Saturday, August 17, 2024

ಸತ್ಯ | ನ್ಯಾಯ |ಧರ್ಮ

ವಾಲ್ಮೀಕಿ ನಿಗಮದ ಹಗರಣದ ತನಿಖೆ ನೆಪದಲ್ಲಿ “ಇಡಿ” ಅಧಿಕಾರ ದುರ್ಬಳಕೆ : ಸ್ಪೋಟಕ ಮಾಹಿತಿ ಹೊರಹಾಕಿದ ಸಚಿವ ಕೃಷ್ಣಬೈರೇಗೌಡ

  • ವಾಲ್ಮೀಕಿ ನಿಗಮ ಹಗರಣದಲ್ಲಿ ‘ಇಡಿ’ ಗೆ ತಪ್ಪಿತಸ್ಥರ ಹುಡುಕುವ ಉದ್ದೇಶ ಇಲ್ಲ
  • ರಾಜ್ಯ ಕಾಂಗ್ರೆಸ್ ರ್ಕಾರವನ್ನು ಬುಡಮೇಲು ಮಾಡುವುದೇ ಇಡಿ ಉದ್ದೇಶ
  • ಬಿಜೆಪಿ ಅಧಿಕಾರದಲ್ಲಿರುವ ಕಾಲದಲ್ಲಿ ಸತ್ಯ-ಅಂಕಿಅಂಶ ಲೆಕ್ಕಕ್ಕಿಲ್ಲದಂತಾಗಿದೆ.
  • ವಿಪಕ್ಷದಲ್ಲಿದ್ದರೆ ಕೇಸ್, ಬಿಜೆಪಿ ಸೇರಿದ ಕೂಡಲೇ ಎಲ್ಲವೂ ಖುಲಾಸೆ..!

ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದೆ. ಆದರೆ, ಇಂತಹ ಗೊಡ್ಡು ಹೆದರಿಕೆ-ಬೆದರಿಕೆಗಳಿಗೆ ಬಗ್ಗುವ ಮಾತೇ ಇಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಗುರುವಾರ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಛೀಮಾರಿ ಹಾಕಿದ ಅವರು,” ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ವಿಚಾರಣೆಗೊಳಪಟ್ಟವರ ಮೇಲೆ ದಬಾವಣೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಉನ್ನತ ಮಟ್ಟದಲ್ಲಿರುವವರೂ ಸಹ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಆರೋಪಿಸಿದರು.

ಹಗರಣದಲ್ಲಿ ಸಿಎಂ-ಡಿಸಿಎಂ ಸಹ ಭಾಗಿಯಾಗಿದ್ದಾರೆ ಎಂದು ತಪ್ಪೊಪ್ಪಿಗೆ ನೀಡಿ, ಇಲ್ಲದಿದ್ದರೆ ನಿಮಗೆ ಇಡಿ ಪವರ್ ಗೊತ್ತಿಲ್ಲ. ಆಮೇಲೆ ನೀವು ಕಷ್ಟಕ್ಕೆ ಸಿಲುಕುತ್ತೀರಿ ಎಂದು ವಿಚಾರಣೆ ವೇಳೆ ಹೆದರಿಸುವ ಮೂಲಕ ಇಡಿ ಅಧಿಕಾರಿಗಳು ತನಿಖೆಯನ್ನೇ ತಪ್ಪುದಾರಿಗೆ ಕೊಂಡೊಯ್ಯುತ್ತಿದ್ದಾರೆ. ಇಡಿ ಅಧಿಕಾರಿಗಳ ಜೊತೆ ರಾಜಿ ಸಂಧಾನ ಮಾಡಿಕೊಂಡು ಅವರು ಹೇಳಿದ್ದನ್ನು ಕೇಳಿಕೊಂಡು ಇರುವವರಿಗೆ ಅಭಯ ನೀಡುತ್ತಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾಯಿತಗೊಂಡಿರುವ ಸರ್ಕಾರವನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.

ವಿಪಕ್ಷದಲ್ಲಿದೆ ಕೇಸು, ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆಯ ಚೀಟಿ
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಕಳೆದ 10 ವರ್ಷದಲ್ಲಿ ಇಡಿ ರಾಜಕೀಯ ಅಸ್ತ್ರವಾಗಿದೆ. ಬಿಜೆಪಿಗೆ ಎಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಇಡಿ-ಐಟಿ ಬಳಸಿಕೊಂಡು ಆಡಳಿತ ಪಕ್ಷಗಳ ಮೇಲೆ ದಾಳಿ ಮಾಡುವುದು ವಾಡಿಕೆಯಾಗಿಬಿಟ್ಟಿದೆ. ಬಿಜೆಪಿಯ ಇಂತಹ ನೀಚ ನಡೆಗಳಿಗೆ ಜಾರ್ಖಂಡ್, ಪಶ್ಚಿಮ ಬಂಗಾಳ, ದೆಹಲಿ, ತಮಿಳುನಾಡು, ಕೇರಳ, ಆಂದ್ರಪ್ರದೇಶ ಮಹಾರಾಷ್ಟ್ರದ ಸೇರಿದಂತೆ ಸಾಕಷ್ಟು ಉದಾಹರಣೆಗಳಿದ್ದು, ಪಟ್ಟಿ ಇನ್ನೂ ದೊಡ್ಡದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಲೇವಡಿ ಮಾಡಿದರು.

ಕೆಲವು ಪ್ರತಿಷ್ಠಿತ ಸುದ್ದಿಸಂಸ್ಥೆಗಳು ಸಂಶೋಧನಾ ಸಂಸ್ಥೆಗಳು ಈ ಬಗ್ಗೆ ಅಧ್ಯಯನ ಮಾಡಿವೆ. 2014ರಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ದೇಶದಲ್ಲಿ ಇಡಿ ದಾಖಲಿಸುವ ಪ್ರಕರಣಗಳ ಸಂಖ್ಯೆ ಶೇ.400 ರಷ್ಟು ಹೆಚ್ಚಾಗಿದೆ. ಅದರಲ್ಲಿ ಶೇ.95 ರಷ್ಟು ಪ್ರಕರಣಗಳು ವಿಪಕ್ಷಗಳ ವಿರುದ್ಧವಾಗಿದೆ. ಶೇ.5 ರಷ್ಟು ಮಾತ್ರ ಬಿಜೆಪಿ ಅಥವಾ ಮಿತ್ರ ಪಕ್ಷಗಳ ಮೇಲೆ ಗುರಿಯಾಗಿದೆ. ಈ ಅಂಕಿಅಂಶಗಳೆಲ್ಲವೂ ಬಿಜೆಪಿ ವಾಷಿಂಗ್ ಮೆಷಿಂಗ್ ಪಕ್ಷ ಎಂಬುದನ್ನು ಸಾಬೀತುಪಡಿಸುತ್ತಿವೆ. ವಿಪಕ್ಷದಲ್ಲಿದೆ ಕೇಸು, ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆಯ ಚೀಟಿ ಎಂಬುದನ್ನು ಒತ್ತಿ ಹೇಳುತ್ತಿವೆ. ಇದಕ್ಕೆ ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಉದಾಹರಣೆಗಳಿವೆ ಎಂದು ಅವರು ಅಂಕಿಅಂಶಗಳನ್ನು ಮುಂದಿಟ್ಟರು.

ಮುಂದುವರೆದು, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಈ ದುರಿತ ಕಾಲದಲ್ಲಿ ಸತ್ಯ ಮತ್ತು ನಿಖರ ಅಂಕಿಅಂಶಗಳು ಲೆಕ್ಕಕ್ಕಿಲ್ಲದಂತಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ.53 ರಷ್ಟು ಪ್ರಕರಣಗಳು ಮಾತ್ರ ವಿಪಕ್ಷ ನಾಯಕರ ಮೇಲೆ ದಾಖಲಾಗಿತ್ತು. ಶೇ.47 ರಷ್ಟು ಪ್ರಕರಣಗಳು ಸ್ವತಃ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ನಾಯಕರ ಮೇಲೆ ದಾಖಲಾಗಿದ್ದವು. ಆದ್ರೆ ಇಂದಿನ ಸ್ಥಿತಿ ಏನು? ಎಂದು ಪತ್ರಕರ್ತರ ಎದುರೇ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನೆಗನ್ನು ಮುಂದಿಟ್ಟರು.

ಬಿಜೆಪಿ ಹಗರಣಗಳ ಬಗ್ಗೆ ಇಡಿ ತನಿಖೆ ಏಕಿಲ್ಲ?
ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಸಾಕಷ್ಟು ಹಗರಣಗಳು ನಡೆದಿವೆ. ಕೊರೋನಾ ಸಂದರ್ಭದಲ್ಲಿ ಹೆಣದ ಮೇಲೂ ಕಾಸು ಮಾಡಿದ ಆರೋಪ ಬಿಜೆಪಿ ಮೇಲೆ ಇದೆ. ಆದರೆ, ಜಾರಿ ನಿರ್ದೇಶನಾಲಯ ಈ ಬಗ್ಗೆ ಏಕೆ ತನಿಖೆ ನಡೆಸುವುದಿಲ್ಲ ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.

ಈ ಬಗ್ಗೆಯೂ ಗಮನ ಸೆಳೆದ ಅವರು, ” ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದಲ್ಲಿ 46 ಕೋಟಿ ರೂಪಾಯಿ ಲೂಟಿಯಾಗಿದೆ. ಬಿಜೆಪಿಯ ಮಾಜಿ ಎಂಎಲ್‌ಸಿ ಹಾಗೂ ಮಾಜಿ ಎಂಪಿ ಅಭ್ಯರ್ಥಿಯೊಬ್ಬರ ಬ್ಯಾಂಕ್ ಖಾತೆಗೆ 3 ಕೋಟಿ ರೂಪಾಯಿ ಹೋಗಿದೆ. ಈ ಪ್ರಕರಣವನ್ನು ಏಕೆ ಇಡಿ ತನಿಖೆ ಮಾಡುತ್ತಿಲ್ಲ, ಇದು ಹಗರಣದ ಲಾಭಾಂಶ ಅಲ್ಪ, ಆ ಲೂಟಿಯ ಹಣ ಯಾವ ಎಲೆಕ್ಷನ್‌ಗೆ ಹೋಗಿದೆ ಅಂತ ಇಡಿ ಏಕೆ ತನಿಖೆ ನಡೆಸುತ್ತಿಲ್ಲ. ಭೋವಿ ನಿಗಮ, ತಾಂಡ ಅಭಿವೃದ್ಧಿ ನಿಗಮದಲ್ಲೂ ಕೋಟಿ ಕೋಟಿ ಲೂಟಿಯಾಗಿದೆ ಅಲ್ಲಿ ಏಕೆ ತನಿಖೆ ಇಲ್ಲ ಎಂದು ಕುಟುಕಿದರು.

ಮುಂದುವರೆದು, ವಾಲ್ಮೀಕಿ ನಿಗಮದ ಹಗರಣದ ಸ್ವರೂಪದಂತೆಯೇ ಈ ಹಿಂದೆ ಡಾ. ಅಂಬೇಡ್ಕರ್‌ಗಮದಲ್ಲೂ ಹಗರಣವಾಗಿದೆ. ಈ ಬಗ್ಗೆ, ಏಕೆ ತನಿಖೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ಹೆಣಗಳು ಬೀಳ್ತಾ ಇದ್ರೆ, ಬಿಜೆಪಿ ನಾಯಕರು ಹೆಣಗಳ ಮೇಲೆ ಹಣ ಮಾಡ್ತಾ ಇದ್ರಲ್ಲ ಆ ಬಗ್ಗೆ ತನಿಖೆ ಏಕಿಲ್ಲ. ಹಾಗಾದ್ರೆ ಅದು ಹಗರಣ ಅಲ್ಪ. ಬಿಜೆಪಿಯ ಶಾಸಕರೇ ಒಬ್ಬರು ಪಕ್ಷದ ಅಧ್ಯಕ್ಷ ವಿಜಯೇಂದ್ರ ಆಗಾಗ್ಗೆ, ದುಬೈ ಹೋಗಿಬರುತ್ತಿರುವ ಬಗ್ಗೆ ಧ್ವನಿ ಎತ್ತುತ್ತಿದ್ದಾರಲ್ಲ ಆ ಬಗ್ಗೆ ತನಿಖೆ ಏಕಿಲ್ಲ ಎಂದು ಗುಡುಗಿದರು.

ಕೇಂದ್ರ ಬಿಜೆಪಿ ನಾಯಕರ ಇಂತಹ ಇಬ್ಬಗೆಯ ನೀತಿಯನ್ನು ಆಧಾರವಾಗಿಟ್ಟುಕೊಂಡೇ ಸುಪ್ರೀಂ ಕೋರ್ಟ್ ಜಾರ್ಖಂಡ್ ಮುಖ್ಯಮಂತ್ರಿ ಸೊರೇನ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಬಂಧನ ಪ್ರಕರಣದಲ್ಲಿ ಜಾಮೀನು ನೀಡುವ ಸಂದರ್ಭದಲ್ಲಿ “ಇಡಿ ತನಗಿಷ್ಟ ಬಂದಂತೆ ಕಾರ್ಯತಂತ್ರ ರೂಪಿಸಿದೆ. ಸಾಕ್ಷಿ ಇಲ್ಲದೆ ಹೋದ್ರೂ ಬಂಧಿಸಲಾಗಿದೆ” ಎಂದು ಸ್ವತಃ ನ್ಯಾಯಾಲಯ ದೂರಿರುವ ಕುರಿತು ಸಚಿವರು ಪತ್ರಿಕಾಗೋಷಿಯ ಗಮನಕ್ಕೆ ತಂದರು.

ಪ್ರಸ್ತುತ ವಾಲ್ಮೀಕ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆಯಲ್ಲಿ ಪಾರದರ್ಶಕತೆ ಇಲ್ಲ. ತನಿಖೆಯಲ್ಲಿ ಅಧಿಕಾರದ ದುರುಪಯೋಗ ನಡೆಯುತ್ತಿದೆ. ಪ್ರಕರಣದ ಸಾಕ್ಷಿಗಳನ್ನು ಕರೆಸಿ ಸತ್ಯಕ್ಕ ದೂರವಾದ ಸುಳ್ಳಿನ ಹೇಳಿಕೆಗಳನ್ನು ನೀಡುವಂತೆ ಮಾಡಲಾಗುತ್ತಿದೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ವಿರೋಧಿ ನಡೆಯಾಗಿದ್ದು, ಅಗತ್ಯ ಬಂದರೆ ನಾವು ಕಾನೂನಿನ ಹೋರಾಟದ ಜೊತೆಗೆ ಬೀದಿಗಿಳಿದೂ ಹೋರಾಟ ನಡೆಸುತ್ತೇವೆ.

ಪ್ರಜಾಪ್ರಭುತ್ವದ ಕಗ್ಗೋಲೆಗೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಪಕ್ಷ ಆ ನಿಲುವಿನಲ್ಲಿ ದೃಢವಾಗಿದೆ. ಕೇಂದ್ರ ಬಿಜೆಪಿ ಸರ್ಕಾರದ ಹೆದರಿಕೆ ಬೆದರಿಕೆ ದಬ್ಬಾಳಿಕೆಗೆ ನಾವು ಬಗ್ಗಲ್ಲ, ದೇಶದ ಜನ ಎರಡು ತಿಂಗಳ ಹಿಂದೆ ಅವರಿಗೆ ಪಾಠ ಕಲಿಸಿದ್ದರು. ಇನ್ನೂ ಪಾಠ ಕಲಿಯದಿರುವುದು ದುರಂತ. ಅವರ ಅವನತಿಗೆ ಅವರೇ ಗುಳಿ ತೋಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page