Wednesday, August 14, 2024

ಸತ್ಯ | ನ್ಯಾಯ |ಧರ್ಮ

ವೈದ್ಯೆ ಅತ್ಯಾ*ರ ಪ್ರಕರಣ : ತನಿಖೆ ಸಿಬಿಐ ಗೆ ವಹಿಸಿದ ಕೊಲ್ಕತ್ತ ಹೈಕೋರ್ಟ್

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ಇಂದು ತೀರ್ಪು ನೀಡಿದೆ.

ಶುಕ್ರವಾರ ಬೆಳಗ್ಗೆ ವೈದ್ಯೆ ಸೆಮಿನಾರ್ ಹಾಲ್‌ನಲ್ಲಿ ಮೃತಪಟ್ಟಿರುವುದು ಮತ್ತು ಆಕೆಯ ಬಟ್ಟೆಗಳು ಅಸ್ತವ್ಯಸ್ತಗೊಂಡಿರುವುದು ಕಂಡುಬಂದಿತ್ತು. ಅಷ್ಟೇ ಅಲ್ಲದೆ ದೇಹದಾದ್ಯಂತ ಗಾಯಗಳು ಕಂಡುಬಂದ ನಂತರ ಆಸ್ಪತ್ರೆಯ ಆಡಳಿತದ ಪ್ರತಿಕ್ರಿಯೆಯಲ್ಲಿ ಗಂಭೀರ ಲೋಪವನ್ನು ನ್ಯಾಯಾಲಯ ಗಮನಿಸಿದೆ.

ಈ ಬಗ್ಗೆ ಸಂತ್ರಸ್ತೆಯ ಪೋಷಕರು, ಸಾಕ್ಷ್ಯವನ್ನು ನಾಶ ಮಾಡದಂತೆ ನೋಡಿಕೊಳ್ಳಲು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಪೋಷಕರ ಮನವಿ ಆಲಿಸಿದ ನ್ಯಾಯಾಲಯ ಪ್ರಕರಣದ ಸಂಪೂರ್ಣ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಬೇಕು ಎಂದು ತೀರ್ಪು ನೀಡಿದೆ.

ಸರ್ಕಾರಿ ಸ್ವಾಮ್ಯದ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ ಸಂದೀಪ್ ಘೋಷ್ ಅವರು ಕಾಲೇಜಿನಲ್ಲಿ ಇಲ್ಲದೇ ಇರುವುದು ಬೇಜವಾಬ್ದಾರಿತನ ಎಂದು ಕೋರ್ಟ್ ದೂರಿದೆ.

ಮಾಜಿ ಪ್ರಾಂಶುಪಾಲರಿಗೆ ಅವರು ರಾಜೀನಾಮೆ ನೀಡಿದ ನಂತರ ಮತ್ತೊಂದು ಕಾಲೇಜಿನಲ್ಲಿ ಅದೇ ಸ್ಥಾನಮಾನ ನೀಡಲಾಗಿದೆ ಎಂದು ನ್ಯಾಯಾಲಯವು ಎತ್ತಿ ಹೇಳಿದೆ. ಹಾಗೂ ಅವರನ್ನು ತಕ್ಷಣವೇ ಕರ್ತವ್ಯದಿಂದ ವಜಾ ಮಾಡಬೇಕು ಅಥವಾ ರಜೆಯ ಮೇಲೆ ಕಳುಹಿಸಬೇಕು ಎಂದು ಹೇಳಿದೆ.

ಆಸ್ಪತ್ರೆ ಆಡಳಿತ ಮಂಡಳಿಯು ಸಂತ್ರಸ್ತೆ ಅಥವಾ ಸಂತ್ರಸ್ತೆಯ ಕುಟುಂಬದೊಂದಿಗೆ ನಿಲ್ಲಲಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. “ಇದೊಂದು ವಿಚಿತ್ರವಾದ ಪ್ರಕರಣವಾಗಿದೆ. ಇನ್ನು ಮುಂದೆ ಸಮಯ ವ್ಯರ್ಥವಾಗಬಾರದು. ಸಾಕ್ಷ್ಯವನ್ನು ತಿರುಚುವ ಸಾಧ್ಯತೆಯಿದೆ” ಎಂದು ನ್ಯಾಯಾಲಯ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page