Thursday, June 20, 2024

ಸತ್ಯ | ನ್ಯಾಯ |ಧರ್ಮ

ರಾಷ್ಟ್ರೀಯ ಸಾಂಸ್ಕೃತಿಕ ಜಾಥಾದ ಕರ್ನಾಟಕ ಯಾತ್ರೆ |  ಕಾರ್ನಾಡು ಸದಾಶಿವ ರಾವ್‌ ನೆನಪು

ಮಂಗಳೂರು: ಮಕ್ಕಳು ವಿಶ್ವಮಾನವರೇ..ಅವರನ್ನು ಸಂಕುಚಿತರನ್ನಾಗಿ ಮಾಡುತ್ತಾ  ಹೋಗುವುದೇ ಹಿರಿಯರು. ಹಿರಿಯರು ಹೇಗೆ ನಡೆದುಕೊಳ್ಳ ಬೇಕೆಂಬುದಕ್ಕೆ ಕಾರ್ನಾಡು ಸದಾಶಿವ ರಾಯರ ಹೆತ್ತವರು  ಆದರ್ಶ ಎಂದು ಗಾಂಧಿ ವಿಚಾರ ವೇದಿಕೆಯ ಸಂಚಾಲಕರಾದ ಅರವಿಂದ ಚೊಕ್ಕಾಡಿ ಹೇಳಿದರು.

ಅವರು ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆ- ಕರ್ನಾಟಕ ಇದರ ಭಾಗವಾಗಿ ಮಂಗಳೂರಿನ ಟಾಗೋರ್‌ ಪಾರ್ಕಿನ ಗಾಂಧಿ ಪ್ರತಿಷ್ಠಾನದಲ್ಲಿ ನಡೆದ ಕಾರ್ನಾಡು ಸದಾಶಿವ ರಾವ್‌ ನೆನಪು ಮತ್ತು ಸಂವಾದ  ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ  ನೀಡುತ್ತಿದ್ದರು.

ಕುದ್ಮುಲ್‌  ರಂಗರಾವ್‌ ಮತ್ತು  ಕಾರ್ನಾಡು ಸದಾಶಿವ ರಾಯರು ಒಂದೇ ಅವಧಿಯಲ್ಲಿದ್ದವರು. ಒಂದೇ ತರದ ವ್ಯಕ್ತಿತ್ವದವರು. ಇಬ್ಬರೂ ಕೊಡುಗೈ ದಾನಿಗಳು. ಆದರೆ ಕುದ್ಮುಲ್‌ ಅವರಂತೆ ಸದಾಶಿವ ರಾಯರ ಹೆಸರು ಅಷ್ಟಾಗಿ ಉಳಿದು ಕೊಂಡಿಲ್ಲ. ಯಾಕೆಂದರೆ ಅವರ ಜೀವನ ಶೈಲಿ ಹಾಗಿತ್ತು. ಕುದ್ಮುಲ್‌ ಅವರು  ಸರಿಯಾದ ಯೋಜನೆಯನ್ನು ಹಾಕಿಕೊಂಡು ದಾನ ಮಾಡಿದ್ದಾರೆ. ಆದರೆ ಸದಾಶಿವ ರಾಯರು ಯಾವುದೇ ಷರತ್ತುಗಳನ್ನು ವಿಧಿಸದೆ  ಕೈಗೆ ಸಿಕ್ಕಿದ್ದನ್ನೆಲ್ಲ ಬಾಚಿ ಬಾಚಿ ಕೊಟ್ಟಿದ್ದಾರೆ. ಪರಿಣಾಮವಾಗಿ ಅವರು ಕೊಟ್ಟ ದಾನಗಳು ನೆನಪಾಗಿ ಉಳಿದುಕೊಂಡದ್ದು ಕಡಿಮೆ ಎಂದು ಹೇಳಿದರು.

ಮುಂದುವರಿದು,  ಸದಾಶಿವರಾಯರನ್ನು ಇವತ್ತಿನ ಸನ್ನಿವೇಶದಲ್ಲಿ ಐಕಾನ್‌ ಆಗಿ ಗುರುತಿಸಿಕೊಂಡಾಗ ವರ್ತಮಾನಕ್ಕೆ ಅವರನ್ನು ವೈಚಾರಿಕವಾಗಿ ಕನೆಕ್ಟ್‌ ಮಾಡುವುದು ಬಹಳ ಮುಖ್ಯ.  ಪ್ರಸ್ತುತ ದಕ್ಷಿಣ ಕನ್ನಡದ ಸನ್ನಿವೇಶದಲ್ಲಿ ಧರ್ಮಾಧರಿತ, ಜಾತಿ ಆಧಾರಿತ, ಶೈಕ್ಷಣಿಕ ನೆಲೆಗಟ್ಟಿನ ಮತ್ತು ಮಾದಕದ್ರವ್ಯ ವ್ಯಸನಗಳು ಬಹು ಮುಖ್ಯ ಸಮಸ್ಯೆಗಳು. ಸದಾಶಿವ ರಾಯರು ಒಂದು ಐಕಾನ್‌ ಆಗಬೇಕಾದರೆ ಆ ನೆಲೆಗಟ್ಟಿನಲ್ಲಿ ಅವರನ್ನು ಅರ್ಥಮಾಡಿಕೊಳ್ಳಬೇಕು. ಎಲ್ಲರನ್ನು ಒಳಗೊಳಿಸಿಕೊಂಡು ಹೋಗುವ ಪ್ರವೃತ್ತಿಯವರು ಅವರು. ಕೋಮು ಸೌಹಾರ್ದ ಹೇಗಿದೆ ಎಂಬುದಕ್ಕೆ ದಕ್ಷಿಣ ಕನ್ನಡವನ್ನು  ಉದಾಹರಣೆಯಾಗಿ ನೀಡುತ್ತಿದ್ದರು ಮತ್ತು ಅದನ್ನು ತೋರಿಸಲು ದೇಶದ ನಾನಾ ಭಾಗಗಳಿಂದ ನಾಯಕರನ್ನು ಕರೆಸುತ್ತಿದ್ದರು. ಆದರೆ ಈ ಸನ್ನಿವೇಶ ಇವತ್ತಿಗೆ ಹೇಗೆ ಬದಲಾವಣೆ ಆಗಿದೆ ಎಂದರೆ ಮಾತಾಡಬೇಕಾದರೆ ನಾನು (ನಾವು) ಯಾವ ಧರ್ಮದವ, ಯಾವ ಜಾತಿಯವ ಎಂಬುದನ್ನು24 ಗಂಟೆಯೂ ತಲೆಯಲ್ಲಿ ಹೊತ್ತುಕೊಂಡೇ ಓಡಾಡ ಬೇಕಾಗಿದೆ. ಈ ಸನ್ನಿವೇಶವನ್ನು ಬದಲಿಸಬೇಕು. ಕೋಮುವಾದವನ್ನು  ಅದರ ಎಲ್ಲ ಫಾರ್ಮ್‌ಗಳಲ್ಲಿ  ವಿರೋಧಿಸಲು ಸಾಧ್ಯವಾಗಬೇಕು. ಅದಾಗದೆ ಧಾರ್ಮಿಕ ಸದ್ಭಾವನೆ ಬರುವುದಿಲ್ಲ. ಸಮಾಜ ಸನ್ನದ್ಧವಾಗದ ಹೊರತು ಏನೂ ಮಾಡಲು ಸಾಧ್ಯವಿಲ್ಲ. ಸಮಾಜವನ್ನು ಸನ್ನದ್ದ ಗೊಳಿಸಿದ್ದೇ ಸದಾಶಿವರಾಯರ ಕೆಲಸವಾಗಿತ್ತು ಎಂದು ನೆನಪಿಸಿದರು.

 ಢಾಯಿ ಅಖರ್‌ ಪ್ರೇಮ್‌ ಎಂಬ ಕಬೀರ ವಚನದ ಧ್ಯೇಯದೊಂದಿಗೆ ಎಲ್ಲ ರಾಜ್ಯಗಳಲ್ಲಿ ತಲಾ ಒಂದುವಾರದಂತೆ ಭಗತ್‌ ಸಿಂಗ್‌ ಜನ್ಮ ದಿನವಾದ ಸೆ.28 ರಿಂದ ಗಾಂಧಿ ಹುತಾತ್ಮ ದಿನ ಜ.೩೦ ರ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಜಾಥಾದ ಕರ್ನಾಟಕ ಯಾತ್ರೆಯು ಡಿಸೆಂಬರ್‌ ಮೊದಲ ವಾರದಲ್ಲಿ ನಡೆಯುತ್ತಿದೆ. ಡಿ. 2 ರಿಂದ ಮಂಗಳೂರಿನಲ್ಲಿ ಆರಂಭಗೊಂಡು ಡಿ.7 ರಂದು ಕೇರಳದ ಮಂಜೇಶ್ವರದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈಗಳ ಸ್ಮಾರಕ ʼಗಿಳಿವಿಂಡುʼವಿನಲ್ಲಿ ಸಮಾರೋಪಗೊಳ್ಳಲಿದೆ. ಕರ್ನಾಟಕದ ಯಾತ್ರೆಯನ್ನು ದಕ್ಷಿಣ ಕನ್ನಡದಲ್ಲಿ ನಡೆಸಲಾಗುತ್ತಿದ್ದು ಈ ಯಾತ್ರೆಗೆ ಢಾಯಿ ಅಖರ್‌ ಪ್ರೇಮ್‌ ಜತೆಗೆ ನಮ್ಮೂರಿನ ನುಡಿ ಪತ್ತಪ್ಪೆ ಜೋಕುಲು ಒಂಜೇ ಮಟ್ಟೆಲ್ಡ್‌- ಹತ್ತು ತಾಯಂದಿರ ಮಕ್ಕಳು ಒಂದೇ ಮಡಿಲಲ್ಲಿ ಎಂಬುದನ್ನೂ ಘೋಷಣೆಯಾಗಿ ಬಳಸಿಕೊಳ್ಳಲಾಗುತ್ತಿದೆ.

ರಾಷ್ಟ್ರೀಯ ಜಾಥಾದ ಮುಂದಾಳು, ಹಿರಿಯ ರಂಗಕರ್ಮಿ ಪ್ರಸನ್ನ ಅವರು ಗಾಂಧೀಜಿ ಭಾವಚಿತ್ರಕ್ಕೆ ಹತ್ತಿಯ ಹಾರಾರ್ಪಣೆ ಮಾಡಿ ಮಾತಾಡಿ “ಗಾಂಧೀಜಿ ಒಂದು ಸಂದರ್ಭದಲ್ಲಿ ನಾನು ಸಂತ ಪರಂಪರೆಯ ಹಿಂದೂ ಎಂದಿದ್ದರು. ಈ ಸಂತ ಪರಂಪರೆ ಎಂದರೆ ಏನು? ಎಲ್ಲ ಧರ್ಮಗಳನ್ನು ಹುಟ್ಟುಹಾಕುವುದು, ಆ ಧರ್ಮದ ಒಳ್ಳೆಯ ಆಶಯಗಳನ್ನು ಹುಟ್ಟು ಹಾಕುವುದು, ಸಮಾಜಕ್ಕೆ ಒಳಿತಾಗುವಂತೆ ಮಾಡುವುದು ಸಂತ ಪರಂಪರೆ. ಸಂತ ಪರಂಪರೆ ಮಾಡಿದ ಈ ಒಳ್ಳೆಯ ಕೆಲಸದ ನಂತರದಲ್ಲಿ, ಹುತ್ತದಲ್ಲಿ ಪುರೋಹಿತಶಾಹಿ ಬಂದು ಸೇರಿಕೊಳ್ಳುತ್ತದೆ. ಈ ಪುರೋಹಿತಶಾಹಿಗೆ ಆ ಪರಂಪರೆಯ ಆಶಯಗಳ ಸಂಪೂರ್ಣ ಪರಿಕಲ್ಪನೆ ಇರುವುದಿಲ್ಲ. ಅದನ್ನೊಂದು ಸಂಕೇತವನ್ನಾಗಿ ಮಾಡಿ ಧರ್ಮಕ್ಕೊಂದು ಸ್ಥಾವರವನ್ನು ಕಟ್ಟುವ  ಮತ್ತು ಆ ಸ್ಥಾವರವನ್ನು ರಕ್ಷಿಸುವ ಕೆಲಸವನ್ನು ಮಾತ್ರ ಅವು ಮಾಡುತ್ತವೆ. ಹಾಗೆ ಮಾಡಿದಾಗ ಯಾವುದು ಪ್ರೀತಿಯ ಧರ್ಮವಾಗಿರುತ್ತದೋ, ಯಾವುದು ಸಹಬಾಳ್ವೆಯ ಧರ್ಮವಾಗಿರುತ್ತದೋ ಅದು  ವಿರುದ್ಧ ರೂಪವನ್ನು ಪಡೆದು ದ್ವೇಷ, ಅಸೂಯೆ ಅಸಹಕಾರಗಳ ಕೆಲಸವನ್ನು ಇದೇ ಧರ್ಮಗಳು ಮಾಡುವುದು ದೊಡ್ಡ ದುರಂತ. ನಾವು ಮತ್ತೆ ವೈಚಾರಿಕವಾಗಿಯೂ, ಆಚಾರದಲ್ಲೂ ಗಾಂಧೀಜಿಯ ಸಂತ ಪರಂಪರೆಗೆ ಹಿಂದಿರುಗಬೇಕು ಎಂದು ಹೇಳಿದರು.

ಮಹಾತ್ಮಾ ಗಾಂಧಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಬಿಹಾ ಭೂಮೀಗೌಡ, ಪ್ರತಿಷ್ಠಾನದ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಷಾ ಪ್ರೀತಿ ಪದ ಹಾಡಿದರು. ಡಾ.ಇಸ್ಮಾಯಿಲ್‌ ಎನ್‌  ಸ್ವಾಗತಿಸಿ ಕಲ್ಲೂರು ನಾಗೇಶ್‌ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರು ನಗರದಲ್ಲಿ  ಜಾಥಾವು  ಶನಿವಾರ ( ಡಿ.2 ) ಬೆಳಿಗ್ಗೆ  ಕುದ್ಮುಲ್‌  ರಂಗರಾವ್‌ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಿ ನುಡಿನಮನ ಸಲ್ಲಿಸುವ ಮೂಲಕ  ಉದ್ಘಾಟನೆ ಗೊಂಡಿತು.‌ ಬಳಿಕ ಬಲ್ಮಠದ ಬಾಸೆಲ್‌ ಮಿಷನ್‌ ಆವರಣದಲ್ಲಿರುವ  ಸಹೋದಯಕ್ಕೆ  ಭೇಟಿ ನೀಡಿ ಕನ್ನಡ ನಿಘಂಟು ಕರ್ತೃ ಕಿಟ್ಟೆಲ್, ಹಾಗೂ ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರದ ಸಂಪಾದಕ ಹರ್ಮನ್‌ ಮೋಗ್ಲಿಂಗ್‌ ಅವರಿಗೆ  ಗೌರವ ಸಲ್ಲಿಸಲಾಯಿತು. ಅಲ್ಲಿಂದ ಜಾಥಾವು ಕಾರ್ನಾಡು ಸದಾಶಿವರಾಯರು ಸ್ಥಾಪಿಸಿದ್ದ ಮಹಿಳಾಸಭಾ ತಲಪಿ ಅಲ್ಲಿ ವಿಜಯಲಕ್ಷ್ಮೀ ಭಟ್‌ ಇವರು ಕಮಲಾದೇವಿಯವರಿಗೆ  ನುಡಿನಮನ ಸಲ್ಲಿಸಿದರು. ಅಲ್ಲಿಂದ ಗಾಂಧಿಪ್ರತಿಷ್ಠಾನದ ಕಾರ್ಯಕ್ರಮ ಮುಗಿಸಿ ಜಾಥಾವು ನೇರವಾಗಿ ರಥಬೀದಿಯ ದೇವಳ ವೃತ್ತವನ್ನು ತಲಪಿ ದ.ಕ ಹಾಗೂ ದೇಶಕ್ಕೆ ಕೊಡುಗೆಗಳನ್ನಿತ್ತ ಕೊಂಕಣಿ ಭಾಷಿಕ ಸಾರಸ್ವತ ನಾಯಕರಿಗೆ ಗೌರವಾರ್ಪಣೆ ಸಲ್ಲಿಸಿತು. ಅಲ್ಲಿಂದ ಮಂಗಳೂರಿನ ಧಕ್ಕೆಯಲ್ಲಿ ( ಮೀನುಗಾರಿಕಾ ಬಂದರು) ಜನಸಂವಾದ ನಡೆಸಿ ಬಳಿಕ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಾಲಯದಲ್ಲಿ  ಶ್ರೀ ಇಮ್ತಿಯಾಜ್‌ ಸುಲ್ತಾನ್‌ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಆನಂತರ ಟಿಪ್ಪೂ ಕಟ್ಟಿಸಿದ ಸುಲ್ತಾನ್‌ ಬತ್ತೇರಿಯಲ್ಲಿ ಕರಾವಳಿ ಲೇಖಕಿ ವಾಚಕಿಯರ ಸಂಘದಿಂದ  ರಾಣಿ ಅಬ್ಬಕ್ಕ ಅವರಿಗೆ ಡಾ. ಶೈಲಾ ಯು ಅವರಿಂದ  ನುಡಿನಮನ  ಮತ್ತು ಸೌಹಾರ್ದ ಗೀತೆಗಳ ಗಾಯನ ನಡೆಯಿತು. ದಿನದ ಕೊನೆಯ ಕಾರ್ಯಕ್ರಮವಾಗಿ  ತಣ್ಣಿರುಬಾವಿ ಕಡಲ ಕಿನಾರೆಯಲ್ಲಿ ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟ ಹಾಗೂ ಗಾಯಕ ಮಹಮ್ಮದ್‌ ಇಕ್ಬಾಲ್‌ ಕಾಟಿಪಳ್ಳ ಸಹಯೋಗದಲ್ಲಿ ಸೌಹಾರ್ದ ಗಾನ ಸಂಗೀತ ಕಾರ್ಯಕ್ರಮ ಎರಡು ಗಂಟೆಗೂ ಮೀರಿ ನಡೆಯಿತು. ಎಲ್ಲ ಸಂಘಟನೆಗಳು ಸ್ವ ಇಚ್ಛೆಯಿಂದ ಮುಂದೆ ಬಂದು ಜಾಥಾ ಸಂಘಟಿಸಿರುವುದು, ಒಟ್ಟಾಗಿ ಎಲ್ಲರನ್ನೂ ಒಳಗೊಳಿಸಿಕೊಂಡು ಜಾಥಾ ಸಾಗುತ್ತಿರುವುದು ಬಹಳ ಮಹತ್ವದ್ದಾಗಿದೆ.

ಕಿಟ್ಟೆಲ್‌ ನುಡಿನಮನ
ಮಹಿಳಾಸಭಾ
ರಥಬೀದಿ
ಮೀನುಗಾರಿಕಾ ಧಕ್ಕೆ
ಇಮ್ತಿಯಾಜ್‌ ಸುಲ್ತಾನ್‌ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ
ಅಬ್ಬಕ್ಕ ಸ್ಮರಣೆ- ಸುಲ್ತಾನ್‌ ಬತ್ತೇರಿ

Related Articles

ಇತ್ತೀಚಿನ ಸುದ್ದಿಗಳು