Monday, June 17, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರು ಗ್ರಾಮಾಂತರ ಬಿಜೆಪಿ-ಜೆಡಿಎಸ್ ಲೋಕಸಭಾ ಅಭ್ಯರ್ಥಿಯಾಗಿ ಹೆಚ್.ಡಿ.ಕುಮಾರಸ್ವಾಮಿ!

ಇತ್ತೀಚಿನ ದಿನಗಳ ರಾಜ್ಯ ರಾಜಕೀಯದಲ್ಲಿ ಹಿಟ್ ಅಂಡ್ ರನ್ ರಾಜಕಾರಣಿ ಅಂತಲೇ ಪ್ರಸಿದ್ಧಿ ಪಡೆದಿರುವ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಈಗ ಲೋಕಸಭಾ ಅಖಾಡಕ್ಕೆ ಹೆಜ್ಜೆ ಇರಿಸುವುದು ಬಹುತೇಕ ಖಚಿತ ಎನ್ನುವಂತಾಗಿದೆ. ರಾಮನಗರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲಿನ ನೋವು ಮಾಸುವ ಮುನ್ನವೇ ಕಾಂಗ್ರೆಸ್ ನ ದೊಡ್ಡ ಭದ್ರಕೋಟೆಯಂತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಕುಮಾರಸ್ವಾಮಿ ಸ್ವತಃ ಅಭ್ಯರ್ಥಿಯಾಗುವ ಕಣ್ಣಿಟ್ಟಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಗುರುವಾರ ಬಿಜೆಪಿ ವರಿಷ್ಠರೊಂದಿಗೆ ಮಾತುಕಥೆ ನಡೆಸಲು ತೆರಳಿರುವ ಕುಮಾರಸ್ವಾಮಿ ಹಳೆ ಮೈಸೂರು ಭಾಗದ ಕೆಲವು ಲೋಕಸಭಾ ಕ್ಷೇತ್ರಗಳ ಬಗ್ಗೆ ಪ್ರಸ್ತಾಪಿಸಲಿದ್ದಾರೆ. ಸೀಟು ಹಂಚಿಕೆ ಬಗ್ಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಷಾ ಜೊತೆಗೆ ಚರ್ಚೆ ನಡೆಸಿ ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರ‌ಗಳನ್ನು ಜೆಡಿಎಸ್ ತೆಕ್ಕೆಗೆ ತಗೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ವಿಶೇಷವಾಗಿ ಒಕ್ಕಲಿಗ ಪ್ರಾಬಲ್ಯ ಹೊಂದಿರುವ ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ತುಮಕೂರು, ಹಾಸನ ಕ್ಷೇತ್ರ ಹಾಗೂ ಕೋಲಾರ, ಚಿಕ್ಕಬಳ್ಳಾಪುರ ಸೇರಿ ಒಟ್ಟು 8 ಕ್ಷೇತ್ರಕ್ಕೆ ಕುಮಾರಸ್ವಾಮಿ ಕಣ್ಣಿಟ್ಟಿದ್ದಾರೆ. ಆ ಮೂಲಕ ಈ ಕ್ಷೇತ್ರಗಳನ್ನು ಜೆಡಿಎಸ್ ತೆಕ್ಕೆಗೆ ತಗೆದುಕೊಂಡು ಕ್ಷೇತ್ರ ತಮ್ಮದಾಗಿಸಿಕೊಳ್ಳಲು ಅಭ್ಯರ್ಥಿಗಳ ಪಟ್ಟಿ ಜೊತೆಗೇ ಕುಮಾರಸ್ವಾಮಿ ದೆಹಲಿಗೆ ಪಯಣ ಬೆಳೆಸಿದ್ದಾರೆ.

ಆಶ್ಚರ್ಯ ಎಂದರೆ ಈ ಬಾರಿ ಸ್ವತಃ ತಾವೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬಗ್ಗೆ ಜೆಡಿಎಸ್ ಮುಖಂಡರ ಕಡೆಯಿಂದಲೂ ಅನುಮತಿ ಪಡೆದು ಬಿಜೆಪಿ ನಾಯಕರೊಂದಿಗೆ ಮಾತುಕತೆಗೆ ಮುಂದಾಗಲಿದ್ದಾರೆ. ಇಲ್ಲಿ ಜೆಡಿಎಸ್ ತಂತ್ರಗಾರಿಕೆ ಏನು, ಅದಕ್ಕೆ ಬಿಜೆಪಿ ಹೇಗೆ ಸಾತ್ ಕೊಡಬಹುದು ಎಂಬ ನಿಟ್ಟಿನಲ್ಲಿ ಅಮಿತ್ ಷಾ ಮತ್ತು ಜೆಪಿ ನಡ್ಡಾಗೆ ಮನವರಿಕೆ ಮಾಡುವುದು ಈಗ ಕುಮಾರಸ್ವಾಮಿ ಮುಂದಿರುವ ದೊಡ್ಡ ಸವಾಲು.

ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಮಂಡ್ಯ ಹೊರತುಪಡಿಸಿ ಬೇರೆಲ್ಲಾ ಕ್ಷೇತ್ರಗಳಲ್ಲಿ ಹಾಲಿ ಬಿಜೆಪಿ ಸಂಸದರೇ ಇರುವ ಹಿನ್ನೆಲೆಯಲ್ಲಿ ಈ ಉಳಿದ ಕ್ಷೇತ್ರಗಳ ಸೀಟು ಹಂಚಿಕೆ ಜೆಡಿಎಸ್ ಪಾಲಿಗೆ ಕಗ್ಗಂಟಾಗಿ ಉಳಿಯಲಿದೆ. ಆದರೆ ರಾಜ್ಯ ವಿಧಾನಸಭಾ ಚುನಾವಣೆ ನಂತರ ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯ ಮೆರೆದಿದೆ. ಈ ಕಾರಣದಿಂದ ಜೆಡಿಎಸ್ ಈ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಲು ಬಿಜೆಪಿ ವರಿಷ್ಟರೊಂದಿಗೆ ಪಟ್ಟು ಹಿಡಿಯಬಹುದು.

ಇನ್ನು ಬೆಂಗಳೂರು ಗ್ರಾಮಾಂತರ ಜೆಡಿಎಸ್ ಗೆ ಹೊಸ ಕ್ಷೇತ್ರವೇನೂ ಅಲ್ಲ. ಈ ಹಿಂದೆ 2009 ರಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾಗಿದ್ದರು. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಕೂಡಾ ರಾಮನಗರದಲ್ಲಿ ಒಂದು ಅವಧಿಗೆ, ಕುಮಾರಸ್ವಾಮಿ ನಾಲ್ಕು ಅವಧಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹಾಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಶಾಸಕರೂ ಆಗಿರುವ ಕುಮಾರಸ್ವಾಮಿಗೆ ಬೆಂಗಳೂರು ಗ್ರಾಮಾಂತರದಲ್ಲಿ ಸವಾಲು ಎನ್ನಿಸುವ ಕ್ಷೇತ್ರಗಳೆಂದರೆ ಕನಕಪುರ, ಮಾಗಡಿ, ಆನೇಕಲ್ ಹಾಗೂ ಕುಣಿಗಲ್ ವಿಧಾನಸಭಾ ಕ್ಷೇತ್ರಗಳು.

ಕುಮಾರಸ್ವಾಮಿ ಮಟ್ಟಿಗೆ ಈ ಅವಧಿಯಲ್ಲಿ ಕನಕಪುರ ಗಗನ ಕುಸುಮವೇ ಸರಿ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯದ ಇತಿಹಾಸದಲ್ಲೇ ದಾಖಲೆ ಅಂತರದಲ್ಲಿ ಗೆಲುವು ಸಾಧಿಸಿದ ಕ್ಷೇತ್ರವಾಗಿದೆ ಕನಕಪುರ. ಡಿಕೆಶಿ ಬೇರಾವ ಕ್ಷೇತ್ರ ಬಿಟ್ಟುಕೊಟ್ಟರೂ ಕನಕಪುರವನ್ನು ಮಾತ್ರ ಯಾವ ಕಾರಣಕ್ಕೂ ಬಿಟ್ಟು ಕೊಡಲಾರರು. ಇನ್ನು ತಮ್ಮ ಪುತ್ರ ನಿಖಿಲ್ ಸೋಲಿನ ಬಳಿಕ ರಾಮನಗರದ ಜನತೆ ಬಗ್ಗೆ ಕುಮಾರಸ್ವಾಮಿ ನಡೆದುಕೊಂಡ ರೀತಿ ಈಗಲೂ ಚರ್ಚಿತ ವಿಷಯವೇ. ಅದೆಲ್ಲದರ ಹೊರತುಪಡಿಸಿ ಅನುಕಂಪ ಏನಾದರೂ ವರ್ಕೌಟ್ ಆದರೆ ರಾಮನಗರದಲ್ಲಿ ಕುಮಾರಸ್ವಾಮಿ ಹೆಚ್ಚಿನ ಅಂತರದ ಮತ ಪಡೆಯಬಹುದು.

ಇನ್ನು ಮಾಗಡಿ, ಆನೇಕಲ್ ಹಾಗೂ ಕುಣಿಗಲ್ ಈ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್ ಎರಡನೇ ಸ್ಥಾನದಲ್ಲಿದ್ದರೂ ಈ ಬಾರಿ ಜೆಡಿಎಸ್ ಗೆ ಇಲ್ಲಿ ಕಡಿಮೆ ಅಂತರವೇನೂ ಇಲ್ಲ ಎಂಬುದು ಮುಖ್ಯವಾದ ಅಂಶ. ಆದರೆ ನೇರವಾಗಿ ಕುಮಾರಸ್ವಾಮಿಯೇ ಅಖಾಡಕ್ಕೆ ಇಳಿದರೆ ಈ ಮೂರೂ ಕ್ಷೇತ್ರಗಳಲ್ಲಿ ಏನಾದರೂ ಮ್ಯಾಜಿಕ್ ನಡೆದರೂ ಆಶ್ಚರ್ಯವಿಲ್ಲ. ಇವೆಲ್ಲವನ್ನೂ ಹೊರತುಪಡಿಸಿ ಹೆಚ್.ಡಿ.ಕುಮಾರಸ್ವಾಮಿಗೆ ಇರುವ ಅತಿ ದೊಡ್ಡ ಮತ್ತು ಬೇಧಿಸಲು ತೀರಾ ಕಷ್ಟಸಾಧ್ಯ ಎನ್ನಿಸುವ ಸವಾಲು ಎಂದರೆ ಅದು ಹಾಲಿ ಸಂಸದ ಡಿ.ಕೆ.ಸುರೇಶ್.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಕ್ಷಣಕ್ಕೆ ಚುನಾವಣೆ ನಡೆದರೂ ಗೆಲ್ಲೋದು ಬಂಡೆಯಂತೆ ಇರೋ ಡಿಕೆ ಸುರೇಶ್ ಅಂತ ಆ ಕ್ಷೇತ್ರದ ಪ್ರತಿಯೊಬ್ಬರೂ ಅಭಿಪ್ರಾಯ ಪಡುತ್ತಾರೆ. ಯಾಕೆಂದರೆ ಸಂಸದರಾಗಿ ಆಯ್ಕೆ ಆದ ದಿನದಿಂದಲೂ ಡಿ.ಕೆ.ಸುರೇಶ್ ಕ್ಷೇತ್ರದ ಜನರೊಂದಿಗೆ ದಿನನಿತ್ಯವೂ ಬೆರೆಯುತ್ತಿದ್ದಾರೆ. ಅಷ್ಟು ಮಾತ್ರವಲ್ಲ, ತಮ್ಮ ಕಾರ್ಯಕರ್ತರಲ್ಲಿ ಒಬ್ಬರನ್ನೂ ಬಿಡದೇ ವಿಶ್ವಾಸಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ.

ಇನ್ನು ತಂತ್ರಗಾರಿಕೆಯಲ್ಲಿ ಹೇಳುವುದೇ ಆದರೆ ತಮ್ಮ ಅಣ್ಣ ಡಿಕೆ ಶಿವಕುಮಾರ್ ಗಿಂತ ಒಂದು ಕೈ ಮೇಲೆಯೇ ಡಿಕೆ ಸುರೇಶ್ ಇದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಡಿಕೆ ಸುರೇಶ್ ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಮೂಲಕ ಕಣಕ್ಕಿಳಿಯುವ ಬಗ್ಗೆ ಒಂದು ಊಹಾಪೋಹವಿತ್ತು. ಅಕಸ್ಮಾತ್ ಡಿಕೆ ಸುರೇಶ್ ಕಣಕ್ಕಿಳಿದಿದ್ದರೆ ಆರ್.ಅಶೋಕ್ ಗೆ ಪದ್ಮನಾಭ ನಗರ ಕೂಡಾ ಗೆಲುವಿಗೆ ಏದುಸಿರು ಬಿಡುವುದಿತ್ತು. ಇದಕ್ಕೆ ಇಂಬು ಕೊಡುವಂತೆ ಈಗ ಕೆಲವೇ ತಿಂಗಳ ಹಿಂದೆ ಪದ್ಮನಾಭ ನಗರದಲ್ಲಿ ಘಟಾನುಘಟಿ ಬಿಜೆಪಿ ನಾಯಕರುಗಳ ‘ಆಪರೇಷನ್ ಹಸ್ತ’ದ ಹಿಂದೆ ಇದ್ದದ್ದು ಇದೇ ಡಿಕೆ ಸುರೇಶ್.

ಇದೆಲ್ಲದರ ನಡುವೆ ಹೆಚ್.ಡಿ.ಕುಮಾರಸ್ವಾಮಿ ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಶತಾಯಗತಾಯ ಜೆಡಿಎಸ್ ಪಕ್ಷದ ಹೀನಾಯ ಸೋಲಿಗೆ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಉತ್ತರ ಕೊಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಆದರೆ ಗೆಲುವು ಮಾತ್ರ ತೀರಾ ಕಷ್ಟ ಎನ್ನುವಂತಿದೆ. ಅಷ್ಟಕ್ಕೂ ಬಿಜೆಪಿ ಹೈಕಮಾಂಡ್ ಎಷ್ಟು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟು ಕೊಡಲಿದೆ, ಜೆಡಿಎಸ್ ಇದಕ್ಕೆ ತೃಪ್ತಿ ಹೊಂದಲಿದೆಯೇ ಎಂಬುದನ್ನು ಮಾತ್ರ ಕಾದು ನೋಡಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು