Wednesday, June 19, 2024

ಸತ್ಯ | ನ್ಯಾಯ |ಧರ್ಮ

ಅತಿ ಹೆಚ್ಚು ಒಕ್ಕಲಿಗ ಸಮುದಾಯದ ನಾಯಕರನ್ನು ಮುಗಿಸಿದ್ದೇ ದೇವೇಗೌಡರು: ಸಿ.ಎಂ.ಸಿದ್ದರಾಮಯ್ಯ

ಅರಸೀಕೆರೆ ಏ 22: ಶ್ರೇಯಸ್ ಪಟೇಲ್ ಅವರನ್ನು ಹಾಸನ ಲೋಕಸಭಾ ಕ್ಷೇತ್ರದಿಂದ ಗೆಲ್ಲಿಸಿಕೊಂಡು ಬನ್ನಿ. ಶಾಸಕ ಶಿವಲಿಂಗೇಗೌಡರನ್ನು ಮಂತ್ರಿ ಮಾಡುವ ಜವಾಬ್ದಾರಿ ನನಗೆ ಬಿಡಿ ಎಂದು ಮುಖ್ಯಮಂತ್ರಿ ಸಿ.ಎಂ.ಸಿದ್ದರಾಮಯ್ಯ ಘೋಷಿಸಿದರು.

ಶ್ರೇಯಸ್ ಪಟೇಲ್ ಗೆಲುವಿಗೆ ಅರಸೀಕೆರೆಯಲ್ಲಿ ನಡೆಸಿದ ಬೃಹತ್ ರೋಡ್ ಶೋ ವೇಳೆ ಈ ಘೋಷಣೆ ಮಾಡಿದರು.

ದೇವೇಗೌಡರು ತಮ್ಮ ಕುಟುಂಬದ ರಾಜಕೀಯ ಹಿತಾಸಕ್ತಿಗಾಗಿ ಮೋದಿಯವರನ್ನು ಹಿಗ್ಗಾ ಮುಗ್ಗಾ ಹೊಗಳುತ್ತಿದ್ದಾರೆ. ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೀನಿ ಎಂದಿದ್ದ ದೇವೇಗೌಡರೇ, ಈಗ ಮೋದಿಯವರು ರಾಜ್ಯದ ಜನತೆಯ ಕೈಗೆ ನೀಡಿದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಎಂದು ಹೊಗಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ದೇವೇಗೌಡರ ಅಳಿಯ ಬೆಂಗಳೂರು ಗ್ರಾಮಾಂತರದಲ್ಲಿ, ಮಗ ಮಂಡ್ಯದಲ್ಲಿ, ಮೊಮ್ಮಗ ಹಾಸನದಲ್ಲಿ ಸ್ಪರ್ಧಿಸಿದ್ದಾರೆ. ಇವರಿಗೆ ತಮ್ಮ ಕುಟುಂಬದ ಆಚೆ ಅಭ್ಯರ್ಥಿಗಳೇ ಕಾಣುತ್ತಿಲ್ಲ. ಹೀಗಾಗಿ ಈ ಬಾರಿ ಪ್ರಜ್ವಲ್ ರೇವಣ್ಣ ಅವರನ್ನು ಮನೆಗೆ ಕಳುಹಿಸಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಅತಿ ಹೆಚ್ಚು ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ ಶ್ರೇಯಸ್ಸು ದೇವೇಗೌಡರದ್ದಾಗಿದೆ. ಅರಸೀಕೆರೆ ಶಿವಲಿಂಗೇಗೌಡರು ಕಾಂಗ್ರೆಸ್ ಸೇರಿ ಬಚಾವಾದರು ಎಂದರು.

ಶಿವಲಿಂಗೇಗೌಡರು ಕ್ಷೇತ್ರದ ಅಭಿವೃದ್ದಿಗೆ ಕೇಳುವ ಎಲ್ಲಾ ಕೆಲಸಗಳಿಗೆ ಸಹಿ ಹಾಕಲು ನಾನು ಸಿದ್ದನಿದ್ದೇನೆ. ಶಿವಲಿಂಗೇಗೌಡರನ್ನು ಮಂತ್ರಿ ಮಾಡುವ ಜವಾಬ್ದಾರಿಯನ್ನೂ ನನಗೆ ಬಿಡಿ, ಇದಕ್ಕಾಗಿ ಶ್ರೇಯಸ್ ಪಟೇಲ್ ಅವರನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿಕೊಂಡು ಬನ್ನಿ ಎಂದು ಕರೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು