Saturday, August 17, 2024

ಸತ್ಯ | ನ್ಯಾಯ |ಧರ್ಮ

ವಿರೋಧ ಪಕ್ಷವಾಗಿ ಬಿಜೆಪಿ ವೇಸ್ಟ್‌: ಸ್ವಪಕ್ಷದ ವಿರುದ್ಧವೇ ಬಹಿರಂಗವಾಗಿ ವಾಗ್ದಾಳಿ ನಡೆಸಿದ ಲಿಂಬಾವಳಿ

ಬೆಂಗಳೂರು: ಸದನದಲ್ಲಿ ವಿರೋಧ ಪಕ್ಷವಾಗಿ ಬಿಜೆಪಿ ಆಡಳಿತ ಪಕ್ಷವನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ, ಬಿಜೆಪಿಯ ಹಿರಿಯ ನಾಯಕ ಅರವಿಂದ ಲಿಂಬಾವಳಿ ಸ್ವಪಕ್ಷದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ಎಕ್ಸ್‌ ಖಾತೆಯಲ್ಲಿ ಸುದೀರ್ಘ ಬರಹ ಬರೆದು ಅಸಮಾಧ ಹೊರಹಾಕಿರುವ ಲಿಂಬಾವಳಿ ಆಡಳಿತ ಪಕ್ಷದ ಜೊತೆ ಬಿಜೆಪಿ ನಾಯಕರು ಕೈ ಜೋಡಿಸಿದ್ದಾರೆ ಎಂದು ದೂರಿದ್ದಾರೆ. “ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಮುಕ್ತಾಯವಾಗಿದೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದು ಜನರ ಧ್ವನಿಯಾಗಬೇಕಿದ್ದ ಬಿಜೆಪಿ ವಿರೋಧ ಪಕ್ಷವಾಗಿ ಅದನ್ನು ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸದನದಲ್ಲಿ ಸರ್ಕಾರದ ಅವ್ಯವಹಾರ, ದುರಾಡಳಿತ, ವೈಫಲ್ಯಗಳನ್ನು ಎತ್ತಿ ಹಿಡಿಯಲು ಅವಕಾಶವಿದ್ದರೂ ನಮ್ಮ ನಾಯಕರು ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ” ಎಂದು ಲಿಂಬಾವಳಿ ಆರೋಪಿಸಿದ್ದಾರೆ.

“ಸದನದಲ್ಲಿ ವಿರೋಧ ಪಕ್ಷವಾಗಿ ನಮ್ಮ ಬಿಜೆಪಿ ವೇಸ್ಟ್‌. ಆಡಳಿತ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿ ಯಾವದಕ್ಕೂ ಜನರ ಪರ ಧ್ವನಿ ಎತ್ತುತ್ತಿಲ್ಲ. ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗಿರುವ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಲಕ್ಷಾಂತರ ಜನರು ಕಷ್ಟದಲ್ಲಿದ್ದಾರೆ. ನಮ್ಮ ಬಿಜೆಪಿ ಪಕ್ಷದ ನಾಯಕರಿಗೆ ಈ ಬಗ್ಗೆ ಬೆಳಕು ಚೆಲ್ಲಬೇಕು, ಜನರ ಸಂಕಷ್ಟಗಳನ್ನು ಪ್ರತಿನಿಧಿಸಬೇಕು ಎಂದು ಅನಿಸದಿರುವುದು ವಿಷಾದನೀಯ ಎಂದು ದೂರಿದ್ದಾರೆ.

“ಶಾಸಕರೂ ಆಗಿರುವ ನಮ್ಮ ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ನಡುವೆ ಸಾಮರಸ್ಯ, ತಿಳುವಳಿಕೆ ಇಲ್ಲದಿರುವುದು ವಿಷಾದನೀಯ. ಇದು ಆಡಳಿತ ಪಕ್ಷಕ್ಕೆ ಸಂಪೂರ್ಣ ಲಾಭ ಪಡೆಯಲು ಸಹಕಾರಿಯಾಯಿತು. ಸದನದಲ್ಲಿ ಸಿಕ್ಕ ಅವಕಾಶ ಮತ್ತು ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳದೆ, ಇಡೀ ಅಧಿವೇಶನವನ್ನು ವ್ಯರ್ಥವಾಗಿ ಕಳೆದು, ಇನ್ನೂ ಒಂದು ದಿನ ಬಾಕಿ ಇರುವಾಗ ಸದನದ ಕಲಾಪ ಮೊಟಕುಗೊಳಿಸಿ ಆಡಳಿತ ಪಕ್ಷದ ಜೊತೆ ಕೈಜೋಡಿಸಿರುವ ನಮ್ಮ ಪಕ್ಷದ ನಾಯಕರ ಕ್ರಮ ಪ್ರಶ್ನಾರ್ಹವಾಗಿದೆ” ಎಂದಿದ್ದಾರೆ.

“ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿ-ಎಸ್‌ಟಿಗೆ ಮೀಸಲಿಟ್ಟ ಅನುದಾನ ದುರ್ಬಳಕೆ… ಯಾವುದೇ ವಿಚಾರವನ್ನು ತಾರ್ಕಿಕ ತೀರ್ಮಾನಕ್ಕೆ ಕೊಂಡೊಯ್ಯಲು ನಮ್ಮ ಪಕ್ಷಕ್ಕೆ ಸಾಧ್ಯವಾಗಿಲ್ಲ” ಎಂದಿದ್ದಾರೆ.

“ಒಟ್ಟಾರೆ ಈ ಬಾರಿಯ ಅಧಿವೇಶನದಲ್ಲಿ ಪ್ರತಿಪಕ್ಷವಾಗಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅಧಿವೇಶನದಲ್ಲಿ ನಾಯಕರ ವರ್ತನೆಯನ್ನು ಗಮನಿಸಿದರೆ, ಈ ನಾಯಕರ ನೇತೃತ್ವದ ಬಿಜೆಪಿ ಮುಂದಿನ ದಿನಗಳಲ್ಲಿ ದೊಡ್ಡ ಹೋರಾಟಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದು ಎಲ್ಲಾ ಪ್ರಾಮಾಣಿಕ ಮತ್ತು ಶ್ರಮಿಸುವ ಕಾರ್ಯಕರ್ತರಿಗೆ ದೊಡ್ಡ ಪ್ರಶ್ನೆಯಾಗಿದೆ” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page