Friday, June 28, 2024

ಸತ್ಯ | ನ್ಯಾಯ |ಧರ್ಮ

ಹರ್ಯಾಣ ಸರ್ಕಾರದಿಂದ ರೈತರ ಪ್ರತಿಭಟನೆಗೆ ಕಿರಿಕಿರಿ:ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ನಿಷೇಧ, ಎಕ್ಸ್ ಖಾತೆಗಳಿಗೆ ತಡೆ

ನವದೆಹಲಿ: ರೈತರ ಪ್ರತಿಭಟನೆಗೆ ಆರಂಭದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಕಿರಿಕಿರಿ ಮಾಡುತ್ತಿರುವ ಹರ್ಯಾಣ ಸರಕಾರವು ರಾಜ್ಯದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ.

ರೈತರ ದಿಲ್ಲಿ ಚಲೋ ಆಂದೋಲನದ ಸ್ಥಿತಿಗತಿಯನ್ನು ತಿಳಿಸುತ್ತಿದ್ದ ಹಲವಾರು ಪ್ರಮುಖರ ಎಕ್ಸ್ ಖಾತೆಗಳನ್ನು ತಡೆಹಿಡಿಯಲಾಗಿದೆ. ಜೊತೆಗೆ ಗ್ರೂಫ್‌ ಮೇಸೆಜ್‌ ರವಾನೆಯಾಗದಂತೆ ತಡೆ ಹೇರಲಾಗಿದ್ದು, ಈ ನಿಷೇಧಗಳನ್ನು ಫೆ.15ರವರೆಗೆ ವಿಸ್ತರಿಸಿದೆ.

ಈ ನಿಷೇಧ ಹೇರಿರುವುದನ್ನು ವಿರೋಧಿಸಿ ರೈತ ಮುಖಂಡರು ನ್ಯಾಯಾಲಯದ ಮೊರೆ ಹೋಗಿದ್ದರು. ಪಂಜಾಬ್ ಮತ್ತು ಚಂಡೀಗಡ ಉಚ್ಚ ನ್ಯಾಯಾಲಯವು ರೈತರು ದಿಲ್ಲಿಯನ್ನು ತಲುಪುವುದನ್ನು ತಡೆಯಲು ಇಂಟರ್ನೆಟ್ ಸ್ಥಗಿತ ಮತ್ತು ಇತರ ನಿಷೇಧ ಕ್ರಮಗಳ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ರೈತರು ಸಂಚಾರದ ಮತ್ತು ಸಭೆ ಸೇರುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿರುವ ಉಚ್ಚ ನ್ಯಾಯಾಲಯವು, ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಲು ಅವರಿಗೇಕೆ ಅವಕಾಶ ನೀಡಬಾರದು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಪಂಚಕುಲಾದ ವಕೀಲ ಉದಯ ಪ್ರತಾಪ ಸಿಂಗ್ ಅವರು ದಿಲ್ಲಿಯ ಗಡಿಗಳನ್ನು ಮುಚ್ಚಿರುವುದನ್ನು ಪ್ರಶ್ನಿಸಿ ಈ ಪಿಐಎಲ್‌ನ್ನು ಸಲ್ಲಿಸಿದ್ದರು.

ಪೋಲಿಸರು ರೈತರು ದಿಲ್ಲಿ ತಲುಪುವುದನ್ನು ತಡೆಯಲು ರಸ್ತೆಗಳಲ್ಲಿ ಸಿಮೆಂಟ್ ಬ್ಯಾರಿಕೇಡ್‌ಗಳು,ಮುಳ್ಳುತಂತಿಗಳು ಇತ್ಯಾದಿಗಳನ್ನು ಅಳವಡಿಸಿದ್ದಾರೆ. ಕೆಲವು ಪ್ರದೇಶಗಳಲ್ಲಿ ನಿಷೇಧಾಜ್ಞೆಯನ್ನು ಹೇರಲಾಗಿದೆ.

ನ್ಯಾಯಾಲಯವು ದಿಲ್ಲಿ ಸರಕಾರವನ್ನು ಅರ್ಜಿಯಲ್ಲಿ ಕಕ್ಷಿಯನ್ನಾಗಿ ಸೇರಿಸಿದ್ದು, ಹರ್ಯಾಣ, ಪಂಜಾಬ್ ಸರಕಾರಗಳು ಮತ್ತು ಚಂಡಿಗಡ ಆಡಳಿತದಿಂದ ಉತ್ತರವನ್ನು ಕೇಳಿದೆ. ದಿಲ್ಲಿ ಚಲೋ ಆಂದೋಲನದ ನೇತೃತ್ವವನ್ನು ವಹಿಸಿರುವ ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ ಮೋರ್ಚಾಗಳನ್ನೂ ಕಕ್ಷಿಗಳನ್ನಾಗಿ ಮಾಡಲಾಗಿದೆ.

ಎಲಾನ್ ಮಸ್ಕ್ ನಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ

2020-21ರಲ್ಲಿ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆದ ರೈತರ ಪ್ರತಿಭಟನೆ ಸಂದರ್ಭದಲ್ಲಿ ಟ್ವೀಟರ್ ವಿಶ್ವಾಸಾರ್ಹ ಸಾಮಾಜಿಕ ಮಾಧ್ಯಮವಾಗಿತ್ತು. ಈಗ ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿರುವುದರ ಕುರಿತು ನ್ಯಾಯವಾದಿ ಹಾಗೂ ಇಂಟರ್ನೆಟ್ ಫ್ರೀಡಂ ಫೌಂಡೇಷನ್‌ನ ಮಾಜಿ ಮುಖ್ಯಸ್ಥ ಅಪಾರ ಗುಪ್ತಾ ತನ್ನ ಎಕ್ಸ್ ಪೋಸ್ಟ್‌ ನಲ್ಲಿ ಬೆಳಕು ಚೆಲ್ಲಿದ್ದಾರೆ. ಆಗ ಅದನ್ನು ಟ್ವಿಟರ್ ಎಂದು ಕರೆಯಲಾಗುತ್ತಿತ್ತು ಮತ್ತು ಜಾಕ್ ಡೋರ್ಸೆ ಅದನ್ನು ನಡೆಸುತ್ತಿದ್ದರು. 2022,ಅಕ್ಟೋಬರ್‌ನಲ್ಲಿ ಅದನ್ನು ಖರೀದಿಸಿದ ಎಲಾನ್ ಮಸ್ಕ್ ಎಕ್ಸ್ ಎಂದು ಮರುನಾಮಕರಣ ಮಾಡಿದ್ದರು. ಅಲ್ಲಿಂದೀಚೆಗೆ ಮಸ್ಕ್ ಸ್ಥಳೀಯ ಕಾನೂನುಗಳ ತುಷ್ಟೀಕರಣದ ಗುರಿಯನ್ನು ಹೊಂದಿರುವ ನೀತಿಗಳಿಗೆ ಅಂಟಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಈಗ ಪರಿಸ್ಥಿತಿ ಬದಲಾಗಿದೆ. ಪ್ರಮುಖ ರೈತನಾಯಕರ ಎಕ್ಸ್ ಖಾತೆಗಳನ್ನು ತಡೆಹಿಡಿಯುವಂತೆ ಆದೇಶಗಳನ್ನು ಮುಂಚಿತವಾಗಿಯೇ ಹೊರಡಿಸಲಾಗಿದೆ. ಇಂತಹ ಪೂರ್ವ ಸೆನ್ಸಾರ್‌ಶಿಪ್ ಅಭ್ಯವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಮಾನವ ಹಕ್ಕುಗಳ ಉಲ್ಲಂಘಣೆಯಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು