Sunday, June 16, 2024

ಸತ್ಯ | ನ್ಯಾಯ |ಧರ್ಮ

ಮೊಹಮ್ಮದ್ ಫಾಸಿಲ್ ಹತ್ಯೆ ಆರೋಪಿಗಳ ಬಂಧನ!

ಕರಾವಳಿ ಭಾಗದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಮೊಹಮ್ಮದ್ ಫಾಸಿಲ್ ಹತ್ಯೆ ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಮೂವರು ಬಜರಂಗದಳ ಕಾರ್ಯಕರ್ತರು ಎಂಬುದಾಗಿ ಪ್ರಾಥಮಿಕ ಮಾಹಿತಿಯಲ್ಲಿ ತಿಳಿದು ಬಂದಿದೆ.

ಪ್ರಕರಣದಲ್ಲಿ ಹತ್ಯೆಯ ನೇರ ಆರೋಪಿಗಳಾದ ಸುಹಾಸ್ ಶೆಟ್ಟಿ, ಮೋಹನ್, ಗಿರಿಧರ್, ಅಭಿಷೇಕ್ ಶ್ರೀನಿವಾಸ್ ಮತ್ತು ದೀಕ್ಷಿತ್ ಎಂದು ಗುರುತಿಸಲಾಗಿದೆ. ಜೊತೆಗೆ ಅಜಿತ್ ಕ್ರಾಸ್ತ ಎಂಬ ಕಾರು ಮಾಲಿಕನನ್ನು ಬಂಧಿಸಲಾಗಿದೆ. ಎರಡು ದಿನಗಳಿಂದ ಫಾಜಿಲ್ ಹತ್ಯೆಗೆ ಸಂಚು ರೂಪಿಸಿದ್ದು, ಜುಲೈ 28 ರಂದು ಬೆಳಿಗ್ಗೆಯಿಂದ ಮೊಹಮ್ಮದ್ ಫಾಜಿಲ್ ರ ಚಲನವಲನಗಳನ್ನು ಗಮನಿಸಿ ಹತ್ಯೆ ನಡೆಸಿರುವುದನ್ನು ಆರೋಪಿಗಳು ತನಿಖೆ ವೇಳೆಯಲ್ಲಿ ತಿಳಿಸಿದ್ದಾರೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಗಳು ಬಳಸಿರುವ ಕಾರಿನ ನಂಬರಿನ ಮಾಹಿತಿ ಮೇರೆಗೆ ಕಾರಿನ ಮಾಲಿಕ ಅಜಿತ್ ಕ್ರಾಸ್ತನನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಮಾಹಿತಿ ದೊರಕಿದೆ. ಈ ಜಾಡಿನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವ ವೇಳೆಯಲ್ಲಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ ಮಾಹಿತಿಯಂತೆ ಆರೋಪಿಗಳು ಮಂಗಳಪೇಟೆ ನಿವಾಸಿ ಮೊಹಮ್ಮದ್ ಫಾಸಿಲ್ ಅವರ ಹತ್ಯೆ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಹತ್ಯೆಯ ಮೂಲ ಕಾರಣ, ಅದಕ್ಕೆ ಅವರು ಅನುಸರಿಸಿದ ಮಾರ್ಗ, ಪ್ರಕರಣದ ಹಿನ್ನೆಲೆಯಲ್ಲಿ ಇರುವವರ ಬಗ್ಗೆ ವಿಚಾರಣೆ ಮೂಲಕ ಇನ್ನಷ್ಟೇ ತಿಳಿಯಬೇಕಿದೆ.

ಹತ್ಯೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮಾಹಿತಿಯಂತೆ ಫಾಸಿಲ್ ಹತ್ಯೆಗೆ ಯಾವ ಪ್ರೇಮ ಪ್ರಕರಣ ಮತ್ತು ಮುಸ್ಲಿಂ ಒಳಪಂಗಡದ ದ್ವೇಷದ ಕಾರಣ ಸುಳ್ಳು ಎಂಬುದನ್ನು ಸಹ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು