Thursday, June 13, 2024

ಸತ್ಯ | ನ್ಯಾಯ |ಧರ್ಮ

“ನಾನು ಸಂಸತ್ತಿಗೆ ಮಾತ್ರ ಉತ್ತರದಾಯಿ. ಪತ್ರಕರ್ತರಿಗಲ್ಲ…” ಪತ್ರಿಕಾಗೋಷ್ಟಿ ಕುರಿತು ಮೋದಿ ಉತ್ತರ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ಯಾವುದೇ ಪತ್ರಿಕಾಗೋಷ್ಠಿ ನಡೆಸದೆ ದೂರ ಉಳಿದಿದ್ದಾರೆ, ಅವರ ವಿರೋಧಿಗಳು ಹೆಚ್ಚಾಗಿ ಇದೇ ವಿಷಯವನ್ನು ಇಟ್ಟುಕೊಂಡು ಟಾರ್ಗೆಟ್‌ ಮಾಡುತ್ತಾರೆ.

ಪ್ರಸ್ತುತ ಮೋದಿ ಈ ವಿಷಯದ ಕುರಿತು ಮಾಧ್ಯಮವೊಂದಕ್ಕೆ ಉತ್ತರಿಸಿದ್ದು, ನಾನು ಸಂಸತ್ತಿಗೆ ಮಾತ್ರ ಉತ್ತರದಾಯಿ ಎಂದು ಹೇಳಿದ್ದಾರೆ.

ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ತಾನು ಸಂಸತ್ತಿಗೆ ಮಾತ್ರ ಉತ್ತರದಾಯಿ ಎಂದು ಹೇಳುತ್ತಾ, ಇಂದು ಮಾಧ್ಯಮಗಳ ಸ್ವರೂಪ ಬದಲಾಗಿರುವ ಕುರಿತಾಗಿಯೂ ಮಾತನಾಡಿದರು. ಅಲ್ಲದೆ ಇಂದು ಸಮಾಜದಲ್ಲಿ ಮಾಧ್ಯಮಗಳ ಪಾತ್ರ ಬದಲಾಗಿದೆ ಎಂದೂ ಹೇಳಿದ್ದಾರೆ.

ಮಾಧ್ಯಮಗಳ ತಟಸ್ಥತೆಯನ್ನು ಪ್ರಶ್ನಿಸಿರುವ ಮೋದಿ, “ಪತ್ರಕರ್ತರು ಇಂದು ತಮ್ಮದೇ ಆದ ಆದ್ಯತೆಗಳನ್ನು ಹೊಂದಿರುತ್ತಾರೆ, ಮಾಧ್ಯಮಗಳು ಮೊದಲಿನಂತೆ ನಿಷ್ಪಕ್ಷಪಾತಿತನವನ್ನು ಕಾಪಾಡಿಕೊಂಡಿಲ್ಲ” ಎಂದಿದ್ದಾರೆ.

“ಈಗೀಗ ಜನರಿಗೆ ನಿಮ್ಮ (ಪತ್ರಕರ್ತರ) ಮುಖದ ಪರಿಚಯವಿದೆ. ಈ ಹಿಂದೆ ಸುದ್ದಿಮನೆಗಳಲ್ಲಿ ಕುಳಿತು ಬರೆದು ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತಿತ್ತು. ಈಗ ಹಾಗಿಲ್ಲ ಜನರಿಗೆ ನಿಮ್ಮ ಬಗ್ಗೆ ಗೊತ್ತಿರುತ್ತದೆ. ನಿಮ್ಮ ನಂಬಿಕೆಗಳು ಯಾವುದು ಎನ್ನುವುದು ಸಹ ಅವರಿಗೆ ತಿಳಿದಿರುತ್ತದೆ” ಎಂದು ಹೇಳುವ ಮೂಲಕ ಮಾಧ್ಯಮಗಳ ಬಾಲಬಡುಕತನದ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಇಂದು ಬಹುತೇಕ ಮಾಧ್ಯಮ ಸಂಸ್ಥೆಗಳು ಮೋದಿಯವರ ಆಪ್ತರಾದ ಅದಾನಿ ಹಾಗೂ ಅಂಬಾನಿಗಳ ಹಿಡಿತದಲ್ಲಿವೆಯೆನ್ನುವುದು ಸಹ ಇಲ್ಲಿ ಗಮನಾರ್ಹ. ಹಾಗೂ ಈ ಬಾರಿಯ ಚುನಾವಣೆ ಸಂದರ್ಭದಲ್ಲಿ “ಆಯ್ದ ನಂಬಿಕೆಯುಳ್ಳ ಪತ್ರಕರ್ತರಿಗೆ” ಮಾತ್ರವೇ ಮೋದಿ ಸಂದರ್ಶನ ನೀಡಿದ್ದರು.

ಮೋದಿ ತಾನು ಕೆಲಸದಲ್ಲಿ ನಂಬಿಕೆ ಇರಿಸಿದ್ದು, ಮಾಧ್ಯಮಗಳ ನಿರ್ವಹಣೆಯಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ ಎಂದೂ ಹೇಳಿದ್ದಾರೆ.

ಇಂದು ಮಾಧ್ಯಮ ಪರಿಸ್ಥಿತಿ ಬದಲಾಗಿದ್ದು ಜನರೊಂದಿಗೆ ಸಂವಹನ ನಡೆಸಲು ಮಾಧ್ಯಮಗಳ ಅಗತ್ಯವಿಲ್ಲ. ನಾಯಕನೊಬ್ಬ ಬಯಸಿದರೆ ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದಬಹುದು ಹಾಗೂ ಜನರು ಬಯಸಿದರೆ ನಾಯಕನೊಂದಿಗೆ ಸಂಪರ್ಕವನ್ನು ಸಾಧಿಸಬಹುದು. ಅಷ್ಟರಮಟ್ಟಿಗೆ ಇಂದು ಸಂಪರ್ಕ ಸಾಧ್ಯತೆಗಳು ಸಾಧ್ಯವಾಗಿವೆ ಎಂದು ಸಾಮಾಜಿಕ ಜಾಲತಾಣಗಳನ್ನು ಉಲ್ಲೇಖಿಸದೆ ಅವರು ಹೇಳಿದರು.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಸತತ ಆರು ವರ್ಷಗಳಿಂದ ಭಾರತ ಇಂಟರ್ನೆಟ್‌ ಶಟ್‌ ಡೌನ್‌ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಮಣಿಪುರ, ಕಾಶ್ಮೀರಗಳಲ್ಲಿ ತಿಂಗಳುಗಟ್ಟಲೆ ಮೊಬೈಲ್‌ ನೆಟ್‌ವರ್ಕ್‌ಗಳನ್ನು ತೆಗೆದುಹಾಕಲಾಗಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Related Articles

ಇತ್ತೀಚಿನ ಸುದ್ದಿಗಳು