Thursday, June 13, 2024

ಸತ್ಯ | ನ್ಯಾಯ |ಧರ್ಮ

ಇಂದು ರಾತ್ರಿ ಮತ್ತೆ ಬೆಂಗಳೂರಿಗೆ ಬರಲಿರುವ ರಾಹುಲ್ ಗಾಂಧಿ: ನಂತರ ವಯನಾಡಿಗೆ ಪ್ರಯಾಣ

ಬೆಂಗಳೂರು: ಇತ್ತೀಚೆಗೆ ನಾಲ್ಕು ದಿನಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದು ಹೋಗಿದ್ದ ಕಾಂಗ್ರೆಸ್ಸಿನ ರಾಷ್ಟ್ರೀಯ ಮುಖಂಡ, ಸಂಸದ ರಾಹುಲ್ ಗಾಂಧಿ ಇಂದು ಮಂಗಳವಾರ ರಾತ್ರಿ ಮತ್ತೆ ಭೇಟಿ ನೀಡಲಿದ್ದಾರೆ. ಈ ಸಲ ಅವರ ಜೊತೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಸಹ ಆಗಮಿಸಲಿದ್ದಾರೆ.

ಬುಧವಾರ ವಯನಾಡಿಗೆ ತೆರಳಲಿರುವ ರಾಹುಲ್‌ ಪ್ರಯಾಣ ನಡುವೆ ವಿಶ್ರಾಂತಿಗಾಗಿ ಬೆಂಗಳೂರಿನಲ್ಲಿ ಉಳಿದುಕೊಳ್ಳಲಿದ್ದಾರೆ. ಇಂದು ರಾತ್ರಿ 9 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ರಾಹುಲ್​​, ಪ್ರಿಯಾಂಕಾರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬರಮಾಡಿಕೊಳ್ಳಲಿದ್ದಾರೆ. ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಖಾಸಗಿ ಹೋಟೆಲ್​ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿರುವ ಉಭಯ ನಾಯಕರು ನಾಳೆ ಬೆಳಗ್ಗೆ ಕೇರಳದ ವಯನಾಡ್​​ಗೆ ಪ್ರಯಾಣಿಸಲಿದ್ದಾರೆ.

ಬೆಂಗಳೂರಿನಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಾಹಿತಿ ಇಲ್ಲ. ಮತದಾರರಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ವಯನಾಡ್​​​ಗೆ ತೆರಳಲಿರುವ ಅವರು ಮಾರ್ಗ ಮಧ್ಯೆ ಬೆಂಗಳೂರು ವಿಮಾನ ನಿಲ್ದಾಣ ಬಳಿ ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ರಾಹುಲ್ ಹಾಗೂ ಪ್ರಿಯಾಂಕಾ ಕೇರಳದ ಮಲಪ್ಪುರಂ ಜಿಲ್ಲೆ ಹಾಗೂ ಕಲ್ಪಟ್ಟಾದಲ್ಲಿ ಬುಧವಾರ ಮತದಾರರನ್ನು ಭೇಟಿ ಮಾಡಲಿದ್ದಾರೆ. ರಾಹುಲ್ ಗಾಂಧಿ ವಯನಾಡ್ ತೊರೆದು ರಾಯ್​ಬರೇಲಿ ಉಳಿಸಿಕೊಂಡರೆ ಅವರ ಸ್ಥಾನಕ್ಕೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ.

ರಾಯಬರೇಲಿಯನ್ನು ಉಳಿಸಿಕೊಂಡು ಹಾಲಿ ಕ್ಷೇತ್ರವಾದ ವಯನಾಡನ್ನು ಹೊರಗಿಡುವ ಬಗ್ಗೆ ರಾಹುಲ್ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಪ್ರದೇಶದಲ್ಲಿ ಬದಲಾಗುತ್ತಿರುವ ರಾಜಕೀಯ ವಾತಾವರಣವನ್ನು ಗಮನಿಸಿ, ಅಲ್ಲಿ ರಾಹುಲ್ ಉಪಸ್ಥಿತಿಯು ಅವಕಾಶವನ್ನು ಬಳಸಿಕೊಳ್ಳಲು ಪಕ್ಷ ಬಯಸುತ್ತಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಮಲಪ್ಪುರಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಹೈ-ವೋಲ್ಟೇಜ್ ಕ್ಷೇತ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಹುಲ್ ಗಾಂಧಿ 3.6 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ವಿಜಯೋತ್ಸವ ಆಚರಿಸಲು ಸಿದ್ಧತೆ ನಡೆಸಲಾಗಿದೆ. 2019 ರಲ್ಲಿ, ರಾಹುಲ್ ಈ ಕ್ಷೇತ್ರದಲ್ಲಿ 4.3 ಲಕ್ಷ ಮತಗಳ ದಾಖಲೆಯ ಅಂತರದಿಂದ ಗೆಲುವು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

ಇತ್ತೀಚಿನ ಸುದ್ದಿಗಳು