Thursday, July 4, 2024

ಸತ್ಯ | ನ್ಯಾಯ |ಧರ್ಮ

ಛತ್ತೀಸ್‌ಗಢ: ಮುಂದುವರೆದ ಎನ್‌ಕೌಂಟರ್‌ ಸರಣಿ, 138ಕ್ಕೆ ತಲುಪಿದ ಹತ ಮಾವೋವಾದಿಗಳ ಸಂಖ್ಯೆ

ರಾರುಪುರ್: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಐವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾವೋವಾದಿ ವಿರೋಧಿ ಕಾರ್ಯಾಚರಣೆಯ ಭಾಗವಾಗಿ ವಿವಿಧ ಭದ್ರತಾ ಪಡೆಗಳ ಜಂಟಿ ತಂಡವು ಅರಣ್ಯ ಪ್ರದೇಶದಲ್ಲಿ ಶೋಧ ನಡೆಸಿತು. ಆ ವೇಳೆ ಅಬುಜ್ಮದ್ ಅರಣ್ಯದಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‌ಕೌಂಟರ್‌ನಲ್ಲಿ ಇದುವರೆಗೆ ಐವರು ಮಾವೋವಾದಿಗಳು ಹತರಾಗಿದ್ದಾರೆ. ಆ ಪ್ರದೇಶದಲ್ಲಿ ಇನ್ನೂ ಶೋಧ ಕಾರ್ಯ ನಡೆಯುತ್ತಿದೆ.

“ಹೆಚ್ಚಿನ ಮಾಹಿತಿಗಾಗಿ ಎದುರು ನೋಡುತ್ತಿದ್ದೇವೆ. ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ” ಎಂದು ಅವರು ತಿಳಿಸಿದ್ದಾರೆ. ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ, ಗಡಿ ಭದ್ರತಾ ಪಡೆ ಮತ್ತು ವಿವಿಧ ಜಿಲ್ಲೆಗಳ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಒಳಗೊಂಡ ಕಾರ್ಯಾಚರಣೆಯನ್ನು ಭಾನುವಾರ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷ ಇದುವರೆಗೆ ರಾಜ್ಯದಲ್ಲಿ ಹತರಾದ ಮಾವೋವಾದಿಗಳ ಸಂಖ್ಯೆ 138ಕ್ಕೆ ತಲುಪಿದೆ. ನಾರಾಯಣಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗದಲ್ಲಿ 136 ಮಾವೋವಾದಿಗಳು ಹತರಾಗಿದ್ದಾರೆ.

ಜೂನ್ 15ರಂದು ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಎಂಟು ಮಾವೋವಾದಿಗಳು ಮತ್ತು ಒಬ್ಬ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಜವಾನ ಹತರಾಗಿದ್ದರು. ಜೂನ್ 5ರಂದು ನಾರಾಯಣಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆರು ಜನರು ಮತ್ತು ಮೇ 23ರಂದು ನಾರಾಯಣಪುರ-ಬಿಜಾಪುರ ಗಡಿಯಲ್ಲಿ ಏಳು ಜನರು ಸಾವನ್ನಪ್ಪಿದ್ದರು. ಮೇ 10ರಂದು ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕನಿಷ್ಠ 12 ಮಾವೋವಾದಿಗಳು ಸಾವನ್ನಪ್ಪಿದ್ದರೆ, ಏಪ್ರಿಲ್ 30ರಂದು ನಾರಾಯಣಪುರ ಮತ್ತು ಕಂಕೇರ್ ಜಿಲ್ಲೆಗಳ ಗಡಿಯಲ್ಲಿ ಮೂವರು ಮಹಿಳೆಯರು ಸೇರಿದಂತೆ 10 ಜನರು ಪ್ರಾಣ ಕಳೆದುಕೊಂಡರು. ಏಪ್ರಿಲ್ 16ರಂದು ಕಂಕೇರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು 29 ಮಾವೋವಾದಿಗಳು ಹತರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು