Monday, June 17, 2024

ಸತ್ಯ | ನ್ಯಾಯ |ಧರ್ಮ

ಭಗತ್ ಸಿಂಗನ ಗಳಿಗೆ ಮರಳಿ ಬಂದಿದೆ

‌ದೇಶ ಕಂಡ ದಾರ್ಶನಿಕ, ಅಪ್ರತಿಮ ಸ್ವತಂತ್ರ ಹೋರಾಟಗಾರ, ವೀರ ಭಗತ್‌ ಸಿಂಗ್‌ ಜನ್ಮದಿನವನ್ನು ಸ್ಮರಿಸುತ್ತಾ,
ಅವರ ಆದರ್ಶಗಳನ್ನು ನೆನೆಯುತ್ತಾ, ಶಿವಸುಂದರ್‌ರವರ ಒಂದು ಕವಿತೆ

ಭಗತ್ ಸಿಂಗ್ ಎಂದರೆ
ವ್ಯಕ್ತಿಯ ಹೆಸರೇನು ?
ಗತಿಸಿದ ಕಾಲವೇನು?

ಭಗತ್ ಸಿಂಗ್ ಎಂದರೆ
ಸಿಂಗರಿಸಿದ ಸುಳ್ಳುಗಳ
ವಿರುದ್ಧ…

ನಿಶಸ್ತ್ರ ಸತ್ಯಗಳ
ನಿರಂತರ ಸಮರ ..

ಭಗತ್ ಸಿಂಗ್ ಎಂದರೆ…

ವಂಚನೆಯ
ವರ್ತಮಾನಗಳನು
ಸೋಲಿಸಿ..

ಭವಿಷ್ಯದ ಬೆಳಕು ತೋರುವ
ಚರಿತ್ರೆಯ ಕೋಲ್ಮಿಂಚು ..

ಪ್ರತಿಯುಗದ
ಪ್ರತಿಮನದ
ಪ್ರತಿಕ್ಷಣದ
ಕ್ರಾಂತಿಯ ಗಳಿಗೆ..

ಭಗತ್ ಸಿಂಗ್ ಎಂದರೆ..

ಬಿಳಿ ಸುಳ್ಳುಗಳು ಸೃಷ್ಟಿಸುವ
ಬೂದು ಮೌನವನ್ನು

ಬಾಂಬಿನ ಸದ್ದಿನಿಂದ
ಬೇಧಿಸಿದ
ಕಡು ಸತ್ಯದ ಗಳಿಗೆ..

ಸಂಧಾನ ಸಂಭ್ರಮವನ್ನು
ಕ್ರಾಂತಿಘೋಷಣೆಯು
ಬಯಲು ಮಾಡಿದ ಗಳಿಗೆ ..

ಇದೋ ಈಗ
ಇತಿಹಾಸ ಸುತ್ತು ಸುತ್ತಿ
ಮತ್ತೆ ಮರಳಿದೆ

ಕರಿಬಿಳಿಯ ಕಲಬೆರಕೆಯ
ಮಬ್ಬುಗತ್ತಲ ವಂಚನೆಗೆ
ಸೂರ್ಯೋದಯವೆಂದು ಹೆಸರಿಡಲಾಗಿದೆ…

ಕಾವಿಲ್ಲದ ಬೆಳಕಿಂದ
ಮತ್ತೆ
ಕತ್ತಲು ಹೆಪ್ಪುಗಟ್ಟುತ್ತಿದೆ…

ಭಗತ್ ಸಿಂಗನ ಗಳಿಗೆ
ಮತ್ತೆ ಮರಳಿದೆ..

ಸುಳ್ಳಿನ ಸಂಸತ್ತಿನಲ್ಲಿ
ಸತ್ಯ ತಾನೇ ಹತ್ತಿ ಉರಿಯಬೇಕಿದೆ..

ಬೆಚ್ಚಗಿರುವ ಕೆಂಪು
ಕಂಫರ್ಟ್ ಜೋನುಗಳಲ್ಲಿ
ಚಡಪಡಿಕೆಯಾದರೂ ಹುಟ್ಟಬೇಕಿದೆ ..

ರಾಜನ ಜೊತೆ
ನಾವು ಬೆತ್ತಲೆಂಬ
ಅರಿವು ಮೂಡಬೇಕಿದೆ ..

ಕಾಲ ಮತ್ತೆ ಮರಳಿದೆ
ಭಗತ್ ಸಿಂಗನ
ಗಳಿಗೆ ಮತ್ತೆ ಎದುರಾಗಿದೆ ..

ಪ್ರತಿಮನದ ಮೌನ ಸ್ಮಶಾನದಲ್ಲಿ
ಭಗತ್ ಸಿಂಗನ ಬಾಂಬು ಸ್ಪೋಟಿಸಿ
ಸತ್ಯ ಮಾತಾಡಬೇಕಿದೆ ..

ಭಗತ್ ಸಿಂಗನ ಗಳಿಗೆ
ಮತ್ತೆ ಮರಳಿದೆ

-ಶಿವಸುಂದರ್

Related Articles

ಇತ್ತೀಚಿನ ಸುದ್ದಿಗಳು