Tuesday, August 20, 2024

ಸತ್ಯ | ನ್ಯಾಯ |ಧರ್ಮ

ಹೇಮಾ ಆಯೋಗದ ವರದಿ: ಮಲಯಾಳಂ ಚಿತ್ರರಂಗ ಕ್ರಿಮಿನಲ್‌ ಮಾಫಿಯಾ ನಿಯಂತ್ರಣದಲ್ಲಿದೆ ಎಂದ ವರದಿ

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ವಿರುದ್ಧ ಕಿರುಕುಳಗಳ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ನ್ಯಾಯಮೂರ್ತಿ ಹೇಮಾ ಸಮಿತಿಯು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ.

2017ರಲ್ಲಿ ನಟಿ ಭಾವನಾ ಅವರ ಮೇಲೆ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದು ಸಂಚಲನ ಮೂಡಿಸಿತ್ತು. ಆಕೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ಹಿಂಸಾಚಾರ ಎಸಗಿದ್ದಾರೆ. ಸ್ಟಾರ್ ಹೀರೋ ದಿಲೀಪ್ ಈ ಪ್ರಕರಣದ ಪ್ರಮುಖ ಆರೋಪಿ. ಈ ಘಟನೆಯ ನಂತರ, ಮಲಯಾಳಂ ಉದ್ಯಮದಲ್ಲಿ ಮಹಿಳೆಯರ ಮೇಲೆ ಎಸಗಲಾಗುತ್ತಿರುವ ಕಿರುಕುಳದ ಬಗ್ಗೆ ವರದಿ ನೀಡಲು ಅಂದಿನ ಸರ್ಕಾರವು ನ್ಯಾಯಮೂರ್ತಿ ಹೇಮಾ ಅವರ ಸಾರಥ್ಯದಲ್ಲಿ ಸಮಿತಿಯೊಂದನ್ನು ರಚಿಸಿತು. ನಟಿ ಶಾರದ ಮತ್ತು ಮಾಜಿ ಐಎಎಸ್ ಅಧಿಕಾರಿ ಕೆ.ಬಿ.ವತ್ಸಲಾ ಕುಮಾರಿ ಈ ಸಮಿತಿಯ ಸದಸ್ಯರಾಗಿದ್ದರು.

ಪ್ರಸ್ತುತ ಸಮಿತಿಯು ತನ್ನ ತನಿಖೆಯನ್ನು ಪೂರ್ತಿಗೊಳಿಸಿ ವರದಿ ಬಿಡುಗಡೆ ಮಾಡಿದೆ. ಪ್ರಸ್ತುತ ಈ ವರದಿಯಲ್ಲಿ ಬೆಳಕಿಗೆ ಬಂದಿರುವ ವಿಷಯಗಳು ಮಲಯಾಳಂ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. 2019ರಲ್ಲಿ ರಚೆನಯಾದ ಈ ಆಯೋಗವು ತನ್ನ ವರದಿಯಲ್ಲಿ ಚಿತ್ರರಂಗದಲ್ಲಿನ ಅವ್ಯವಹಾರಗಳನ್ನು ಬೆಳಕಿಗೆ ತಂದಿದೆ. ಸಮಿತಿಯ ವರದಿಯು ಕಾಸ್ಟಿಂಗ್ ಕೌಚ್ ಜೊತೆಗೆ ಲೈಂಗಿಕ ಶೋಷಣೆಯ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದೆ. ಉದ್ಯಮದಲ್ಲಿ ಮಹಿಳೆಯರಿಗೆ ಕಿರುಕುಳ, ಶೋಷಣೆ ಮತ್ತು ದೌರ್ಜನ್ಯ ಸಾಮಾನ್ಯವಾಗಿದೆ ಎಂದು ವರದಿ ಬಹಿರಂಗಪಡಿಸಿದೆ. “ಕ್ರಿಮಿನಲ್ ಗ್ಯಾಂಗ್” ಉದ್ಯಮವನ್ನು ನಿಯಂತ್ರಿಸುತ್ತಿದೆ ಎಂದು ಅದು ಆರೋಪಿಸಿದೆ. ತಮಗೆ ಮಣಿಯದ ಮಹಿಳೆಯರಿಗೆ ಕಿರುಕುಳ ನೀಡುವ ಕೆಲವು ನಿರ್ಮಾಪಕರು, ನಿರ್ದೇಶಕರು, ನಟರು ಮತ್ತು ಪ್ರೊಡಕ್ಷನ್ ಕಂಟ್ರೋಲರ್‌ಗಳಿಗೆ `ಅಧಿಕಾರದ ನಂಟು’ ಇದೆ ಎಂದು ಸಮಿತಿ ಆರೋಪಿಸಿದೆ.

ಅವಕಾಶಗಳಿಗಾಗಿ ರಾಜಿ ಮಾಡಿಕೊಳ್ಳುವ ಮಹಿಳೆಯರಿಗೆ ಅಡ್ಡಹೆಸರುಗಳನ್ನು ನೀಡಲಾಗುತ್ತದೆ ಮತ್ತು ರಾಜಿಯಾಗದವರನ್ನು ಉದ್ಯಮದಿಂದ ದೂರ ಇಡಲಾಗುತ್ತದೆ ಎಂದು ವರದಿ ಹೇಳಿದೆ.

ಚಿತ್ರರಂಗದ ಖ್ಯಾತ ನಟ-ನಿರ್ದೇಶಕರು ತಮ್ಮ ಸ್ವಾರ್ಥಕ್ಕಾಗಿ ಮಹಿಳೆಯರನ್ನು ಲೈಂಗಿಕ ಕಿರುಕುಳ ಮತ್ತು ದೈಹಿಕ ಸಂಬಂಧಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿಯರೇ ಸಮಿತಿಗೆ ಹೇಳಿಕೆ ನೀಡಿದ್ದಾರೆ. ರಾತ್ರಿಯಲ್ಲಿ ಗಂಡಸರು ಕೋಣೆಯ ಬಾಗಿಲು ಬಡಿಯುವುದು ವಾಡಿಕೆ ಎಂದು ಅವರು ಹೇಳಿದ್ದಾರೆ.

ಕೆಲ ಪ್ರಕರಣಗಳಲ್ಲಿ ಕುಡಿತದ ಅಮಲಿನಲ್ಲಿ ಮಹಿಳಾ ನಟಿಯರ ಕೊಠಡಿಗಳ ಬಾಗಿಲು ಒಡೆದಿದ್ದು ಸಹ ಇದೆ ಎಂದು ವರದಿ ತಿಳಿಸಿದೆ. ಚಿತ್ರರಂಗದಲ್ಲಿ ರಾಜಿ ಮತ್ತು ಶರಣಾಗತಿ ತೀರಾ ಸಾಮಾನ್ಯವಾಗಿದೆ ಎಂದು ಸಮಿತಿಯ ವರದಿ ಬಹಿರಂಗಪಡಿಸಿದೆ.

ಚಿತ್ರರಂಗದ ಸಮಸ್ಯೆಗಳ ಪರಿಹಾರಕ್ಕೆ ಪ್ರಬಲ ಕಾನೂನು ಅಗತ್ಯವಿದ್ದು, ನ್ಯಾಯಮಂಡಳಿ ಸ್ಥಾಪಿಸಬೇಕು ಎಂದು ನ್ಯಾಯಮೂರ್ತಿ ಕೆ.ಹೇಮಾ ಅವರು ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಶಿಫಾರಸು ಮಾಡಿದ್ದಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ಅನೇಕರು ಭಯದಿಂದ ಪೊಲೀಸರಿಗೆ ದೂರು ನೀಡಲು ಬಯಸುವುದಿಲ್ಲ ಎಂದೂ ವರದಿ ಹೇಳಿದೆ.

ಚಲನಚಿತ್ರಗಳಲ್ಲಿನ ಮಹಿಳೆಯರು ಲೈಂಗಿಕ ಕಿರುಕುಳದ ಬಗ್ಗೆ ಇತರ ಮಹಿಳೆಯರು ಅಥವಾ ಹತ್ತಿರದ ಸಂಬಂಧಿಕರೊಂದಿಗೆ ಮಾತನಾಡಲು ಸಹ ಹಿಂಜರಿಯುತ್ತಾರೆ ಎಂದು ಆಯೋಗದ ವರದಿ ಹೇಳಿದೆ.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರು ತಮಗೆ ಎದುರಾದ ಲೈಂಗಿಕ ಕಿರುಕುಳದ ಕಥೆಗಳನ್ನು ಹೇಳಿಕೊಂಡಾಗ ತಮಗೆ ಆಘಾತವಾಗಿದೆ ಎಂದು ಆಯೋಗ ಹೇಳಿದೆ.

ಯಾರಾದರೂ ನಟಿಯರು ಇಂತಹ ಘಟನೆಗಳನ್ನು ನ್ಯಾಯಾಲಯ ಅಥವಾ ಪೊಲೀಸರ ಮುಂದೆ ಬಹಿರಂಗಪಡಿಸಿದರೆ, ನಟಿ ಸೇರಿದಂತೆ ಆಕೆಯ ಕುಟುಂಬದವರು ಸಹ ಜೀವ ಬೆದರಿಕೆಯನ್ನು ಎದುರಿಸುವುದರ ಜೊತೆಗೆ ಇತರ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವರದಿ ಹೇಳಿದೆ

Related Articles

ಇತ್ತೀಚಿನ ಸುದ್ದಿಗಳು

You cannot copy content of this page