Saturday, June 15, 2024

ಸತ್ಯ | ನ್ಯಾಯ |ಧರ್ಮ

ಮುಂದಿನ ದಿನಗಳಲ್ಲಿ ಮನುಷ್ಯನ ಖಾಸಗಿತನವೇ ಇರುವುದಿಲ್ಲ

ಎಷ್ಟೋ ಕಾಲ್ಪನಿಕ ವಿಷಯಗಳ ಬಗ್ಗೆ ನಾವು ಓದಿದಾಗ ಅಥವಾ ಕೇಳಿದಾಗ “ಇದೆಲ್ಲಾ ಸಾಧ್ಯವೇ? ” ಎಂದು ತಲೆ ಕೆಡಿಸಿಕೊಳ್ಳದೇ ಅದನ್ನು ಅಲ್ಲಿಯೇ ಕೈಬಿಡುತ್ತೇವೆ. ಆದರೆ ಯಾವುದು ಅಸಾಧ್ಯವೋ ಅದನ್ನು ಸಾಧ್ಯ ಮಾಡುವಿಕೆಯ ಅಚ್ಚರಿಗಳು ವೈಜ್ಞಾನಿಕ ಸಂಶೋಧನೆಗಳಲ್ಲಿರುತ್ತವೆ.

ಈಗ ನೋಡಿ ಇತ್ತೀಚೆಗೆ “Nature” ಪತ್ರಿಕೆಯಲ್ಲಿ ಒಂದು ಸಂಶೋಧನಾ ವರದಿ ಪ್ರಕಟವಾಗಿದೆ. ವಿಜ್ಞಾನಿಗಳು ಮನಸಿನ ಆಲೋಚನೆಗಳನ್ನು ಓದುವ AI ಆಧಾರಿತ ಪಠ್ಯ ಪರಿವರ್ತನಾ ಸಾಧನವೊಂದನ್ನು ರಚಿಸಿದ್ದಾರೆ. ಅದು ವ್ಯಕ್ತಿಯ ಮೆದುಳಿನ ಚಟುವಟಿಕೆಯನ್ನು ಪಠ್ಯವನ್ನಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವೇನೆಂದರೆ ಇದಕ್ಕೆ ಯಾವುದೇ ರೀತಿಯಲ್ಲಿ ಮೆದುಳಿನಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಚಿಪ್ ಗಳನ್ನು ಅಳವಡಿಸುವುದು ಬೇಕಿಲ್ಲ. ಇದು ಚಾಟ್ ಬಾಟ್ ಚಾಟ್ ಜಿಪಿಟಿಯಂತೆಯೇ AI ತಂತ್ರಜ್ಞಾನವನ್ನು ಬಳಸುತ್ತದೆ. ಅದು ಮೆದುಳಿನ ಚಟುವಟಿಕೆಯನ್ನು ಸ್ಕ್ಯಾನ್ ಮಾಡಿ ಅದನ್ನು ಊಹಿಸಿ ಅದರ ಪ್ರಕಾರ ಅದನ್ನು ಪಠ್ಯವನ್ನಾಗಿ ಪರಿವರ್ತಿಸಿ ಕೊಡುತ್ತದೆ.

ಹಾಗಾದರೆ ಇದನ್ನೇನಾದರೂ ಬಳಸಿ ಅಂಥ ಸಾಧನಗಳು ಮಾರುಕಟ್ಟೆಗೆ ಬಂದುಬಿಟ್ಟರೆ ಯಾರು ಯಾರ ಮನಸನ್ನು ಬೇಕಾದರೂ ಓದಬಹುದು ಎಂಬ ಗಾಬರಿಯೂ ಉಂಟಾಗಬಹುದು. ಅದಕ್ಕೆಂದೇ ಈ ಸಂಶೋಧನೆ ನಡೆಸಿರುವ ಅಲೆಕ್ಸಾಂಡರ್ ಹುತ್ ಎಂಬ ವಿಜ್ಞಾನಿ ಹೇಳುವುದೇನೆಂದರೆ ’ನಾವಿದನ್ನು ಮನಸಿನ ಓದುವಿಕೆ ಎಂದು ಕರೆಯಲು ಇಷ್ಟಪಡುವುದಿಲ್ಲ’ ಎಂದಿದ್ದಾರೆ. ಯಾರು ಮತ್ತೊಬ್ಬರೊಂದಿಗೆ ಸಂವಹನ ಮಾಡಲು ಅಸಹಾಯಕರಾಗಿರುವರೋ ಅಂಥವರಿಗೆ ಸಹಾಯ ಮಾಡುವ ಉದ್ದೇಶದ ಒಂದು ಅಪ್ಲಿಕೇಶನ್’ ಎಂದಿದ್ದಾರೆ. (ಪರಮಾಣು ಬಾಂಬ್ ಸಂಶೋಧಿಸಿದಾಗಲೂ ಮುಂದಿನ ಅನಾಹುತಗಳನ್ನು ಕಂಡುಹಿಡಿದ ವಿಜ್ಞಾನಿ ಊಹಿಸಿರಲಿಲ್ಲ)

ಮೊಬೈಲ್ ಗಳೇ ಒಂದು ಅದ್ಭುತ ಅಂಥದ್ದರಲ್ಲಿ ಈಗ ಮೊಬೈಲ್ ಗಳಲ್ಲಿಯೇ ಎಷ್ಟೊಂದು ತಂತ್ರಜ್ಞಾನ ಅಡಗಿದೆ. ಈಗ ಮಾರುಕಟ್ಟೆಯ ತುಂಬಾ ಅತ್ಯಾಧುನಿಕ ಮೊಬೈಲ್ ಗಳೇ. ಅದೇ ರೀತಿಯಲ್ಲಿ ಈ ತಂತ್ರಜ್ಞಾನವೂ ಅಭಿವೃದ್ಧಿ ಹೊಂದಿ ಮಾರುಕಟ್ಟೆಯಲ್ಲಿ ಕೈಗೊಂದು ಕಾಲಿಗೊಂದು ಎಂಬಂತೆ ಇಂಥ ಅಪ್ಲಿಕೇಶನ್ ಇರುವ ಸಾಧನಗಳೇನಾದರೂ ಜನರಿಗೆ ದೊರೆತುಬಿಟ್ಟರೆ ಜನರ ಅಂತಿಮ ಖಾಸಗಿತನಕ್ಕೂ ಅಪಾಯವನ್ನುಂಟುಮಾಡಿದರೆ ಮುಂದೇನು ಗತಿ ? ಎಂಬ ಭೀತಿಯೂ ಉಂಟಾಗಬಹುದು. ಅದಕ್ಕೆಂದೇ ನೇಚರ್ ಪತ್ರಿಕೆಯ ಪ್ರಮುಖ ಲೇಖಕ ಜೆರ್ರಿ ಟ್ಯಾಂಗ್ ಹೇಳಿದ್ದು “ಪ್ರತಿಯೊಬ್ಬರ ಮೆದುಳಿನ ಮಾಹಿತಿ ಖಾಸಗಿಯಾಗಿರಬೇಕು. ಯಾಕೆಂದರೆ ನಮ್ಮ ಮೆದುಳೇ ನಮ್ಮ ಗೌಪ್ಯತೆಯ ಅಂತಿಮ ಗಡಿಯಾಗಿದೆ ” ಎಂದಿದ್ದಾರೆ. ಯಾಕೆಂದರೆ ಆ ಗೌಪ್ಯತೆಯೂ ಒಂದು ವೇಳೆ ಸಿಗುವಂತಾಗಿಬಿಟ್ಟರೆ ಏನೇನು ಅನಾಹುತಗಳು ನಡೆಯಬಹುದೆಂದು ಊಹಿಸಿ.

ಆದರೆ ಯಾವುದೆ ತಂತ್ರಜ್ಞಾನವೂ ಒಳ್ಳೆಯದಕ್ಕೆ ಉಪಯೋಗವಾದರೆ ತೊಂದರೆಯಿಲ್ಲ. ಆದರೆ ದುರುಪಯೋಗ ಆದಾಗಲೇ ಅನಾಹುತಗಳು ಆರಂಭಗೊಳ್ಳೋದು. ಮೊಬೈಲ್ ನಲ್ಲಿರುವ ಕೆಮರಾದಿಂದ ಒಳ್ಳೆಯ ಫೋಟೊ, ವಿಡಿಯೋ ಮಾಡಬಹುದು. ಆದರೆ ಅದರ ದುರುಪಯೋಗ ಏನೆಂಬುದು ಈಗಾಗಲೇ ಒಂದು ಪ್ರಮುಖ ಅಪರಾಧದಲ್ಲಿ ಏನಾಗುತ್ತಿದೆ ಎಂಬುದು ನಿಮಗೆಲ್ಲ ಗೊತ್ತು.

ಈ ತಂತ್ರಜ್ಞಾನ ಬಂದರೆ ಅಪರಾಧಿಗಳ ಮನಸಿನಲ್ಲಿ ಏನಿದೆ ಎಂಬ ಸತ್ಯವನ್ನು ಪೊಲೀಸ್ ರು ಸುಲಭವಾಗಿ ಪತ್ತೆ ಹಚ್ಚಬಹುದು. ನ್ಯಾಯಾಲಯದ ಕಟಕಟೆಯಲ್ಲಿ ನಿಂತ ವ್ಯಕ್ತಿ ಸತ್ಯ ಹೇಳುತ್ತಿದ್ದಾನೋ, ಸುಳ್ಳು ಹೇಳುತ್ತಿದ್ದಾನೋ ಎಂಬುದನ್ನು, ವಕೀಲರ ತಲೆಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನೂ ನ್ಯಾಯಾಧೀಶರು ಸುಲಭವಾಗಿ ಓದಬಹುದು. ನಾವು ನಮ್ಮ ಆಧಾರ ಕಾರ್ಡ್, ಚುನಾವಣಾ ಕಾರ್ಡ್, ಬ್ಯಾಂಕ್ ಅಕೌಂಟ್ ಸಂಖ್ಯೆಗಳನ್ನು ನೆನಪಿಟ್ಟುಕೊಂಡರೆ ಸಾಕು ಅದಕ್ಕೆ ಕಾರ್ಡ್ ನ್ನೇ ಒಯ್ಯಬೇಕೆಂದಿಲ್ಲ. ಒಂದು ರೀತಿಯಲ್ಲಿ ಇವೆಲ್ಲ ಒಳ್ಳೆಯದೇ ಅನಿಸಬಹುದು.

ಆದರೆ ದುರುಪಯೋಗದ ಬಗ್ಗೆ ಯೋಚಿಸಿದಾಗ ? ಗಂಡ ಹೆಂಡತಿ ಒಬ್ಬರಿಗೊಬ್ಬರು ಗೊತ್ತಿಲ್ಲದಂತೆ ಈ ಅಪ್ಲಿಕೇಶನ್ ಬಳಸಿದರೆ ? ಸ್ನೇಹಿತರು ಬಳಸಿದರೆ ? ಶಿಕ್ಷಕರು ವಿದ್ಯಾರ್ಥಿಗಳು ಬಳಸಿದರೆ ? ಅಧಿಕಾರಿಗಳು, ಸಿಬ್ಬಂದಿಯವರು ಬಳಸಿದರೆ ? ಮಾರಾಟಗಾರರು ಗ್ರಾಹಕರು ಬಳಸಿದರೆ ? ಏನೆಲ್ಲ ಅನಾಹುತಗಳು ನಡೆಯಬಹುದು ?

ಏನೇ ಇರಲಿ ಮನುಷ್ಯನ ಮೆದುಳಿಗೂ ಕೈ ಹಾಕುವ ತಂತ್ರಜ್ಞಾನವೇನಾದರೂ ಸುಲಭವಾಗಿ ಜನರ ಕೈಗೆಟುಕಿಬಿಟ್ಟರೆ ಇನ್ನು ಅಳಿದುಳಿದ ಗೌಪ್ಯತೆಯನ್ನೂ ಶೇ.100ರಷ್ಟು ಕಳೆದುಕೊಳ್ಳುತ್ತೇವೆ.

ಸಿದ್ಧರಾಮ ಕೂಡ್ಲಿಗಿ

Related Articles

ಇತ್ತೀಚಿನ ಸುದ್ದಿಗಳು