Monday, June 24, 2024

ಸತ್ಯ | ನ್ಯಾಯ |ಧರ್ಮ

ನೀಟ್ ಪರೀಕ್ಷೆ, ಮೆರಿಟ್ ಎಂಬ ಹಿಪಾಕ್ರೆಸಿ

ನೀಟ್ ಪರೀಕ್ಷೆ ಮತ್ತದರ ಒಳಗಿನ ಮೆರಿಟ್ ಎಂಬ ಹಿಪಾಕ್ರಸಿ ಬಗ್ಗೆ ಆಕ್ಸ್ಫರ್ಡ್ ವಿಶ್ವಾವಿದ್ಯಾಲಯ/ ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸೈಸ್ನ್ಸ್ ಹಳೆಯ ವಿದ್ಯಾರ್ಥಿ ಸೆಲ್ವಂ ಧರಣಿಧರನ್ ಅವರ ಬರಹವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಪ್ರಾಧ್ಯಾಪಕರಾದ ಹರೀಶ್ ಗಂಗಾಧರ್

ಜಗತ್ತಿನಾದ್ಯಂತ ಶಿಕ್ಷಣ ಚಲನಶೀಲತೆಯ ಯಾಂತ್ರಿಕ ವ್ಯವಸ್ಥೆಯಾಗದೆ ಸವಲತ್ತುಗಳ ಕೋಟೆಯಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಯಾವ ರೀತಿ ಸಕಾರಾತ್ಮಕ ಕ್ರಮಗಳು ಮೆರಿಟೋಕ್ರೇಸಿಯನ್ನ (ಶ್ರೇಷ್ಠತೆಯ/ಅರ್ಹತೆಯ ವ್ಯಸನ ಅಂದುಕೊಳ್ಳಿ) ಭಂಗಗೊಳಿಸುತ್ತದೆ ಅಥವಾ ನೀಟ್ (NEET) ನಂತಹ ಪರೀಕ್ಷೆಗಳು ಹೇಗೆ ಮೆರಿಟೋಕ್ರೆಸಿಯನ್ನು ಪೋಷಿಸುತ್ತವೆ ಅನ್ನೋದರ ಬಗ್ಗೆ ನಿರಂತರ ಚರ್ಚೆಗಳು ನೆಡೆಯುತ್ತಲೇ ಇರುತ್ತವೆ. ಈ ಎರಡು ಸಂಕುಚಿತ ನೋಟಗಳು ಮತ್ತು ಅನಿಸಿಕೆಗಳು ‘ಮೆರಿಟ್’ ಪದದ ತಿಳುವಳಿಕೆಯ ಕೊರತೆಯಿಂದ ಹುಟ್ಟುತ್ತದೆ.

ಮೆರಿಟ್ ಎಂಬ ಕಲ್ಪನೆಯೇ ಅಮೂರ್ತವು ಅಸ್ಪಷ್ಟವಾದುದಾಗಿದೆ. ಈ ಕಲ್ಪನೆಯೇ ಅತಿದೊಡ್ಡ ವಂಚನೆ ಕೂಡ ಇರಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಸಾಮರ್ಥ್ಯ ತೋರಿದರೆ “ಓಹ್ ಆತನಿಗೆ ಒಳ್ಳೆಯ ಮೆರಿಟ್ ಇದೆ” ಎಂದು ತುಂಬಾ ಮುಗ್ಧವಾಗಿ ಒಪ್ಪಿಕೊಂಡು ಬಿಡುವ ಗುಣ ಹಲವರಲ್ಲಿದೆ. ಈ ರೀತಿಯ ಜನಾಭಿಪ್ರಾಯಗಳು ಜಾತಿ ಆಧಾರಿತ ಭೇದಗಳು, ಪೋಷಕರಿಗಿರುವ ಅರಿವು, ಓದಿದ ಶಾಲೆ, ಬದುಕುವ ವಾತಾವರಣ , ಬಾಲ್ಯದಲ್ಲಾದ ನಿಂದನೆ, ದೌರ್ಜನ್ಯದಂತಹ ನಕಾರಾತ್ಮಕ ಅನುಭವಗಳನ್ನ, ತಾತ್ಸಾರಗಳನ್ನ ಮತ್ತು ಅದೇ ತರನಾದ ಸಮರೂಪದ ಅಂಶಗಳನ್ನ ಮರೆತುಬಿಡುತ್ತದೆ. ಈ ಹೋಲಿಕೆಯನ್ನೇ ಗಮನಿಸಿ- ಹಳ್ಳಿಯ ದಲಿತ ಕುಟುಂಬದಲ್ಲಿ ಹುಟ್ಟಿದ ಮಗುವಿಗೆ ದೆಹಲಿಯ ಮೇಲ್ ಮಧ್ಯಮ ವರ್ಗದಲ್ಲಿ ಹುಟ್ಟಿದ ಮಗುವಿಗಿಂತ ಹತ್ತು ಪಟ್ಟು ಹೊರ ಜಗತ್ತಿನ ಅರಿವು ಹಾಗೂ ಸಂಪನ್ಮೂಲದ ಕೊರತೆಯಿರುತ್ತದೆ.

ಹಳ್ಳಿಯ ದಲಿತ ಅಥವಾ ಕೆಳವರ್ಗದವ ಮೂಲಭೂತ ಸೌಕರ್ಯಗಳಿಲ್ಲದ ಶಾಲೆಗೆ ಸೇರುವ ಸಾಧ್ಯತೆಗಳೇ ಹೆಚ್ಚು. ಜೊತೆಗೆ ಆತ ಪೋಷಕರೊಡನೆ ಕೂಲಿ ಕೆಲಸಗಳಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿರುತ್ತಾನೆ. ಇದೇ ಸಮಯಕ್ಕೆ ದೆಹಲಿಯ ಮೇಲ್ ಮಧ್ಯಮ ವರ್ಗದ ಹುಡುಗ ಶ್ರೇಷ್ಠ ಶಾಲೆಗೆ ಸೇರುತ್ತಾನೆ. ಅವನ ಪೋಷಕರಿಗೆ ಆತನ ಭವಿಷ್ಯದ ಬಗ್ಗೆ ನಿರ್ಧಿಷ್ಟ ಕನಸುಗಳಿರುತ್ತವೆ. ಈ ಎಲ್ಲಾ ಸವಲತ್ತುಗಳು ಆತನಿಗೆ ಆರಂಭಿಕ ಮುನ್ನಡೆ ಕೊಡುತ್ತವೆ. ಇಂತಹ ಸನ್ನಿವೇಶದಲ್ಲಿ ವ್ಯಕ್ತಿಯ ಸಾಮರ್ಥ್ಯ, ಪ್ರತಿಭೆಯನ್ನ ಅಳೆಯುವುದಾದರು ಹೇಗೆ? ಹಳ್ಳಿಯ ದಲಿತನ ಮಗನಿಗು, ದೆಹಲಿಯ ಹುಡುಗನಿಗೂ ಒಂದೇ ಪರೀಕ್ಷೆ ಬರೆಯಲು ಹೇಳುವುದು ಅನ್ಯಾಯವಲ್ಲವೇ? ಇಂತಹ ಪರೀಕ್ಷೆಗಳ ಫಲಿತಾಂಶ ಅವರ ಭವಿಷ್ಯ ನಿರ್ಧರಿಸುವುದು ಎಷ್ಟು ಸರಿ? ದೇಶದ ಲಕ್ಷಾಂತರ ಯುವಕರ ಬದುಕು ತರಬೇತಿಯಿಂದ ಉತ್ತೀರ್ಣ ಅಗಬಹುದಂತಹ ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಿಂದ ನಿರ್ಧರಿಸುವುದು ಪಕ್ಷಪಾತ ಮತ್ತು ಅನ್ಯಾಯವಲ್ಲವೆ? ಇದು ದೇಶದಲ್ಲಿರುವ ಅಸಮಾನತೆ, ಭೇದಗಳ ಮಹಾ ಕಂದಕಗಳನ್ನ ತ್ವರಿತ ಗತಿಯಲ್ಲಿ ಮತ್ತಷ್ಟು ದೊಡ್ಡದಾಗುವಂತೆ ಮಾಡುತ್ತದೆ ಅಲ್ಲವೆ?

ಎಲ್ಲಾ ಆಯ್ಕೆ ಪ್ರಕ್ರಿಯೆಗಳಲ್ಲೂ, ಮಾನದಂಡಗಳಲ್ಲೂ ಭಿನ್ನತೆ ಮತ್ತು ನ್ಯೂನತೆಗಳಿರುತ್ತದೆ. ಶುದ್ಧ ಮೆರಿಟ್ ಅನ್ನುವುದು ಸುಳ್ಳು ನಂಬಿಕೆ. ಆದರ್ಶನಾಡಿನ (ಉಟೋಪಿಯ) ಪರಿಕಲ್ಪನೆಯ ಪರ್ಫೆಕ್ಟ್ ಮೈಥ್ ಅದು! ನೀತಿರಚಿಸುವವರು ಈ ಎಲ್ಲ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ಆದಷ್ಟು ನ್ಯೂನತೆಗಳನ್ನ ಹಾಗೂ ಅಂತರ್ಗತ ಪಕ್ಷಪಾತವನ್ನ ಕುಗ್ಗಿಸುವಂತೆ ನೀತಿ ರಚಿಸಬೇಕಷ್ಟೆ. ತಮಿಳುನಾಡಿನ ಸ್ಟಾಲಿನ್ ಸರ್ಕಾರ ವೈದ್ಯಕೀಯ ಶಿಕ್ಷಣಕ್ಕೆ ಸೇರಲು ಬರೆಯುತ್ತಿದ್ದ ನೀಟ್ ಪರೀಕ್ಷೆಗಳನ್ನ ರದ್ಧುಗೊಳಿಸಿ ಇತ್ತೀಚೆಗೆ ಇದನ್ನೇ ಮಾಡಿದೆ. ತಮಿಳುನಾಡಿನ ಎಲ್ಲ ವಿದ್ಯಾರ್ಥಿಗಳಿಗೂ ಸಮಾನವಾದ, ಸರಳ ಪಠ್ಯ ಪರಿಚಯಿಸಲಿದೆ. ಸರಳ ಪಠ್ಯಕ್ರಮ ಸ್ವಲ್ಪಮಟ್ಟಿಗಾದರು ಎಲ್ಲರಿಗೂ ಸಮತಟ್ಟಾದ ಆಟದ ಮೈದಾನ ಒಡಗಿಸಿಕೊಡುತ್ತದೆಯೆಂದು ಹಲವು ಸಂಶೋಧನೆಗಳು ಸೂಚಿಸಿವೆ.

ಭಾರತದಲ್ಲಿ ನೀಟ್ ಕುರಿತು ಕೆಲವೇ ಕೆಲವು ಸಂಶೋಧನೆಗಳು ನೆಡೆದರು, ಸ್ಪರ್ಧಾತ್ಮಕ ಪರೀಕ್ಷೆಗಳು ಮೆರಿಟ್ ಎಂಬ ಮೂಲ ತತ್ವದ ವಿರೋಧಾಭಾಸವೆ ಆಗಿದೆಯೆಂದು ಅಮೇರಿಕಾದಲ್ಲಿ ನೆಡೆದ ಹಲವು ಸಂಶೋಧನೆಗಳು ಸೂಚಿಸಿವೆ. ಅಮೆರಿಕದಲ್ಲಿ ಕಾಲೇಜು ಬೋರ್ಡ್ ನೆಡೆಸುವ SAT ಪರೀಕ್ಷೆಗಳ ಅಂಕಿಅಂಶಗಳ ಆಧಾರದ ಮೇಲೆ ನೆಡೆದ ಬ್ರೂಕಿಂಗ್ಸ್ ಸಮೀಕ್ಷೆ ಪ್ರಕಾರ, ಪ್ರತಿಷ್ಠಿತ ಐವಿ ಲೀಗ್ ಸ್ಕೂಲ್ನಲ್ಲಿ ಓದುವ ದೇಶದ ಆಗರ್ಭ ಶ್ರೀಮಂತ ಮಕ್ಕಳಿಗೆ (ಮೇಲಿನ 1%) ಬಡ ಕುಟುಂಬದಿಂದ ಬರುವ (ಕೆಳ 20%) ಮಕ್ಕಳಿಗಿಂತ 77ರಷ್ಟು ಹೆಚ್ಚು SAT ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಸಾಧ್ಯತೆಯಿರುತ್ತದೆ. ಬಡವರಿಗೆ, ಕರಿಯರಿಗೆ ಹೋಲಿಸಿದರೆ ಉಳ್ಳವರಿಗೆ, ಧನಿಕರಿಗೆ ಮತ್ತು ಬಿಳಿಯರಿಗೆ SAT ಅಷ್ಟೇ ಅಲ್ಲದೆ GRE, GMAT ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ನಿಚ್ಚಳ ಅವಕಾಶಗಳಿವೆ ಎಂದು ಸಮೀಕ್ಷೆ ಸ್ಪಷ್ಟಪಡಿಸಿದೆ. ಐತಿಹಾಸಿಕವಾಗಿ ತುಳಿತಕ್ಕೆ ಒಳಪಟ್ಟ ಅಫ್ರೋ ಅಮೆರಿಕನ್ರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಕಡಿಮೆ ಅಂಕ ಪಡೆಯುತ್ತಿರುವುದು ಕೂಡ ಈ ಸಮೀಕ್ಷೆಗಳಲ್ಲಿ ದೃಢಪಟ್ಟಿದೆ.

ಅಮೆರಿಕಾದಲ್ಲಿ ವರ್ಗ, ಪೋಷಕರ ಶಿಕ್ಷಣ, ವಿದ್ಯಾರ್ಥಿಗಳ ಬಾಲ್ಯ, ಅವರ ಅನುಭವಗಳು ಇಷ್ಟೆಲ್ಲಾ ಪ್ರಭಾವ ಬೀರುವುದಾದರೆ ಶ್ರೇಣೀಕೃತ ಜಾತಿ ವ್ಯವಸ್ಥೆ ಇರುವ, ತಾರತಮ್ಯ ತುಂಬಿ ತುಳುಕುತ್ತಿರುವ ಭಾರತದಲ್ಲಿ ಮೇಲಿನ ಅಂಶಗಳು ತುಂಬ ಆಳವಾದ ಪರಿಣಾಮವನ್ನೇ ಬೀರುವುದರಲ್ಲಿ ಅನುಮಾನವಿಲ್ಲ.

ಚಿಕಾಗೊ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ ಸ್ಕೂಲಿನಲ್ಲಿ ಪಡೆಯುವ ಅಂಕಗಳು ಅಷ್ಟಾಗಿ ಆದಾಯ ಮತ್ತು ವರ್ಣಗಳ ಅಂತರದಿಂದ ಪ್ರಭಾವಿತವಾಗಿರುವುದಿಲ್ಲ. ಬದಲಾಗಿ ಸ್ಕೂಲಿನಲ್ಲಿ ಪಡೆದ ಅಂಕಗಳು ಮುಂದೆ ಅವರ ವಿಶ್ವವಿದ್ಯಾಲಯದ ಸಾಧನೆಗಳ ಸೂಚಕವಾಗಿರುತ್ತವೆ. ಸ್ಕೂಲಿನಲ್ಲಿ ಒಳ್ಳೆಯ ಅಂಕಗಳನ್ನ ಪಡೆದವರು ಮುಂದೆ ಕಾಲೇಜಿನಲ್ಲಿ ಒಳ್ಳೆಯ ಸಾಮರ್ಥ್ಯ ಪ್ರದರ್ಶಿವುದು ಮತ್ತೆ ಮತ್ತೆ ಸಾಬಿತಾಗಿದೆ.

ಮಿಚಿಗನ್ ವಿಶ್ವವಿದ್ಯಾಲಯ ನಡೆಸಿದ ದೀರ್ಘ ಕಾಲಿಕ ಪ್ರಯೋಗದಿಂದ ಇನ್ನೊಂದು ಅಚ್ಚರಿಯ ವಿಷಯ ಸಾಬಿತಾಗಿದೆ. ಸಮಾಜದ ಅಂಚಿನಲ್ಲಿ ಬದುಕುವ, ತುಳಿತಕ್ಕೊಳಗಾದ ಸಮುದಾಯಗಳಿಂದ ಬಂದ ವಿದ್ಯಾರ್ಥಿಗಳು, ಸಕಾರಾತ್ಮಕ ಕ್ರಮಗಳಿಂದ ಪ್ರವೇಶ ಪಡೆದವರು ಕಾಲೇಜುಗಳಲ್ಲಿ ಮೇಲ್ವರ್ಗ. ಬಿಳಿಯರಿಗಿಂತ ಕಡಿಮೆ ಗ್ರೇಡ್ ತೆಗೆದರೂ ಅವರ ವೃತಿ ಸಾಧನೆಯಲ್ಲಿ ಬಿಳಿಯರಿಗೆ ಸರಿಸಮನಾಗಿ ನಿಲ್ಲಬಲ್ಲರೆಂಬುದು. ಶೋಷಿತ ಹಿನ್ನಲೆಯಿಂದ ಬಂದವರು ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಿಗೆ ಪ್ರವೇಶ ಪಡೆದ ಮೇಲೆ ಹೆಚ್ಚಿನ ಹುರುಪಿನಿಂದ, ಕೆಚ್ಚಿನಿಂದ, ದೃಢತೆಯಿಂದ ಓದಿ ದೊಡ್ಡ ಸಾಧನೆಯನ್ನೇ ಮಾಡುತ್ತಾರೆಂಬುದು. ಬಲು ಯಶಸ್ಸು ಕಾಣುತ್ತಾರೆಂಬುದು.

ಅನಿತಾಳ ಕೇಸನ್ನೆ ತೆಗೆದುಕೊಳ್ಳೋಣ. ಆಕೆ ತಮಿಳು ನಾಡಿನ ಬಡ ದಲಿತರ ಕುಟುಂಬದಲ್ಲಿ ಹುಟ್ಟಿದಳು. ಬಾಲ್ಯದಲ್ಲಿಯೇ ತನ್ನ ತಾಯಿಯನ್ನ ಕಳೆದುಕೊಂಡಳು. ತಂದೆ ಕೂಲಿ ಕಾರ್ಮಿಕ. ಸಮಾಜದಲ್ಲಿ ಅಂತರ್ಗತವಾಗಿರುವ ತಾರತಮ್ಯದ ನಡುವೆಯೂ ಆಕೆ ಸ್ಕೂಲಿನಲ್ಲಿ 1200ಕ್ಕೆ 1176 ಅಂಕ ತೆಗೆದಳು. ಅವಳು ರಾಜ್ಯದ ಟಾಪ್ 0.3%ರಲ್ಲಿ ಸ್ಥಾನ ಪಡೆದಳು. ನೀಟ್ ಪರೀಕ್ಷೆಯಿಲ್ಲದಿದ್ದರೆ ಆಕೆ ತಮಿಳು ನಾಡಿನ ಶ್ರೇಷ್ಠ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಳು. ಅವಳ ಸಮುದಾಯದ ಮೊದಲ ವೈದ್ಯೆಯಾಗುತ್ತಿದ್ದಳು. ಆದರೆ ನೀಟ್ ಪರೀಕ್ಷೆ ಹಾಗಾಗಲು ಬಿಡಲಿಲ್ಲ. ಅವಳಿಗೆ ನೀಟ್ ಪರೀಕ್ಷೆಯಲ್ಲಿ ಉತ್ತಿರ್ಣಳಾಗುವ ಸಾಮರ್ಥ್ಯವಿರಲಿಲ್ಲವೆ? ಅಥವಾ ಆಕೆಗೆ ಸರಿಯಾದ ಸಮಯಕ್ಕೆ ಸರಿಯಾದ ತರಬೇತಿ, exposure ಸಿಗಲಿಲ್ಲವೆ? ಅವಳ ಬಳಿ ಸಂಪನ್ಮೂಲಗಳಿದ್ದು, ಅವಕಾಶಗಳಿದ್ದಿದ್ದರೆ, ದುಬಾರಿ ಕೋಚಿಂಗ ಕೇಂದ್ರಗಳಲ್ಲಿ ತರಬೇತಿ ಪಡೆದಿದ್ದರೆ, ನೀಟ್ ಪರೀಕ್ಷೆಯಲ್ಲಿ ಮೊದಲಿಗನಾದವನನ್ನೇ ಮೀರಿಸುವಂತಹ ಅಂಕವನ್ನೇ ಆಕೆ ಗಳಿಸುತ್ತಿದ್ದಳು. ನೀಟ್ ಪರೀಕ್ಷೆ ಅವಳ ಕನಸುಗಳನ್ನಷ್ಟೇ ಕೊಲ್ಲದೆ ಇಡಿಯ ಸಮುದಾಯದ ಆಶಯಗಳನ್ನೇ ದಫಾನ್ ಮಾಡಿತ್ತು. ನೀಟ್ ಪರೀಕ್ಷೆಗೆ ಸಂಬಂಧಿತ ಆತ್ಮಹತ್ಯೆಗಳು ಆತಂಕದಿಂದಾಗದೆ, ಈ ಹಾಳು ಪರೀಕ್ಷೆ ಅವರ ಕನಸು, ಆಶಯಗಳಿಗೆ ಸಮಾಧಿ ಕಟ್ಟಿದ್ದರಿಂದಲೇ ಆಗಿವೆ. ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸದೆ ಆತ್ಮಹತ್ಯೆಗೆ ಶರಣಾದವರಲ್ಲಿ ಹೆಚ್ಚಿನವರು ಹಳ್ಳಿಗಾಡಿನ, ಶೋಷಿತ ವರ್ಗ/ ಜಾತಿಯವರೇ ಆಗಿದ್ದಾರೆ ಎಂಬುದು ನಾವು ಗಮನಿಸಬೇಕಾದ ಸಂಗತಿ.

ಇಂತಹ ಟೊಳ್ಳು ಪರೀಕ್ಷೆಗಳು ವಿದ್ಯಾರ್ಥಿಗಳ ನಿಜವಾದ ಪ್ರತಿಭೆಯನ್ನ ಎಂದು ಗುರುತಿಸಲಾರವು. ಒಳ್ಳೆಯ ತರಬೇತಿ ಸರಿಯಾದ ಸಮಯಕ್ಕೆ ಸಿಕ್ಕಿದರೆ ಈ ಪ್ರವೇಶ ಪರೀಕ್ಷೆಗಳನ್ನ ಯಾರು ಬೇಕಾದರೂ ಕ್ಲಿಯರ್ ಮಾಡಬಹುದು. ಈ ಪರೀಕ್ಷೆಯಲ್ಲಿನ ಅಂಕಗಳು ನೇರವಾಗಿ ನುರಿತವರಿಂದ ತರಬೇತಿ ಪಡೆದ ಸಮಯದ (training hours) ಮೇಲೆಯೇ ಅವಲಂಬಿತವಾಗಿದೆ. ಭಾರತದಲ್ಲಿನ ನುರಿತ ತರಬೇತುದಾರರಿಂದ ತರಬೇತಿ ಪಡೆಯಬೇಕೆಂದರೆ ಕನಿಷ್ಠ 75000/- ಫೀ ಕಟ್ಟಬೇಕಾಗುತ್ತದೆ. ಕೋಚಿಂಗ್ ಸೆಂಟರ್ಗಳು ಸಾಮಾನ್ಯವಾಗಿ ಮಹಾನಗರಗಳಲ್ಲೇ ಇರುತ್ತವೆ. ಶೇಕಡಾ 95 IITಗೆ ಪ್ರವೇಶ ಪಡೆಯುವವರು ಪ್ರತಿಷ್ಥಿತ ಖಾಸಗಿ ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದವರೇ ಆಗಿರುತ್ತಾರೆಂದು 2005 ಸಮೀಕ್ಷೆ ತಿಳಿಸಿದೆ. IIT ಸೇರುವ ದೇಶದ ಪ್ರತಿ ಆರು ವಿದ್ಯಾರ್ಥಿಗಳಲ್ಲಿ ಒಬ್ಬ ಕೋಟದ ಬನ್ಸಾಲ್ ಟುಟೋರಿಯಲ್ಸ್ ಗೆ ಸೇರಿದವನೇ ಆಗಿರುತ್ತಾನೆ. ಟುಟೋರಿಯಲ್ಸ್ ಗಳು ಒಂದರಿಂದ ಎರಡು ಲಕ್ಷ ಪಡೆಯುತ್ತವೆ. ಹೀಗೆ ದುಡ್ಡು ಕೊಟ್ಟು ಉತ್ತಮ ತರಬೇತಿ ಪಡೆಯುವವರು ಧನಿಕರ ಮನೆಯವರೇ ಆಗಿರುತ್ತಾರೆ. ಇಷ್ಟೆಲ್ಲಾ ಹಣ ಹಳ್ಳಿಯ ಬಡ ದಲಿತ ಅಥವಾ ಬಡವ ಎಲ್ಲಿಂದ ಹೊಂದಿಸಲು ಸಾಧ್ಯ? ಬಡವ ಬಿಡಿ ದೇಶದ ಬಹುಪಾಲು ಜನರಿಗೆ ಈ ತರಬೇತಿ ಕೇಂದ್ರಗಳಲ್ಲಿ ಮಕ್ಕಳಿಗೆ ತರಬೇತಿ ಕೊಡಿಸುವುದು ಒಂದು ಕನಸೇ ಆಗಿದೆ. ಪರಿಣಾಮ- IITಗೆ ಸೇರುವ ವಿದ್ಯಾರ್ಥಿಗಳಲ್ಲಿ ಶೇಕಡಾ 2.86ರಷ್ಟು ವಿದ್ಯಾರ್ಥಿಗಳು ಮಾತ್ರ ಬಡ/ಹಳ್ಳಿ/ ಅಶಿಕ್ಷಿತ ಕುಟುಂಬದಿಂದ ಬಂದವರಾಗಿರುತ್ತಾರೆ!

ಅಮೇರಿಕಾದಲ್ಲಿ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯಗಳೆಲ್ಲ ಶೋಷಿತ ವರ್ಗದಿಂದ ಬಂದವರಿಗೆ ಪ್ರವೇಶ ಪರೀಕ್ಷೆ ನಡೆಸದೆ ಅವರ ಸ್ಕೂಲ್ ಅಂಕಗಳ ಮೇಲೆ ಪ್ರವೇಶ ನೀಡುತ್ತಿವೆ. ಶೇಕಡ 90ರಷ್ಟು ರಾಷ್ಟ್ರಪತಿಗಳನ್ನ, ರಾಯಭಾರಿಗಳನ್ನ, ನಾಲ್ಕು ವಿಶ್ವ ಬ್ಯಾಂಕ್ ಅಧ್ಯಕ್ಷರನ್ನ ಕೊಟ್ಟಿರುವ ಫ್ರಾನ್ಸ್ ನ ವಿಶಿಷ್ಟ ಪೋ ಸಂಸ್ಥೆ ಸಂಪೂರ್ಣವಾಗಿ ಪ್ರವೇಶ ಪರೀಕ್ಷೆ ತೆಗೆದು ಹಾಕಿದೆ. ಅದೇ ರೀತಿ ಐಎಎಸ್ ಅಧಿಕಾರಿಗಳಿಗೆ ತರಬೇತಿ ನಿಡುವ ಲಾಲ್ ಬಹುದ್ದುರು ಶಾಸ್ತ್ರಿ ಸಂಸ್ಥೆಯು ಸಂಶೋಧನೆಗಳನ್ನ ಆಧಾರಿಸಿ ಪ್ರವೇಶ ಪರೀಕ್ಷೆಗಳನ್ನ ಕೈಬಿಟ್ಟಿದೆ. ದೇಶದ ಎಲ್ಲಾ ವಿದ್ಯಾರ್ಥಿಗಳ ಮೇಲೆ ಏಕ ರೂಪದ ನೀಟ್ ಪರೀಕ್ಷೆ ಹೇರಿದ ಮೋದಿ ಸರ್ಕಾರದ ನಿರ್ಧಾರ ನಮ್ಮಲಿನ ಗುಣಮಟ್ಟ ಹೆಚ್ಚಿಸುವುದಿಲ್ಲ, ಇಂತಹ ರಕ್ಕಸ ಪರೀಕ್ಷೆಗಳು ಯಾವುದೇ ನಂಬಲರ್ಹ ಸಂಶೋಧನೆಗಳ ಪರಿಣಾಮವೂ ಅಲ್ಲ. ಪ್ರವೇಶ ಪರೀಕ್ಷೆಗಳ ಉದ್ದೇಶ ಶೋಷಿತರನ್ನ, ದಲಿತರನ್ನ, ಹಳ್ಳಿಗರನ್ನ, ಬಡವರನ್ನ ವೈದ್ಯಕೀಯ ಶಿಕ್ಷಣದಿಂದ ಹೊರಗಿಡುವುದೇ ಆಗಿದೆ. ಜಗತ್ತಿನ ಎಲ್ಲ ಸಂಶೋಧನೆಗಳ ಪ್ರವೇಶ ಪರೀಕ್ಷೆಗಳು ಯಾವುದೇ ಗುಣಮಟ್ಟವನ್ನ ಹೆಚ್ಚಿಸಲಾರವೆಂದು ಸೂಚಿಸುವಾಗ, ನೀಟ್ ಅನ್ನು ತೆಗೆದು ಹಾಕಬಾರದೇಕೆ? ಇಲ್ಲಿರುವ ಪರೀಕ್ಷಾ ರಾಜಕೀಯ ಕಣ್ಣಿಗೆ ರಾಚುವಂತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ನೀಟ್ ಪರೀಕ್ಷೆ ದೇಶ ಸಹಕಾರಿ ಸಂಯುಕ್ತತೆಯ (co-operative federalism) ವಿರೋಧವಾಗಿಯೇ ಇದೆ. ದ್ರಾವಿಡ ಅಸ್ಮಿತೆಯನ್ನ ಪ್ರಬಲವಾಗಿ ನಂಬಿ ಅಧಿಕಾರ ನಡೆಸುತ್ತಿರುವ ತಮಿಳುನಾಡು ಸರ್ಕಾರಗಳು ದೇಶದಲ್ಲೇ ಅತ್ತ್ಯುತ್ತಮ ಅರೋಗ್ಯ ಸೌಕರ್ಯ ಜನರಿಗೆ ದೊರಕುವಂತೆ ನೋಡಿಕೊಂಡಿದೆ. ಜನಸಂಖ್ಯೆ- ವೈದ್ಯರ ಅನುಪಾತದಲ್ಲೂ ತಮಿಳುನಾಡು ಬೇರೆಯ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಮುಂದಿದೆ. ರಾಜ್ಯದ ಎಲ್ಲೆಡೆ ವೈದ್ಯಕೀಯ ಕಾಲೇಜುಗಳನ್ನ ತೆರೆದ ಪರಿಣಾಮ ವೈದ್ಯರು ರಾಜ್ಯದ ಎಲ್ಲೆಡೆ ಸಮನಾಗಿ ಹರಡಿಕೊಂಡಿದ್ದಾರೆ ಕೂಡ. ರಾಜ್ಯ ಸರ್ಕಾರದ ಸಕಾಲಿಕ ಹಸ್ತಕ್ಷೇಪದಿಂದ ಪ್ರವೇಶ ಪರೀಕ್ಷೆಗಳು ರದ್ದಾಗಿವೆ. ಜಾತಿ/ಸಮತಲ ಮೀಸಲಾತಿಗಳಿಂದ ಎಲ್ಲಾ ಸಮುದಯದವರು ವೈದ್ಯಕೀಯ ಶಿಕ್ಷಣ ಪಡೆಯುವಂತಾಗಿದೆ. ಚೆನ್ನೈ ಇಂದು ದೇಶದ ಮೆಡಿಕಲ್ ಟೂರಿಸಂನ ತಾಣವು ಆಗಿದೆ.
ವಿಷಯ ಹೀಗಿರುವಾಗ, ದೇಶದ ಬೇರೆ ರಾಜ್ಯಗಳು ಅಸೂಹೆ ಪಡುವಂತಹ ಸಾಧನೆ ತಮಿಳುನಾಡು ಮಾಡಿರುವಾಗ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು, ಯಶಸ್ವಿ ಮಾದರಿಯನ್ನ ತೊರೆದು ತಪ್ಪು ಹಾದಿ ಹಿಡಿಯುವುದಾದರು ಏತಕ್ಕೆ? ನಿಜವಾಗಲು ಜನರ ಸಬಲೀಕರಣ, ಸಮಾನ ಶಿಕ್ಷಣ ಕೇಂದ್ರ ಸರ್ಕಾರದ ಕನಸಾದರೆ, ನೀಟ್ ಪರೀಕ್ಷೆ ತಕ್ಷಣೆವೆ ಕೈಬಿಟ್ಟು ತಮಿಳುನಾಡಿನ ಮಾದರಿಯನ್ನೇ ಎಲ್ಲರು ಅನುಸರಿಸಬೇಕೆಂದು ಆದೇಶ ಹೊರಡಿಸಬೇಕು. ಹಾಗಾದೀತೆ?

ಭಾರತ ವೈವಿದ್ಯಮಯ ರಾಷ್ಟ್ರ. ಇಲ್ಲಿನ ರಾಜ್ಯಗಳ ಅಭಿವೃದ್ದಿ, ಶಿಕ್ಷಣ ಮೂಲ ಸೌಕರ್ಯಗಳಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ತಮಿಳನಾಡಿನಲ್ಲಿ ಜನಸಂಖ್ಯೆ ಗಣನೆ ತೆಗೆದುಕೊಂಡರೆ ಜಾರ್ಕಂಡ ರಾಜ್ಯಕ್ಕಿಂತ 32ಪಟ್ಟು ಅಧಿಕ ವೈದ್ಯರಿದ್ದಾರೆ. ಇಂತಹ ವ್ಯತ್ಯಾಸಗಳಿರುವ ರಾಜ್ಯಗಳಿಗೆ ಒಂದೇ ತರಹದ ಪರೀಕ್ಷೆ ಹೇರುವುದಾದರು ಹೇಗೆ? ನಮ್ಮಂಥಹ ವೈವಿದ್ಯಮಯ ದೇಶಕ್ಕೆ ಒಂದೇ ತರಹದ ಪ್ರವೇಶ ಪ್ರಕ್ರಿಯೆಯಾದರು ಯಾಕೆ ಬೇಕು?

ಅರೋಗ್ಯ ರಾಜ್ಯದ ಸುಪರ್ಧಿಗೆ ಒಳಪಟ್ಟಿರುವುದರಿಂದ, ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವುದರಿಂದ (concurrent list), ತಮಿಳುನಾಡು ವಿಧಾನಸಭೆಯಲ್ಲಿ ಇತ್ತೀಚಿಗೆ ಅಂಗೀಕೃತವಾದ ಹೊಸ ಕಾನೂನನ್ನ ದೇಶದ ರಾಷ್ಟ್ರಪತಿಗಳು ಪ್ರಶಂಸಿಸಿ, ಸಮ್ಮತಿಸಬೇಕು. ಇಷ್ಟಾದ್ರೂ ನೀಟ್ ಪರೀಕ್ಷೆಗಳನ್ನ ತಮಿಳುನಾಡಿನಲ್ಲಿ ಮುಂದುವರೆಸಿದರೆ ಒಂದು ಕಡೆ ಅದು ವಿದ್ಯಾರ್ಥಿಗಳಿಗೆ ಅನ್ಯಾಯವಾದರೆ ಇನ್ನೊಂದೆಡೆ ಅದು ದೇಶದ ಫೆಡರಲಿಸಂಗೆ ಮಾಡಿದ ಅವಮಾನವಾಗುತ್ತದೆ.

ಮೂಲ: ಸೆಲ್ವಂ ಧರಣಿಧರನ್ (ಆಕ್ಸ್ಫರ್ಡ್ ವಿಶ್ವಾವಿದ್ಯಾಲಯ/ ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸೈಸ್ನ್ಸ್ ಹಳೆಯ ವಿದ್ಯಾರ್ಥಿ)
ಕನ್ನಡಕ್ಕೆ
: ಹರೀಶ್ ಗಂಗಾಧರ್

Related Articles

ಇತ್ತೀಚಿನ ಸುದ್ದಿಗಳು