Friday, June 14, 2024

ಸತ್ಯ | ನ್ಯಾಯ |ಧರ್ಮ

ಲೋಕಸಭೆ ಚುನಾವಣೆ ಟಾರ್ಗೆಟ್; ಬಿಜೆಪಿಯಲ್ಲೇ ವಿಜಯೇಂದ್ರ ತಲೆದಂಡಕ್ಕೆ ಕ್ಷಣಗಣನೆ!

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಬಿಜೆಪಿಯ ಗದ್ದುಗೆ ಗುದ್ದಾಟ ಒಂದು ರೀತಿಯದ್ದಾದರೆ, ರಾಜ್ಯದಲ್ಲಿ ಈ ಬಾರಿಯ ಚುನಾವಣಾ ಫಲಿತಾಂಶದ ನಂತರ ದೊಡ್ಡ ದೊಡ್ಡ ತಲೆಗಳು ಬಿಜೆಪಿಯಲ್ಲಿ ನೆಲಕ್ಕುರುಳಲಿವೆ. ಹೀಗೊಂದು ಸುಳಿವನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಹಾಕಿ, ಬಿಜೆಪಿ ನಾಯಕರ ತಲೆಗೆ ಹುಳ ಬಿಟ್ಟಿದ್ದಾರೆ.

ರಾಜ್ಯದಲ್ಲಿ ಈ ಹಿಂದೆ ನಳಿನ್ ಕುಮಾರ್ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರದಲ್ಲಿದ್ದಾಗ ಬಿಜೆಪಿ ಪಕ್ಷ ಬರೋಬ್ಬರಿ 25 ಸೀಟುಗಳನ್ನು ಪಡೆಯುವ ಮೂಲಕ ಗೆಲುವಿನ ಕೇಕೆ ಹಾಕಿತ್ತು. ಆದರೆ ಈ ಬಾರಿ ಆ ಮಟ್ಟಿಗಿನ ಗೆಲುವು ಕಷ್ಟಸಾಧ್ಯ ಎಂಬ ಅರಿವಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಕನಿಷ್ಟ 20 ರಿಂದ 22 ಸೀಟುಗಳ ಟಾರ್ಗೆಟ್ ಕೊಡಲಾಗಿತ್ತು.

ಪ್ರಸ್ತುತ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕನಿಷ್ಟ 18 ರಿಂದ 20 ಸೀಟುಗಳನ್ನು ಪಡೆದೇ ತೀರುತ್ತೇವೆ ಎಂಬ ಉಮೇದಿನಲ್ಲಿರುವಾಗ 15 ರಿಂದ 18 ಸೀಟು ತನ್ನದಾಗಿಸಿಕೊಂಡರೂ ಅದು ಕಾಂಗ್ರೆಸ್ ಪಕ್ಷದ ನಿಜವಾದ ಗೆಲುವು ಎಂದೇ ಹೇಳಲಾಗುತ್ತಿದೆ. ಹೀಗಿರುವಾಗ, ಬಿಜೆಪಿ ಈ ಹಿಂದಿನ ಅತಿ ಹೆಚ್ಚು ಸೀಟುಗಳನ್ನು ಕಳೆದುಕೊಳ್ಳಲಿದೆ, ಅಷ್ಟೇ ಅಲ್ಲದೇ ರಾಜ್ಯದಲ್ಲಿ ಹೊಸ ಪ್ರಯೋಗಗಳಿಗೆ ಕೈ ಇಟ್ಟ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಿಗೆ ಗಗನ ಕುಸುಮವಾಗಲಿವೆ ಎಂಬ ಮಾತುಗಳು ಕೇಳಿ ಬಂದಿದೆ.

ಈ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ “ರಾಜ್ಯ ಬಿಜೆಪಿಯ ಮುಕ್ಕಾಲು ಪಾಲು ನಾಯಕರು ಬಿಜೆಪಿಯ ಈಗಿನ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರ ತಲೆದಂಡಕ್ಕಾಗಿ ವ್ಯೂಹ ರಚನೆಯಲ್ಲಿ ತೊಡಗಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ತಂದೆ – ಮಕ್ಕಳ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವ ಕಸರತ್ತಿನ ತಯಾರಿ ಭರದಿಂದ ನಡೆಯುತ್ತಿದೆ. ಇದಕ್ಕೆ ಆರ್ ಎಸ್ ಎಸ್‌ನ ಒಂದು ಬಣದ ಆಶೀರ್ವಾದ ಕೂಡಾ ಇದೆ ಎಂದು ಹೇಳಲಾಗುತ್ತಿದೆ” ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿದ್ದ ನಾಯಕರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿಲ್ಲ. ಈ ಚುನಾವಣೆಯಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಮಕ್ಕಳು ಪಕ್ಷವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸದಿದ್ದರೆ ತಾವೆಲ್ಲ ಶಾಶ್ವತವಾಗಿ ಮೂಲೆ ಸೇರುವುದು ಖಚಿತ ಎನ್ನುವ ಆತಂಕದಲ್ಲಿದ್ದಾರೆ. ಇದರಿಂದಾಗಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಪೋಟ ಆಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ರಾಜ್ಯದ ಕಾಂಗ್ರೆಸ್ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮೊದಲು ತಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು. ಈ ಪಕ್ಷದ್ರೋಹಿ ಶಿಂಧೆ ಅವರ ಪಕ್ಷ ಈ ಚುನಾವಣೆಯಲ್ಲಿ ಧೂಳೀಪಟವಾಗಲಿರುವುದು ಮಾತ್ರವಲ್ಲ ಮಹಾರಾಷ್ಟ್ರದ ರಾಜಕೀಯದಲ್ಲಿ ಅವರು ಮೂಲೆ ಸೇರುವುದು ಖಚಿತ. ಈ ಹತಾಶೆಯಿಂದ ಏನೋ ಬಡಬಡಿಸಿದ್ದಾರೆ. ಅವರ ಮಾತನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯ ಇಲ್ಲ ಎಂದು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಕಷ್ಟಕಾಲದಲ್ಲಿ ಉದ್ದೇಶಪೂರ್ವಕವಾಗಿ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಯಶಸ್ಸಿನಲ್ಲಿ ಇರುವಾಗ ನೆಲ ಕಚ್ಚಿರುವ ಬಿಜೆಪಿ ಪಕ್ಷವನ್ನು ಮೇಲೆತ್ತುವುದು ತೀರಾ ಕಷ್ಟ. ಇಂತಹ ಸಂದರ್ಭದಲ್ಲೇ ವಿಜಯೇಂದ್ರ ಪಕ್ಷದ ಸಾರಥಿಯಾದರೆ ಸುಲಭವಾಗಿ ಸೋಲಿನ ಹೊಣೆಯನ್ನ ವಿಜಯೇಂದ್ರ ಅಥವಾ ಯಡಿಯೂರಪ್ಪ ತಲೆಗೆ ಕಟ್ಟಬಹುದು ಎಂಬ ಲೆಕ್ಕಾಚಾರ ಬಿಎಸ್​ವೈ ವಿರೋಧಿಗಳ ಲೆಕ್ಕಾಚಾರ ಎಂಬ ಮಾತು ಕೇಳಿ ಬಂದಿದೆ.

Related Articles

ಇತ್ತೀಚಿನ ಸುದ್ದಿಗಳು