Wednesday, June 19, 2024

ಸತ್ಯ | ನ್ಯಾಯ |ಧರ್ಮ

ತೀರ್ಥಹಳ್ಳಿಯಲ್ಲಿ ಚುನಾವಣೆ ಬಹಿಷ್ಕಾರ : ರಾಜಕಾರಣಿಗಳು ಗ್ರಾಮ ಪ್ರವೇಶಿಸಿದರೆ ಪೊರಕೆ ಸೇವೆಯ ಎಚ್ಚರಿಕೆ

ಮಾಜಿ ಗೃಹ ಸಚಿವರು ಹಾಗೂ ಮಾಜಿ ಶಿಕ್ಷಣ ಸಚಿವರು ಇಬ್ಬರು ಘಟಾನುಘಟಿ ನಾಯಕರ ಸ್ವಕ್ಷೇತ್ರ ತೀರ್ಥಹಳ್ಳಿ ಈ ಬಾರಿ ವಿಶೇಷ ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ತೀರ್ಥಹಳ್ಳಿ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಈಗ ಹಲವು ಗ್ರಾಮಗಳ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ಹಾಕುವ ಹಂತಕ್ಕೆ ಬಂದು ನಿಂತಿದೆ.

ಆಗಿದ್ದೇನು?
ಜಲ ಜೀವನ್ ಮಿಷನ್ ಅಡಿಯಲ್ಲಿ 36 ಗ್ರಾಮ ಪಂಚಾಯಿತಿಗಳಿಗೆ ಅನುಕೂಲವಾಗುವಂತೆ ₹348 ಕೋಟಿ ವೆಚ್ಚದಲ್ಲಿ ಬಹುಗ್ರಾಮ ನೀರು ಸರಬರಾಜು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅನುಮೋದಿತ ಯೋಜನೆಯಂತೆ ತುಂಗಾ ಮತ್ತು ಮಾಲತಿ ನದಿಗಳು ಸೇರುವ ಭೀಮನಕಟ್ಟೆಯಲ್ಲಿ ನೀರನ್ನು ಲಿಫ್ಟ್ ಮಾಡಲಾಗುವುದು. ಅಲ್ಲಿಂದ ಪೈಪ್‌ಲೈನ್ ಮೂಲಕ 36 ಗ್ರಾಮ ಪಂಚಾಯಿತಿಗಳ ಎಲ್ಲಾ ಗ್ರಾಮಗಳಿಗೆ ನೀರು ಸರಬರಾಜು ಮಾಡುವಂತಹ ಬೃಹತ್ ಯೋಜನೆ ಇದು.

ಆದರೆ ಈ ನದಿ ತೀರದ ಜನರ ಅಭಿಪ್ರಾಯದಂತೆ ಈ ಯೋಜನೆಯೇ ಅವೈಜ್ಞಾನಿಕ ಎನ್ನಲಾಗಿದೆ. ತುಂಗಾ ಮತ್ತು ಮಾಲತಿ ನದಿಗಳು ಮಾರ್ಚ್ ಮತ್ತು ಜೂನ್ ನಡುವೆ ಒಣಗುತ್ತವೆ. ತಾಲ್ಲೂಕಿನ ಸಂಪೂರ್ಣ ಜನತೆ ಕೇಂದ್ರೀಕೃತ ಪಂಪಿಂಗ್ ಸ್ಟೇಷನ್ ಅವಲಂಬಿತವಾಗುವಂತೆ ಮಾಡಿದರೆ ಬೇಸಿಗೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಅದಲ್ಲದೆ ನದಿಯ ಎರಡೂ ಬದಿಯಲ್ಲಿ ನೂರಾರು ರೈತರು ನದಿ ನೀರನ್ನು ನಂಬಿ ಕೃಷಿ ಮಾಡುತ್ತಿದ್ದಾರೆ. ಕುಡಿಯುವ ನೀರು ಸರಬರಾಜು ಯೋಜನೆಯು ಬೇಸಿಗೆಯ ತಿಂಗಳುಗಳಲ್ಲಿ ತಮ್ಮ ನೀರಿನ ಮೂಲವನ್ನು ಕಸಿದುಕೊಳ್ಳಬಹುದು ಎಂಬ ಆತಂಕ ಸುತ್ತಲಿನ ಗ್ರಾಮಸ್ತರಲ್ಲಿದೆ. ಅಡಿಕೆ ಬೆಳೆಯೇ ಇಲ್ಲಿನ ಜನರ ಮೂಲ ಕಸುಬಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆ ಕೈಗೆತ್ತುಕೊಂಡದ್ದೇ ಆದರೆ ಇಲ್ಲಿನ ನೂರಾರು ಗ್ರಾಮಸ್ಥರ ಬದುಕೇ ಬೀದಿ ಪಾಲಾಗಲಿದೆ ಎಂಬ ಆತಂಕ ಎದುರಾಗಿದೆ. 

ಇದಲ್ಲದೆ, ವರ್ಷವಿಡೀ ನೀರು ಲಭ್ಯವಿರುವ ಮೂಲವನ್ನು ಇಟ್ಟುಕೊಂಡು ಕುಡಿಯುವ ನೀರು ಸರಬರಾಜು ಯೋಜನೆಗಳನ್ನು ಯೋಜಿಸುವುದು ಉತ್ತಮ. ಹೀಗಾಗಿ ಈ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ನೂರಾರು ರೈತರ ಬದುಕು ಮುಳುಗಿಸಿ ತಾಲ್ಲೂಕಿಗೆ ಕುಡಿಯುವ ನೀರು ಕೊಡುತ್ತೇವೆ ಎಂಬುದು ಎಷ್ಟು ವೈಜ್ಞಾನಿಕ ಎಂಬುದು ಇಲ್ಲಿ ಗ್ರಾಮಸ್ಥರ ಗಂಭೀರ ಪ್ರಶ್ನೆ.

ಈಗಾಗಲೇ ಐದು ಗ್ರಾಮ ಪಂಚಾಯಿತಿಗಳು ಈ ಯೋಜನೆಗೆ ತಮ್ಮ ವಿರೋಧ ವ್ಯಕ್ತಪಡಿಸಿವೆ. ಅಷ್ಟೆ ಅಲ್ಲದೆ ಯೋಜನೆ ವಿರೋಧಿಸಿ ಹಲವು ಬಾರಿ ಪ್ರತಿಭಟನೆಗಳಾಗಿವೆ. ಹಲವು ಮಾತುಕತೆ ಮೂಲಕ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಕೆ ಮಾಡಲು ಬಂದೂ ವಿಫಲವಾಗಿದೆ. ಸ್ವತಃ ಜಿಲ್ಲಾಧಿಕಾರಿಗಳೂ ಕೂಡ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲು ವಿಫಲ ಯತ್ನ ನಡೆಸಿದ್ದಾರೆ. ಆದರೆ ಗ್ರಾಮಸ್ಥರು ತಮ್ಮ ಬದುಕನ್ನೇ ಅಡವಿಟ್ಟು ಇನ್ನೊಬ್ಬರಿಗೆ ನೀರು ಕೊಡಲು ನಮ್ಮ ಸಮ್ಮತಿ ಇಲ್ಲ ಎಂದು ಸ್ಪಷ್ಟವಾಗಿ ತಮ್ಮ ಸಂದೇಶ ರವಾನಿಸಿದ್ದಾರೆ.

ಈ ನಡುವೆ ಯೋಜನೆಯನ್ನು ಮಾಡಿಯೇ ತೀರುತ್ತೇವೆ ಎಂದು ಮಾಜಿ ಗೃಹ ಸಚಿವ, ಹಾಲಿ ಶಾಸಕ ಆರಗ ಜ್ಞಾನೇಂದ್ರ ಕೂಡಾ ಹಠ ಹಿಡಿದು ಕೂತಂತಿದೆ. ಯೋಜನೆಯ ಗುತ್ತಿಗೆದಾರರು ಈ ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಂಡ ದಿನದಿಂದ ಗ್ರಾಮದಲ್ಲಿ ನೂರಾರು ಪೊಲೀಸರ ಬೆಂಗಾವಲಾಗಿ ಇಟ್ಟುಕೊಂಡು ಕೆಲಸ ಮಾಡಿಸಲಾಗುತ್ತಿದೆ. ಗ್ರಾಮಸ್ಥರು/ಪ್ರತಿಭಟನಾಕಾರರು ಈ ಜಾಗಕ್ಕೆ ಕಾಲೂ ಇಡದಂತೆ ದೊಡ್ಡ ತಡೆಗೋಡೆ ಕೂಡಾ ನಿರ್ಮಾಣವಾಗಿದೆ. 5 ಗ್ರಾಮ ಪಂಚಾಯಿತಿಗಳು ಹೊರತುಪಡಿಸಿ ಗ್ರಾಮ ಪಂಚಾಯಿತಿಗಳ ಒಕ್ಕೂಟವೂ ರೈತರ ಪ್ರತಿಭಟನೆಯನ್ನು ಗಣನೆಗೆ ತಗೆದುಕೊಳ್ಳುತ್ತಿಲ್ಲ.

ಸಧ್ಯ ಈ ಒಂದು ಬೆಳವಣಿಗೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ಗ್ರಾಮದ ಹಲವು ಗ್ರಾಮ ಪಂಚಾಯಿತಿಗಳು ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿವೆ. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಜನರಿಗೆ ಈ ಹೋರಾಟದ ಬಗ್ಗೆ ಅರಿವು ಮೂಡಿಸಿ, ಮುಂದಿನ ದಿನಗಳಲ್ಲಿ ನಾವು ಬೀದಿಗಿಳಿಯದೇ ಇದ್ದರೆ ನಮ್ಮ ಬದುಕು ಬೀದಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ರಾಜಕಾರಣಿಗಳು ಗ್ರಾಮದೊಳಗೆ ಪ್ರವೇಶಿಸಿದರೆ ಮಹಿಳೆಯರಿಂದ ಹಿಡಿಕುಂಟೆ (ಪೊರಕೆ) ಸೇವೆ ನೀಡುವುದಾಗಿ ಬ್ಯಾನ‌ರ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ರಾಜಕಾರಣಿಗಳು ತೀರ್ಥಹಳ್ಳಿ ತಾಲ್ಲೂಕಿನ ಆಲಗೇರಿ, ಹೆಗ್ಗೋಡು ಗ್ರಾಮಕ್ಕೆ ಬರುವ ಅಗತ್ಯವಿಲ್ಲ, ಮುಂದಿನ ದಿನಗಳಲ್ಲಿ ಮುಳುಬಾಗಿಲು, ಹೊಸಹಳ್ಳಿ, ತೀರ್ಥಮುತ್ತೂರು ಸೇರಿದಂತೆ ತುಂಗಾ ಹಾಗೂ ಮಾಲತಿ ನದಿ ತೀರದ 15 ಗ್ರಾ.ಪಂ. ವ್ಯಾಪ್ತಿಯಲ್ಲಿಯೂ ಪ್ರವೇಶ ನಿರ್ಬಂಧಕ್ಕೆ ತೀರ್ಮಾನಿಸಲಾಗಿದೆ ಎಂದು ಹೋರಾಟ ಸಮಿತಿಯ ರೈತ ಮುಖಂಡ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೋಡ್ಲು ವೆಂಕಟೇಶ್ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು