Thursday, August 15, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 29 : ಆಕಾಶ ಮತ್ತು ಬೆಕ್ಕು ಹಾಗೂ ನಾವೂ, ನೀವೂ


ಬೊಗಸೆಗೆ ದಕ್ಕಿದ್ದು 28ರಲ್ಲಿ ನಮ್ಮ ಮನೆಯ ಬೆಕ್ಕುಗಳ ಪುರಾಣ ಬರೆಯುತ್ತಾ, ಮಾನವ ಸ್ವಭಾವ, ಭಾವನೆಗಳನ್ನು ಪ್ರಾಣಿಗಳಿಗೆ ಆರೋಪಿಸಬಾರದು ಎಂದು ಪೂರ್ಣಚಂದ್ರ ತೇಜಸ್ವಿಯವರು ಎಲ್ಲೋ ಹೇಳಿದ್ದ ನೆನಪು ಎಂದು ಬರೆದಿದ್ದೆ. ಇದು ಎಷ್ಟರ ಮಟ್ಟಿಗೆ ನಿಜ?

ನಿಜ, ಪ್ರಾಣಿಗಳ ಭಾವನೆಗಳು ಮನುಷ್ಯನಷ್ಟು ಆಭೀವೃದ್ಧಿ ಹೊಂದಿರಲು ಸಾಧ್ಯವಿಲ್ಲ. ಅವು ತಮ್ಮ ಮರಿಗಳನ್ನು ಪ್ರೀತಿಸಬಹುದು. ಆದರೆ, ಅವು ಪ್ರಿಯಕರ ಅಥವಾ ಪ್ರಿಯತಮೆಯನ್ನು ಪ್ರೀತಿಸಲಾರವು. ಅವು ತಮ್ಮ ಮರಿಗಳ ರಕ್ಷಣೆಗಾಗಿ ಜೀವವನ್ನೂ ಕೊಡಬಲ್ಲವು. ಒಂದು ಪುಟ್ಟ ಹಕ್ಕಿಯಿಂದ ಹಿಡಿದು ಕೋಳಿಗಳ ತನಕವೂ ಇದು ನಿಜ. ಅವು ಕೆಚ್ಚಿನಿಂದ ಹೋರಾಡುತ್ತವೆ. ಮಕ್ಕಳು ದೊಡ್ಡವರಾಗುವ ತನಕ ಮಾತ್ರ.

ಮನುಷ್ಯನಿಂದ ಹಿಡಿದು ಎಲ್ಲಾ ಸಸ್ತನಿಗಳು ಮತ್ತು ಪಕ್ಷಿಗಳು ವಿವಿಧ ಭಾವನೆಗಳನ್ನು ಹೊಂದಿವೆ. ಅವು ಮನುಷ್ಯ ಭಾವನೆಗಳ ರೂಪದಲ್ಲಿ ಇರಬೇಕಾದ್ದಿಲ್ಲ; ಅಭಿವ್ಯಕ್ತಿಗೊಳಬೇಕಾದದ್ದಿಲ್ಲ. ಅವು ಒಂದೇ ರೂಪದಲ್ಲಿ ಇರಬೇಕಾದದ್ದಿಲ್ಲ. ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಒಂದು ಚಿತ್ರಣವಿದೆ. ಸುಬ್ಬಮ್ಮ ಹಿಂದಿನ ಬಾಗಿಲಲ್ಲಿ ಕೆಲಸದವಳ ಜೊತೆ ಹರಟೆ ಹೊಡೆಯುತ್ತಿರುತ್ತಾಳೆ. ಕೋಳಿಯೊಂದು ಕೆಸರು ಕೆದಕ್ಕುತ್ತಾ ತನ್ನ ಹೂ ಮರಿಗಳನ್ನು ಮೇಯಿಸುತ್ತಿರುತ್ತದೆ. ಆಗ ಒಂದು ಗಿಡುಗ ಬಾಣದಂತೆ ಎರಗಿ ಒಂದು ಹೂ ಮರಿಯನ್ನು ಚೂಪಾದ ಉಗುರುಗಳಿಂದ ಎತ್ತಿಕೊಂಡು ಹಾರುತ್ತದೆ. ತಾಯಿ ಕೋಳಿ ಮತ್ತು ಹೆಂಗಸರಿಬ್ಬರ ಬೊಬ್ಬೆ ಕೆಲಸಮಾಡುವುದಿಲ್ಲ. ಗಿಡುಗ ವಿಷ್ಣುವಿನ ವಾಹನ ಎಂದು ನಂಬಿ ಕೈಮುಗಿವ ಸುಬ್ಬಮ್ಮ ಕೂಡಾ ಗರುಡನಿಗೆ ಹಿಡಿಶಾಪ ಹಾಕುತ್ತಾಳೆ. ಅದಕ್ಕೆ ಪ್ರೀತಿ ಅನುಕಂಪ ಕಾರಣವೇ? ಅಥವಾ ತಾನೇ ಮುಂದೆ ತಿನ್ನಬಹುದಾಗಿದ್ದ ಭವಿಷ್ಯದ ಕೋಳಿಯೊಂದನ್ನು ಗಿಡುಗ ತಿಂದಿತು ಎಂಬ ನಷ್ಟದ ಭಾವನೆಯ ರೋಷ ಕಾರಣವೆ?

ಮನುಷ್ಯನ ಪ್ರೀತಿ ರಾಗ ದ್ವೇಷಗಳು ಸ್ವಾರ್ಥದ್ದೇ ಆಗಿವೆಯೆ!? ನಾನು ಎಂಬುದು ಇರದಿದ್ದರೆ, ನಾವು ಎಂಬುದು ಇರಲು ಸಾಧ್ಯವೆ? ಇದು ಯೋಚಿಸಬೇಕಾದ ವಿಚಾರ ಮತ್ತು ಸಂಕೀರ್ಣವಾದ ವಿಚಾರ. ಪ್ರಾಣಿಯಿಂದ ಪ್ರಾಣಿಗೇ ಏಕೆ, ಮನುಷ್ಯನಿಂದ ಮನುಷ್ಯನಿಗೇ ಇದು ಆಳದಲ್ಲೂ ಅಂದರೆ, ತೀವ್ರತೆಯಲ್ಲೂ, ಕಾಲದಲ್ಲೂ ಬೇರೆಬೇರೆ ಆಗಿರಬಹುದು. ಮನುಷ್ಯರೂ ಅಗಲಿದ ತಮ್ಮವರಿಗಾಗಿ, ವಿಶೇಷವಾಗಿ ತಮ್ಮ ಮಕ್ಕಳಿಗಾಗಿ ವರ್ಷಗಟ್ಟಲೆ ರೋದಿಸುತ್ತಾರೆ. ಕೆಲವರು ವಾರಗಳಲ್ಲಿ, ತಿಂಗಳುಗಳಲ್ಲಿ ಅಥವಾ ವರ್ಷದಲ್ಲಿ ಮರೆತುಬಿಡಬಹುದು. ಮನುಷ್ಯರಂತೆ ಬಾಳಿಕೆಯಲ್ಲಿ ಹೆಚ್ಚು ಕಾಲ ಬದುಕುವ ಆನೆಗಳು ತೀವ್ರ ಭಾವನಾತ್ಮಕ ಜೀವಿಗಳು, ಅವೂ ಕಣ್ಣೀರು ಹಾಕಿ ದುಃಖಪಡುತ್ತವೆ; ತಮ್ಮ ವರ್ಷದ ಸುತ್ತಾಟದ ಹಾದಿಯಲ್ಲಿ, ಹಿಂದೆ ತಮ್ಮ ಸಂಗಾತಿಗಳು, ಕಂದಮ್ಮಗಳು ಸತ್ತ ಸ್ಥಳಗಳನ್ನು ಸೊಂಡಿಲಿನಿಂದ ಮೂಸಿ ನೋಡಿ ಶೋಕಿಸುತ್ತವೆ, ಕಣ್ಣೀರು ಹಾಕುತ್ತವೆ ಎಂದು ಕೆಲವು ಸಂಶೋಧಕರು ಹೇಳಿರುವುದನ್ನು ಕೇಳಿದ್ದೇನೆ.

ಇದು ನಿಜವೆ? ಆಥವಾ ಕೇವಲ ಮನುಷ್ಯರು ತನ್ನ ಭಾವನೆಗಳನ್ನು ಆನೆಗಳಿಗೆ ತೇಜಸ್ವಿಯವರು ಹೇಳಿದ್ದಂತೆ ಆರೋಪಿಸುತ್ತಿದ್ದಾರೆಯೇ? ಹಾಗಾದರೆ, ಎಂದೂ ಭೇಟಿಯಾಗದ, ಬರಹಗಳಿಂದಲೇ ಪರಿಚಿತರಾದ ತೇಜಸ್ವಿಯವರು, ಮತ್ತಿತರರು, ನನ್ನ ತಂದೆ, ಮತ್ತಿತರ ಹಿರಿಯರು, ಗೆಳೆಯರು, ಎಲ್ಲರ ಮಕ್ಕಳು, ದಿವಂಗತರು ಆಗಾಗ ನೆನಪಿಗೆ ಬಂದು ಏಕೆ ಕಾಡುತ್ತಾರೆ? ನಾನೇಕೆ ದುಃಖಿಸುತ್ತೇನೆ- ಅದೂ ನಾನೂ ಹೋಗಲಿದ್ದೇನೆ ಎಂದು ಗೊತ್ತಿದ್ದರೂ!? ಇದಿರಲಿ, ಅಲ್ಲಿ ಸುಬ್ಬಮ್ಮ ಗರುಡನಿಗೆ ಶಾಪ ಹಾಕುತ್ತಲೇ ಇದ್ದರೆ, ಇಲ್ಲಿ ತಾಯಿ ಕೋಳಿ ಮಾತ್ರ ಹೋದ ಹೂ ಮರಿಯನ್ನು ಮರೆತು, ಉಳಿದ ಮರಿಗಳನ್ನು ಮೇಯಿಸುವುದರಲ್ಲಿ ನಿರತವಾಗಿದೆ. ನಿಸರ್ಗ, ಸಹಜ!

ಅದಿರಲಿ, ನಮ್ಮ ಮನೆಯಲ್ಲೇ ಇದ್ದ ತಾಯಿ ಬೆಕ್ಕು ಬಬ್ಲೀ, ಹನ್ನೆರಡನೇ ಹೆರಿಗೆಯ ನಂತರ ಉಳಿದೆರಡು ಮರಿಗಳ ಜೊತೆಗೆ ನನ್ನ ತಮ್ಮನ ಮನೆಗೇ ವಾಪಸಾದವಳು ಮತ್ತೆ ತನ್ನ ಜೊತೆ ಚೊಚ್ಚಲ ಹೆರಿಗೆಯಾದ ಮಗಳು ಲೇಡಿ ಬಗೀರಾ ತನ್ನ ನಾಲ್ಕು ಮರಿಗಳ ಜೊತೆ ಇರುವ, ತಾನು ವರ್ಷಗಳ ಕಾಲ ಇದ್ದ ನಮ್ಮ ಮನೆಗೆ ತಲೆ ಕೂಡಾ ಹಾಕಿಲ್ಲ. ಯಾಕೆ? ದಾರಿಯಲ್ಲಿ ಸಿಕ್ಕಿದರೆ ಮ್ಯಾಂವ್ ಮ್ಯಾಂವ್ ಎನ್ನುತ್ತಾಳೆ. ಚುಚ್ಚ್‌ಚುಚ್ಚ್‌ಚುಚ್ ಎಂದೋ, ಎತ್ತಿಕೊಂಡೋ ಮತ್ತೆ ಬಿಟ್ಟು ಬಿಡುತ್ತೇನೆ. ಅವಳ್ಯಾಕೆ ಮತ್ತೆ ನಮ್ಮ ಮನೆಗೆ ಬರುತ್ತಿಲ್ಲ? ಮನುಷ್ಯರಾದ ನಮಗೆ ಪ್ರಾಣಿ ಭಾವನೆಗಳು ಭಾಸವಾಗುವುದು, ಅರ್ಥವಾಗುವುದು ಹೇಗೆ?

ಹೀಗಿರುತ್ತಾ, ನಮ್ಮ ಲೇಡಿ ಬಗೀರಾ, ತನ್ನ ನಾಲ್ಕೂ ಮಕ್ಕಳನ್ನು ಮೊಲೆಯೂಡಿಸುತ್ತಾ, ಮೈಗಳನ್ನು ನೆಕ್ಕಿನೆಕ್ಕಿ ಸ್ನಾನ ಮಾಡಿಸುತ್ತಾ ಇದ್ದಳು. ಕಣ್ಣು ಬಿಡದೇ ಇದ್ದ ಈ ಮರಿಗಳು ಒಂದು ದಿನ ಪುಟುಪುಟು ತೊದಲು ಹೆಜ್ಜೆ ಇಡುತ್ತಾ ಮನೆಯಿಡಿ ಓಡಾಡಲು ಆರಂಭಿಸಿದವು. ಅಲ್ಲಲ್ಲಿ ಮಲಮೂತ್ರ. ವಾಸನೆ. ಅದನ್ನು ಶುಚಿಗೊಳಿಸುವುದೇ ಒಂದು ಕೆಲಸ. ಈ ಲೇಡಿ ಬಗೀರಾ ಎಂಬ ಕರಿ ಬೆಕ್ಕಿಗೆ ಮರಿಯಾಗಿರುವಾಗಲೇ ಮೀನು, ಕೋಳಿ ಬಿಟ್ಟರೆ ಬೇರೇನೂ ಹೊಟ್ಟೆಗೆ ಇಳಿಯುತ್ತಿರಲಿಲ್ಲ. ಇಲ್ಲವಾದರೆ, ಚಿಕ್ಕ ಚಿಕ್ಕ ಹಾವು, ಕಪ್ಪೆ, ಅರಣೆ, ಓತಿ ಮತ್ತು ಇಲಿ, ಹೆಗ್ಗಣಗಳೇ ಆಹಾರ. ಅದು ತಿಂದು ಉಳಿದ ಕರುಳು ಕಸಗಳನ್ನು ಎತ್ತಿ ಶುಚಿ ಮಾಡುವುದು ಇನ್ನೊಂದು ಕೆಲಸ.

ನಾವು ಕೂಡಾ ಮೀನು, ಕೋಳಿಗಳ ಸರದಾರರಾದರೂ ಪ್ರತೀ ದಿನ ತಿನ್ನುವಷ್ಟು ಆರ್ಥಿಕ ತಾಕತ್ತು ಬೇಕಲ್ಲ! ಆದರೂ, ಒಂದೆರಡು ಚಿಕ್ಕ ವೇಸ್ಟ್ ಮೀನುಗಳನ್ನು ನಮ್ಮಲ್ಲಿ ನಿತ್ಯ ಬರುವ ಟೆಂಪೋ, ಸ್ಕೂಟರ್, ಸೈಕಲ್- ಮೀನು ಮಾರಾಟಗಾರರಿಂದ ಪಡೆದುಕೊಂಡು ಅನ್ನದೊಂದಿಗೆ ಬೆರೆಸಿಹಾಕಿ ಹೇಗೋ ಸಾಕಿದ್ದವು. ನನ್ನ ಬಾಲ್ಯದಲ್ಲಿ ಇದ್ದ ಬೆಕ್ಕುಗಳಿಗೆ ಮನೆಯಲ್ಲಿ ನಾವು ತಿನ್ನುತ್ತಿದ್ದ ಯಾವುದೇ ಊಟ, ತಿಂಡಿ ಸಾಕಾಗುತ್ತಿತ್ತು. ಇದು ಶುದ್ಧ ಮಾಂಸಾಹಾರಿ! ಒಂದು ವೇಳೆ ಬ್ರಾಹ್ಮಣರ ಮನೆಯಲ್ಲಿ ಇದ್ದಿದ್ದರೆ, ಹಸಿವಿನಿಂದ ಸತ್ತೇಹೋಗುತ್ತಿತ್ತೇನೋ!

ನಮ್ಮ ಮನೆಯ ಗೋಡೆಗಳ ಮೇಲೆ ಹರಿದಾಡಿಕೊಂಡು, ಸೊಳ್ಳೆಗಳನ್ನು ನಿಯಂತ್ರಿಸಿ, ನಮ್ಮನ್ನು ಮಲೇರಿಯಾ, ಡೆಂಗ್ಯೂ ಇತ್ಯಾದಿ ಪೀಡೆಗಳಿಂದ ಬಚಾವು ಮಾಡಿದ್ದ ಮತ್ತು ದೀಪಗಳಿಗೆ ಮಳೆಗಾಲದಲ್ಲಿ ದಂಡಿ ದಂಡಿಯಾಗಿ ನಮ್ಮ ಹಳ್ಳಿ ಮನೆಗೆ ದಾಳಿ ಮಾಡುತ್ತಿದ್ದ ಕೀಟ, ಹಾತೆ, ಗೆದ್ದಲ ಹುಳಗಳ ಮೇಲೆ ಪ್ರತಿದಾಳಿ ಮಾಡಿ ಗಬಗಬನೇ ತಿಂದು ಮುಗಿಸುತ್ತಿದ್ದ ನೂರಾರು ಹಲ್ಲಿಗಳ ಕಮಾಂಡೋ ಪಡೆ ಈ ಬೆಕ್ಕಿಗೆ ಆಹುತಿಯಾಯಿತು. ಏಳೆಂಟು ಅಡಿ ಚಂಗನೇ ಗೋಡೆಗೆ ಜಿಗಿದು, ಪಟಕ್ಕನೇ ಜಿಗಿದು ಹಿಡಿಯುವ ಸೂಪರ್ ಕಮಾಂಡೋ ಟ್ರೈನಿಂಗ್ ಕೊಟ್ಟವರು ಯಾರು ಇವಳಿಗೆ? ಈಗ ಮನೆಯಲ್ಲಿ ಹುಡುಕಾಡಿದರೂ ತಡಕಾಡಿದರೂ ಒಂದೆರಡು ಹಲ್ಲಿಗಳಷ್ಟೇ ಸಿಗಬಹುದೇನೋ!

ಜೊತೆಗೆ ಇಲಿ, ಹೆಗ್ಗಣಗಳ ಕಾಟ ದೂರವಾಯಿತು. ಇವುಗಳ ಕಾಟ ಎಷ್ಟಿತ್ತು ಎಂದು ಹೇಳುತ್ತೇನೆ. ಎಂಭತ್ತರ ದಶಕದಲ್ಲಿ ಸ್ವಲ್ಪ ಆಧುನಿಕಗೊಳಿಸಲಾದ ನಮ್ಮ ಮನೆ ನೇತ್ರಾವತಿಯ 1923ರ ಮಾರಿಬೊಲ್ಲ ಅಂದರೆ, ಮಹಾನೆರೆಗೆ ಬಿದ್ದ ಜಾಗದಲ್ಲಿ 2014ರಲ್ಲಿ ಕಟ್ಟಿದ್ದು. ನೂರು ವರ್ಷಗಳಾದವು. ಹಂಚಿನ ಈ ಮನೆಗೆ ಒಂದು ಅಟ್ಟವಿದೆ. ಅಲ್ಲಿಗೆ ಇಲಿ, ಹೆಗ್ಗಣಗಳ ದಾಳಿಯೂ, ಅವುಗಳನ್ನು ಹಿಡಿಯಲು ಕೇರೆ ಮತ್ತಿತರ ಹಾವುಗಳ ದಾಳಿಯೂ ಮಾಮೂಲಿ. ಈ ಹಾವುಗಳು ನಮಗೆ ಏನೂ ಮಾಡದೇ ಇದ್ದುದರಿಂದ, ನಮಗೆ ಇದು ಸಾಮಾನ್ಯವಾಗಿದ್ದರೂ, ಮುಂಬೈಯಲ್ಲಿ ಬೆಳೆದ ನನ್ನ ಹೆಂಡತಿಗೆ ಭಯ. ನೋಡಿದರೆ ಕಿಟಾರನೇ ಕಿರಿಚುವುದು, ಮನೆಯಿಂದ ಹೊರಗೆ ಓಡಿಹೋಗಿ ಓಡಿಸಿ ಓಡಿಸಿ ಎಂದು ಗದ್ದಲ ಎಬ್ಬಿಸುವುದು ಅವಳಿಗೆ ಸಾಮಾನ್ಯ. ಅದಕ್ಕೇ ಹೇಳುತ್ತಿದ್ದೇನೆ- ಮನುಷ್ಯ ಮತ್ತು ಇತರ ಪ್ರಾಣಿಗಳ ವೈಯಕ್ತಿಕ ಗುಣಸ್ವಭಾವಗಳು ಬೇರೆಬೇರೆ ಎಂದು.

ಹೀಗಿದ್ದರೂ, ಒಮ್ಮೆ ಈ ಇಲಿ, ಹೆಗ್ಗಣಗಳ ಕಾಟ ಅತಿಯಾಯಿತು. ಎಷ್ಟರ ಮಟ್ಟಿಗೆ ಎಂದರೆ ಮಣ್ಣಿನ ಅಡಿಯಿಂದಲೇ ಕನ್ನ ಕೊರೆದು ನಮ್ಮ ಬೂತದ ಕೋಣೆಗೆ ನುಗ್ಗುತ್ತಿದ್ದ ಹೆಗ್ಗಣಗಳು ರಾತ್ರಿ ಕೆಲವು ಬಾರಿ ನನ್ನ ಕಾಲಿ ಹೆಬ್ಬೆರಳುಗಳನ್ನೂ ಕಚ್ಚಿದ್ದವು. ಒಂದೆರಡು ಬಾರಿ ನನ್ನ ಹೆಂಡತಿಯ ತಲೆಗೂದಲನ್ನೂ ಕತ್ತರಿಸಿ ಸೆಲೂನ್ ತೆರೆದಿದ್ದವು. ರಾತ್ರಿ ಮತ್ತು ಹಗಲು ನಾನು ಕೆಳಗೆ ಬರೆಯಲು ಕೂತರೆ, ಅಟ್ಟದಲ್ಲಿ ದಡಬಡ ಎಂದು ಭೂಕಂಪವಾಗುತ್ತಿತ್ತು. ನಾನು ನಿರ್ಲಿಪ್ತ ನಿರ್ಲಕ್ಷ್ಯದಿಂದ ನನ್ನ ಕೆಲಸ ಮಾಡುತ್ತಿದ್ದೆ. ಒಂದು ಸಲ ಹೆಗ್ಗಣಗಳು ನಮ್ಮ ಮನೆಯ ಮುಂದಿನ ಮರದ ಬಾಗಿಲಿಗೇ ದೊಡ್ಡ ಕನ್ನ ಕೊರೆದವು. ಬಾಗಿಲು ಬದಲಿಸಬೇಕಾಯಿತು. ಬೋನು ಇಟ್ಟು ನಾನು ಹಿಡಿದ ಇಲಿಗಳಿಗಿಂತ ಹೆಚ್ಚು ಇಲಿ, ಹೆಗ್ಗಣಗಳನ್ನು ನಮ್ಮ ತಾಯಿ, ಮಗಳು ಕೊಂದು ತಿಂದು ನಮ್ಮನ್ನು ಈ ಸಂಕಷ್ಟ, ಕಿರುಕುಳದಿಂದ ಪಾರು ಮಾಡಿದರು. ಈಗ ಇಲಿ ಹೆಗ್ಗಣಗಳು ಈ ಮನೆಯತ್ತ ತಲೆ ಹಾಕಿ ಮಲಗುವುದಿಲ್ಲವೇನೋ! ಆದರೆ ಇವು ತಿಂದು ಉಳಿಸಿದ ತಲೆ ಮತ್ತು ಕರುಳುಗಳನ್ನು ಎತ್ತಿ ಹೊರಹಾಕುವುದೊಂದು ವಾಕರಿಕೆ ಬರಿಸುವ ಕೆಲಸವಾಗಿತ್ತು, ಆಗಿದೆ.

ಈಗ, ಲೇಡಿ ಬಗೀರಾಳ ನಾಲ್ಕು ಮಕ್ಕಳಿಂದ ನಾನು ಕಲಿತ ಪಾಠಗಳನ್ನು ಮುಂದೆ ಹೇಳುವೆ. ಈ ನಡುವೆ ನಡೆದ ಒಂದು ಹೃದಯ ಒಡೆದ- ಬೆಕ್ಕು ಮರಿಯ ವಿಷಯ ಹೇಳುತ್ತೇನೆ. ಇತ್ತೀಚೆಗೆ ಒಂದು ದಿನ ಮನೆಗೆ ಬರುತ್ತೇನೆ: ಪಿಯ್ಯಾಂ ಪಿಯ್ಯಾಂ ಎಂಬ ಬೆಕ್ಕಿನ ಮರಿಯ ಸದ್ದು ಕೇಳಸುತ್ತಿದೆ. ಇದು ನಮ್ಮ ನಾಲ್ಕು ಮರಿಗಳ ಸ್ವರವಲ್ಲ. ಅವು ಪೀಂ ಪೀಂ ಅನ್ನುತ್ತವೆ. ಹೆಂಡತಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾಳೆ. ನಮ್ಮ ಶಾಲೆಯ ಮಕ್ಕಳು ಇನ್ನೂ ನಡೆಯಲೂ ಆಗದ ಮರಿಯೊಂದನ್ನು ನಮ್ಮ ಜಗಲಿಯಲ್ಲಿ ಬಿಟ್ಟು ಅವಳು ನೋಡಿದಾಗ ಹೆದರಿ ಓಡಿಹೋಗಿದ್ದಾರೆ. ಮರಿ ಮೂರು ದಿನಗಳಿಂದ ಏನೂ ತಿಂದಂತಿಲ್ಲ. ಮಳೆಗೆ ತೊಯ್ದು ಎರಡು ಕೈಗಳೊಳಗೆ ಹಿಡಿಯಬಹುದಾದಷ್ಟು ಪುಟ್ಟದಾಗಿದೆ. ಅದನ್ನು ಒರೆಸಿ, ಹಾಲು ಕುಡಿಸಿದ ನನ್ನ ಹೆಂಡತಿ ಹೇಳಿದಳು: ಇದನ್ನು ಶಾಲೆಯಲ್ಲೇ ಬಿಟ್ಟು ಬನ್ನಿ. ಅದವಳ ನಿಜ ಇಚ್ಛೆ ಆಗಿರಲಿಲ್ಲ. ತಕ್ಷಣದ ಆತಂಕ ಕಾರಣವಾಗಿತ್ತು. ನಾಲ್ಕು ಮರಿ, ಇಬ್ಬರು ಮಕ್ಕಳು, ನಾನು, ತಾನು ಎಲ್ಲರನ್ನೂ ಸಾಕಬೇಕಲ್ಲ ಎಂಬ ಆತಂಕ. ನಾನೂ ಒಂದು ಮರಿಯನ್ನು ಅನಾಥವಾಗಿ ಬಿಡುವಷ್ಟು ಕಲ್ಲು ಹೃದಯದ ಮನುಷ್ಯನಲ್ಲ. ಹಾಗಾಗಿ ಅದು ನಮ್ಮ ಮನೆಯಲ್ಲೇ ಉಳಿದು, ಆರನೇ ಬೆಕ್ಕಾಯಿತು. ಇಪ್ಪತ್ತು ದಿನಗಳ ಕಾಲ ಮಾತ್ರ. ಆದರೆ, ನನ್ನ ಹೃದಯದಲ್ಲಿ ಅಳಿಸಲಾಗದ ಗೀರು ಹಾಕಿ! ಈ ಕುರಿತು, ಮತ್ತು ಉಳಿದ ಮರಿಗಳಿಂದ ಈ ಮನುಷ್ಯ ಪ್ರಾಣಿ ಕಲಿತ ಪಾಠಗಳ ಬಗ್ಗೆ ಮುಂದೆ ಬರೆಯುವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page