Monday, June 17, 2024

ಸತ್ಯ | ನ್ಯಾಯ |ಧರ್ಮ

ಹಾಸನದ ಜೆಡಿಎಸ್‌ ಭದ್ರಕೋಟೆ ಪತನ: ಪ್ರಜ್ವಲ್‌ ರೇವಣ್ಣ ಹೀನಾಯ ಸೋಲು

ಹಾಸನ: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದೇಶದಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಈ ಸಲ ಲೋಕಸಣಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಹಾಸನದಲ್ಲಿ 17ನೇ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 6,32,090 ಮತಗಳನ್ನು ಪಡೆದಿದ್ದಾರೆ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 5,89,829 ಮತಗಳನ್ನು ಪಡೆದಿದ್ದು, 8098 ನೋಟಾ ಮತಗಳು ಚಲಾವಣೆ ಆಗಿದೆ. 42261 ಮತಗಳಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಸದ್ಯದ ಫಲಿತಾಂಶದ ಪ್ರಕಾರ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್ ಗೆಲುವು ಸಾಧಿಸಿದ್ದು, ಚುನಾವಣಾ ಆಯೋಗದಿಂದ ಅಧೀಕೃತ ಘೋಷಣೆ ಬಾಕಿ ಇದೆ.

ಎನ್‌ ಡಿ ಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ರಾಷ್ಟ್ರಮಟ್ಟದಲ್ಲೂ ಬಾರೀ ಸದ್ದು ಮಾಡಿತ್ತು. ಗುರುವಾರ ತಡರಾತ್ರಿ ಪ್ರಜ್ವಲ್‌ ಅವರನ್ನ ಎಸ್‌ ಐ ಟಿ ಅಧಿಕಾರಿಗಳು ಬಂಧಿಸಿದ್ದರು. ಏಪ್ರಿಲ್‌ 26 ರಂದು ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ರ್ಮನಿಯಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಬರೋಬ್ಬರಿ 34 ದಿನಗಳ ಬಳಿಕ ರಾಜ್ಯಕ್ಕೆ ಆಗಮಿಸಿದ್ದರು.

ರಾಜ್ಯದಲ್ಲಿ ಮೊದಲ ಹಂತ ಚುನಾವಣೆಯ ಸಂದರ್ಭದಲ್ಲಿ ಹಾಸನ ಹಾಲಿ ಸಂಸದ ಹಾಗೂ ಹಾಸನ ಎನ್‌ ಡಿ ಎ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರ ಕುಟುಂಬಸ್ಥರು, ಜೆಡಿಎಸ್‌ ಕಾರ್ಯಕರ್ತರು ಹಾಗೂ ಮೈತ್ರಿಯಾಗಿರುವ ಬಿಜೆಪಿ ನಾಯಕರು ತೀವ್ರ ಮುಜುಗರವನ್ನ ಅನುಭವಿಸಿದ್ದರು.

ಇನ್ನೂ ಕಾಪ್ಸ್‌ (ಸಿಒಪಿಎಸ್)‌ ಸಮೀಕ್ಷೆ ಪ್ರಕಾರ ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರುವ ಪ್ರಜ್ವಲ್‌ ರೇವಣ್ಣ ಅವರ ಸೋಲು ಅನುಭವಿಸುತ್ತಾರೆ ಎಂದು ತಿಳಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು