Friday, June 14, 2024

ಸತ್ಯ | ನ್ಯಾಯ |ಧರ್ಮ

ಈಶ್ವರಪ್ಪ ಮನವೊಲಿಕೆಗೆ ಇಂದು ಕೊನೆಯ ಅವಕಾಶ : ಮೋದಿ ಸಭೆಯಲ್ಲಿ ವೇದಿಕೆ ಏರ್ತಾರಾ ಕೆ.ಎಸ್.ಈ?

ದೇಶಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಯ ನಂತರ ಈಗ ರಾಜ್ಯಕ್ಕೆ ಚುನಾವಣಾ ಪ್ರಚಾರದ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಇಂದು ಶಿವಮೊಗ್ಗದಲ್ಲಿ ನಡೆಯಲಿರುವ ಕಾರ್ಯಕರ್ತರ ಸಮಾವೇಶದಲ್ಲಿ ನರೇಂದ್ರ ಮೋದಿ ಇರುವ ಸಭೆಯಲ್ಲಿ ಈಶ್ವರಪ್ಪ ಭಾಗಿಯಾಗಲಿದ್ದಾರಾ ಎಂಬ ಕುತೂಹಲ ಮೂಡಿಸಿದೆ.

ಇಂದಿನ ಶಿವಮೊಗ್ಗ ಸಮಾವೇಶದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಉಡುಪಿ ಮತ್ತು ಚಿಕ್ಕಮಗಳೂರಿನ ಅಭ್ಯರ್ಥಿಗಳು ವೇದಿಕೆ ಮೇಲೆ ಇರಲಿದ್ದಾರೆ. ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ, ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ, ದಾವಣಗೆರೆಯ ಸಂಸದ ಸಿದ್ದೇಶ್ವರ್, ಗಾಯತ್ರಿ ಸಿದ್ದೇಶ್ವರ್, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ನಾಯಕ ಕೋಟ ಶ್ರೀನಿವಾಸ ಪೂಜಾರಿ ವೇದಿಕೆ ಮೇಲೆ ಇರುತ್ತಾರೆ. ಮಂಗಳೂರಿನ ಅಭ್ಯರ್ಥಿ ಬೃಜೇಶ್ ಚೌಟ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಅರಗ ಜ್ಞಾನೇಂದ್ರ, ಸಿ.ಟಿ.ರವಿ, ಮಾಜಿ- ಹಾಲಿ ಶಾಸಕರು ವೇದಿಕೆಯಲ್ಲಿ ಇರಲಿದ್ದಾರೆ ಎಂದು ರವಿಕುಮಾರ್ ಹೇಳಿದರೂ ಎಲ್ಲಿಯೂ ಸಹ ಈಶ್ವರಪ್ಪ ಅವರ ಪ್ರಸ್ತಾಪ ಮಾಡದೇ ಇರುವುದು ಕುತೂಹಲ ಮೂಡಿಸಿದೆ.

ಇನ್ನು ಯಡಿಯೂರಪ್ಪ ಬಣದ ದೊಡ್ಡ ವಿರೋಧಿಯಾಗಿರುವ ಈಶ್ವರಪ್ಪ ಇಂದಿನ ಸಮಾವೇಶದಲ್ಲಿ ಸ್ವಯಂಪ್ರೇರಿತರಾಗಿ ಭಾಗಿಯಾಗುವರೇ ಎಂಬ ಪ್ರಶ್ನೆಯೂ ಮೂಡಿದೆ. ಯಾಕೆಂದರೆ ಯಡಿಯೂರಪ್ಪ ವಿರೋಧಿ ಆಗಿರುವ ಈಶ್ವರಪ್ಪ, ಬಿಜೆಪಿ ಪಕ್ಷ ಮತ್ತು ನರೇಂದ್ರ ಮೋದಿಯವರ ವಿಚಾರದಲ್ಲಿ ತನ್ನ ಪ್ರಾಮಾಣಿಕತೆ ಉಳಿಸಿಕೊಂಡ ಬಗ್ಗೆ ಯಾವಾಗಲೂ ಹೇಳಿಕೊಂಡು ಬಂದಿದ್ದಾರೆ.

ಆದರೆ ಈ ಸಮಾವೇಶ ಬಿಜೆಪಿ ಅಧಿಕೃತ ಅಭ್ಯರ್ಥಿಗಳ ಪರ ಪ್ರಚಾರದ ಕಾರ್ಯಕ್ರಮ ಆಗಿರುವ ಹಿನ್ನೆಲೆಯಲ್ಲಿ ಈಶ್ವರಪ್ಪ ಹಾಜರಾತಿ ಕಷ್ಟ ಎಂದೂ ಊಹಿಸಲಾಗಿದೆ.

ಅಷ್ಟೆ ಅಲ್ಲದೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಭಾಗಿಯಾಗುವ ಹಿನ್ನೆಲೆಯಲ್ಲಿ ವೇದಿಕೆಯ ಮೇಲೇ ತನ್ನ ಮನವೊಲಿಸಬಹುದು ಎಂಬುದು ಈಶ್ವರಪ್ಪ ಲೆಕ್ಕಾಚಾರ. ಈ ಹಿಂದೆಯೂ ಶಾಸಕ ಸ್ಥಾನ ಕೈ ತಪ್ಪಿದಾಗಲೂ ನರೇಂದ್ರ ಮೋದಿ ಕರೆ ಮಾಡಿದ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ನರೇಂದ್ರ ಮೋದಿಯವರೇ ಕರೆ ಮಾಡಿ ನಿಮ್ಮ ತ್ಯಾಗ ನಮ್ಮ ಮನದಲ್ಲಿ ಇರಲಿದೆ ಎಂದು ಹೇಳಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಹೀಗಾಗಿ ಈಶ್ವರಪ್ಪ ಸಮಾವೇಶದ ವೇದಿಕೆ ಏರುವುದು ಕಷ್ಟ ಎನ್ನಲಾಗಿದೆ.

ಈಗಾಗಲೇ ಬಿಜೆಪಿ ಪಕ್ಷದಿಂದ ಅದರಲ್ಲೂ ಯಡಿಯೂರಪ್ಪ ಬಣದಿಂದ ಮೇಲಿಂದ ಮೇಲೆ ಆಘಾತ ಅನುಭವಿಸುತ್ತಿರುವ ಈಶ್ವರಪ್ಪ ಈ ಸಮಾವೇಶದಿಂದ ದೂರವೇ ಉಳಿಯುವ ಸಾಧ್ಯತೆ ಎದ್ದು ಕಾಣುತ್ತಿದೆ. ಒಟ್ಟಾರೆಯಾಗಿ ಇಂದಿನ ಸಮಾವೇಶದಲ್ಲಿ ಮುಂದಿನ ಚುನಾವಣೆಯ ಭವಿಷ್ಯ ಕಾಣಲಿದೆ ಎಂಬುದಂತೂ ಸ್ಪಷ್ಟವಾಗಿದೆ.

Related Articles

ಇತ್ತೀಚಿನ ಸುದ್ದಿಗಳು