Saturday, June 15, 2024

ಸತ್ಯ | ನ್ಯಾಯ |ಧರ್ಮ

ಪ್ರೊ.ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಪ್ರಕರಣ : ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ

ಸಾಹಿತಿ ಹಾಗೂ ಹಿರಿಯ ಸಂಶೋಧಕ ಪ್ರೊ.ಎಂ.ಎಂ.ಕಲಬುರ್ಗಿ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಚಾರಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯ ಹಾಗೂ ಪೂರ್ಣಾವಧಿ ನ್ಯಾಯಾಧೀಶರನ್ನು ನೇಮಕ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಈ ಸಂಬಂಧ ಪತ್ರದ ಮೂಲಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದು, ವಿಳಂಬವಾಗಿರುವ ಈ ಎರಡೂ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ಅಪರಾಧಿಗಳಿಗೆ ಶಿಕ್ಷೆ ಆಗುವಂತೆ ನೋಡಬೇಕು ಎಂದು ತಮ್ಮ ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ.

2015 ರ ಜುಲೈ 8 ರಂದು ಅಪರಿಚಿತ ವ್ಯಕ್ತಿಗಳಿಂದ ಹತ್ಯೆಯಾದ ಪ್ರೊ.ಎಂ.ಎಂ.ಕಲಬುರ್ಗಿ ಅವರ ಪ್ರಕರಣದ ತನಿಖೆ ಕೂಡಾ ವಿಳಂಬವಾಗಿದ್ದು, ಅಪರಾಧಿಗಳ ವಿಚಾರಣೆ ವಿಳಂಬವಾಗಿದೆ. 2018-19 ರಲ್ಲೇ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಬಗ್ಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಈ ಬಗ್ಗೆ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ಹಸ್ತಾಂತರ ಮಾಡಬೇಕು ಎಂದು ಎಂ.ಎಂ.ಕಲಬುರ್ಗಿ ಅವರ ಪತ್ನಿ ಉಮಾದೇವಿಯವರು ಕೋರಿದ್ದು, ಈ ಬಗ್ಗೆ ತುರ್ತು ಅಗತ್ಯ ಕ್ರಮ ವಹಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.

ಹಾಗೆಯೇ 2017 ಸೆಪ್ಟೆಂಬರ್ 5 ರಂದು ಹತ್ಯೆಯಾದ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಸಂಬಂಧವೂ ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ಮುಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 1200 ಪುರಾವೆ ಹಾಗೂ 500 ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಕಲೆ ಹಾಕಲಾಗಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಇದರ ವಿಚಾರಣೆ ವಿಳಂಬವಾಗಿರುವ ಬಗ್ಗೆ ಮೃತರ ಸಹೋದರಿ ಕವಿತಾ ಲಂಕೇಶ್ ಅವರು ಮುಖ್ಯಮಂತ್ರಿಗಳನ್ನು ಮನವಿ ಮಾಡಿದ ಬಳಿಕ ಮುಖ್ಯಮಂತ್ರಿಗಳು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಈ ಎರಡೂ ಹತ್ಯೆ ಪ್ರಕರಣದ ವಿಚಾರಣೆಗೆ ಸಧ್ಯದಲ್ಲೇ ವಿಶೇಷ ನ್ಯಾಯಾಲಯ ರಚನೆಯಾಗಲಿದೆ. ಹಾಗಾಗಿ ಪ್ರಕರಣದ ಹಿನ್ನೆಲೆಯಲ್ಲಿ ಅತಿ ಶೀಘ್ರದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು