Thursday, June 13, 2024

ಸತ್ಯ | ನ್ಯಾಯ |ಧರ್ಮ

ವಿಶ್ವಕಪ್- 2023: ಈ ದಾಖಲೆಗಳು ಪುಡಿಪುಡಿಯಾಗಲಿವೇ?

ಅಹಮದಾಬಾದ್: ಪುರುಷರ ವಿಶ್ವಕಪ್ ಕ್ರಿಕೆಟ್ ಫೈನಲ್ ಇಂದು ಮಧ್ಯಾಹ್ನ ಆರಂಭವಾಗಲಿದ್ದು, ಭಾರತ ಮತ್ತು ಆಸ್ಪ್ಟ್ರೇಲಿಯಾಗಳ ನಡುವಿನ ಐತಿಹಾಸಿಕ ಹಣಾಹಣಿಯಲ್ಲಿ ಹಲವು ದಾಖಲೆಗಳು ಮುರಿಯಲ್ಪಡುವ ಸಂಭವವಿದೆ.

ಭಾರತದ ರನ್ ಮಿಷಿನ್ ವಿರಾಟ್ ಕೊಹ್ಲಿ ಈ ಪಂದ್ಯಾವಳಿಯಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದಾರೆ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 49 ಶತಕಗಳನ್ನು ಸಿಡಿಸಿದ್ದ ಭಾರತದ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಮುಂದೆ ಸಾಗಿರುವ ವಿರಾಟ್ ಕೊಹ್ಲಿ ಈಗಾಗಲೇ 50 ಶತಕಗಳನ್ನು ದಾಖಲಿಸಿದ್ದಾರೆ. ಯಾವುದೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆಯೂ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ 2003ರ ವಿಶ್ವಕಪ್ ನಲ್ಲಿ ಒಟ್ಟು 673 ರನ್ ಪೇರಿಸಿದ್ದರು. ಈ ದಾಖಲೆಯನ್ನು ವಿರಾಟ್ ಕೊಹ್ಲಿ ಈಗಾಗಲೇ ಮುರಿದಿದ್ದು, 711 ರನ್ ಗಳಿಸಿದ್ದಾರೆ. ಇವತ್ತಿನ ಪಂದ್ಯದಲ್ಲಿ 89 ರನ್ ಗಳಿಸಿದರೆ ಒಂದು ವಿಶ್ವಕಪ್ ಟೂರ್ನಿಯಲ್ಲಿ 800 ರನ್ ಗಳಿಸಿದ ಮೊಟ್ಟಮೊದಲ ಆಟಗಾರ ಎಂಬ ಶ್ರೇಯಸ್ಸು ವಿರಾಟ್ ಕೊಹ್ಲಿ ಪಾಲಾಗಲಿದೆ.

ವಿರಾಟ್ ಕೊಹ್ಲಿ ಒಟ್ಟು ನಾಲ್ಕು ವಿಶ್ವಕಪ್ ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ನಾಲ್ಕೂ ಪಂದ್ಯಾವಳಿಗಳಿಂದ ಅವರು ಒಟ್ಟು 1741 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ಆಟಗಾರ ರಿಕಿ ಪಾಂಟಿಂಗ್ ತಾವು ಆಡಿದ ಎಲ್ಲ ವಿಶ್ವಕಪ್ ಪಂದ್ಯಗಳಿಂದ ಒಟ್ಟು 1743 ರನ್ ಗಳಿಸಿದ್ದು ಕೊಹ್ಲಿಗೆ ಈ ದಾಖಲೆ ಮೀರಲು ಕೇವಲ ಮೂರು ರನ್ ಗಳು ಮಾತ್ರವೇ ಬೇಕಿದೆ. ವಿಶ್ವಕಪ್ ನಲ್ಲಿ ಅತಿಹೆಚ್ಚು ರನ್ ಗಳಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಇದ್ದು, ಸಚಿನ್ 2278 ರನ್ ಗಳಿಸಿದ್ದು, ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.

ಭಾರತದ ವೇಗದ ಬೌಲರ್ ಮಹಮದ್ ಶಮಿ ವಿಶ್ವಕಪ್ ಪಂದ್ಯಗಳಲ್ಲಿ ಸೂಪರ್ ನ್ಯಾಚುರಲ್ ಪವರ್ ಆವಾಹಿಸಿಕೊಂಡಂತೆ ಆಡುತ್ತಾರೆ. ಮೂರು ವಿಶ್ವಕಪ್ ಗಳನ್ನು ಆಡಿರುವ ಶಮಿ, ಮೂರರಲ್ಲೂ ಭಾರತದ ಪರವಾಗಿ ಅತಿಹೆಚ್ಚು ವಿಕೆಟ್ ಗಳನ್ನು ಪಡೆದ ಬೌಲರ್ ಆಗಿದ್ದು, ಈಗಾಗಲೇ 54 ವಿಕೆಟ್ ಗಳಿಸಿದ್ದಾರೆ. ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಗ್ರಾಥ್ ಅಗ್ರಸ್ಥಾನದಲ್ಲಿದ್ದು 71 ವಿಕೆಟ್ ಪಡೆದಿದ್ದಾರೆ, ನಂತರದ ಸ್ಥಾನಗಳಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (68), ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ (58), ಶ್ರೀಲಂಕಾದ ಲಸಿತ್ ಮಲಿಂಗಾ (56), ಪಾಕಿಸ್ತಾನದ ವಸೀಂ ಅಕ್ರಂ (55) ಇದ್ದಾರೆ. ಈ ಪೈಕಿ ವಸೀಂ ಅಕ್ರಂ ಮತ್ತು ಲಸಿತ್ ಮಲಿಂಗಾ ದಾಖಲೆಗಳನ್ನು ಪುಡಿಗಟ್ಟುವ ಅವಕಾಶ ಮಹಮದ್ ಶಮಿ ಅವರಿಗಿದೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (ಎಂಸಿಜಿ)ಯಲ್ಲಿ 2015ರ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ಮುಖಾಮುಖಿಯನ್ನು ಸುಮಾರು 93,000 ಪ್ರೇಕ್ಷಕರು ವೀಕ್ಷಿಸಿದ್ದರು. ಈ ಬಾರಿ ಈ ದಾಖಲೆ ಮುರಿಯಲಿದ್ದು, ಒಟ್ಟು 1,30,000 ಪ್ರೇಕ್ಷಕರು ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆಯಲಿದ್ದಾರೆ.

ಈ ಪಂದ್ಯಾವಳಿಯಲ್ಲಿ ಸಾಕಷ್ಟು ಹೈಸ್ಕೋರಿಂಗ್ ಗೇಮ್ ಗಳನ್ನು ನಾವು ನೋಡಿದ್ದೇವೆ. ಇದುವರೆಗೆ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಇನ್ನಿಂಗ್ಸ್ ಒಂದರಲ್ಲಿ ಅತಿಹೆಚ್ಚು ರನ್ ಗಳಿಸಿದ್ದು ಆಸ್ಟ್ರೇಲಿಯಾ ತಂಡ, ಜೋಹನ್ಸ್ ಬರ್ಗ್ನನಲ್ಲಿ. 2003ರ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ಎರಡು ವಿಕೆಟ್ ನಷ್ಟಕ್ಕೆ 359 ರನ್ ಗಳಿಸಿತ್ತು. ಈ ದಾಖಲೆ ಈ ಬಾರಿ ಮುರಿಯಲ್ಪಡುವುದೇ ಎಂಬುದನ್ನು ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು