Friday, June 14, 2024

ಸತ್ಯ | ನ್ಯಾಯ |ಧರ್ಮ

ತಾಜ್ ಮಹಲ್ಲಿನ ಖೈದಿಗಳು : ಪ್ರೀತಿ ಮತ್ತು ಆಧ್ಯಾತ್ಮದ ಬಂಧಿಖಾನೆ

ಅಸಂಖ್ಯಾತ ಅಂತರ್ದೃಷ್ಠಿಯ ಅರಿವುಗಳನ್ನು ಸಮರ್ಪಕವಾಗಿ ನಿರೂಪಿಸಿದರೆ ಮಾತ್ರ ಸೃಜನಶೀಲ ಕಥೆಯೊಂದು ರೂಪುಗೊಳ್ಳಬಲ್ಲದು! ಇಂಥ ಅನೇಕ ನೋಟಕ್ರಮಗಳು ತಾಜ್ ಮಹಲ್ಲಿನ ಖೈದಿಗಳು ಸಂಕಲನ ಸಿದ್ಧಿಸಿಕೊಂಡಿದ್ದು ವಿಶೇಷ. ಲೇಖಕ ಚಾಂದ್ ಪಾಷ ಎನ್ ಎಸ್ ಅವರ ವಿಮರ್ಶೆ ನಿಮ್ಮ ಮುಂದೆ

   ಶಿಹಾಬುದ್ದೀನ್ ಪೊಯ್ತುಂಕಡವು ಅವರ ‘ತಾಜ್ ಮಹಲ್ಲಿನ ಖೈದಿಗಳು’ ಕಥಾ ಸಂಕಲನವು ಮಲೆಯಾಳಂನಿಂದ ಹೊರಟ ಕನ್ನಡದ ಅವತರಣಿಕೆ ಆದರೂ ಕೂಡ, ಸಂವೇದನೆ ಮಾತ್ರ ಸಾರ್ವತ್ರಿಕವಾದದ್ದು! ಭಾಷೆಯ ಎಲ್ಲೆಯೊಂದಿಗೆ ಪ್ರಾದೇಶಿಕ ಪರಿಧಿಯನ್ನೂ ಮೀರಿ ನಿಲ್ಲಬಲ್ಲ ಅನಿಕೇತನ ಪ್ರಜ್ಞೆ ಎಂದು ಅನ್ನಿಸುತ್ತದೆ. ಕಥೆಗಳು ಕಥೆಯಾಗುವುದು ಮನುಷ್ಯ ಕೇಂದ್ರಿತ ವಸ್ತುವಿದ್ದಾಗ ಮಾತ್ರ. ಇಲ್ಲದಿದ್ದರೆ ಕೇವಲ ಘಟಾನುಘಟಿ ಘಟನೆಗಳನ್ನು ಪೋಣಿಸಿದ ಒಣಗಾಮಾಲೆಯಂತೆ ಘಮಲುಹೀನ ಮತ್ತು ಅರ್ಥಹೀನವೂ ಕೂಡ. ತನ್ನ ಸುತ್ತಲಿನ ಲೋಕಸಂಸಾರದ ವಿಷಯವಸ್ತುಗಳನ್ನು ಗಮನಿಸುವ ಕಥೆಗಾರ ಅಥವಾ ಕಥೆಗಾರ್ತಿ ತನ್ನೊಳಗಿನ ಹತಾಶೆ, ಬಯಕೆ, ತುಡಿತ, ಪಾಪ ಪ್ರಜ್ಞೆ, ಅನಾಥ ಭಾವ, ಸತ್ಯ ನುಡಿಯಲಾಗದ ಸಂದಿಗ್ಧತೆ, ಅರಿವಿಲ್ಲದೆ ಸಿದ್ಧಿಯಾದ ಆಧ್ಯಾತ್ಮ, ಬಸಿರೊಳಗೆ ಬಲಿಯಾದ ಪ್ರೇಮ…. ಹೀಗೆ ಅಸಂಖ್ಯಾತ ಅಂತರ್ದೃಷ್ಠಿಯ ಅರಿವುಗಳನ್ನು ಸಮರ್ಪಕವಾಗಿ ನಿರೂಪಿಸಿದರೆ ಮಾತ್ರ ಸೃಜನಶೀಲ ಕಥೆಯೊಂದು ರೂಪುಕೊಳ್ಳಬಲ್ಲದು! ಇಂಥ ಅನೇಕ ನೋಟಕ್ರಮಗಳು ತಾಜ್ ಮಹಲ್ಲಿನ ಖೈದಿಗಳು ಸಂಕಲನ ಸಿದ್ಧಿಸಿಕೊಂಡಿದ್ದು ವಿಶೇಷ.

    ಕೋಣೆಯೊಳಗೆ ಹಚ್ಚಿಟ್ಟ ಪುಟ್ಟ ಹಣತೆಯ ಬೆಳಕಿನೊಂದಿಗೆ ಕತ್ತಲೆಯು ಬೆಳಕಾಗಿ ಬೆಸೆಯುವಂತೆಯೇ, ಪ್ರೀತಿ ಆಧ್ಯಾತ್ಮವಾಗಿಯೋ, ಅಥವಾ ಆಧ್ಯಾತ್ಮವೇ ಪ್ರೀತಿಯಾಗಿಯೋ ಬೆಸೆದುಕೊಳ್ಳುತ್ತ ಪರಸ್ಪರ ಅಭಿನ್ನತೆಯ ಅಪೂರ್ವತೆಯನ್ನು ತೋರುವಂತೆ ಇಲ್ಲಿನ ಬಹುತೇಕ ಕಥೆಗಳು ಬೆಸೆಯುವಿಕೆಯ ಜಾಲವನ್ನೆ ಹರಡಿಕೊಂಡಿದೆ. ಬದುಕಿನ ಸಣ್ಣ ಪುಟ್ಟ ಕಿರಿಕಿರಿಗಳಿಗೆ ಕಿರೀಟ ತೊಡಿಸಿ ಮೆರವಣಿಗೆ ಮಾಡಿದರೆ, ಕಿರೀಟಕ್ಕಿಂತಲೂ ಕಿರಿಕಿರಿಗಳೆ ಹೆಚ್ಚು ಸುಂದರವಾಗಿ ಹಾಗೂ ಸಹಜವಾಗಿ ಕಾಣುವಂತೆಯೇ ಬದುಕಿನ ಬಹುತೇಕ ನಿರ್ಲಕ್ಷ್ಯಕೆ ಒಳಪಡುವ ಸಣ್ಣ ಪುಟ್ಟ ಸರಕುಗಳೇ ಮೋಹಕವಾಗುವಂತೆ ಕಥೆಗಳು ಚಿತ್ರಿಸಿದರೂ, ಕೆಲವೊಮ್ಮೆ ನಮ್ಮ ಕಷ್ಟ, ಸಣ್ಣತನ, ಜಾಣ್ಮೆ, ಪ್ರೀತಿ, ಮೋಸ, ಇತ್ಯಾದಿ ಭಾವಗಳಿಗೆ ಹಿಡಿದ ಕನ್ನಡಿಯಂತೆಯೆ. ಓದುತ್ತಾ ಹೋದ ಹಾಗೆ ಎಷೋ ಸಲ ನಾವೇ ಪಾತ್ರಗಳೂ ಆಗುವ ಆಶ್ಚರ್ಯವೂ ಮತ್ತು ಅಪಾಯವೂ ಇಲ್ಲುಂಟು ಎಂದರೆ ಅತಿರೇಕವಾಗಲಾರದು ಎಂಬುದು ನನ್ನ ಪ್ರಮಾಣಿಕ ಅನಿಸಿಕೆ.

     ” ಕತೆಗಾರ ಜೀವನದ ಬಗ್ಗೆ ಬಹಳ ಸುಲಭವಾಗಿ ತೀರ್ಮಾನಗಳಿಗೆ ಬರದೆ, ಲೋಕಾತೀತ ಸತ್ಯಸ್ಯಸತ್ಯಗಳನ್ನು ಕಂಡನೆಂದು ಸುದ್ದಿಗಳನ್ನು ಕೊಡದೆ, ಇಹದ ಸವಾಲು, ಸಂಕಷ್ಟಗಳನ್ನು ತಕ್ಕ ಭಾಷೆಯಲ್ಲಿ ಎದುರಿಸುತ್ತಾನೆ ” ಎನ್ನುವ ಪಿ. ಲಂಕೇಶರ ಮಾತಿನಂತೆ, ಈ ಸಂಕಲನವೂ ಎಲ್ಲವನ್ನು ಒಂದೇ ಉಸಿರಲ್ಲಿ ಹೇಳಿಬಿಡುವ ವಾಚಾಳಿತನವಿಲ್ಲ. ಇಲ್ಲಿನ ಮೌನಕ್ಕೆ ಭಿನ್ನ ಅರ್ಥಗಳಿವೆ ಎಂಬುದಕ್ಕೆ ಹಲವು ಉದಾಹರಣೆಗಳಿವೆ.
‘ಬೋಧೇಶ್ವರ’ ಕತೆಯಲ್ಲಿ ಇರುವ ಉಳ್ಳವರ ಸಿನಿಕತನಗಳು, ಮತ್ತು ಅಸಹಾಯಕರ ಬದುಕಿನ ಭವಣೆಗಳು ನೇರವಾಗಿ ಮುಖಾಮುಖಿಯಾದರೂ ಕೂಡ ಕಾಳಗಕ್ಕೆ ಇಳಿಯಲಾರದು. ಗಾಂಧಿ ತತ್ವದ ಗಂಧವಿದ್ದರೂ, ಹಿಂಸೆಯ ಕ್ರೌರ್ಯದ ವಾಸನೆಯೂ ಅಲ್ಲಲ್ಲಿ ಉಸಿರುಗಟ್ಟಿಸುವಂತೆ ಇಲ್ಲಿ ಕಾಣಸಿಗುತ್ತದೆ. ಇದೇ ಬಗೆಯ ಸಣ್ಣ ಎಳೆ ‘ಜವಾನ್ ರೊಡ್’ನಲ್ಲೂ ಗಮನಿಸಬಹುದು. ಇನ್ನೂ ಬದುಕಿನ ತುಮುಲಗಳನ್ನೆ ಕೇಂದ್ರವಾಗಿಸಿಕೊಂಡ ‘ಒಂದು ಹಾಡಿನ ದೂರ’ ದ ಕತೆಯೂ ತೀರಾ ಆಪ್ತವಾಗಿ ಉಳಿದು ಬಿಡುತ್ತದೆ. ಮಗಳ ಬದುಕಿನ ಅಭದ್ರತೆಯ ಭಯ ಮತ್ತು ಕಾಳಜಿಯು 120 ಕರೆ ಮಾಡುವಷ್ಟು ಗಾಬರಿ ಸೃಷ್ಟಿಸುವ ತಾಯಿಯ ಸ್ಥಿತಿಯೊಂದೆಡೆಯಾದರೆ, ದಾರಿ ತಪ್ಪಿದವಳಿಗೆ ಸರಿ ದಾರಿ ತೋರಿಸುವ ಹೆಂಗಸೊಬ್ಬಳ ಅಂತರ್ಕಾಳಜಿ ಮತ್ತೊಂದೆಡೆ. ಕಾಡ ಹಾದಿಯಲ್ಲಿ ಚಲಿಸುವ ಹಾಡುಗಾರಿಕೆ ಮತ್ತವಳ ಬದುಕಿನಲ್ಲಿ ಉಂಟಾಗಬಹುದಾದ ಅಪಘಾತ ಎಲ್ಲವೂ ಒಂದು ವಿಷಮಸ್ಥಿತಿಯನ್ನು ತಲುಪಿಸುತ್ತದೇನೊ ಎನ್ನುವಷ್ಟರಲ್ಲಿ ಕತೆ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಬಹುಶಃ ಕತೆ ಗೆದ್ದಿದೆ ಈ ಹಂತದಲ್ಲಿ ಎಂದು ಕಾಣುತ್ತದೆ!

    ಇನ್ನೂ ‘ಕೆ. ಪಿ ಉಮ್ಮರ್’ , ‘ಸಿಂಡ್ರೆಲ್ಲ’ ಮತ್ತು ‘ನಗರದ ಕೋಗಿಲೆ’ ಯಂತ ಕತೆಗಳ ಕಥಾವಸ್ತುವೆ ಬಹಳ ಸೂಕ್ಷ್ಮವಾದದ್ದು. ಬದುಕಿನ ಅನಗತ್ಯ ಭಾವಜಂಜಾಟ ಮತ್ತು ಅನುಮಾನ ಹಾಗೂ ಸಾಂಗತ್ಯದ ಕಿರಿಕಿರಿಗಳು ಅದೆಷ್ಟು ಬದುಕಿನ ಸಣ್ಣ ಸುಖಗಳಿಗೂ ಕಾಮಲೆ ಅಂಟಿಸಬಲ್ಲವು ಎಂಬುದಕ್ಕೆ ಇವು ಒಳ್ಳೆಯ ನಿದರ್ಶನಗಳು. ಇವುಗಳಿಂದ ಬದುಕುವುದನ್ನು ಕಲಿಯದೇ ಹೋದರೆ, ಬದುಕು ಪ್ರಪಾತಕ್ಕೆ ಜಿಗಿಯಲು ತಯಾರಾಗಬೇಕಾಗುತ್ತದೆ. ಎಲ್ಲಕ್ಕಿಂತಲೂ ಭಿನ್ನವಾಗಿ ‘ತಾಜ್ ಮಹಲ್ಲಿನ ಖೈದಿಗಳು’ ನಮ್ಮೆದುರು ನಿಲ್ಲುತ್ತದೆ. ಮಮ್ತಾಜ್ ಮತ್ತು ಷಹಜಾನ್ ರ ಸಂಸಾರದ ಚಡಪಡಿಕೆಗಳು ಸಾಮಾನ್ಯರಿಗೆ ವಿಶೇಷ ಆಸಕ್ತಿ ಮೂಡಿಸಬಲ್ಲದು. ನಮಗರಿವಿಲ್ಲದೆಯೇ ಚಲನಶೀಲ ಬದುಕು ಎಲ್ಲೋ ಬಂಧಿಯಾಗಿದೆ ಎಂಬ ಅರಿವು ಮೂಡುವ ಮೊದಲೆ ಬದುಕು ನಿಂತ್ತು ಬಿಡುತ್ತದೆ. ಇಂಥ ಲೋಕ ಸತ್ಯಗಳ ಸಂಗ್ರಹವಾಗಿ ಇಲ್ಲಿನ ಕಥೆಗಳು ಕಾಣುತ್ತವೆ.

         ಕೆಲವು ಕತೆಗಳಲ್ಲಿ ಆಧ್ಯಾತ್ಮ ಸ್ಥಾಯಿ ಭಾವವಾದರೆ, ಪ್ರೀತಿ ಸಂಚಾರಿ ಭಾವವಾಗಿದೆ. ಇದೊಂದು ಬೇರ್ಪಡಿಸಲು ಅಸಾಧ್ಯವಾಗಬಹುದಾದ ಪರಿಕಲ್ಪನೆಗಳ ಸಮ್ಮಿಲನ. ಧಾರ್ಮಿಕ ಧಾಷ್ಟ್ಯದಿಂದ ಪಾರಾಗಬಲ್ಲ ಆಧ್ಯಾತ್ಮದ ಹಾದಿಯೊಂದು ಕತೆಗಳಲ್ಲಿ ಕಂಡಿದ್ದೆ ಆದರೆ ಅದೊಂದು ಮನುಷ್ಯ ಪ್ರಜ್ಞೆಯ ಕೃತಿಯಾಗಬಲ್ಲದು. ಬಹಳ ಮುಖ್ಯವಾಗಿ ಅನುವಾದದ ಭಾಷೆ ಸಹಜವೆಂಬಂತೆ ರೂಪುಗೊಂಡಿದೆ. ಕಾವ್ಯದ ರೂಪಕಾತ್ಮಕ ಭಾಷಾ ಶೈಲಿಯೂ ಓದುಗರನ್ನು ನಿಬ್ಬೆರಗಾಗಿಸದೇ ಇರದು. ಇಂಥ ಕೃತಿಯನ್ನು ಸುನೈಪ್ ಅವರು ಕನ್ನಡೀಕರಿಸಿದ್ದೆ ಕನ್ನಡ ಸಾಹಿತ್ಯಲೋಕಕ್ಕೊಂದು ಸಂಭ್ರಮದ ಸಂಕೇತವೆಂದೇ ಭಾವಿಸುತ್ತೇನೆ.

                 – ಚಾಂದ್ ಪಾಷ ಎನ್ ಎಸ್ ಬೆಂಗಳೂರು

Related Articles

ಇತ್ತೀಚಿನ ಸುದ್ದಿಗಳು