Monday, June 17, 2024

ಸತ್ಯ | ನ್ಯಾಯ |ಧರ್ಮ

ಮತ್ತೆ ಮುನ್ನೆಲೆಗೆ ಬಂದ ರಫೆಲ್ ಡೀಲ್:‌‌ ತನಿಖೆಗೆ ಭಾರತ ಸಹಕರಿಸುತ್ತಿಲ್ಲ ಎಂದ ಫ್ರಾನ್ಸ್

ಹೊಸದೆಹಲಿ, ಡಿಸೆಂಬರ್ 15: ರಫೇಲ್ ಡೀಲ್ ಕುರಿತು ಮತ್ತೆ ವಿವಾದ ಭುಗಿಲೆದ್ದಿದೆ. ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ​​ನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಭಾರತ ಸರ್ಕಾರ 2016ರಲ್ಲಿ ಸಹಿ ಮಾಡಿದ್ದ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಫ್ರೆಂಚ್ ನ್ಯಾಯಾಧೀಶರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಆದರೆ, ಮೋದಿ ಸರ್ಕಾರ ತನಿಖೆಗೆ ಸಹಕರಿಸಲು ನಿರಾಕರಿಸುತ್ತಿದೆ ಎಂದು ಫ್ರೆಂಚ್ ತನಿಖಾ ವೆಬ್‌ಸೈಟ್ ಮೀಡಿಯಾ ಪಾರ್ಟ್ ಸಂಚಲನಕಾರಿ ಲೇಖನ ಪ್ರಕಟಿಸಿದೆ.

ಭಾರತಕ್ಕೆ ಫ್ರಾನ್ಸ್‌ನ ಮಾಜಿ ರಾಯಭಾರಿ ಎಮ್ಯಾನುಯೆಲ್ ಲೆನಿನ್ ಬರೆದ ರಾಜತಾಂತ್ರಿಕ ಟಿಪ್ಪಣಿಯನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ, ಅಪರಾಧ ಪ್ರಕರಣಗಳಲ್ಲಿ ಭಾರತದ ಸಹಕಾರದ ವಿಷಯದಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ಅವರು ಉಲ್ಲೇಖಿಸಿದ್ದಾರೆ. ಭಾರತದಿಂದ ಸಂಪೂರ್ಣ ಪ್ರತಿಕ್ರಿಯೆಗಳು ಮತ್ತು ವಿವರಗಳನ್ನು ಒದಗಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಫ್ರೆಂಚ್ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ ಎಂದು‌ ಮೀಡಿಯಾ ಪಾರ್ಟ್ ತನ್ನ ಇತ್ತೀಚಿನ ಲೇಖನದಲ್ಲಿ ತಿಳಿಸಿದೆ. “ನಮ್ಮ ಭಾರತೀಯ ಪಾಲುದಾರರಿಂದಾಗಿ ಅನೇಕ ಪ್ರಕರಣಗಳು ವಿಳಂಬವಾಗುತ್ತಿವೆ. ಅಂತೆಯೇ, ಆ ವಿವರಗಳು ತುಂಬಾ ಅಪೂರ್ಣವಾಗಿವೆ” ಎಂದು ಲೆನಿನ್ ತಮ್ಮ ಟಿಪ್ಪಣಿಯಲ್ಲಿ ಹೇಳಿದ್ದಾರೆ.

ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ, ಪಕ್ಷಪಾತ ಮತ್ತು ಅಧಿಕಾರ ದುರುಪಯೋಗದ ಆರೋಪಗಳ ತನಿಖೆಯಲ್ಲಿ ಸಹಕರಿಸಲು ಫ್ರೆಂಚ್ ನ್ಯಾಯಾಧೀಶರು ನವೆಂಬರ್ 2022ರಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಕೋರಿದ್ದರು ಎಂದು ಮೀಡಿಯಾ ಪಾರ್ಟ್ ಹೇಳಿದೆ, ಆದರೆ ಮೋದಿ ಸರ್ಕಾರ‌ ಇದಕ್ಕೆ ಸಹಕಾರ ನಿರಾಕರಿಸಿದೆ. ಡಸಾಲ್ಟ್ ಮತ್ತು ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಗ್ರೂಪ್‌ನ ಜಂಟಿ ಉದ್ಯಮ ಅಚಿನಾ ಡಸಾಲ್ಟ್ ರಿಲಯನ್ಸ್ ಏರೋಸ್ಪೇಸ್ ಲಿಮಿಟೆಡ್ (ಡಿಆರ್‌ಎಎಲ್) ಮತ್ತು ಇತರ ಪ್ರಮುಖ ಕಚೇರಿಗಳಿಗೆ ಒಪ್ಪಂದಕ್ಕೆ ಸಂಬಂಧಿಸಿದ ನ್ಯಾಯಾಂಗ ದಾಖಲೆಗಳನ್ನು ನೀಡುವಂತೆ ನ್ಯಾಯಾಧೀಶರು ಕೇಳಿದ್ದಾರೆ, ಆದರೆ ವಿನಂತಿಯನ್ನು ನಿರಾಕರಿಸಲಾಗಿದೆ ಎಂದು ಅದು ಹೇಳಿದೆ.

ಪ್ರಧಾನಿ ಮೋದಿ ಪ್ಯಾರಿಸ್‌ನಲ್ಲಿ ರಫೇಲ್ ಒಪ್ಪಂದವನ್ನು ಘೋಷಿಸುವ 12 ದಿನಗಳ ಮೊದಲು ಅನಿಲ್ ಅಂಬಾನಿ ರಿಲಯನ್ಸ್ ರಕ್ಷಣಾ ಉದ್ಯಮವನ್ನು ಪ್ರಾರಂಭಿಸಿದರು ಮತ್ತು ಸಾರ್ವಜನಿಕ ವಲಯದ ಎಚ್‌ಎಎಲ್ ಹಿತಾಸಕ್ತಿಗಳನ್ನು ಪಣಕ್ಕಿಟ್ಟು ಮೋದಿ ಸರ್ಕಾರ ಅಂಬಾನಿಗೆ ಸಾವಿರಾರು ಕೋಟಿಗಳ ಗುತ್ತಿಗೆಯನ್ನು ನೀಡಿದೆ ಎಂಬ ಆರೋಪಗಳಿವೆ. ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿರುವ ಉದ್ಯಮಿ ಸುಷೇನ್ ಗುಪ್ತಾ ಕೂಡ ರಫೇಲ್ ಡೀಲ್‌ನಲ್ಲಿ ಏಜೆಂಟ್ ಆಗಿದ್ದು, ಭಾರಿ ಕಮಿಷನ್ ಪಡೆದಿದ್ದಾರೆ ಎಂದು ಮಾಧ್ಯಮಗಳು ಈ ಹಿಂದೆ ಪ್ರಕಟಿಸಿದ ಲೇಖನದಲ್ಲಿ ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು