಗ ಅದಕ್ಕೆ ವಿಶೇಷ ಚೆಂಡುಗಳನ್ನು ಸಿದ್ಧಪಡಿಸಿ ಕೊಡಲಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಆಟಗಾರನೊಬ್ಬ ಹೇಳಿದ್ದು ನಗೆಪಾಟಲಿಗೆ ಈಡಾಗಿತ್ತು. ಮುಂಬೈನ ಈಡನ್‌ ಗಾರ್ಡ ನಲ್ಲಿ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಭಾರತ ತಂಡಕ್ಕೆ ಅನುಕೂಲಕರವಾದ ಹೊಸ ಪಿಚ್‌ ಸಿದ್ಧಪಡಿಸಲಾಯಿತು ಎಂಬ ವಿವಾದವೂ ಸೃಷ್ಟಿಯಾಯಿತು. ಭಾರತ ತಂಡದ ಸೂಚನೆಯ ಮೇರೆಗೆ ಪಿಚ್‌ ರೂಪಿಸಲಾಗಿದೆ ಎಂದು ಕೆಲವು ವರದಿಗಳು ಹೇಳಿದವು. ಇದಾದ ನಂತರ ಇದೇ ಪಂದ್ಯದ ಟಾಸ್‌ ಸಂದರ್ಭದಲ್ಲಿ ರೋಹಿತ್‌ ಶರ್ಮಾ ಟಾಸ್‌ ಎಸೆಯುವಾಗ ಕರಾಮತ್ತು ಮಾಡಿ ಗೆದ್ದರು ಎಂದೂ ಟೀಕೆಗಳು ವ್ಯಕ್ತವಾದವು.

ವಿದೇಶಿ ತಂಡಗಳು ಭಾರತದಲ್ಲಿ ಆಡುವಾಗೆಲ್ಲ ಭಾರತದ ಸ್ಪಿನ್ನರ್‌ ಗಳಿಗೆ ಅನುಕೂಲವಾಗುವ ಪಿಚ್‌ ಗಳನ್ನು ಸಿದ್ಧಪಡಿಸಲಾಗುತ್ತದೆ ಎಂಬ ಆರೋಪ ಇಂದಿನದಲ್ಲ. ಈ ಆರೋಪಕ್ಕೆ ಪ್ರತಿಯಾಗಿ, ನೀವು ವೇಗದ ಬೌಲರ್‌ ಗಳಿಗೆ ನೆರವಾಗುವ ಪಿಚ್‌ (ಬೌನ್ಸ್‌ ಮತ್ತು ಸ್ವಿಂಗ್)‌ ಸಿದ್ಧಪಡಿಸಿಕೊಳ್ಳಬಹುದು ಎಂಬುದಾದರೆ ನಾವೇಕೆ ಸ್ಪಿನ್ನರ್‌ ಗಳಿಗೆ ಅನುಕೂಲವಾಗುವ ಪಿಚ್‌ ಸಿದ್ಧಪಡಿಸಬಾರದು ಎಂಬ ಪ್ರತ್ಯುತ್ತರವೂ ಭಾರತದ ಕಡೆಯಿಂದ ಕೇಳಿಬಂದಿತ್ತು. ಆದರೆ ವಿಶೇಷವೆಂದರೆ ಈ ವಿಶ್ವಕಪ್‌ ನಲ್ಲಿ ಭಾರತದ ಸ್ಪಿನ್ನರ್‌ ಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಿರುವುದು ವೇಗದ ಬೌಲರ್‌ ಗಳು. ಮಹಮದ್‌ ಶಮಿ, ಜಸ್ಪೀತ್‌ ಬುಮ್ರಾ ಎದುರಾಳಿ ಬ್ಯಾಟ್ಸ್‌ಮನ್‌ ಗಳ ನಿದ್ದೆಗೆಡಿಸಿದ್ದಾರೆ. ಹಾಗಿದ್ದರೆ ಸ್ಪಿನ್ನರ್‌ ಗಳಿಗೆ ಅನುಕೂಲವಾಗುವ ಪಿಚ್‌ನಲ್ಲಿ ಸೀಮರ್‌ ಗಳು ಹೇಗೆ ಸಫಲರಾಗಲು ಸಾಧ್ಯ ಎಂಬ ಪ್ರಶ್ನೆ ಏಳುತ್ತದೆ. ಹಾಗೆ ನೋಡಿದರೆ ಭಾರತದ ಪಿಚ್‌ ಗಳಲ್ಲಿ ಆರಂಭದ ಓವರುಗಳಲ್ಲಿ ವೇಗಿಗಳಿಗೆ, ಚೆಂಡು ಹಳೆಯದಾದ ಮೇಲೆ ಸ್ಪಿನ್ನರ್‌ ಗಳಿಗೆ ಅನುಕೂಲವಾಗುತ್ತದೆ. ಬುಮ್ರಾ-ಶಮಿ ರಿವರ್ಸ್‌ ಸ್ವಿಂಗ್‌ ಮಾಡುವುದರಿಂದ ಇನ್ನಿಂಗ್ಸ್‌ ಕೊನೆಯಲ್ಲೂ ಅವರು ವಿಕೆಟ್‌ ಗಳನ್ನು ಕೀಳುತ್ತಾರೆ.

ಭಾರತ ಈ ಬಾರಿ ಕ್ರಿಕೆಟ್‌ ವಿಶ್ವಕಪ್‌ ಗೆಲ್ಲಲು ಕುತಂತ್ರ ನಡೆಸುತ್ತಿದೆ ಎಂಬ ಹಲವು ವಿದೇಶಿ ಆಟಗಾರರ ಪ್ರೊಪಗಂಡಗಳಿಗೆ ಉತ್ತರವಾಗಿ ಐಸ್‌ ಲ್ಯಾಂಡ್‌ ಕ್ರಿಕೆಟ್‌ ಮಂಡಳಿ ಅತ್ಯಂತ ವ್ಯಂಗ್ಯವಾಗಿ ಪೋಸ್ಟ್‌ ಮಾಡಿ, ಎಲ್ಲ ಟೀಕಾಕಾರರಿಗೆ ಸರಿಯಾದ ಉತ್ತರ ನೀಡಿದೆ.

ಐಸ್‌ ಲ್ಯಾಂಡ್‌ ದೇಶ ತನ್ನದೇ ಕ್ರಿಕೆಟ್‌ ಮಂಡಳಿಯನ್ನು ಹೊಂದಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಸದಸ್ಯತ್ವ ಹೊಂದಿದೆ. ಐಸ್‌ ಲ್ಯಾಂಡ್‌ ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟ್‌ ಕೂಡ ಜನಪ್ರಿಯವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸೆಣೆಸಿ ಪ್ರವರ್ಧಮಾನಕ್ಕೆ ಬರುವ ಆಶಯ ಹೊಂದಿದೆ.

Related Articles

ಇತ್ತೀಚಿನ ಸುದ್ದಿಗಳು