Monday, August 19, 2024

ಸತ್ಯ | ನ್ಯಾಯ |ಧರ್ಮ

ಶರಾವತಿ ಉಳಿಸಿ : ಮುಖ್ಯಮಂತ್ರಿಗಳಿಗೆ ನಾಡಿನ ಪ್ರಜ್ಞಾವಂತರ ಬಹಿರಂಗಪತ್ರ

“ಯಾವುದೇ ಮಿತಿ ಇಲ್ಲದೆ, ವೈಜ್ಞಾನಿಕ ಯೋಜನೆ ಇಲ್ಲದೆ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಕುಡಿಯುವ ನೀರಿನ ಬೇಡಿಕೆ ನೀಗಿಸಲು ರಾಜ್ಯ ಸರ್ಕಾರ ಈಗ ಮತ್ತೊಮ್ಮೆ ಶರಾವತಿ ನದಿಯ ಮೇಲೆ ಕಣ್ಣು ಹಾಕಿದೆ. ಇದು ಅವೈಜ್ಞಾನಿಕ ಮತ್ತು ಮಲೆನಾಡಿನ ಗರ್ಭಕ್ಕೆ ಕೊಡಲಿ ಏಟು ಕೊಡುವ ದುಷ್ಕೃತ್ಯ” ಎಂದು ಶರಾವತಿ ಉಳಿಸಿ ಹೋರಾಟ ಸಮಿತಿ ಅಭಿಪ್ರಾಯ ಪಟ್ಟಿದೆ.

ಇದೇ ಉದ್ದೇಶವಿಟ್ಟು, ನಾಡಿನ ಪ್ರಜ್ಞಾವಂತರ ದೊಡ್ಡ ಬಳಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ಶರಾವತಿ ನದಿ ನೀರನ್ನು ಬೆಂಗಳೂರಿಗೆ ತಲುಪಿಸುವುದೇ ಹೌದಾದರೆ ಮಲೆನಾಡು ಇನ್ನೊಂದು ದೊಡ್ಡ ಹೋರಾಟಕ್ಕೆ ಕೈ ಇಡಬೇಕಾದೀತು ಎಂದು ಎಚ್ಚರಿಕೆ ನೀಡಿದೆ.

“ಬೆಂಗಳೂರಿನಿಂದ 380 ಕಿಮೀ ದೂರದಲ್ಲಿರುವ, ಜಗತ್ತಿನ ಅತ್ಯಪರೂಪದ ಅತಿ ಸೂಕ್ಷ್ಮ ಜೀವ ವೈವಿಧ್ಯದ ಕಣಿವೆಯಾದ ಶರಾವತಿ ಕೊಳ್ಳದಿಂದ ನೀರು ತರುವ ಯೋಜನೆ ಕೈಗೆತ್ತಿಕೊಳ್ಳಲು ಸರ್ಕಾರ ಮತ್ತೆ ಮುಂದಾಗಿದೆ. ಆದರೆ ಈ ಯೋಜನೆ ಕೇವಲ ಶರಾವತಿ ಕೊಳ್ಳವಷ್ಟೇ ಅಲ್ಲದೆ, ಪಶ್ಷಿಮಘಟ್ಟದ ಪರಿಸರ ಸಮತೋಲನದ ಮೇಲೆ ಅಪಾಯಕಾರಿ ಪರಿಣಾಮಗಳನ್ನು ಬೀರಲಿದೆ” ಎಂದು ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಸೇರಿದಂತೆ ಹಲವು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, 2019ರಲ್ಲಿ ಕೂಡ ಅಂದಿನ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವೂ ಶರಾವತಿ ನೀರನ್ನು ಬೆಂಗಳೂರಿಗೆ ತರುವ ಕುರಿತು ಕಾರ್ಯಸಾಧ್ಯತಾ ವರದಿ ತಯಾರಿಸಲು ಮುಂದಾಗಿತ್ತು. ಆಗ ಶರಾವತಿ ಕೊಳ್ಳದ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳ ಜನ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಪಡಿಸಿದ್ದರು. ತಿಂಗಳುಗಟ್ಟಲೆ ನಡೆದ ನಿರಂತರ ಹೋರಾಟಕ್ಕೆ ಮಣಿದ ಸರ್ಕಾರ, ಯೋಜನೆ ಕಾರ್ಯಸಾಧುವಲ್ಲ, ಹಾಗಾಗಿ ಆ ಯೋಚನೆ ಕೈಬಿಡಲಾಗಿದೆ ಎಂದು ಘೋಷಿಸಿತ್ತು.

ಐದು ವರ್ಷಗಳಲ್ಲೇ ಸರ್ಕಾರ ಮತ್ತೊಮ್ಮೆ ಶರಾವತಿ ನದಿ ನೀರಿನ ಮೇಲೆ ಕಣ್ಣು ನೆಟ್ಟಿದೆ.

“ಆದರೆ, ರಾಜ್ಯದ ಅತ್ಯಂತ ಅಪರೂಪದ ಸಿಂಗಳೀಕ(ಲೈಯನ್ ಟೇಲ್ಡ್ ಮಕಾಕಿ-ಎಲ್ ಟಿಎಂ) ಸಂರಕ್ಷಿತ ಅಭ್ಯಯಾರಣ್ಯವನ್ನೂ ಒಳಗೊಂಡಂತೆ ಮಹತ್ವದ ಜೀವ ಸಂಕುಲ, ಸಾವಿರಾರು ಎಕರೆ ಕಾಡು ಮತ್ತು ರೈತಾಪಿ ಜನರ ಜಮೀನು ನಾಶ ಮಾಡಿ, 12 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಜನರ ತೆರಿಗೆ ಹಣ ಪೋಲು ಮಾಡುವ ಈ ಯೋಜನೆ ಬಗ್ಗೆ ನಮ್ಮ ಸ್ಪಷ್ಟ ವಿರೋಧವಿದೆ. ಏಕೆಂದರೆ, ಜೀವ ನದಿಯನ್ನು ಬತ್ತಿಸಿ ಬೆಂಗಳೂರಿಗೆ ನೀರು ತರುವುದು ವೈಜ್ಞಾನಿಕವಾಗಿ ಮಾತ್ರವಲ್ಲದ, ವಿವೇಚನೆಯ ದೃಷ್ಟಿಯಿಂದಲೂ ಒಪ್ಪುವಂತಹ ಚಿಂತನೆಯಲ್ಲ” ಎಂದು ಈ ಯೋಜನೆಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.

“ಅಲ್ಲದೆ, ಎತ್ತಿನ ಹೊಳೆ ಯೋಜನೆ ಗಮನಿಸಿದರೆ ಇದು ಮೂಲತಃ ಗುತ್ತಿಗೆದಾರರ ಮೂಲಕ ಭ್ರಷ್ಟಾಚಾರದ ಹೊಳೆ ಹರಿಸುವ ಇನ್ನೊಂದು ಯೋಜನೆಯಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ” ಎಂದು ತಿಳಿಸಿದ್ದಾರೆ.

“ಅದರಲ್ಲೂ ನಮ್ಮದೇ ಅಂಕೋಲದ ಶಿರೂರು, ನೆರೆಯ ಕೇರಳದ ವಯನಾಡಿನಲ್ಲಿ ಆಗಿರುವ ಬೆಚ್ಚಿಬೀಳಿಸುವ ದುರಂತಗಳು ಕಣ್ಣೆದುರೇ ಇರುವಾಗ ಪಶ್ಚಿಮಘಟ್ಟದ ಪ್ರಾಕೃತಿಕ ರಚನೆಯನ್ನೇ ಬುಡಮೇಲು ಮಾಡುವ ಇಂತಹ ಯೋಜನೆಗಳ ಬದಲು ಪರಿಸರ ಸ್ನೇಹಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಸರ್ಕಾರ ಯೋಚಿಸುವುದು ವಿವೇಕ. ಆದ್ದರಿಂದ ಶರಾವತಿ ನೀರು ತರುವ ಯೋಜನೆ ಕೈಬಿಟ್ಟು, ಬೆಂಗಳೂರಿಗೆ ಅಗತ್ಯವಿರುವ 15 ಟಿಎಂಸಿಗಿಂತ ಅಧಿಕ ನೀರು ಸಿಗುವ ಮಹಾನಗರದಲ್ಲಿ ಮಳೆ ನೀರು ಇಂಗಿಸುವ ಮತ್ತು ಕೆರೆಕಟ್ಟೆಗಳ ಪುನರುಜ್ಜೀವನ ಕೈಗೆತ್ತಿಕೊಳ್ಳುವುದು ವಿವೇಚನೆಯ ಮಾರ್ಗ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಶರಾವತಿ ನೀರು ತರುವ ಪರಿಸರ ಘಾತುಕ, ಜೀವ ವಿರೋಧಿ ಯೋಜನೆಯನ್ನು ಕೈಬಿಡಬೇಕು. ಆ ಮೂಲಕ ನಾಡಿನ ಕಾಡು ಮತ್ತು ನಾಡಿನ ಸ್ವಾಸ್ಥ್ಯ ಕಾಯುವ ತನ್ನ ಹೊಣೆಗಾರಿಕೆ ತೋರಬೇಕು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಮೂಲಕ ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ” ಎಂದು ನಾಡಿನ ಅನೇಕ ಪ್ರಜ್ಞಾವಂತರ ಬಳಗ ಅಭಿಪ್ರಾಯ ಪಟ್ಟಿದೆ.

ಈಗಾಗಲೇ ಸಹಿ ಸಂಗ್ರಹ ಅಭಿಯಾನ ನಡೆದಿದ್ದು ಹಿರಿಯ ಸಾಹಿತಿಗಳಾದ ನಾಡೋಜ ನಾ ಡಿಸೋಜಾ, ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಮೂಲೆಗದ್ದೆ, ಹೊಸನಗರ, ಡಾ ಬಂಜಗೆರೆ ಜಯಪ್ರಕಾಶ್, ಡಾ ಪುರುಷೋತ್ತಮ ಬಿಳಿಮಲೆ, ಡಾ ರಾಜೇಂದ್ರ ಚೆನ್ನಿ, ಶಿವಮೊಗ್ಗ, ಡಾ ಶ್ರೀಕಂಠ ಕೂಡಿಗೆ, ಶಿವಮೊಗ್ಗ, ಡಾ ರಹಮತ್ ತರೀಕೆರೆ, ನಾಗೇಶ್ ಹೆಗಡೆ, ರೈತ ಮುಖಂಡರಾದ ಕೆ ಟಿ ಗಂಗಾಧರ್, ಎಚ್ ಆರ್ ಬಸವರಾಜಪ್ಪ, ಚಿದಂಬರ ರಾವ್ ಜಂಬೆ, ಡಾ ಎಚ್ ಎಸ್ ಅನುಪಮಾ, ಕೆ.ಪಿ.ಸುರೇಶ್, ಪ್ರಸಾದ್ ರಕ್ಷಿದಿ, ಕೇಸರಿ ಹರವೂ, ಡಾ ರಾಜಪ್ಪ ದಳವಾಯಿ ಸೇರಿದಂತೆ ಅನೇಕ ಸಾಹಿತಿಗಳು, ಪ್ರಜ್ಞಾವಂತ ಹಿರಿಯರು ಸರ್ಕಾರದ ಈ ಯೋಜನೆ ವಿರೋಧಿಸಿ ಒಮ್ಮತದ ಅಭಿಪ್ರಾಯ ತಿಳಿಸಿದ್ದಾರೆ.

ಸರ್ಕಾರ ತನ್ನ ನಿಲುವು ಬದಲಿಸದೇ ಹೋದರೆ ಈ ಮನವಿ ಮುಂದಿನ ದಿನದಲ್ಲಿ ತೀವ್ರ ಸ್ವರೂಪದ ಹೋರಾಟಕ್ಕೆ ಹೆಜ್ಜೆ ಆಗಲಿದೆ ಎಂದು ಪ್ರಜ್ಞಾವಂತರ ಬಳಗ ಅಭಿಪ್ರಾಯ ಪಟ್ಟಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page