Wednesday, June 19, 2024

ಸತ್ಯ | ನ್ಯಾಯ |ಧರ್ಮ

ಚನ್ನಪಟ್ಟಣ ಕ್ಷೇತ್ರ, ಮುಖ್ಯಮಂತ್ರಿ ಸ್ಥಾನ.. ಒಂದೇ ಕಲ್ಲಲ್ಲಿ ಎರಡು ಹಕ್ಕಿ ; ಏನಿದು ಡಿಕೆಶಿ ತಂತ್ರಗಾರಿಕೆ!?

ಸಧ್ಯ ರಾಜ್ಯದ ವಿಧಾನಸಭಾ ಉಪಚುನಾವಣೆಗಳಲ್ಲಿ ಹೈಓಲ್ಟೋಜ್ ಕ್ಷೇತ್ರವಾಗಿ ಪರಿಣಮಿಸಿರುವ ಚನ್ನಪಟ್ಟಣ ಕ್ಷೇತ್ರ ಈಗ ಮೂರೂ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಅಖಾಡವಾಗಿದೆ. ಜೆಡಿಎಸ್​ ವರಿಷ್ಠ ಹೆಚ್​ಡಿ ಕುಮಾರಸ್ವಾಮಿ ಅವರಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಈಗ ನೇರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಕಣಕ್ಕಿಳಿಯುವ ಬಗ್ಗೆ ಶುರುವಾಗಿರುವ ಚರ್ಚೆಗೆ ಈಗ ರೆಕ್ಕೆ ಪುಕ್ಕ ಬಂದಿದೆ.

ಬುಧವಾರ ಚನ್ನಪಟ್ಟಣ ಕ್ಷೇತ್ರದಲ್ಲಿ ಒಂದೇ ದಿನ 14 ದೇವಾಲಯಗಳಿಗೆ ಭೇಟಿ ನೀಡಿರುವ ಡಿಕೆ ಶಿವಕುಮಾರ್ ತಮ್ಮ ಸ್ಪರ್ಧೆಯ ಬಗ್ಗೆ ಸಣ್ಣ ಸುಳಿವು ನೀಡಿದ್ದಾರೆ. ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್​ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವ ಅನಿವಾರ್ಯತೆ ಬಗ್ಗೆ ಮಾತನಾಡಿದ್ದಾರೆ.

“ಚನ್ನಪಟ್ಟಣ ನನಗೆ ರಾಜಕೀಯ ಜೀವನ ಕೊಟ್ಟ ಕ್ಷೇತ್ರ. ನಾಲ್ಕು‌ ಬಾರಿ ಅಲ್ಲಿನ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ನನ್ನ ಕಷ್ಟ ಕಾಲದಲ್ಲಿ ಚನ್ನಪಟ್ಟಣ ಜನ ಕೈ ಹಿಡಿದಿದ್ದಾರೆ. ಕನಕಪುರ ಕ್ಷೇತ್ರದಂತೆ ಚನ್ನಪಟ್ಟಣವನ್ನೂ ಅಭಿವೃದ್ಧಿ ಮಾಡುತ್ತೇನೆ, ಚನ್ನಪಟ್ಟಣ ನನ್ನ ಹೃದಯವಿದ್ದಂತೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಹಿಂದೆ ಮಾಜಿ ಸಂಸದ ಡಿಕೆ ಸುರೇಶ್ ಸ್ಫರ್ಧೆಗೆ ಕ್ಷೇತ್ರದಲ್ಲಿ ತೀವ್ರ ಒತ್ತಡ ಬಂದಾಗ ಸ್ವತ: ಡಿಕೆ ಸುರೇಶ್ “ಅಚ್ಚರಿಯ ಅಭ್ಯರ್ಥಿ” ಬಗ್ಗೆ ಸುಳಿವು ನೀಡಿದ್ದರು. ಆದರೆ ಆ ಅಚ್ಚರಿಯ ಅಭ್ಯರ್ಥಿ ಡಿಕೆ ಶಿವಕುಮಾರ್ ಅವರೇ ಎಂದು ಯಾರೂ ಸಹ ನಿರೀಕ್ಷಿತ ಇರಲಲ್ಲ. ಆದರೆ ಸ್ವತ: ಡಿಕೆ ಶಿವಕುಮಾರ್ ಈಗ ಜನರ ಬಯಕೆ ಮತ್ತು ಪಕ್ಷ ನಾಯಕರ ನಿರ್ಧಾರಕ್ಕೆ ತಲೆ ಬಾಗುತ್ತೇನೆ ಎಂಬ ಮಾತನ್ನಾಡಿದ್ದಾರೆ.

ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್​ ಗೆಲುವು ಸಾಧಿಸಿದರೆ ಜೆಡಿಎಸ್​ಭದ್ರಕೋಟೆಯಾಗಿರುವ ಚನ್ನಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಂತಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೇ ಡಿಕೆ ಶಿವಕುಮಾರ್ ಸ್ಪರ್ಧೆಗೆ ಕ್ಷೇತ್ರದಲ್ಲಿ ಒತ್ತಾಯ ಬಂದಿತ್ತು. ಕೊನೆಯ ಕ್ಷಣದಲ್ಲಿ ಡಿಕೆ ಶಿವಕುಮಾರ್ ಸ್ವ ಕ್ಷೇತ್ರ ಕನಕಪುರದಿಂದ ಕಣಕ್ಕಿಳಿಯುವ ನಿರ್ಧಾರ ಕೈಗೊಂಡರು.

ಇವೆಲ್ಲದರ ಹೊರತಾಗಿಯೂ ಚನ್ನಪಟ್ಟಣ ಕ್ಷೇತ್ರದ ಬಗ್ಗೆ ಇರುವ ಮತ್ತದು ಸೆಂಟಿಮೆಂಟ್ ಏನೆಂದರೆ, ಈ ಕ್ಷೇತ್ರದಿಂದ ಗೆದ್ದ ಘಟಾನುಘಟಿಗಳಿಗೆ ಸುಲಭವಾಗಿ ದಕ್ಕುವ ಅತಿ ದೊಡ್ಡ ಹುದ್ದೆ ಬಗ್ಗೆ ಡಿಕೆಶಿ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಅದೇ ಮುಖ್ಯಮಂತ್ರಿ ಹುದ್ದೆ.

ಹೌದು. ಚನ್ನಪಟ್ಟಣ ರಾಜಕೀಯ ನೇತಾರರಿಗೆ ಬಹಳ ಅದೃಷ್ಟದ ಕ್ಷೇತ್ರವಾಗಿದ್ದು, ಈ ಕ್ಷೇತ್ರದಿಂದ ಕಣಕ್ಕಿಳಿದ ಘಟಾನುಘಟಿಗಳಿಗೆ ಮುಖ್ಯಮಂತ್ರಿ, ಕೇಂದ್ರಮಂತ್ರಿಯ ಹುದ್ದೆ ಬಹಳ ಸುಲಭವಾಗಿ ಲಭಿಸಿದೆ ಎಂಬ ಲೆಕ್ಕಾಚಾರ ಕೂಡ ಡಿಕೆ ಶಿವಕುಮಾರ್ ತಲೆಯಲ್ಲಿರುವ ಇನ್ನೊಂದು ಯೋಚನೆ. ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಹೆಚ್​ಡಿ ಕುಮಾರಸ್ವಾಮಿ, ಹೆಚ್​ಡಿ ದೇವೇಗೌಡ ಮತ್ತು ಕೆಂಗಲ್​ ಹನುಮಂತಯ್ಯ ಹಿಂದೆ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ಕೂಡ ಯಾವುದೇ ಸಂಖ್ಯಾಬಲದ ಹೊರತಾಗಿಯೂ ಕೇಂದ್ರ ಮಂತ್ರಿಗಿರಿ ಗಿಟ್ಟಿಸಿಕೊಂಡಿರುವಾಗ ರಾಜ್ಯ ಕಾಂಗ್ರೆಸ್ ನ ಅತಿ ದೊಡ್ಡ ಜವಾಬ್ಧಾರಿ ಹೊಂದಿರುವ ನಾನ್ಯಾಕೆ ಈ ಅದೃಷ್ಟ ಪರೀಕ್ಷೆ ಬರೆಯಬಾರದು ಎಂಬ ಬಗ್ಗೆಯೂ ಡಿಕೆ ಶಿವಕುಮಾರ್ ಲೆಕ್ಕಾಚಾರ ಹಾಕಿದಂತಿದೆ. ಆ ಮೂಲಕ ಚನ್ನಪಟ್ಟಣವನ್ನೂ ಕಾಂಗ್ರೆಸ್ ತೆಕ್ಕೆಗೇರಿಸಿ, ಕನಕಪುರದಿಂದಲೂ ಡಿಕೆ ಸುರೇಶ್ ಕಣಕ್ಕಿಳಿಸುವ ಇರಾದೆ, ಡಿಕೆ ಶಿವಕುಮಾರ್ ಗೆ ಇದೆ ಎನ್ನಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು