Friday, August 16, 2024

ಸತ್ಯ | ನ್ಯಾಯ |ಧರ್ಮ

ತುಂಗಭದ್ರಾ ಡ್ಯಾಂ ಕ್ರಸ್ಟ್​ಗೇಟ್ ಅಳವಡಿಕೆ ಕಾರ್ಯ ; ಹರಿಯುವ ನೀರಿನ ಮಧ್ಯೆಯೇ ನಡೆದಿದೆ ಸಾಹಸ

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್​ಗೇಟ್ ಜಾಗದಲ್ಲಿ ಸ್ಟಾಪ್​ಲಾಗ್ ಗೇಟ್ ಹಾಕಿ, ನೀರನ್ನು ಉಳಿಸುವ ಪ್ರಯತ್ನ ತಜ್ಞರಿಂದ ಆರಂಭವಾಗಿದೆ. 20 ಟನ್ ಭಾರದ ಒಂದು ಎಲಿಮೆಂಟ್ ಅಳವಡಿಕೆಗೆ ಈಗಾಗಲೇ ಭರದಿಂದ ಸಿದ್ಧತೆ ನಡೆದಿದೆ. ಈ ನಡುವೆ ಜಲಾಶಯದ ತಂತ್ರಜ್ಞರ ಕಡೆಯಿಂದ ಅಲ್ಲಿನ ಕಾರ್ಮಿಕರು ಮತ್ತು ತಜ್ಞರ ಹೊರತಾಗಿ ಬೇರೆಲ್ಲರಿಗೂ ಕಡ್ಡಾಯ ನಿಷೇದ ಹಾಕಲಾಗಿದೆ.

ಗೇಟ್ ಅಳವಡಿಕೆ ಸಂದರ್ಭದಲ್ಲಿ ಎಂತಹುದೇ ಅನಾಹುತ ಸಂಭವಿಸುವ ಸಾಧ್ಯತೆ ಇರುವ ಕಾರಣ, ಜನಪ್ರತಿನಿಧಿಗಳೂ ಸೇರಿದಂತೆ ಮಾಧ್ಯಮಗಳಿಗೂ ದೂರದಿಂದಲೂ ನಿಂತು ವರದಿ ಮಾಡದಂತೆ ತಡೆ ಹಿಡಿಯಲಾಗಿದೆ. ಹೀಗಾಗಿ ಗೇಟ್ ಅಳವಡಿಕೆ ಬಗ್ಗೆ ಯಾವುದೇ ಮಾಧ್ಯಮಗಳಲ್ಲೂ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ.

ಬಲ್ಲ ಮೂಲಗಳ ಪ್ರಕಾರ, ಇಂದು ಬೆಳಗ್ಗೆ 8ರಿಂದಲೇ ಕಾರ್ಯಾಚರಣೆ ಶುರುವಾಗಿದ್ದು, ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಹಳೆಯ ಗೇಟ್ ನ ಗೇರ್ ಬಾಕ್ಸ್ ಇರುವ ಕೌಂಟರ್ ಲಾಕ್ ಮತ್ತ ಅದರ ಮೇಲಿನ ಸ್ಕೈ ವಾಕ್ ಕಂಬಿಗಳನ್ನು ತೆರವುಗೊಳಿಸಲಾಗುತ್ತಿದೆ. ಈ ಕೆಲಸ ಮುಗಿದ ನಂತರ ಈಗಾಗಲೇ ಹೊಸಹಳ್ಳಿ ಮತ್ತು ಹಮೀದ್ ಎಂಜಿನಿಯರ್ಸ್ ನಲ್ಲಿ ನಿರ್ಮಾಣವಾಗಿರುವ ಎರಡು ಎಲಿಮೆಂಟ್ ಗಳನ್ನು ತರಲಾಗಿದ್ದು, ಮಧ್ಯಾಹ್ನದ ಬಳಿಕ ಅಳವಡಿಸುವ ಸಾಧ್ಯತೆ ಇದೆ.

ನದಿಯ ಹೊರಹರಿವು ಇಳಿಕೆ : ನಿರಂತರ ಹೊರಹರಿವಿನ ಪರಿಣಾಮ ಈಗಾಗಲೇ 30 ಟಿಎಂಸಿ ನೀರನ್ನು ನದಿಗೆ ಹರಿಬಿಡಲಾಗಿದೆ. ಈ ಕಾರಣದಿಂದ 30 ಗೇಟ್ ಗಳಿಂದಲೂ ಹೊರ ಹೋಗುತ್ತಿರುವ ನೀರಿನ ಪ್ರಮಾಣ ಮೊದಲ ದಿನಕ್ಕಿಂತ ಈಗ ಐದನೇ ದಿನಕ್ಕೆ ಸ್ವಲ್ಪ ಮಟ್ಟಿಗೆ ತಗ್ಗಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ 1 ಲಕ್ಷ ಕ್ಯುಸೆಕ್ ಗಿಂತಲೂ ಹೆಚ್ಚಿದ್ದ ಹೊರಹರಿವು 80 ಸಾವಿರ ಕ್ಯುಸೆಕ್ ನಷ್ಟಿದೆ.

ಈ ನಡುವೆ ಗೇಟ್ ಅಳವಡಿಕೆ ನಿಧಾನಗತಿಯ ಕಾರಣ ತುಂಗಭದ್ರಾ ಜಲಾಶಯದ ಇಂಜಿನಿಯರುಗಳು ಬೇಸರ ವ್ಯಕ್ತಪಡಿಸಿದ್ದಾರೆ. ನಿಗದಿತ ಕಾಲಮಿತಿಯೊಳಗೆ ವೇಗವಾಗಿ ಕಂಪನಿಗಳು ಗೇಟ್‌ ನಿರ್ಮಿಸಲಿಲ್ಲ. ನಿರಂತರ ಮೂರು ಶಿಫ್ಟ್‌ಗಳಲ್ಲಿ ಕೆಲಸ ಮಾಡಿಸಿ, ತ್ವರಿತವಾಗಿ ಮುಗಿಸಲು ಹೇಳಿದರೂ ವಹಿಸಿಕೊಟ್ಟ ಸಂಸ್ಥೆ ನಿಧಾನ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೇಟ್ ಅಳವಡಿಕೆ ಬಗ್ಗೆ ಸಿಕ್ಕ ಮಾಹಿತಿಯಂತೆ ಮೊದಲ ಗೇಟ್ ಅಳವಡಿಕೆ ಯಶಸ್ವಿಯಾದರೆ ನೀರಿನ ರಭಸ ತಡೆಯಲು ಸಂಪೂರ್ಣ ಯಶಸ್ವಿಯಾದಂತೆ. ಈಗ ಅಳವಡಿಸುತ್ತಿರುವ ಗೇಟ್ ತಾತ್ಕಾಲಿಕವಾಗಿದ್ದರೂ ನೀರಿನ ರಭಸ ತಡೆಯಲು ದೊಡ್ಡ ಸಹಕಾರಿ ಆಗಲಿದೆ. ತಾತ್ಕಾಲಿಕ ಸ್ಟಾಪ್‌ ಲಾಗ್‌ ಗೇಟ್‌ 65 ಟನ್‌ ತೂಕ ಹೊಂದಿದೆ. ಮೂಲ ಗೇಟ್‌ 48 ಟನ್‌ ಭಾರವಿತ್ತು. ತಾತ್ಕಾಲಿಕ ಗೇಟ್‌ 20 ಅಡಿ ಎತ್ತರ ಮತ್ತು 60 ಅಡಿ ಅಗಲದ ಮೂಲ ಗೇಟ್‌ಗಳ ಸೈಜ್‌ನಲ್ಲೇ ಇರಲಿದೆ. ತಲಾ 13 ಟನ್‌ ತೂಕದ 5 ಅಡಿ ಎತ್ತರದ ಒಟ್ಟು 4 ತುಂಡುಗಳನ್ನು ಒಂದೊಂದಾಗಿಯೇ ಕೂರಿಸಿ ನೀರು ನಿಲ್ಲಿಸಲು ಯೋಜಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page