Thursday, June 13, 2024

ಸತ್ಯ | ನ್ಯಾಯ |ಧರ್ಮ

ಖಾಸಗಿ ಏಜೆನ್ಸಿ ಎಫ್‌ಎಸ್‌ಎಲ್ ವರದಿ ಹಂಚಿಕೊಂಡು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದ ಬಿಜೆಪಿ

ಬೆಂಗಳೂರು: ರಾಜ್ಯಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಫೆ.27ರಂದು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಕರ್ನಾಟಕ ಬಿಜೆಪಿ ಸೋಮವಾರ ಖಾಸಗಿ ಫೊರೆನ್ಸಿಕ್ ಲ್ಯಾಬ್ ವರದಿಯೊಂದನ್ನು ಪೋಸ್ಟ್ ಮಾಡಿದೆ. ಬಿಜೆಪಿ ಖಾಸಗಿ ಎಫ್‌ಎಸ್‌ಎಲ್ ಲ್ಯಾಬ್ ವರದಿಯನ್ನು ಪೋಸ್ಟ್ ಮಾಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರವನ್ನು ಟೀಕಿಸಿದೆ.

ರಾಜ್ಯ ಬಿಜೆಪಿ X (ಹಿಂದೆ ಟ್ವಿಟರ್) ವೇದಿಕೆ ಬಳಸಿಕೊಂಡು ಈ ಕುರಿತು ಪೋಸ್ಟ್‌ ಹಾಕಿದ್ದು ಖಾಸಗಿ ಸಂಸ್ಥೆಯ FSL ವರದಿಯು ಪಾಕಿಸ್ತಾನದ ಪರ ಘೋಷಣೆಗಳ ಆರೋಪಗಳನ್ನು ಸಾಬೀತುಪಡಿಸಿದೆ ಎಂದು ಹೇಳಿಕೊಂಡಿದೆ.

ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದು, ‘ಸತ್ಯವನ್ನು ಮರೆಮಾಚುತ್ತಿದೆ’ ಎಂದು ಆರೋಪಿಸಿದರು.

“ರಾಜ್ಯ ಹಾಗೂ ಜನರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ, ದೇಶ ದ್ರೋಹಿ ಉಗ್ರರು ಹಾಗೂ ಪಾತಕಿಗಳಿಗೆ ಕರ್ನಾಟಕ ನೆಲೆಯಾಗಬಾರದೆಂಬುದಷ್ಟೇ ನಮ್ಮ ಪ್ರಾಮಾಣಿಕ ಕಾಳಜಿ, ಪ್ರಜಾಪ್ರಭುತ್ವದ ಹೃದಯ ಮಂದಿರ ವಿಧಾನ ಸೌಧಕ್ಕೆ ಧಾವಿಸಿ ಬಂದು ಪೋಲಿಸರ ಎದುರೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಕೂಗುವಷ್ಟರ ಮಟ್ಟಿಗೆ ವಿದ್ರೋಹಿಗಳು ಧೈರ್ಯತೋರುತ್ತಾರೆ, ಇದರ ಬೆನ್ನಲೇ ರಾಜಧಾನಿಯಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿ ಅಡಗಿ ಕುಳಿತಿದೆ ? ಎಂಬುದು ಬಹುದೊಡ್ಡ ಪ್ರಶ್ನೆಯಾಗಿ ರಾಜ್ಯದ ಜನರನ್ನು ಕಾಡುತ್ತಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭೂಗತ ಶಕ್ತಿಗಳಿಗೆ ಸ್ವತಂತ್ರ್ಯ ದೊರೆತ ವಾತಾವರಣ ನಿರ್ಮಾಣವಾಗಿದೆ, ಜನರು ಆತಂಕದ ನೆರಳಿನಲ್ಲಿ ಬದುಕುವ ಸ್ಥಿತಿ ಬಂದೊದಗಿದೆ.

‘ಬೆಂದ ಮನೆಯಲ್ಲಿ ಗಳ ಇರಿಯುವ’ ರಾಜಕಾರಣ ಮಾಡುವ ದುರ್ಗತಿ ಬಿಜೆಪಿಗೆ ಬಂದಿಲ್ಲ ವಿಧಾನ ಸೌಧದಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೇಳಿಬಂದರೆ ನಾವು ಕೈಕಟ್ಟಿ ಕೂರಬೇಕೇ ? ಈ ಸಂಬಂಧ ಮಾಧ್ಯಮಗಳ ವರದಿ ನೀವು ನಂಬಲ್ಲಿಲ್ಲ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಲಿಸಲಿಲ್ಲ, ರಾಷ್ಟ್ರ ಹಿತಾಸಕ್ತಿಯ ಈ ಗಂಭೀರ ಪ್ರಕರಣದ ಬಗ್ಗೆ ತಾತ್ಸಾರ ತೋರುತ್ತಿರುವುದರ ನಿಮ್ಮ ವರ್ತನೆ ರಾಷ್ಟ್ರ ದ್ರೋಹಿಗಳನ್ನು ರಕ್ಷಿಸಲು ಆದ್ಯತೆ ನೀಡುತ್ತಿರುವಂತಿದೆ.

ಖಾಸಗಿ FSL ವರದಿ ಈಗಾಗಲೇ ಈ ಕುರಿತು ಧೃಡೀಕರಣ ನೀಡಿಯಾಗಿದೆ, ಸರ್ಕಾರಿ ವರದಿ ಕೂಡ ನಿಮ್ಮ ಕೈ ಸೇರಿದೆ ಆದಾಗ್ಯೂ
ವರದಿ ಇನ್ನೂ ತಲುಪಿಲ್ಲ ಎಂಬ ಹಸೀ ಸುಳ್ಳು ಹೇಳುತ್ತಿರುವ ನಿಮ್ಮ ನಡೆ, ನಿಮ್ಮ ರಾಷ್ಟ್ರ ಬದ್ಧತೆಯನ್ನು ಪ್ರಶ್ನಿಸುವಂತಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ

ಫೆಬ್ರವರಿ 27ರಂದು ಸಂಭ್ರಮಾಚರಣೆ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗಲಾಯಿತು ಎಂದು ಬಿಜೆಪಿ ಹೇಳಿಕೊಂಡಿದೆ. ನಂತರ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿ ಯಾವುದೇ ಕಾರಣಕ್ಕೂ ಅಪರಾಧಿಗಳನ್ನು ಬಿಡುವುದಿಲ್ಲ ಎಂದಿದ್ದಾರೆ.

ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು, ತನಿಖೆಯಲ್ಲಿ ಖಾಸಗಿ ಲ್ಯಾಬ್ ವರದಿಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

“ಖಾಸಗಿ ಏಜೆನ್ಸಿ ವರದಿಗಳನ್ನು ಪರಿಗಣಿಸಲಾಗುವುದಿಲ್ಲ. ಗೃಹ ಸಚಿವಾಲಯದ ಅಡಿಯಲ್ಲಿನ ಎಫ್‌ಎಸ್‌ಎಲ್ ಪ್ರಯೋಗಾಲಯದ ವರದಿಯನ್ನು ಪರಿಗಣಿಸಲಾಗುವುದು. ಎಫ್‌ಎಸ್‌ಎಲ್ ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ. ಒಂದು ವೇಳೆ ಘೋಷಣೆಗಳು ಎದ್ದಿರುವುದು ವರದಿಯಲ್ಲಿ ಸಾಬೀತಾದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಈ ವಿಷಯದಲ್ಲಿ ಮುಚ್ಚಿಡಲು ಏನೂ ಇಲ್ಲ” ಎಂದು ಪರಮೇಶ್ವರ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು