Sunday, June 23, 2024

ಸತ್ಯ | ನ್ಯಾಯ |ಧರ್ಮ

ಛತ್ತೀಸ್‌ಗಢ ವಿಧಾನಸಭೆ: ಅರಣ್ಯದಲ್ಲಿ ಕಲ್ಲಿದ್ದಲು ಗಣಿಗಾರಿಕೆ ವಿರೋಧಿಸಿದ 30 ಕಾಂಗ್ರೇಸ್‌ ಶಾಸಕರು ಅಮಾನತು

ಕಲ್ಲಿದ್ದಲು ಗಣಿಗಾರಿಕೆಗಾಗಿ ಹಸೆಡೊ ಅರಣ್ಯ ಪ್ರದೇಶದ ಮರಗಳನ್ನು ಕಡಿಯುವ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ಶಾಸಕರು ಒತ್ತಾಯಿಸಿದ ಸಂದರ್ಭದಲ್ಲಿ ಛತ್ತೀಸ್‌ಗಢ ವಿಧಾನಸಭೆ ಫೆಬ್ರವರಿ 7, ಬುಧವಾರದಂದು ಗದ್ದಲದ ದೃಶ್ಯಾವಳಿಗಳಿಗೆ ಸಾಕ್ಷಿಯಾಯಿತು.

ಚರ್ಚೆಗೆ ಒತ್ತಾಯಿಸಿ ಸದನದ ಬಾವಿಗಿಳಿದ 30 ಕಾಂಗ್ರೆಸ್ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದ್ದು, ನಂತರ ಅವರ ಅಮಾನತು ಹಿಂಪಡೆಯಲಾಯಿತು.

15,000 ಕ್ಕೂ ಹೆಚ್ಚು ಮರಗಳನ್ನು ಕಡಿಯುವ ನಿರ್ಧಾರದ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ತನ್ನ ಕಳವಳ ವ್ಯಕ್ತಪಡಿಸಿದ್ದು, ಇದು ಜೀವವೈವಿಧ್ಯ-ಸಮೃದ್ಧವಾದ ಹಸ್ಡಿಯೊ-ಅರಂಡ್ ಪ್ರದೇಶದಲ್ಲಿ ಇರುವ ಸಸ್ಯ ಪ್ರಬೇಧ, ಪ್ರಾಣಿ ಮತ್ತು ಬುಡಕಟ್ಟು ಜನಾಂಗದವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

2022 ರ ಜುಲೈ 26 ರಂದು ಅಸೆಂಬ್ಲಿ ಈಗಾಗಲೇ ಹಸ್ಡಿಯೋ ಅರಣ್ಯ ಪ್ರದೇಶದಲ್ಲಿನ ಎಲ್ಲಾ ಕಲ್ಲಿದ್ದಲು ಬ್ಲಾಕ್‌ಗಳನ್ನು ರದ್ದುಗೊಳಿಸುವಂತೆ ಖಾಸಗಿ ಸದಸ್ಯರ ನಿರ್ಣಯವನ್ನು ಅಂಗೀಕರಿಸಿ  ಕೇಂದ್ರವನ್ನು ಒತ್ತಾಯಿಸಿತ್ತು. ಈ ಮಧ್ಯೆ ಬಿಜೆಪಿ ತರಾತುರಿಯಲ್ಲಿ ಮರ ಕಡಿಯಲು ಆದೇಶ ನೀಡಿದ್ದನ್ನು ಕಾಂಗ್ರೆಸ್ ಪ್ರಶ್ನಿಸಿದೆ. ಈ ಕುರಿತು ಕೇಂದ್ರಕ್ಕೆ ಪತ್ರವನ್ನೂ ಬರೆಯಲಾಗಿದ್ದು, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೇಸ್ ಹೇಳಿದೆ.

ಈ ಬಗ್ಗೆ ಚರ್ಚೆ ನಡೆಸಲು ಕಾಗ್ರೇಸ್‌ ಒತ್ತಾಯಿಸಿದಾಗ, ಆ ಮನವಿಯನ್ನು ಸ್ಪೀಕರ್ ರಮಣ್ ಸಿಂಗ್ ತಿರಸ್ಕರಿಸಿದ ಬೆನ್ನಲ್ಲೇ ಸದನದಲ್ಲಿ ಪ್ರತಿಭಟನೆ ಆರಂಭವಾಯ್ತು. ಸಭಾಪತಿಗಳ ನಿರಾಕರಣೆಯ ಹೊರತಾಗಿಯೂ ವಿಪಕ್ಷಗಳ ಬೇಡಿಕೆಯನ್ನು ಶಾಸಕಾಂಗ ವ್ಯವಹಾರಗಳ ಸಚಿವ ಬ್ರಿಜ್‌ಮೋಹನ್ ಅಗರವಾಲ್  “ಅನ್ಯಾಯ” ಎಂದು ಕರೆದಿದ್ದಾರೆ.

ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜೀನಾಮೆ ನೀಡಿದ ಬೆನ್ನಲ್ಲೇ, ಬಿಜೆಪಿ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಪ್ರಮಾಣ ವಚನ ಸ್ವೀಕರಿಸುವ ಮೊದಲೇ ಛತ್ತೀಸ್‌ಗಢದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಡಿಸೆಂಬರ್ 11, 2023 ರಂದು 91.3 ಹೆಕ್ಟೆರ್‌ ಪ್ರದೇಶದಲ್ಲಿರುವ 15,307 ಮರಗಳನ್ನು ಕಡಿಯಲು ಆದೇಶ ಹೊರಡಿಸಿದ್ದರು. ಹಸ್ಡಿಯೋ ಪ್ರದೇಶದಲ್ಲಿ ಕಲ್ಲಿದ್ದಲು ಗಣಿ ಯೋಜನೆ ಮಾಡಲು ಅರಣ್ಯ ಭೂಮಿಯನ್ನು ಬಳಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಚರಣದಾಸ್ ಮಹಂತ್ ಆರೋಪಿಸಿದ್ದಾರೆ.

ಹಸ್ಡಿಯೋ ಪ್ರದೇಶದಲ್ಲಿ ಗಣಿಗಾರಿಕೆ ರದ್ದುಪಡಿಸುವ ಖಾಸಗಿ ಸದಸ್ಯರ ನಿರ್ಣಯವನ್ನು ವಿಧಾನಸಭೆ ಈಗಾಗಲೇ ಅಂಗೀಕರಿಸಿದ ನಂತರ ಅರಣ್ಯ ಇಲಾಖೆಯಿಂದ ಇಂತಹ ಆದೇಶವನ್ನು ಹೇಗೆ ಹೊರಡಿಸಲು ಸಾಧ್ಯ ಎಂದು ಪ್ರಶ್ನಿಸಿರುವ ಮಹಂತ್‌, “ಹಸ್ಡಿಯೊದ ನಾಶವಾದರೆ ಹೂಳು ತುಂಬಿ ಬ್ಯಾಂಗೊ ಅಣೆಕಟ್ಟು ಕೂಡ ನಾಶವಾಗುತ್ತದೆ,” ಎಂಬ ಮಹಂತ್  ಹೇಳಿಕೆ ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯಾಗಿದೆ.

ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ , “ಮರ ಕಡಿಯುವುದಕ್ಕೆ ವಿಧಾನಸಭೆಯು ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದಾಗ ಅನುಮತಿ ನೀಡಲು ಒತ್ತಾಯಿಸಿದ ಅದೃಶ್ಯ ಶಕ್ತಿ ಯಾವುದು?” ಎಂದು ಪ್ರಶ್ನಿಸಿದ್ದಾರೆ. ಹಸ್ಡಿಯೊದಲ್ಲಿ ಈ ರೀತಿಯ ಚಟುವಟಿಕೆಗಳು ಬುಡಕಟ್ಟು ಜನಾಂಗದವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಮತ್ತು ಬಂಗೋ ಅಣೆಕಟ್ಟಿನ ಮೇಲೆ ಪರಿಣಾಮ ಬೀರುತ್ತವೆ, ಇದು ಅನೇಕ ಜಿಲ್ಲೆಗಳಲ್ಲಿ ನೀರಾವರಿಗೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಇತರ ಶಾಸಕರು ಮರಗಳನ್ನು ಕಡಿಯುವುದು ಮತ್ತು ಕಲ್ಲಿದ್ದಲು ಗಣಿಗಾರಿಕೆಗೆಯಿಂದಾಗಿ ಹಸ್ಡಿಯೋದಲ್ಲಿ ಮಾನವ-ಆನೆ ಸಂಘರ್ಷವನ್ನು ಹೆಚ್ಚಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇದು ಬುಡಕಟ್ಟು ಜನಾಂಗದವರ ಜೀವನೋಪಾಯಕ್ಕೆ ಹೊಡೆತ ನೀಡುವುದಲ್ಲದೆ, ನೀರು, ಅರಣ್ಯ ಮತ್ತು ಭೂಮಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು