Saturday, June 29, 2024

ಸತ್ಯ | ನ್ಯಾಯ |ಧರ್ಮ

ಸಿದ್ದರಾಮೋತ್ಸವಕ್ಕೆ ದಾವಣಗೆರೆ ಸಜ್ಜು

ದಾವಣಗೆರೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75 ನೇ ಜನ್ಮದಿನವನ್ನು ಸಿದ್ದರಾಮೋತ್ಸವ (ಅಮೃತ ಮಹೋತ್ಸವ)ವಾಗಿ ಆಚರಿಸಲು ದಾವಣಗೆರೆಯನ್ನು ಸಜ್ಜುಗೊಳಿಸಲಾಗಿದೆ.

ನಗರದ ಕುಂದವಾಡದ ಬಳಿ ರಾಷ್ಟಿಯ ಹೆದ್ದಾರಿ ಪಕ್ಕದಲ್ಲಿರುವ ಶಾಮನೂರು ಪ್ಯಾಲೆಸ್ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ವೇದಿಕೆಯ ಮುಂಭಾಗದಲ್ಲಿ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಸೋನಿಯಾ ಗಾಂಧಿಯ ಬೃಹತ್ ಕಟೌಟ್‌ಗಳು ಮತ್ತು ಬ್ಯಾನರ್‌ಗಳು ಸ್ವಾಗತ ಕೋರುತ್ತಿವೆ. ವಿವಿಧೆಡೆಯಿಂದ ಬರುವ ಪಕ್ಷದ ಕಾರ್ಯಕರ್ತರಿಗೆ ಬೆಳಿಗ್ಗೆ ತಿಂಡಿಯ ವ್ಯವಸ್ಥೆ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮವನ್ನು ವೀಕ್ಷಿಸಲು ಅಂದಾಜು 4 ಲಕ್ಷ ಆಸನದ ವ್ಯವಸ್ಥೆ ಸಿದ್ಧಗೊಳಿಸಲಾಗಿದೆ. ಈ ಕಾರ್ಯಕ್ರಮಕ್ಕೆ 2 ಸಾವಿರಕ್ಕೂ ಹೆಚ್ಚು ಪೋಲಿಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಅಂದಾಜು 300 ಕ್ಕೂ ಹೆಚ್ಚು ಗಣ್ಯರು ಆಸೀನರಾಗುವಂತೆ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದರೂ, ರಾಹುಲ್ ಗಾಂಧಿ ಅವರು ಆಗಮಿಸುವುದರಿಂದ 50 ಜನ ಮುಖಂಡರಿಗೆ ಅವಕಾಶ ನೀಡಲಾಗುವುದು ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.

ಗಣ್ಯರ ವಾಹನಗಳಿಗೆ ನೇರವಾಗಿ ವೇದಿಕೆಯ ಬಳಿಯೇ ತೆರಳುವ ಅವಕಾಶವಿದ್ದು, ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ವೇದಿಕೆಯಿಂದ ಒಂದು ಕಿ.ಮೀ. ದೂರದಲ್ಲಿ ಹೆದ್ದಾರಿಯ ಎರಡೂ ಬದಿಯ ಜಮೀನುಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ 10 ಗಂಟೆಯಿಂದ ಸಂಗೀತ ನಿರ್ದೇಶಕ ಹಂಸಲೇಖ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವಿದ್ದು, 12 ಗಂಟೆಗೆ ವೇದಿಕೆಯ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಸೇರಿ ಪ್ರಮುಖ ಗಣ್ಯರು ಮಾತನಾಡಲಿದ್ದು, ಮಧ್ಯಾಹ್ನ 3 ಗಂಟೆ ಅಷ್ಟರಲ್ಲಿ ಕಾರ್ಯಕ್ರಮ ಮುಕ್ತಾಯಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು