ರೋಗಿ ಅಥವಾ ಕುಟುಂಬಸ್ಥರ ಒಪ್ಪಿಗೆಯ ನಂತರವೇ ಐಸಿಯುಗೆ ದಾಖಲಿಸಿಕೊಳ್ಳಿ: ಆಸ್ಪತ್ರೆಗಳಿಗೆ ಕೇಂದ್ರ ಸೂಚನೆ
ಲಿಂಕ್ ನಕಲಿಸಲಾಗಿದೆ ✓
ರೋಗಿ ಹಾಗೂ ಆತನ ಸಂಬಂಧಿಕರು ಒಪ್ಪಿಗೆ ಸೂಚಿಸಿದರಷ್ಟೇ ತೀವ್ರ ನಿಗಾ ಘಟಕ (ICU)ದಲ್ಲಿ ಚಿಕಿತ್ಸೆ ಕೊಡಿಸಬಹುದು. ಒಂದು ವೇಳೆ ಅವರು ವಿರೋಧಿಸಿದರೆ ಐಸಿಯುಗೆ ದಾಖಲಿಸುವಂತಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಆಸ್ಪತ್ರೆಗಳಲ್ಲಿ ರೋಗಿಗಳನ್ನು ತೀವ್ರ ನಿಗಾ ಘಟಕಗಳಲ್ಲಿ ದಾಖಲಿಸುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಈ ಮಾರ್ಗಸೂಚಿಯನ್ನು 24 ಮಂದಿ ತಜ್ಞರು ಚರ್ಚಿಸಿ ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಮಾರ್ಗಸೂಚಿಯ ಪ್ರಕಾರ ಯಾವುದೇ ರೋಗಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುವಂತೆ ಬಲವಂತ ಮಾಡುವಂತಿಲ್ಲ. ರೋಗಿಗೆ ಇನ್ನು ಚಿಕಿತ್ಸೆ ನೀಡಿದರೆ ಪ್ರಯೋಜನವಿಲ್ಲ ಎನ್ನುವ ಸಂದರ್ಭದಲ್ಲಿ ಹಾಗೂ ಮುಂದೆ ಚಿಕಿತ್ಸೆ ನೀಡಿಯೂ ಆರೋಗ್ಯದಲ್ಲಿ ಸುಧಾರಣೆ ಕಾಣಲಾರದು ಎನ್ನಿಸಿದ ಸಂದರ್ಭದಲ್ಲಿ ಅಂತಹ ರೋಗಿಗಳನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡುವುದು ವ್ಯರ್ಥವೆಂದು ಹೇಳಲಾಗಿದೆ.
ಸಾಂಕ್ರಾಮಿಕ ರೋಗಗಳು, ವಿಪತ್ತು ಸಂದರ್ಭದಲ್ಲಿ ರೋಗಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದು. ರೋಗಿಗೆ ಅಂಗಾಂಗ ವೈಫಲ್ಯ, ಅಂಗಾಂಗ ಕಸಿ ಅಥವಾ ವೈದ್ಯಕೀಯ ಸ್ಥಿತಿ ಕ್ಷೀಣಿಸುವ ನಿರೀಕ್ಷೆ ಇದ್ದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಐಸಿಯುಗೆ ದಾಖಲಿಸಬೇಕು. ಹೃದಯ ಸಂಬಂಧಿ ಸಮಸ್ಯೆ, ಉಸಿರಾಟ ಸಮಸ್ಯೆ, ಯಾವುದಾದರೂ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ಹೀಗೆ ತೀವ್ರವಾಗಿ ಅನಾರೋಗ್ಯ ಪೀಡಿತರಾಗಿದ್ದರೆ ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಬಹುದು ಎಂದು ನಿಯಮಗಳಲ್ಲಿ ತಿಳಿಸಲಾಗಿದೆ.
ಇದಲ್ಲದೆ ಮಾರ್ಗಸೂಚಿಯ ಪ್ರಕಾರ ರೋಗಿಯನ್ನು ಐಸಿಯುಗೆ ದಾಖಲಿಸುವ ಮೊದಲು ರೋಗಿಯ ರಕ್ತದೊತ್ತಡ, ನಾಡಿ ಬಡಿತ, ಹೃದಯ ಬಡಿತ, ಆಮ್ಲಜನಕ ಹೀರಿಕೊಳ್ಳುವ ಸಾಮರ್ಥ್ಯ, ಮೂತ್ರ ವಿಸರ್ಜನೆಯ ಪ್ರಮಾಣ, ನರದ ಸ್ಥಿತಿಗತಿ ಮೊದಲಾದವುಗಳನ್ನು ಪರಿಶೀಲಿಸಬೇಕು. ಆ ಬಳಿಕವಷ್ಟೇ ರೋಗಿಯನ್ನು ಐಸಿಯುನಲ್ಲಿ ದಾಖಲಿಸಿಕೊಳ್ಳಬಹುದು ಎಂದು ಸೂಚಿಸಲಾಗಿದೆ.
Peepal Media Desk
Peepal Media · ದೇಶ ವಿಭಾಗ