Sunday, June 23, 2024

ಸತ್ಯ | ನ್ಯಾಯ |ಧರ್ಮ

“ಕಾಂಗ್ರೆಸ್‌ ಗ್ಯಾರಂಟಿ”ಯನ್ನು “ಪ್ರಧಾನಿ ಗ್ಯಾರಂಟಿ” ಎಂದು ಕಾಪಿ ಮಾಡಿರುವ ಬಿಜೆಪಿ: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಗ್ಯಾರಂಟಿ ಎಂಬ ಶಬ್ದ ಕರ್ನಾಟಕ ಮತ್ತು ಕಾಂಗ್ರೆಸ್‌ನಿಂದ ಬಂದಿದೆ. ಆದರೆ, ಅದನ್ನು ಬಿಜೆಪಿಯವರು ಕಾಪಿ ಮಾಡಿ ಎಲ್ಲ ಕಡೆ “ಪ್ರಧಾನಿ ಗ್ಯಾರಂಟಿ ಎಂದು ಹೋರ್ಡಿಂಗ್‌ ಹಾಕಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಕಿಚಾಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾವು ಆಶ್ವಾಸನೆ ನೀಡಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಈಗ ನಮ್ಮ ಗ್ಯಾರಂಟಿ ಪದವನ್ನು ಕಾಪಿ ಮಾಡಿ ದೊಡ್ಡ ಹೋರ್ಡಿಂಗ್‌ಗಳಲ್ಲಿ ‘ಪ್ರಧಾನಿ ಗ್ಯಾರಂಟಿ’ ಎಂದು ಬಿಂಬಿಸಲಾಗುತ್ತಿದೆ. ಇದು ನಮ್ಮ ಗ್ಯಾರಂಟಿಯ ನಕಲು’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
‘ಕೇಂದ್ರದಿಂದ ನಮಗೆ ಪದೇ ಪದೇ ಅನ್ಯಾಯವಾಗಿದೆ. ರಾಜ್ಯಕ್ಕೆ ಸಮರ್ಪಕವಾಗಿ ಅನುದಾನ ನೀಡದೇ ತಾರತಮ್ಯ ಮಾಡಲಾಗುತ್ತಿದೆ. ಬರ ಪರಿಸ್ಥಿತಿಯಲ್ಲಿ ಕೇಂದ್ರ ಸಹಾಯಕ್ಕೆ ಬರಲಿಲ್ಲ. ಹಾಗಾಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯೇ ಇದಕ್ಕೆ ಅಸ್ತ್ರ. ದೆಹಲಿಯಲ್ಲಿ ಫೆ.7ರಂದು ಪ್ರತಿಭಟನೆ ನಡೆಯುತ್ತಿದ್ದು, ಜಿಲ್ಲೆಯಲ್ಲಿರುವ ಕಾಂಗ್ರೆಸ್‌ನ 11 ಶಾಸಕರು ಮತ್ತು ಇಬ್ಬರು ವಿಧಾನ ಪರಿಷತ್‌ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.‌


‘ಲಕ್ಷ್ಮಣ ಸವದಿ ಪಕ್ಷ ಬಿಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹಿರಿಯರು. ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಆದರೆ, ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ನನ್ನ ಪುತ್ರ ಮೃಣಾಲ್ ಹೆಬ್ಬಾಳಕರ ಕೂಡ ಟಿಕೆಟ್ ಆಕಾಂಕ್ಷಿ. ಪಕ್ಷದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತದೆಯೋ ಅವರನ್ನು ಗೆಲ್ಲಿಸುತ್ತೇವೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಹೇಳಿದರು.
ನಾವು ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಜನರಿಗೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿವೆ. ಈ ಯೋಜನೆಗಳ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೇವೆ ಎಂದರು.

Related Articles

ಇತ್ತೀಚಿನ ಸುದ್ದಿಗಳು