Tuesday, July 16, 2024

ಸತ್ಯ | ನ್ಯಾಯ |ಧರ್ಮ

ಬಿಹಾರ : ವಿಐಪಿ ಪಕ್ಷದ ಮುಖ್ಯಸ್ಥ ಮುಖೇಶ್ ಸಹಾನಿ ತಂದೆಯ ಬರ್ಬರ *ತ್ಯೆ

ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿ ಅವರ ತಂದೆ ಬಿಹಾರದ ದರ್ಬಂಗಾ ಜಿಲ್ಲೆಯ ಅವರ ಪೂರ್ವಜರ ಮನೆಯಲ್ಲಿ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಇಂದು ಬೆಳಗ್ಗೆ ಹಾಸಿಗೆಯ ಮೇಲೆ ಜಿತನ್ ಸಹಾನಿ ಅವರ ಛಿದ್ರಗೊಂಡ ಶವ ಪತ್ತೆಯಾಗಿದೆ.

ಹಿರಿಯ ಪೊಲೀಸ್ ಅಧಿಕಾರಿ ಜಗನ್ನಾಥ್ ರೆಡ್ಡಿ ಈ ಘಟನೆಯನ್ನು ದೃಢಪಡಿಸಿದ್ದಾರೆ. ಈಗಾಗಲೇ ಪೊಲೀಸ್ ತಂಡವು ಮೃತರಾದ ಜಿತನ್ ಸಹಾನಿ ಮನೆಯಲ್ಲಿ ಬೀಡು ಬಿಟ್ಟಿದೆ. ಬರ್ಬರವಾಗಿ ಹತ್ಯೆ ಮಾಡಿದ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ ಆತಂಕವನ್ನು ಉಂಟುಮಾಡಿದೆ.

ಬಿಹಾರ ಸರ್ಕಾರದ ಮಾಜಿ ಸಚಿವ, ಮುಖೇಶ್ ಸಹಾನಿ ವಿಕಾಸಶೀಲ್ ಇನ್ಸಾನ್ ಪಾರ್ಟಿಯನ್ನು ಮುನ್ನಡೆಸುತ್ತಿದ್ದಾರೆ. ಇದು ಬಿಹಾರದ OBC ಸಮುದಾಯದಲ್ಲಿ ಬಲವಾದ ಬೆಂಬಲವನ್ನು ಹೊಂದಿದೆ. ವಿಐಪಿ ಪಕ್ಷ ಪ್ರಸ್ತುತ INDIA ವಿರೋಧ ಪಕ್ಷಗಳಲ್ಲಿ ಗುರುತಿಸಿಕೊಂಡು, ಬಿಹಾರದ ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಕಳ್ಳತನದ ಯೋಜನೆಯೊಂದಿಗೆ ಸಹಾನಿಗಳ ಮನೆಗೆ ನುಗ್ಗಿ ಜಿತನ್ ಸಹಾನಿಯನ್ನು ಕೊಂದಿರಬಹುದು ಎಂದು ಪ್ರಾಥಮಿಕ ತನಿಖೆ ಸೂಚಿಸುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮನೀಶ್ ಚಂದ್ರ ಚೌಧರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಘಾತಕಾರಿ ಅಪರಾಧದ ತನಿಖೆಗಾಗಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿ ರೆಡ್ಡಿ ಹೇಳಿದ್ದಾರೆ.

ಜಿತನ್ ಸಹಾನಿ ಅವರ ಮನೆಯಲ್ಲಿ ನಡೆದ ಹತ್ಯೆಯ ಬಗ್ಗೆ ಪ್ರಮುಖ ಪ್ರತಿಪಕ್ಷ ಆರ್‌ಜೆಡಿ ನಾಯಕ ನಿತೀಶ್ ಕುಮಾರ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆ ರಾಜ್ಯವನ್ನು ಬೆಚ್ಚಿ ಬೀಳಿಸಿದೆ ಎಂದು ಆರ್‌ಜೆಡಿ ವಕ್ತಾರ ಶಕ್ತಿ ಯಾದವ್ ಹೇಳಿದ್ದಾರೆ. “ಬಿಹಾರದಲ್ಲಿ ಏನಾಗುತ್ತಿದೆ? ಕೊಲೆ ಸುದ್ದಿ ಕೇಳದ ಒಂದು ದಿನವೂ ಇಲ್ಲಿಲ್ಲ. ಬುದ್ದಿಹೀನ ಸರಕಾರ ಅಧಿಕಾರದಲ್ಲಿದೆ. ವ್ಯವಸ್ಥೆ ಕುಸಿದಿದೆ” ಎಂದು ಅವರು ಹೇಳಿದರು. ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಮುಕೇಶ್ ಸಹಾನಿಗೆ ನೀಡಲಿ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು