Friday, June 14, 2024

ಸತ್ಯ | ನ್ಯಾಯ |ಧರ್ಮ

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ

ಸಮಾಜವಾದಿ ನಾಯಕ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 23 ರ ಮಂಗಳವಾರ ಪೋಸ್ಟ್ ಮಾಡಿದ್ದಾರೆ.

“ಸಾಮಾಜಿಕ ನ್ಯಾಯದ ದಾರಿದೀಪ, ಮಹಾನ್ ಜನನಾಯಕ ಕರ್ಪೂರಿ ಠಾಕೂರ್ ಜಿ ಅವರ ಜನ್ಮ ಶತಮಾನೋತ್ಸವವನ್ನು ನಾವು ಆಚರಿಸುತ್ತಿರುವ ಸಮಯದಲ್ಲಿ ಭಾರತ ರತ್ನವನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ನನಗೆ ಸಂತೋಷ ತಂದಿದೆ” ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಬರೆದಿದ್ದಾರೆ.

“ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಲು ಕರ್ಪೂರಿ ಠಾಕೂರ್ ಅವರಲ್ಲಿದ್ದ ಅಚಲವಾದ ಬದ್ಧತೆ ಮತ್ತು ಅವರ ದೂರದೃಷ್ಟಿಯ ನಾಯಕತ್ವ ಭಾರತದ ಸಾಮಾಜಿಕ-ರಾಜಕೀಯ ಸಂರಚನೆಯ ಮೇಲೆ ಅಳಿಸಲಾಗದ ಛಾಪು ಮೂಡಿಸಿದೆ. ಈ ಪ್ರಶಸ್ತಿ ನೀಡುತ್ತಿರುವುದು ಮೂಲಕ ಅವರ ಗಮನಾರ್ಹ ಕೊಡುಗೆಗೆ ಗೌರವ ನೀಡಿದಂತೆ,  ಮತ್ತು ನ್ಯಾಯಯುತವಾದದ್ದು. ಸಮಾಜದಲ್ಲಿ ಸಮಾನತೆ ತರುವ ಬಗೆಗಿನ ಅವರ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ,” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಬಹುಕಾಲದ ಬೇಡಿಕೆ ಈಡೇರಿದೆ ಎಂದು ಟ್ವೀಟ್ ಮಾಡಿದ್ದಾರೆ.

ಎರಡು ಬಾರಿ ಬಿಹಾರದ  ಮುಖ್ಯಮಂತ್ರಿಯಾಗಿದ್ದ ಠಾಕೂರ್ ಅವರು ಹಿಂದುಳಿದ ಸಮುದಾಯಗಳ ಪರ ಹೋರಾಡಿದ್ದರು. ಫೆಬ್ರವರಿ 1988 ರಲ್ಲಿ ನಿಧನರಾದರು.

ಕರ್ಪೂರಿ ಠಾಕೂರ್ ಯಾರು?

ಬಿಹಾರದ ಸಮಸ್ತಿಪುರ್ ಜಿಲ್ಲೆಯ ಸಣ್ಣ ಹಳ್ಳಿಯಿಂದ ಬಂದ ಠಾಕೂರ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. 1924 ರಲ್ಲಿ ಬ್ರಿಟಿಷರ ವಿರುದ್ಧ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

1952 ರಲ್ಲಿ ಮೊದಲ ಬಾರಿಗೆ ಶಾಸಕರಾದ ಇವರ ರಾಜ್ಯ ಮಟ್ಟದಲ್ಲಿ ಅವರ ಚುನಾವಣಾ-ಗೆಲುವಿನ ಓಟ 1985 ರವರೆಗೆ ಮುಂದುವರೆಯಿತು. ‘ಜನ್ ನಾಯಕ್’ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಇವರು ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾದರು. ಒಮ್ಮೆ 1970 ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದಿಂದ ಮತ್ತೊಮ್ಮೆ 1977 ಜನತಾ ಪಕ್ಷದಿಂದ.

ಮುಖ್ಯಮಂತ್ರಿಯಾಗಿ ಹಿಂದಿ ಭಾಷೆಗೆ ಪ್ರೋತ್ಸಾಹ ನೀಡಿದ ಠಾಕೂರ್, ಶಾಲಾ ಶುಲ್ಕವನ್ನು ಮನ್ನಾ ಮಾಡುವುದು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ನೀತಿಗಳನ್ನು ಜಾರಿಗೊಳಿಸಿ ಜನಪ್ರಿಯರಾಗಿದ್ದರು. ಬಿಹಾರದಲ್ಲಿ ಲೇಯರ್ಡ್ ಮೀಸಲಾತಿ ವ್ಯವಸ್ಥೆಯ ಅನುಷ್ಠಾನವು ಠಾಕೂರ್ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದು ಕೊಟ್ಟಿತು.

ಅವರ ಆಡಳಿತದ ಅಡಿಯಲ್ಲಿ, ಇತರೆ ಹಿಂದುಳಿದ ವರ್ಗಗಳ (OBC) ಸಮುದಾಯಗಳ ಸದಸ್ಯರಿಗೆ 12% ಕೋಟಾವನ್ನು ನೀಡಲಾಗಿತ್ತು. OBC ಗಳು ಮತ್ತು ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ತಲಾ 8% ಮತ್ತು ಮಹಿಳೆಯರಿಗೆ 3% ಮೀಸಲಾತಿ ನೀಡಲಾಗಿತ್ತು.

ಸದ್ಯ ಭಾರತ ರತ್ನ ನೀಡಿರುವ ಹಿನ್ನಲೆಯಲ್ಲಿ ಇವರ ನಾಯಕತ್ವದ ಮೇಲೆ ಜೆಡಿಯು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ತಮ್ಮ ಹಕ್ಕು ಸಾಧಿಸಲು ಯತ್ನಿಸುತ್ತಿವೆ.

ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : ಪೀಪಲ್‌ ಮೀಡಿಯಾ

ಕರ್ಪೂರಿ ಠಾಕೂರ್  ಬದುಕಿರುವಾಗ ಅವರನ್ನು ಬಿಜೆಪಿಯವರು ಅವಾಚ್ಯವಾಗಿ ನಿಂದಿಸುತ್ತಿದ್ದರು.  9 ವರ್ಷಗಳಿಂದ ಅವರನ್ನು ನೆನಪಿಸಿಕೊಳ್ಳಲಿಲ್ಲ. ನಮ್ಮ ಪಕ್ಷ ಮತ್ತು ನಾಯಕ ಲಾಲು ಯಾದವ್ ಠಾಕುರ್‌ ಅವರಿಗೆ ಭಾರತ ರತ್ನ ನೀಡಬೇಕೆಂದು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಈಗ ಚುನಾವಣೆ ಸಮೀಪಿಸುತ್ತಿರುವಾಗ ಅವರು ಕರ್ಪೂರಿ ಠಾಕೂರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅವರಿಗೆ ಭಾರತ ರತ್ನ ನೀಡಲಾಯಿತು. ಓಟಿಗಾಗಿ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ” ಎಂದು ಆರ್‌ಜೆಡಿ ನಾಯಕ ಮೃತ್ಯುಂಜಯ್ ತಿವಾರಿ ಹೇಳಿರುವುದು ಎಎನ್‌ಐಯಲ್ಲಿ ವರದಿಯಾಗಿದೆ.

Related Articles

ಇತ್ತೀಚಿನ ಸುದ್ದಿಗಳು