Friday, June 14, 2024

ಸತ್ಯ | ನ್ಯಾಯ |ಧರ್ಮ

“ಅಯ್ಯಪ್ನೆ.. ಹೋಯ್ತ್ ನನ್ ಜೀವ”

(ಈ ವರೆಗೆ…)

ಎಮ್ಮೆ ಮೇಯಿಸುತ್ತಿದ್ದ ಗಂಗೆ ಸುಸ್ತಾಗಿ, ಅವುಗಳನ್ನು ಹಗ್ಗದಿಂದ ಕಟ್ಟಿಹಾಕಿ ನಿದ್ದೆಗೆ ಜಾರುತ್ತಾಳೆ. ಹಗ್ಗ ಬಿಡಿಸಿಕೊಂಡು ಅವು ರಾಗಿ ಹೊಲವನ್ನೆಲ್ಲ ಮೆಯ್ದು ಮೈದುನನಿಂದ ಬೈಸಿಕೊಳ್ಳುತ್ತಾಳೆ. ಕೋಪದಿಂದ ಅವನಿಗೆ ಎರಡೇಟು ಬಿಗಿಯುತ್ತಾಳೆ. ವಿಷಯ ಅತ್ತೆಗೂ ತಲಪಿ ಅವರಿಬ್ಬರೂ ಗಂಗೆಯನ್ನು ದಂಡಿಸಿದಾಗ ಆಕೆ ಸಿಡಿದೇಳುತ್ತಾಳೆ. ಅಡುಗೆ ಮನೆಯೊಳಗೆ ತನ್ನ ಸ್ವಾತಂತ್ರ್ಯವನ್ನು ಮೊದಲು ಚಲಾಯಿಸುತ್ತಾಳೆ. ಇನ್ನು ಮುಂದೆ ನಾನಿರೋದೇ ಹೀಗೆ ಎಂದು ಮನೆಯವರನ್ನು ಎಚ್ಚರಿಸುತ್ತಾಳೆ. ಗಂಗೆಯ ನಿರ್ಧಾರ ಹಾಗೆಯೇ ಉಳಿಯಿತೇ ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼಯ ಐವತ್ತ ಎಂಟನೆಯ ಕಂತು.

ನಾನು ಇನ್ಮುಂದಕ್ಕೆ ಹಿಂಗೆ ಇರೋಳು ಎನ್ನುವ ಗಟ್ಟಿ ನಿರ್ಧಾರದೊಂದಿಗೆ ರಾತ್ರಿ ಗಡದ್ದು ನಿದ್ದೆಗೆ ಜಾರಿದ್ದ ಗಂಗೆಗೆ, ಬೆಳಗಿನ ಜಾವ ಮೋಹನನ ಚುರುಗುಟ್ಟಿಸುವ ಹೊಡೆತ ಬೆನ್ನಿನ ಮೇಲೆ ಬಿದ್ದಾಗಲೇ ಎಚ್ಚರ. ಬೆಂಕಿ ತಾಕಿದಂತೆ ಉರಿಯುತ್ತಿದ್ದ ಬೆನ್ನಿನ ಮೇಲೆ ಸರಕ್ಕನೆ ಕೈ ಹಾಕಿ “ಯವ್ವೇ…ಅವ್ವಣ್ಣಿ…”  ಎಂದು ದಡಕ್ಕನೆ ಎದ್ದು ಕುಳಿತವಳಿಗೆ ಕೋಪದಿಂದ ಅದುರುತ್ತಾ ನಿಂತಿದ್ದ ಮೋಹನ ಕಣ್ಣಿಗೆ ಬಿದ್ದ. 

  “ಹಾಕ್ಲಾ ಇನ್ನೊಂದ್ನಾಕು. ಬೀದಿಲ್ ನಿಂತು ಬಾಯಿ ಬಡ್ಕೊತಳೆ ಬೋಸುಡಿ ಮುಂಡೆ. ಮೈ ಚರ್ಬಿ ಎಲ್ಲಾ ಇಳಿದೋಗ್ಬೇಕು ಹಂಗ್ ಬಡಿ ಹೇಳ್ತಿನಿ” ಕಸಗುಡಿಸುತ್ತಿದ್ದ ಚಿಕ್ಕತಾಯಮ್ಮ ಬರಲಿನ ಸಮೇತ ಪ್ರತ್ಯಕ್ಷಳಾಗಿ ಉರಿಯುತ್ತಿದ್ದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಳು. ಅವ್ವನ  ಮಾತಿಗೆ ಮೋಹನನ ರಟ್ಟೆ ಹುರಿಗೊಂಡು, ಗಂಟಲ ನರಗಳುಬ್ಬಿ “ಬೀದಿಲ್ ನಿಂತು ಮನೆ ಮರ್ಯಾದಿ ಹರಾಜಾಕ್ತಿಯೇನೆ ಲೋಫರ್…” ಹಲ್ಲು ಕಡಿಯುತ್ತಾ ಅವ್ವನ ಕೈಲಿದ್ದ ಬರಲು ಕಡ್ಡಿ ಕಸಿದು ಕೈ ಸೋಲುವವರೆಗೂ ಬಡಿದ. 

“ಅಯ್ಯಯ್ಯಪ್ಪನೇ.. ನಿಮ್ ದಮ್ಮಯ್ಯ ನನ್ನ ಮಾತ್ನೊಸಿ ಕೇಳಿ” ಗಂಗೆಯ ಕೂಗಾಟ ಎಮ್ಮೆ ಚರ್ಮದ ಮೋಹನನ ಕಿವಿಗೆ ತಾಗಲೇ ಇಲ್ಲ. ತಪ್ಪಿಸಿಕೊಂಡು ಓಡಲಾರದಂತೆ ಕಟ್ಟಿಹಾಕಿದ್ದ ತುಂಬು ಬಸುರನ್ನು ಗಟ್ಟಿಯಾಗಿ ತಬ್ಬಿ, ಆಗಿದ್ದಾಗಲಿ ಎಂದು ನಿರ್ಧರಿಸಿ ಮೈ ಕೊಟ್ಟು ತಟಸ್ಥಳಾಗಿ ಕೂತಳು ಗಂಗೆ. ಕುಯ್ಯೊ ಮರ್ರೊ ಅನ್ನದೆ ಮೊಂಡಿಯಂತೆ ಕೂತಿದ್ದ ಹೆಂಡತಿಯನ್ನು ಕಂಡು ಮತ್ತಷ್ಟು ಸಿಟ್ಟಿಗೆದ್ದ ಮೋಹನನಿಗೆ ಹೊಡೆತದ ಬಿಗಿ ಸಾಲದೆನಿಸಿತು. ಹಿಡಿದಿದ್ದ ಬರಲನ್ನು ಪಕ್ಕಕ್ಕೆಸೆದು ಮುಷ್ಟಿ ಬಿಗಿದು ತನ್ನ ಬಲವನ್ನೆಲ್ಲಾ ಒಟ್ಟುಗೂಡಿಸಿ  ಅವಳ ಬೆನ್ನಿನ ಮೇಲೆ ಸರಿಯಾಗಿಯೇ ಗುದ್ದಿದ. ಗಂಡನ ಕೊನೆಯ ಹೊಡೆತಕ್ಕೆ ಬಸುರು ಜಾರಿದಂತಾಗಿ ಉಸಿರು ಕಟ್ಟಿ ವಿಲಿ ಗುಟ್ಟಿದ ಗಂಗೆ ” ಅಯ್ಯಪ್ನೇ…ಹೋಯ್ತ್ ನನ್ನ್ ಜೀವ” ಎನ್ನುತ್ತಾ  ಕೂತ ಕೌದಿಯ ಮೇಲೆಯೇ ಉರುಳಿದಳು.

ಎದೆ ಅಲುಗಿಸಿದ ಗಂಗೆಯ ಆರ್ದ್ರವಾದ ದನಿಗೆ ಮೈ ಕಸುವೆಲ್ಲಾ  ಇಂಗಿದವನಂತೆ ಸೋತ ಮೋಹನ, ಮನೆಯವರೆದುರು ಅದನ್ನು ತೋರಗೊಡದೆ ಹುಂಕರಿಸುತ್ತಲೆ ಇನ್ನಷ್ಟು ಕೋಪ ಪ್ರದರ್ಶಿಸುತ್ತಾ ಬಿರುಗಾಳಿಯಂತೆ ಕಣ್ಮರೆಯಾದ. ತಂಪಾದ ಚಿಕ್ಕತಾಯಮ್ಮನ ಜೀವ “ಹಿಂಗೆ  ಸಾಯಿ ಲೌಡಿ… ” ಎಂದು ಗೊಣಗಿ ಕೊಳ್ಳುತ್ತಾ ಆಗಬೇಕಾದ ಕೆಲಸಗಳತ್ತ ಹೊರಳಿಕೊಂಡಿತು.

ಇಷ್ಟು ತಿಂಗಳು ಯಾವ ಹೈದರಾಬಾದಿಗೂ ಹೋಗದೆ ಸುಕನ್ಯಾಳ ಮನೆಯಲ್ಲಿಯೇ ತಲೆಮರೆಸಿಕೊಂಡು ಕೂತಿದ್ದ ಮೋಹನನಿಗೆ, ಹಿಂದಿನ ರಾತ್ರಿ ತಮ್ಮ ಪರಮೇಶ ನಾಗರಕಟ್ಟೆಯ ಎಸ್. ಟಿ. ಡಿ ಬೂತಿನಿಂದ  ಫೋನಾಯಿಸಿದ್ದ. ಗಂಗೆಯ ಮೇಲೆ ಅವ್ವ ಹೊರಿಸಿದ್ದ ಆರೋಪಗಳ ದೊಡ್ಡಪಟ್ಟಿಯನ್ನೇ ಅಣ್ಣನ ಕಿವಿಯಲ್ಲಿ ಊದಿ ಅವನೊಳಗೆ ಕಿಚ್ಚುಹೊತ್ತಿಸಿ, ಈಗಲೇ ಹೊರಟು ಬರಬೇಕೆಂದು ಹೇಳಿದ್ದ ಅವ್ವನ ಆಜ್ಞೆಯನ್ನು ಇನ್ನಷ್ಟು ಕಟುವಾಗಿ ದಾಟಿಸಿ ಫೋನ್ ಇಟ್ಟಿದ್ದ. ಮೊದಲೇ ಆ ಹುಡುಗಿಯ ಸಾವಿನಿಂದ ಕಂಗೆಟ್ಟಿದ್ದ ಮೋಹನನಿಗೆ, ಪರಮೇಶ ಹೇಳಿದ ಗಂಗೆಯ ಅವಾಂತರಗಳನ್ನೆಲ್ಲ ಕೇಳಿ ಗಂಡಾಂತರವೆ ತನ್ನ ಕುತ್ತಿಗೆ ಹಿಡಿದು ಅಮುಕಿದಂತಾಯಿತು. ಕೂತಲ್ಲಿ ಕೂರಲಾರದೆ ನಿಂತಲ್ಲಿ ನಿಲ್ಲಲಾರದೆ ರಾತ್ರೋರಾತ್ರಿ ಬಸ್ಸು ಲಾರಿ ಹಿಡಿದು ಬೆಳಗಿನ ಜಾವಕ್ಕೆ ಬಂದು ಊರು ಮುಟ್ಟಿದ್ದ.

ಬಂದ ಬಿರುಸಿನಲ್ಲಿಯೇ ಹಿಂದೆ ಮುಂದೆ ನೋಡದೆ  ಗಂಗೆಯ ಮೈನೀರಿಳಿಸಿ ಚಡಪಡಿಸುತ್ತಾ ಬಂದು ಊರ ತುದಿಯ ಕೊನೆ ಮನೆ ಸ್ನೇಹಿತ ವಿಶ್ವನ ಮನೆ ಸೇರಿದ್ದ. ಹಸಿಯುತ್ತಿದ್ದ ಹೊಟ್ಟೆಗೆರಡು ರೊಟ್ಟಿ ಇಳಿಸಿ ವಿಶ್ವನ ಕೋಣೆ ಸೇರಿ ನಿದ್ದೆ ತೆಗೆಯಲೆಳಿಸಿದವನಿಗೆ ಜಪ್ಪಯ್ಯ ಅಂದರು ಕಣ್ಣು ಕೂಡಿಸಲಾಗಲಿಲ್ಲ. “ಅಯ್ಯಪ್ನೆ.. ಹೋಯ್ತ್ ನನ್ ಜೀವ”  ಎಂದು ನರಳಿದ್ದ ಗಂಗೆಯ ದನಿ ಮೋಹನನ ಎದೆಯನ್ನು ಒದ್ದೆಯಾಗಿಸುತ್ತಲೇ ಇತ್ತು.  

ಗಂಗೆಯ ಬಳಿ ಹೋಗಿಬಿಡಬೇಕೆನ್ನಿಸುವ ಒತ್ತಡ ಒತ್ತರಿಸಿ ಬರುತ್ತಿತ್ತಾದರೂ ತಾಯಿ ತಮ್ಮನ ಮುಖವೇ ಅಡ್ಡ ಬಂದು ಅತ್ತ ಹೋಗದಂತೆ ಅವನನ್ನು ತಡೆದು ನಿಲ್ಲಿಸಿತ್ತು. ನಾಲ್ಕು ಕೋಣೆಯ ಒಳಗಿರಲಾರದೆ ಚಡಪಡಿಸುತ್ತಿದ್ದವನನ್ನು ವಿಶ್ವನೇ ತೋಟ ಸುತ್ತಾಡಿ ಬರಲು ಕರೆದುಕೊಂಡು ಹೊರಟ. ಹಾಗೂ ಹೀಗೂ ತೋಟವನ್ನೆಲ್ಲಾ ಸುತ್ತಾಡಿ, ಎಳನೀರು ಕುಡಿದು ಮಧ್ಯಾಹ್ನ ಜಾರಿಸಿ ಮನೆಯತ್ತ ಹೊರಟವನಿಗೆ ಹಿರೇಗೌಡರ ಮನೆಯ ಕೆಲಸದಾಳು ಶಿವಲಿಂಗಿ ಎದುರಾದಳು. “ಇವತ್ಯಾಕಣ್ಣಯ್ಯ ಗಂಗಕ್ಕ ಎಮ್ಮೆ ಮೇಸುಕ್ ಬರ್ಲಿಲ್ಲ. ಹುಸಾರಾಗೈತೆ ತಾನೆಯ” ಎಂದು ಮುಖ ಸಣ್ಣದು ಮಾಡಿಕೊಂಡು ಕೇಳಿತು. “ಒಂಚೂರು ಜ್ವರ ಬಂದಂಗಿತ್ತು ಕಣವ್ವ ಶಿವಿ…ಮೋಹನನ ಮಾತಿನ್ನು ಪೂರ್ಣವಾಗಿರಲಿಲ್ಲ̤ ಜ್ವರ ಎನ್ನುವುದನ್ನು ಕೇಳಿ ದುಃಖಿತಳಾದ ಶಿವಲಿಂಗಿ “ಪಾಪ ಆ ಮನೆಯವೌರು ಅವಕ್ಕುಂಗೆ ತಿನ್ನಕ್ ಕೊಟೌರೋ ಇಲ್ವೊ. ವಸಿ ಈ ಎಮ್ಮೆತವ್ಲೆ ಇರಣ್ಣ, ಹೋಗಿ ಗಂಗಕ್ಕುನ್ಗಿದ ತಿನ್ನುಸಿ ಬಿರ್ರುನ್ ಬಂದ್ಬುಡ್ತಿನಿ” ಎಂದು ತನ್ನ ಕೈ ಚೀಲದಲ್ಲಿಟ್ಟುಕೊಂಡಿದ್ದ ಬೇಯಿಸಿದ ಮೊಟ್ಟೆ ಸೊಪ್ಪು ಕಾಳಿನ ಗಂಟನ್ನು ಹೊರತೆಗೆಯಿತು.

ಓಡಲನುವಾದ ಹುಡುಗಿಯ ರಟ್ಟೆಯನ್ನು ಹಿಡಿದು ನಿಲ್ಲಿಸಿದ ಮೋಹನ, ” ಹಾಗಿದ್ರೆ ಗಂಗಕ್ಕ ದಿನ ಎಮ್ಮೆ ಮೇಸೋದಕ್ಕೆ ಬರ್ತಳ ಮರಿ” ಎಂದು ಕೇಳಿದ. ಅವನಷ್ಟು ಕೇಳಿದ್ದೆ ತಡ  ಒಂದೇ ಉಸಿರಿಗೆ ಅವಳ ಪಡಿಪಾಟಲನ್ನೆಲ್ಲ ಕಣ್ಣು ತುಂಬಿಸಿಕೊಂಡು ಹೇಳಿದ ಶಿವಲಿಂಗಿ, “ಇರಣ್ಣಯ್ಯ ಇದುನ್ನ ಕೊಟ್ಟು ಬಂದು ಇನ್ನು ವಸಿ ಹೇಳ್ತೀನಂತೆ”  ಎಂದಿತು. ತಾನೇ ಕೊಡುವುದಾಗಿ ಹೇಳಿ ಆ ಶಿವಲಿಂಗಿಯಿಂದ ಗಂಗೆಯ ವಿಷಯವನ್ನು ಇನ್ನಷ್ಟು ಕಲೆಹಾಕಿಕೊಂಡ ಮೋಹನ, ತನ್ನ ತಪ್ಪಿನ ಅರಿವಾಗಿ ಭಾರವಾದ ಮನಸ್ಸಿನಿಂದ ಮನೆಯತ್ತ ಹೊರಟ. 

ಬೆಳಗ್ಗಿನಿಂದಲೂ ಮೇಲೇಳಲಾರದೆ ಬಿದ್ದುಕೊಂಡಲ್ಲೇ ಬಿದ್ದುಕೊಂಡು ನರಳಾಡುತ್ತಿದ್ದ ಗಂಗೆ, ಅತ್ತೆಯನ್ನು ನಾದಿನಿಯನ್ನು “ಹೊಟ್ಟೆ ಹಸ್ದು ಪ್ರಾಣಹೋತೈತೆ ನಿಮ್ ದಮ್ಮಯ್ಯ ವಸಿ ತಿನ್ನಕೆ ಏನಾರ ಕೊಡಿ” ಎಂದು ಬೇಡಿ ಬೇಡಿ ಸುಸ್ತಾಗಿ ವಿಧಿಯಿಲ್ಲದೆ ನಿದ್ದೆಗೆ ಜಾರಿದ್ದಳು. ಹುಡುಗಿ ಕೊಟ್ಟ ಗಂಟಿನೊಂದಿಗೆ ಗಂಗೆಯ ಹತ್ತಿರ ಬಂದ ಮೋಹನನಿಗೆ ಕಾಲಿಗೆ ಏನೋ ಅಂಟಿಕೊಂಡಂತಾಗಿ ಸರಕ್ಕನೆ ಕಾಲು ತೆಗೆದು ಹಿಂದಕ್ಕಿಟ್ಟು  ನೆಲವನ್ನೇ ದಿಟ್ಟಿಸಿ ನೋಡಿದ. ಗಂಗೆ ಮಲಗಿದ್ದ ದಟ್ಟವೆಲ್ಲ ಒದ್ದೆಯಾಗಿ ಆ ನೀರು ನೆಲದವರೆಗೂ ಹರಿದು ನಿಂತಿತ್ತು. ಮುಟ್ಟಿದರೆ ಅಂಟುತ್ತಿದ್ದ ಆ ನೀರನ್ನು ಕಂಡು ಗಾಬರಿಬಿದ್ದ ಮೋಹನ, ಗಂಗೆಯನ್ನು ತಟ್ಟಿ ಎಬ್ಬಿಸಿ “ಇದೇನಿದು ದಟ್ಟ ಎಲ್ಲ ಒದ್ದೆ ಆಗೈತೆ” ಎಂದು ಮೆಲ್ಲಗೆ ಕೇಳಿದ. ಮಾತಾಡುವ ತ್ರಾಣವಿಲ್ಲದೆ ಸಣ್ಣ ದನಿಯಲ್ಲಿ ” ನೀವು ಹೊಡ್ದೊದಗ್ನಿಂದ್ಲು ಹಿಂಗೆ ನೀರು ಬಳ್ ಬಳ್ ಅಂತ ಬತ್ತನೇ ಐತೆ ಕರುದ್ರೆ ಯಾರು ಬತ್ತನೇ ಇಲ್ಲ” ಎಂದಳು ಉಸಿರೊಡೆಯುತ್ತಾ. ಗಂಗೆಯನ್ನು ಗಟ್ಟಿಯಾಗಿ ತಬ್ಬಿ “ಸಾರಿ ಗಂಗೂ ಸಾರಿ ಗಂಗೂ” ಎಂದು ಅಳಲು ತೊಡಗಿದ  ಮೋಹನನನ್ನು ತಾನೇ ಸಮಾಧಾನಿಸಿದ ಗಂಗೆ, “ಹೊಟ್ಟೆ ಹಸ್ವು ತಡಿನಾರೆ ತಿನ್ನಕೊಂಚೂರು ಏನಾರ ಕೊಡ್ಸಿ” ಎಂದು ಬೇಡಿದಳು. ಅಣ್ಣನ ಒಂದೇ ಒಂದು ಕೂಗಿಗೆ ನಡುಗುತ್ತಾ ಎದುರು ಬಂದು ನಿಂತ ರತ್ನ  ತರಾತುರಿಯಲ್ಲಿಯೇ ಒಲೆ ಹತ್ತಿಸಿ ಅನ್ನಕ್ಕಿಟ್ಟಳು. ಬಿಸಿ ಅನ್ನಕ್ಕಷ್ಟು ಬೆಣ್ಣೆ ಮೆಣಸಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ ಶಿವಲಿಂಗಿ ಕೊಟ್ಟಿದ್ದ ಮೊಟ್ಟೆ, ಸೊಪ್ಪಿನ ನೆಂಚಿಕೆಯೊಂದಿಗೆ ತನ್ನ ಕೈಯಾರೆ ಒಂದು ತಟ್ಟೆ ಅನ್ನ ಉಣ್ಣಿಸಿದ ಮೋಹನ, ಅವ್ವನನ್ನು ಕೂಗಿ “ಇವ್ಳುನ್ ಆಸ್ಪತ್ರೆಗೆ ಕರ್ಕೊಂಡೋಗ್ ಬೇಕು ಹೊರ್ಟಿರು ಬಂದೆ” ಎಂದು ಗಡುಸಾಗಿಯೇ ಹೇಳಿದ. ಬಡಪೆಟ್ಟಿಗೆ ಬಗ್ಗದ ಚಿಕ್ಕತಾಯಮ್ಮ  “ನೀ ಮುಂದೋಗಿರು ವಸಿ ಕೆಲ್ಸ ಮುಗ್ಸಿ ಆಮ್ಯಾಕ್ ಬತ್ತಿನಿ” ಎಂದು ಮೂತಿ ತಿರುವಿ ಮಾಯವಾದಳು. ಅವ್ವನ ವಿರುದ್ಧ ಮುನಿದು ನಿಲ್ಲುವ ಸಮಯ ಅದಾಗಿರಲಿಲ್ಲವಾದ್ದರಿಂದ ಮೋಹನ ಬುಸುಗುಡುತ್ತಲೇ  ಹಿರೇ ಗೌಡರ ಮನೆಗೆ ಓಡಿ ತರಾತುರಿಯಲ್ಲಿಯೇ ಗಾಡಿ ಕಟ್ಟಿಸಿಕೊಂಡು ಬಂದ. ತಂಗಿ ರತ್ನಳ ಸಹಾಯ ಪಡೆದು ಗಂಗೆಯನ್ನು ಮೆಲ್ಲಗೆ ಗಾಡಿ ಹತ್ತಿಸಿ ಮಲಗಿಸಿಕೊಂಡು ಸಂಪಿಗೆ ಕಟ್ಟೆಯ ಗೌರ್ಮೆಂಟ್ ಆಸ್ಪತ್ರೆ ತಲುಪಿದ. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಈ ಹಿಂದಿನ ಕಂತು- “ನಾನು ಇನ್ಮುಂದುಕ್ಕೆ ಹಿಂಗೆ ಇರೋಳು”

Related Articles

ಇತ್ತೀಚಿನ ಸುದ್ದಿಗಳು