Tuesday, June 18, 2024

ಸತ್ಯ | ನ್ಯಾಯ |ಧರ್ಮ

ಮಳೆಯಿಂದಾಗಿ ಬೆಂಗಳೂರು ತೊರೆಯಲಿವೆಯಾ ಐಟಿ ಸಂಸ್ಥೆಗಳು!?

ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ರಣಭೀಕರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದಾದ್ಯಂತ ಸುರಿದ ಬಾರೀ ಮಳೆಗೆ ಬೆಂಗಳೂರಿನ ಅನೇಕ ರಸ್ತೆಗಳು ಜಲಾವೃತವಾಗಿದ್ದು, ವಾಹನ ಸವಾರರು ತೀವ್ರತರವಾದ ತೊಂದರೆ ಅನುಭವಿಸಿದ್ದಾರೆ. ಬಹುತೇಕ ತಗ್ಗು ಪ್ರದೇಶಗಳಲ್ಲಿ ಸಂಪೂರ್ಣ ಮುಳುಗಡೆ ಅನುಭವವಾಗಿದೆ.

ಕಳೆದ ವಾರ ಎರಡು ಬಾರಿ ಜಲಾವೃತಕ್ಕೆ ಕಾರಣವಾಗಿದ್ದ ಬೆಂಗಳೂರು ಈ ವಾರದ ಪ್ರಾರಂಭದಲ್ಲೇ ಹಲವಷ್ಟು ಅನಾಹುತಗಳಿಗೆ ಸಾಕ್ಷಿಯಾಗಿದೆ. ಈ ಹಿಂದಿನ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗಷ್ಟೇ ನೀರಿನ ಸಮಸ್ಯೆ ಎದುರಾಗುತ್ತಿತ್ತು. ಆದರೆ ಈ ಬಾರಿ ಬೆಂಗಳೂರಿನ ರಸ್ತೆಗಳು ನೀರಿನಿಂದ ತುಂಬಿದ್ದು, ನಾನಾ ರೀತಿಯಲ್ಲಿ ಕೋಟ್ಯಂತರ ರೂಪಾಯಿ ನಷ್ಟಗಳಿಗೆ ಕಾರಣವಾಗಿದೆ.

ಇತ್ತ ಐಟಿ ಕಂಪನಿಗಳಿಗೂ ಮಳೆಯ ಬಿಸಿ ತಟ್ಟಿದ್ದು ಬೆಂಗಳೂರಿನ ಹೊರ ವರ್ತುಲ ರಸ್ತೆ, ವೈಟ್ ಫೀಲ್ಡ್, ದೊಮ್ಮಲೂರು, ಹೆಬ್ಬಾಳ ಆಸುಪಾಸಿನ ಮಾನ್ಯತಾ ಟೆಕ್ ಪಾರ್ಕ್, ಬೆಳ್ಳಂದೂರು ಭಾಗದಲ್ಲಿ ಬರುವ ಬಹುತೇಕ ಐಟಿ ಸಂಸ್ಥೆಗಳು ಮಳೆ ಹೊಡೆತಕ್ಕೆ ನಲುಗಿವೆ. ಎಷ್ಟೋ ಐಟಿ ಸಂಸ್ಥೆಗಳ ಉದ್ಯೋಗಿಗಳಿಗೆ ಸಂಸ್ಥೆಯ ಮುಖ್ಯಸ್ಥರು ಕೆಲಸದ ವಿಚಾರದಲ್ಲಿ ಮಳೆಯ ನೆಪ ಕೊಡಬಾರದು ಎಂದು ತಾಕೀತು ಮಾಡಿವೆ ಎಂದು ವರದಿಯಾಗಿದೆ. ಆ ಹಿನ್ನೆಲೆಯಲ್ಲಿ ಐಟಿ ಉದ್ಯೋಗಿಗಳು ಬೆಂಗಳೂರು ಅಷ್ಟು ಸುರಕ್ಷಿತ ಅಲ್ಲ ಎಂಬಂತಹ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಧ್ಯ ಹಾನಿಗೊಳಗಾದ ಐಟಿ ಸಂಸ್ಥೆಗಳಿಗೆ ಅಗತ್ಯ ಪರಿಹಾರ ಒದಗಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭರವಸೆ ನೀಡಿದ್ದಾರೆ.

ಮಳೆಯ ಕಾರಣಕ್ಕೆ ರಸ್ತೆಗೆ ವಾಹನಗಳನ್ನು ಇಳಿಸುವುದೂ ಅಪಾಯ ಎನ್ನುವ ಹಂತಕ್ಕೆ ಬೆಂಗಳೂರಿಗರು ಬಂದಿದ್ದಾರೆ. ರಸ್ತೆಯಲ್ಲಿ ನೀರು ನಿಂತದ್ದು ಅವೈಜ್ಞಾನಿಕ ಮತ್ತು ವಿಳಂಬದ ಮೆಟ್ರೋ ಕಾರ್ಯ ನಿರ್ಮಾಣದಿಂದಾಗಿ ಎಂಬುದು ಹಲವರ ಅಭಿಪ್ರಾಯ. ಇನ್ನು ತಗ್ಗು ಪ್ರದೇಶಗಳಲ್ಲಿ ನೀರು ನಿಂತದ್ದು ಹಿಂದಿನಿಂದಲೂ ಕೆರೆ ಒತ್ತುವರಿ ಕಾರಣಕ್ಕೆ ಮಾಡಿದ ಪರಿಣಾಮ ಎಂಬುದು ಇನ್ನೊಂದು ಕಡೆಯಿಂದ ಬಂದ ಅಭಿಪ್ರಾಯವಾಗಿದೆ.

ಒಟ್ಟಾರೆ ಬೆಂಗಳೂರಿಗೆ ಸಂಬಂಧಿಸಿದಂತೆ ಈ ಬಾರಿ ಮಳೆ ಕೂಡಾ ಹೆಚ್ಚಿದ್ದು ಇದೇ ರೀತಿ ಮುಂದುವರಿದರೆ, ಹಲವಷ್ಟು ಐಟಿ ಸಂಸ್ಥೆಗಳು, ಐಟಿ ಉದ್ಯೋಗಿಗಳು ಬೆಂಗಳೂರು ತೊರೆಯುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು