Thursday, June 13, 2024

ಸತ್ಯ | ನ್ಯಾಯ |ಧರ್ಮ

ಧ್ರುವ್‌ ರಾಠಿ ವಿಡಿಯೋ ಹಂಚಿಕೆ: ಸುಳ್ಳು ಬಿಂಬಿಸುವ ವಿಡಿಯೋ ಎಂದು ಕೇಸ್‌ ದಾಖಲಿಸಿದ ಪೊಲೀಸರು

ಮುಂಬೈ: ಖ್ಯಾತ ಯುಟ್ಯೂಬರ್‌ ದ್ರುವ್‌ ರಾಠಿಯವರು ಮೋದಿ ಬಗ್ಗೆ ತಯಾರಿಸಿದ್ದ ವಿಡಿಯೋ ಒಂದನ್ನು ವಾಟ್ಸಪ್‌ ಗುಂಪಿನಲ್ಲಿ ಹಂಚಿಕೊಂಡ ಯುವ ವಕೀಲನ ಮೇಲೆ ಮಹಾರಾಷ್ಟ್ರದ ವಸಾಯಿ ಪೊಲೀಸರು ಸ್ವಯಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಲಿಬರೇಶನ್‌ನ ಮಹಾರಾಷ್ಟ್ರ ಕಾರ್ಯದರ್ಶಿಯೂ ಆಗಿರುವ ವಕೀಲ ಆದೇಶ್ ಬನ್ಸೋಡೆ ‘ಮೈಂಡ್ ಆಫ್ ಎ ಡಿಕ್ಟೇಟರ್’ ಎಂಬ ಶೀರ್ಷಿಕೆಯ ಧ್ರುವ್‌ ರಾಥಿ ಅವರ ವೀಡಿಯೊ ಲಿಂಕ್‌ನ್ನು ವಸಾಯಿಯ ಬಾರ್ ಅಸೋಸಿಯೇಷನ್ ವಾಟ್ಸಾಪ್‌ ಗ್ರೂಪ್‌ಗೆ ಮೇ.20 ರಂದು ಹಂಚಿಕೊಂಡಿದ್ದರು. ದಯವಿಟ್ಟು ​​ಮತದಾನ ಮಾಡುವ ಮೊದಲು ವೀಡಿಯೊವನ್ನು ಸರಿಯಾಗಿ ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳಿ ಎಂಬ ಸಂದೇಶದೊಂದಿಗೆ ವಿಡಿಯೋವನ್ನು ಶೇರ್‌ ಮಾಡಿದ್ದರು. ಮೇ 20ರಂದು ಐದನೇ ಹಂತದ ಲೋಕಸಭೆ ಚುನಾವಣೆ ವೇಳೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದರಿಂದ ಗುಂಪಿನಲ್ಲಿದ್ದ ಮತ್ತೋರ್ವ ವಕೀಲರು ಪೊಲೀಸರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ.

ಶೇರ್ ಮಾಡಿರುವ ವಿಡಿಯೋ ಮತ್ತು ಅದರ ಸಂದೇಶವು ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಕುರಿತು ಸುಳ್ಳು ಬಿಂಬಿಸುತ್ತದೆ. ಈ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಎಂಬಿವಿವಿ ಪೊಲೀಸ್ ಕಮಿಷನರ್ ಮಧುಕರ್ ಪಾಂಡೆ ತಮ್ಮ ಕಮಿಷನರೇಟ್‌ಗೆ ಮೇ 18 ಮತ್ತು ಮೇ 20ರ ನಡುವೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಇಂಥ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಕುರಿತು ನಿಷೇಧಾಜ್ಞೆ ಹೊರಡಿಸಿದ್ದರು. ವಿಡಿಯೋ ಹಂಚಿಕೆಯು ಕಮಿಷನರ್‌ ಅವರ ಆದೇಶದ ಉಲ್ಲಂಘನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ FIR ಕಾನೂನು ಬಾಹೀರ

ನಿರ್ದಿಷ್ಟ ವೀಡಿಯೋವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ, ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದೇ? ಸಿಆರ್‌ಪಿಸಿ ಸೆಕ್ಷನ್ 195ರ ಪ್ರಕಾರ, ಐಪಿಸಿಯ ಸೆಕ್ಷನ್ 188ರಡಿಯಲ್ಲಿ ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸರು ಸಂಬಂಧಪಟ್ಟ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಅನುಮತಿ ಪಡೆದಿಲ್ಲ. ಈ ಎಫ್‌ಐಆರ್ ಕಾನೂನುಬಾಹಿರ, ಇದು ಜನರ ಧ್ವನಿಯನ್ನು ಹತ್ತಿಕ್ಕುವ ರಾಜ್ಯದ ನಡೆಯ ಭಾಗ ಎಂದು ಆರೋಪಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು