Sunday, June 16, 2024

ಸತ್ಯ | ನ್ಯಾಯ |ಧರ್ಮ

ಈ-ರಾಮ, ಆ-ರಾಮ!

ಬೊಗಸೆಗೆ ದಕ್ಕಿದ್ದು-8 | ನಿಖಿಲ್‌ ಕೋಲ್ಪೆ

ಢಂ.. ದಡಾರ್… ಡಢುಂ… ಛಟ್…ಭಯಾನಕ ಸಿಡಿಲು ಗಾಳಿ ಮಳೆಗೆ ಚಿಮಣಿ ದೀಪಗಳೆಲ್ಲಾ ನಂದಿ ಹೋಗಿ ಕರ್ಗುಡೆ ಕತ್ತಲೆಯಾದಾಗ ಛಳಿರ್ ಛಟಿಲ್ ಎಂದು ಮಿಂಚು ನಮ್ಮ ಪಟ ತೆಗೆಯುತ್ತಿದ್ದಾಗ, ನಾವು ಮಕ್ಕಳೆಲ್ಲಾ ಈ ಪಟಾಕಿಯ ಲಕ್ಷದೀಪ ನೋಡಲು ಬಾಗಿಲ ಹೊರಗೆ, ತಟ್ಟಿಯ ಹೊರಗೆ ಇಣುಕುತ್ತಿದ್ದಾಗ, ನನ್ನ ಚಿಕ್ಕ ಅಜ್ಜಿ ಮಕ್ಕಳನ್ನು ಬೆನ್ನ ಹಿಂದೆ ತಳ್ಳಿ ತಾನೇ ಎದುರು ನಿಂತು “ಭಯಂಕರ ಧೈರ್ಯ”ದಿಂದ ಗಡಗಡ ನಡುಗುತ್ತಲೇ ಹೇಳುತ್ತಿದ್ದುದು ಒಂದೇ ಮಾತು: “ರಾಮರಾಮ… ರಾಮರಾಮ…ರಾಮರಾಮ” ಇದು ಭಯದಿಂದ ಬಂದ ಭಕ್ತಿಯೋ ಅಥವಾ ಬೇರೆಯೋ ಎಂದು ಈಗ ಯೋಚಿಸಿದಾಗ ಆಶ್ಚರ್ಯ ಏನೂ ಆಗುವುದಿಲ್ಲ. ದೇವರ ಕಲ್ಪನೆ ಹುಟ್ಟಿದ್ದೇ ಭಯದಿಂದ.

ಸುಮ್ಮನೇ ಒಂದನ್ನು ಊಹಿಸಿಕೊಳ್ಳಿ. ಆದಿ ಮಾನವನ ಯುಗಕ್ಕೆ ಹೋಗಿ. ಯಾವುದೇ ಕೋರೆ ದಾಡೆಗಳೂ, ಹರಿತವಾದ ಉಗುರುಗಳೂ, ಮಾಂಸಾಹಾರಿ ಪ್ರಾಣಿಗಳಂತೆ ಬಲವಾದ ಸ್ನಾಯುಗಳೂ ಇಲ್ಲದ ಮನುಷ್ಯ ಜೀವಿ ಒಬ್ಬ ಪ್ರಾಣಿಯಾಗಿ ಆಹಾರದ ಸರಪಳಿಯಲ್ಲಿ ಒಂದು ದುರ್ಬಲ ಜೀವಿ. ಆದರೆ, ಮೆದುಳಿನಲ್ಲಿ ಅಲ್ಲ. ಹೀಗಿರುತ್ತಾ ಆಹಾರಕ್ಕಾಗಿ ಪರದಾಡಬೇಕಿದ್ದ ಈ ಜೀವಿ ಅನಿವಾರ್ಯವಾಗಿ ಸಾಮೂಹಿಕ ಜೀವಿಯಾದ. ಆಯುಧಗಳನ್ನು ಹುಡುಕಿದ, ತನಗಿಂತ ದೊಡ್ಡ, ಶಕ್ತಿಶಾಲಿ ಪ್ರಾಣಿಗಳನ್ನು ಬೇಟೆಯಾಡಲು ಕಲಿತ. ಬೆಳೆಗಳನ್ನು ಬೆಳೆದು, ಕೆಲವು ಪ್ರಾಣಿ ಪಕ್ಷಿಗಳನ್ನೇ ಸಾಕಲು ಆರಂಭಿಸಿ, ಅವುಗಳನ್ನು ನಂಬಿಸಿ ವಂಚಿಸಿದ. ಮೆದುಳು ಇನ್ನಷ್ಟೂ ಬೆಳೆಯಿತು. ಕಲ್ಪನೆಯೂ ಬೆಳೆಯಿತು.

ಪ್ರಾಣಿಗಳಿಂದ ಅಪಾಯದ ಜೊತೆಗೆ ಆತನಿಗೆ ಅರ್ಥವೇ ಆಗದ ಭಯ ವಿಸ್ಮಯಗಳನ್ನು ಉಂಟುಮಾಡುವ ಪ್ರಾಕೃತಿಕ ಘಟನೆಗಳು ದಿಡೀರ್ ಎಂದು ಎರಗಿ ಆತನನ್ನು ಕಂಗೆಡಿಸುತ್ತಿದ್ದವು. ಸಿಡಿಲು, ಮಿಂಚು, ಅಬ್ಬರಿಸುವ ಬಿರುಗಾಳಿ, ಬೋರ್ಗರೆಯುವ ಮಳೆ, ಪ್ರವಾಹ, ಬೆಂಕಿ ಉಗುಳುವ ಜ್ವಾಲಾಮುಖಿ, ಭೂಮಿಯನ್ನೇ ಗಡಗಡ ನಡುಗಿಸಿ ಎಲ್ಲವನ್ನೂ ಮಗುಚಿಹಾಕುವ ಭೂಕಂಪ, ಮರಗಟ್ಟಿಸುವ ಚಳಿ, ಹಿಮಪಾತ….ಜೊತೆಗೆ ಕೊನೆಯೇ ಇಲ್ಲದಂತೆ ಕಾಣುವ ಆಕಾಶ, ಸೂರ್ಯ, ಚಂದ್ರ, ತಾರೆಗಳು, ಉಲ್ಕೆಗಳು; ದಾಟಲು ಸಾಧ್ಯವೇ ಇಲ್ಲದಂತೆ ಕಾಣುವ ಸಮುದ್ರ…ಸಾಮೂಹಿಕವಾಗಿ ಮನುಷ್ಯ ಪ್ರಾಣಿಗೆ ತಾನು ಎಷ್ಟು ದುರ್ಬಲ ಎಂದು ಅನಿಸಿರಬೇಕು.

ಹಾಗಾಗಿ ಇದನ್ನೆಲ್ಲಾ ಉಂಟುಮಾಡಿದ ಯಾವುದೋ ಒಂದು ಶಕ್ತಿಯೋ, ವ್ಯಕ್ತಿಯೋ ಇರಲೇಬೇಕು, ಕೊಲ್ಲಬಹುದಾದ ಅದು ಶರಣಾದರೆ ರಕ್ಷಿಸಲೂಬಹುದು ಎಂಬ ಕಲ್ಪನೆ ಹುಟ್ಟಿತು. ತನ್ನಿಂದ ಪ್ರಬಲವಾದ ಎಲ್ಲವನ್ನೂ ಪ್ರಾಣಿಗಳನ್ನು, ಪಕ್ಷಿಗಳನ್ನು… ಒಟ್ಟಿನಲ್ಲಿ ಪ್ರಕೃತಿಯನ್ನು ಆರಾಧಿಸಲು ಆರಂಭಿಸಿದ. ನಂತರದಲ್ಲಿ ಅದಕ್ಕೆ ತನ್ನದೇ ಪ್ರತಿರೂಪವಾದ ಮೂರ್ತ ರೂಪದ ದೇವರನ್ನು ತನ್ನ ಕಲ್ಪನೆಯಲ್ಲೇ ಸೃಷ್ಟಿಸಿದ. ಅವುಗಳಿಗೆ ಅಸಾಧಾರಣ ಶಕ್ತಿಗಳನ್ನೂ, ಕೊಟ್ಟ. ಆದರೂ ಯಾರು ದೇವರು ಎಂಬ ಬಗ್ಗೆ ಜಿಜ್ಞಾಸೆ ಅಂತೂ ಮನಸ್ಸಿನಲ್ಲಿ ಇತ್ತು. ಹಾಗಾಗಿಯೇ ಒಂದೋ ಅಥವಾ ಸಾವಿರಾರು ದೇವರುಗಳ ಹೆಸರಿನಲ್ಲಿ ಕಾದಾಡುವ ಮನುಷ್ಯನ ಡಿಎನ್ಎಯಲ್ಲಿಯೇ ಭಯ ಮತ್ತು ದೇವರು ಸೇರಿಹೋಗಿರಬೇಕು-ತನ್ನ ನೆರಳಿಗೆ ತಾನೇ ಹೆದರುವ ಮಗುವಿನಂತೆ! ಇಂದು ರಾಮ, ಕೃಷ್ಣಾದಿ ಸಾವಿರಾರು ದೇವರುಗಳ ವಕ್ತಾರರ- ಹಿಂದೂ ಧರ್ಮದಲ್ಲಿ ಮೂಲಗ್ರಂಥವೆನ್ನಲಾಗುವ- ಋಗ್ವೇದದಲ್ಲಿ ಈ ಪುರಾಣಗಳ ದೇವರುಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಉಲ್ಲೇಖವೇ ಇಲ್ಲ. ಆಲ್ಲಿರುವ ದೇವರುಗಳು- ಮಳೆ ಸುರಿಸುವ ಇಂದ್ರ, ಅಗ್ನಿ ಮತ್ತು ವಾಯು, ವರುಣ ಮುಂತಾದ ಶಕ್ತಿಗಳೇ. ರಾಮ, ದೂಮ, ಚೋಮರೆಲ್ಲಾ ನಂತರ ಬಂದವರು.

ಇಂತಹ ಕೊನೆಯಿಲ್ಲದ ಜಿಜ್ಞಾಸೆಗಳನ್ನು ಇಲ್ಲಿ ಉಲ್ಲೇಖಿಸಲು ಕಾರಣವೆಂದರೆ, ಮೇಲೆ ಹೇಳಿದ ನನ್ನ ಆಜ್ಜಿಯ “ರಾಮರಾಮ, ರಾಮರಾಮ, ರಾಮ”ನೇ! ತುಳು, ಅಲ್ಪಸ್ವಲ್ಪ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲದ, ತೀರಾ ಅಪರೂಪಕ್ಕೆ ಹೊರಗಿನ ಪ್ರಪಂಚದ ನೋಡಿದ, ತುಳುನಾಡಿನ ಬೂತಗಳೆಂದರೆ ಗಡಗಡನೇ ನಡುಗುವ, ಸಿಟ್ಟುಬಂದರೆ ಅವುಗಳಿಗೇ ವಾಚಾಮಗೋಚರ ಬೈಯ್ಯುವ ನಮ್ಮ ಆಜ್ಜಿಯ ತಲೆಯೊಳಗೆ ಉತ್ತರ ಭಾರತದ “ರಾಮ” ಅಷ್ಟು ಆಳವಾಗಿ ಕುಂಡೆಯೂರಿ ಕೂತದ್ದು ಹೇಗೆ ಎಂದು ಹಲವಾರು ಬಾರಿ ಯೋಚಿಸಿದ್ದೇನೆ.

ಬಹುಶಃ ಅದು ಅವರು ನೋಡಿದ ಯಕ್ಷಗಾನ ಮತ್ತು ಅಲ್ಲಲ್ಲಿ ಕೇಳಿರಬಹುದಾದ ರಾಮಾಯಣ ಪಠಣಗಳಿಂದ ಬಂದಿರಬೇಕು. ಆದರೂ ಬೇರೆ ದೇವರುಗಳಿಗಿಂತ ರಾಮನೇ ಯಾಕೆ ಅಷ್ಪು ಪ್ರಿಯವಾದ ಎಂದರೆ, ಆತ ಜೀವನಕ್ಕೆ ಹತ್ತಿರವಾದ ಒಬ್ಬ ಆದರ್ಶ ವ್ಯಕ್ತಿ ಎಂಬ ನಂಬಿಕೆಯಿಂದಲೇ ಆಗಿರಬಹುದು. ತುಳುನಾಡಿನ ಬೂತಗಳೆಲ್ಲವೂ ಶೋಷಣೆಯ ವಿರುದ್ಧ ಹೋರಾಡಿ ಮಡಿದ, ಕೊಲೆಯಾದ ಐತಿಹಾಸಿಕ ವ್ಯಕ್ತಿಗಳೇ. ಹಾಗಾಗಿ ನನ್ನ ರಾಮ ಅಥವಾ ಸೀತೆ ಒಬ್ಬ ಐತಿಹಾಸಿಕ ವ್ಯಕ್ತಿಗಿಂತ, ಕುವೆಂಪು ಅವರ ಸೃಷ್ಟಿಗಳಾದ ಹೂವಯ್ಯ, ಸೀತೆ, ಸುಬ್ಬಮ್ಮ, ನಾಯಿಗುತ್ತಿ ಮತ್ತು ಗುತ್ತಿನಾಯಿಯಂತೆ ಒಂದು ಕಥಾ ಪಾತ್ರ ಮಾತ್ರ. ಅವರನ್ನು ಅದೇ ದೃಷ್ಟಿಯಿಂದ ವಿಮರ್ಶಿಸುವುದು ಬೇರೆ ಮತ್ತು ಅವರು ಶಿವಮೊಗ್ಗ ತೀರ್ಥಹಳ್ಳಿ ಆಸುಪಾಸಿನಲ್ಲಿ ಬದುಕಿದ್ದರು ಎಂದು ನಂಬಿ ಬದುಕಿರುವುದು ಬೇರೆ. ಕುವೆಂಪು ಅವರ ಈ ಪಾತ್ರಗಳಿಗೆ ಪ್ರೇರಣೆಯಾದ ವ್ಯಕ್ತಿಗಳು ಇದ್ದಿರಲೇಬೇಕಾದರೂ ಅವರು ಇದ್ದರು, ಇಲ್ಲಿ, ಈ ನಿರ್ದಿಷ್ಟ ಜಾಗದಲ್ಲೇ ಹುಟ್ಟಿದರು ಎಂದು ನಂಬಲು ಆಗದು. ಕತೆ, ನಂಬಿಕೆ, ಪುರಾಣಗಳಿಗೆ ಇರುವ ವ್ಯತ್ಯಾಸಗಳನ್ನು ತಿಳಿದುಕೊಳ್ಳದಷ್ಟು ನಾವು ಭ್ರಮೆಗೆ ಒಳಗಾಗುವುದು ಮೇಲೆ ಹೇಳಿದ ಅದೇ ಆದಿ ಮಾನವನ ಡಿಎನ್‌ಎಯ ಬಳುವಳಿಯೇ. ಹಾಗಾಗಿಯೇ ರಾಮ- ಜನರ ಮನಸ್ಸಿನಲ್ಲಿ ಕುಳಿತುಬಿಟ್ಟಿದ್ದಾನೆ. ನಮ್ಮ ಆಜ್ಜಿಯಂತೆಯೇ ಕುವೆಂಪು ಅವರನ್ನೂ ಅವನು ಬಿಟ್ಟಿಲ್ಲ. ಹಾಗಾಗಿಯೇ ನಿಮ್ಮ ಕಲ್ಪನೆಯ ರಾಮ ಯಾರು ಎಂದು ನೀವೇ ನಿರ್ಧರಿಸಬೇಕಾಗುತ್ತದೆ.

ನನಗೆ ರಾಮನ ಪರಿಚಯವಾದದ್ದು ಯಕ್ಷಗಾನ ತಾಳಮದ್ದಳೆಗಳಿಂದಲೇ ಮತ್ತು ನಂತರ ಕೆಲವು ಚಿಕ್ಕಪುಟ್ಟ ಪುಸ್ತಕಗಳಿಂದ. ಆದರೆ ಬಿಜೆಪಿಯ ಚಡ್ಡಿರಾಮನಿಗಿಂತ, ಅಜ್ಜಿಯ ಮೂಢರಾಮನಿಗಿಂತ ತದ್ವಿರುದ್ಧನಾದ ಕುವೆಂಪು ಅವರ ರಾಮನಿಗೆ ಹತ್ತಿರವಾದ ನನ್ನ ರಾಮ ನನ್ನ ಕಲ್ಪನೆಯಲ್ಲಿ ಹುಟ್ಟಿದ ಚಿಕ್ಕ ಬಾಲಕತೆ ಹೇಳಿ ಮುಗಿಸಿಬಿಡುತ್ತೇನೆ. ಇದನ್ನೇ ನಮ್ಮ ಕಡೆ “ರಾಮಾಯಣಡೊಂಜಿ ಪಿಟ್ಕಾಯಣ” ಎನ್ನುವುದು. ಇದು ವಾಲ್ಮೀಕಿ ಬರೆದದ್ದೆನ್ನಲಾದ ರಾಮಾಯಣಕ್ಕೆ ಸೇರಿಕೊಂಡ ಸಾವಿರಾರು ಉಪಕತೆಗಳಂತೆಯೇ.

ನಾನು ಆರನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ನನ್ನನ್ನು ವಿದ್ಯಾರ್ಥಿ ಸಂಘದ ಲೈಬ್ರರಿ ಮಂತ್ರಿ ಮಾಡಿದರು. ೭೦೦ರಷ್ಟು ಮಕ್ಕಳು ಕಲಿಯುತ್ತಿದ್ದ ನಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಪುಸ್ತಕಗಳು ಮೂರೋ ನಾಲ್ಕೋ ಮರದ ಕಪಾಟುಗಳಲ್ಲಿ ಧೂಳು ಹತ್ತಿಸಿಕೊಂಡು ಸ್ನಾನ ಮಾಡದೇ ಬಿದ್ದುಕೊಂಡಿದ್ದವು. ಅದಾಗ ತಾನೇ ಸೇರಿದ ಯುವಶಿಕ್ಷಕ ಜಯಂತ ನಾಯಕ್ ಮಾಷ್ಟ್ರು ನನ್ನ ಲೈಬ್ರರಿ ಖಾತೆಗೆ ಉಸ್ತುವಾರಿ. ಸಂಜೆ ಶಾಲೆ ಬಿಟ್ಟ ಮೇಲೆ ಇಬ್ಬರೂ ಪುಸ್ತಕಗಳ ಧೂಳು ಹೊಡೆದು ಅವುಗಳಿಗೆ ಒಂದೊಂದು ನಂಬರ್ ಕೊಟ್ಟು ಒಂದು ದೊಡ್ಡ ಲೆಜ್ಜರ್ ಪುಸ್ತಕದಲ್ಲಿ ಪಟ್ಟಿ ಬರೆದೆವು. ಚೆನ್ನಾಗಿ ಜೋಡಿಸಿದೆವು. ಇದು ಈ ಚಡ್ಡಿಗಳ ರಾಮನ ಲೆಕ್ಕ, ಕೃಷ್ಣನ ಲೆಕ್ಕದಂತೆ ಅಲ್ಲ. ಇದು ಅಯೋಧ್ಯೆಯ ನಿರ್ದಿಷ್ಟ ಜಾಗದಲ್ಲೇ ರಾಮ ಹುಟ್ಟಿದ, ದ್ವಾರಕೆಯ ಇಂತಹಾ ಜಾಗದಲ್ಲಿ ಇಷ್ಟೇ ಹೊತ್ತಿಗೆ ದೇವಕಿಗೆ ಹೆರಿಗೆ ನೋವು ಬಂದು ಕೃಷ್ಣ ಹುಟ್ಟಿದ ಎಂಬ ಕಾಲ್ಪನಿಕ ಇತಿಹಾಸವಲ್ಲ. ಯಾಕೆಂದರೆ ಇತ್ತೀಚೆಗೆ ನೂರು ವರ್ಷ ಪೂರೈಸಿದ ಈ ಶಾಲೆಯಲ್ಲಿ ಈಗ ಹಿಂದಿನಂತೆಯೇ ಧೂಳು ಹತ್ತಿ ಮಲಗಿರುವ ಪುಸ್ತಕಗಳನ್ನು ಕೇಳಬೇಡಿ. ಅಲ್ಲಿ ಇರಬಹುದಾದ ಲೆಜ್ಜರಿನಲ್ಲಿ ಈ ಪುಸ್ತಕಗಳ ಹೆಸರು, ನಂಬರು ಇದೆ ಮತ್ತು ಅದನ್ನು ಬರೆದ ಆಕ್ಷರಗಳು ಇದೇ ಬಾಲಕನದ್ದು.

ಅದಿರಲಿ, ಈಗ ರಾಮನ ವಿಷಯಕ್ಕೆ ಬರೋಣ. ಇಲ್ಲಿಯೇ ನಾನು ರಾಮನ ಕುರಿತ ಹಲವಾರು ಪುಸ್ತಕಗಳನ್ನು ಓದಿದ್ದು. ಒಂದು ದಿನ ಅಲ್ಲಿ ಒಂದು ಏಳೆಂಟು ದಪ್ಪ ಪುಸ್ತಕಗಳ ಅಟ್ಟಿ ಕಂಡಿತು. ಅದನ್ನು ನೋಡಿದರೆ ರಾಮಾಯಣದ ಒಂದೊಂದು ಖಾಂಡವನ್ನೂ ಪ್ರತ್ಯೇಕವಾಗಿ ಬರೆಯಲಾಗಿದೆ. ಎ.ಆರ್. ಕೃಷ್ಣ ಶಾಸ್ತ್ರಿಗಳ ಹೆಸರು ನೆನಪಿಗೆ ಬರುತ್ತದಾದರೂ ಬರೆದವರು ಅವರಲ್ಲ ಎನಿಸುತ್ತದೆ. ಅವುಗಳನ್ನು ಓದಬೇಕು ಎಂಬ ಆಸೆ ಎಷ್ಟು ಹೆಚ್ಚಾಯಿತು ಎಂದರೆ ಒಂದೊಂದೇ ಪುಸ್ತಕವನ್ನು ಮನೆ ಕೊಂಡೊಯ್ದು ರಾತ್ರಿ ಚಿಮಣಿ ದೀಪದಡಿ ಓದಿದರೂ, ಹಗಲು ಪಾಠ ನಡೆಯುತ್ತಿರುವಾಗಲೇ ಡೆಸ್ಕಿನ ಮರೆಯಲ್ಲಿ ಮೊಣಕಾಲ ಮೇಲೆ ಇಟ್ಟು ಓದಿದರೂ ಇದು ಮುಗಿಯುವುದಿಲ್ಲ.

ಕೊನೆಗೊಂದು ಉಪಾಯ ಮಾಡಿದೆ. ರಾಮಾಯಣದ ಎಲ್ಲಾ ಖಾಂಡಗಳನ್ನು ಹೊತ್ತುಕೊಂಡು ಮನೆಗೆ ಹೋದವನೇ ಮರುದಿನ ಶಾಲೆಗೆ ಹೋಗಲಿಲ್ಲ. ನಮ್ಮ ಚಿಕ್ಕ ಊರನ್ನು ಆವರಿಸಿರುವ ಕೋಂಗಲಪಾದೆ ಎಂಬ ಚಿಕ್ಕ ಬೆಟ್ಟಕ್ಕೆ ಹೋಗಿ ದೊಡ್ಡ ಬಂಡೆ ಮರೆಯಲ್ಲಿ ರಾಮಾಯಣ ಓದಲಾರಂಭಿಸಿದೆ. ಅನ್ನ, ನೀರು ಯಾವುದರ ನೆನಪೂ ಇಲ್ಲ! ಕತ್ತಲು ಬಿದ್ದು ಓದಲಾಗದೇ ಎಚ್ಚರ ಆದಾಗ ಮನೆಗೆ ಓಟ. ಮನೆಯಲ್ಲಿ ಇವನ ಲೈಬ್ರರಿ ಕೆಲಸದಂತೆ ತಡವಾಗುತ್ತಿದೆ ಎಂದೇ ಭಾವಿಸಿದ್ದರು. ಈ ಬಾಲ ರಾಮನ ಕಲ್ಪನೆ ಗರಿಗೆದರಿದ್ದು ಆಗಲೇ. ನಂತರದ ಏಳು ದಿನ ಶಾಲೆಯಾಗಿ ಇದ್ದದ್ದು- ಇದುವೇ ಬಂಡೆಯ ಬುಡ. ಇದುವೇ ಅಯೋಧ್ಯೆ, ಇದುವೇ ಕಿಷ್ಕಿಂಧೆ, ಇದುವೇ ಲಂಕೆ!

ಮರುದಿನ ರಾಮಾಯಣ ಮುಗಿದಾಗ ಶಾಲೆಗೆ ಹೋಗಬೇಕು! ಮನೆಯಲ್ಲೂ, ಶಾಲೆಯಲ್ಲೂ ಮಹಾಭಾರತ ಆರಂಭವಾಗುತ್ತದೆ ಎಂದಾಗುತ್ತಲೇ ನಡುಕ ಶುರುವಾಗಿತ್ತು. ಒಂದು ಏಳು ದಿನಗಳ ರಜಾ ಅರ್ಜಿ ಬರೆದು ತಂದೆಯ ನಕಲಿ ಸಹಿ ನಾನೇ ಹಾಕಿ ಕೊಟ್ಟೆ. ಮುಖ್ಯೋಪಾಧ್ಯಾಯರಾಗಿದ್ದ, ನನ್ನ ಮಟ್ಟಿಗೆ ಈಗಲೂ ಪೂಜ್ಯ ಕೃಷ್ಣರಾಜ ಶೆಟ್ಟಿ (ಜೈನರು) ಅವರು ಅದನ್ನು ಹಿಡಿದು ನನ್ನನ್ನು ಹೀಯಾಳಿಸಿ, ಬೈದು, ಬುದ್ಧಿವಾದ ಹೇಳಿ ಮನೆಗೆ ಕಳಿಸಿದರು. ಮರುದಿನ ನಾನು ಅತೀ ಬುದ್ಧಿವಂತ! ಅರ್ಧ ದಿನ ತಲೆನೋವೆಂದು ರಜೆ ಮಾಡಿದೆ. ಒಂದು ಉಪಾಯದ ರಜಾ ಅರ್ಜಿ ಬರೆದು ಅರ್ಧ ದಿನದ ರಜೆಗೆ ತಂದೆಯವರ ಸಹಿ ಹಾಕಿಸಿದೆ. ಏಳು ಸೇರಿಸಿ, ಏಳೂವರೆ ದಿನಗಳ ಅರ್ಜಿಯನ್ನು ಮಾಷ್ಟ್ರಿಗೆ ಕೊಟ್ಟೆ. ಅವರು ನಂಬಿದರು.

ಅರ್ಥ ಇಷ್ಟೇ. ಇಷ್ಟಪಟ್ಟು ರಾಮಾಯಣ ಓದಿದರೂ ನಾನು ರಾಮಾಯಣವನ್ನು ಅರ್ಥ ಮಾಡಿಕೊಳ್ಳದೆ, ಅದರ ಮೌಲ್ಯ, ಅಪಮೌಲ್ಯ ತಿಳಿದುಕೊಳ್ಳದೇ ವಂಚಕನಾಗಿದ್ದೆ. ತಂದೆ, ತಾಯಿ, ಗುರುಗಳನ್ನು ವಂಚಿಸಿದ್ದೆ- ಬರೇ ಆರನೇ ತರಗತಿಯಲ್ಲಿ. ಪುಸ್ತಕಗಳು ನನ್ನನ್ನು ವಂಚಿಸಲಿಲ್ಲ. ಆದರೀಗ ಇವರು ರಾಮನ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ರಾಮಾಯಣ, ನಂತರ ಮಹಾಭಾರತ ನನ್ನನ್ನು ವಂಚಿಸಲಿಲ್ಲ. ನಾನು ಜೀವನದ ಕೆಲವು ಸಮಾನ ಮೌಲ್ಯಗಳನ್ನು ಕಲಿತೆ; ಕೆಲವು ಆದರ್ಶಗಳನ್ನು ಬೆಳೆಸಿಕೊಂಡೆ, ಅನ್ಯಾಯದ ವಿರುದ್ಧ ಪ್ರತಿಭಟನೆ ಜೊತೆಗೆ ದೌರ್ಬಲ್ಯಗಳನ್ನು ಸೇರಿಸಿಕೊಂಡೆ.

ಅದೇನೇ ಇದ್ದರೂ, ರಾಮನನ್ನು ರಾಜಕೀಯ ಲಾಭಕ್ಕಾಗಿ ಬೀದಿಗೆಳೆದು ಎಳೆದಾಡಿದ, ಕೋಟಿಗಟ್ಟಲೆ ಹಣ ಮಾಡಿದ, ದುಷ್ಟ, ವಂಚಕ ಕ್ರಿಮಿಗಳ ಬಗ್ಗೆ ನನಗೆ ಸಿಟ್ಟಿದೆ. ಹಾಗೆಯೇ ನನ್ನ ಕಾಲ್ಪನಿಕ ಕಥಾಪಾತ್ರಗಳಾದ ರಾಮ, ಸೀತಾದಿಗಳ ಬಗ್ಗೆಯೂ, ರಾಮರೋಗ ಪೀಡಿತ ದಲಿತ, ಶೂದ್ರರ ಬಗ್ಗೆ, ಅದನ್ನು ವಿರೋಧಿಸಲು ಶಕ್ತಿ ಇಲ್ಲದ ನನ್ನ ಬಗ್ಗೆ ನನಗೆ ಕನಿಕರ ಇದೆ. ಹಾಗಾಗಿ, ನನ್ನ ರಾಮ, ನಿಮ್ಮ ರಾಮ, ಅವರಿವರ ರಾಮನ ಬಗ್ಗೆ ಇಲ್ಲಿಯೇ ಇನ್ನಷ್ಟು ಬರೆಯುವ ಸಂಕಲ್ಪ ಇದೆ.
ಈ ರಾಮ ಬೇರೆ, ಆ ರಾಮನಿಂದ ಆರಾಮವಿಲ್ಲ.

Related Articles

ಇತ್ತೀಚಿನ ಸುದ್ದಿಗಳು