Thursday, August 22, 2024

ಸತ್ಯ | ನ್ಯಾಯ |ಧರ್ಮ

ಹದಿನಾಲ್ಕು ವರ್ಷಗಳ ನಂತರ ಕಡೆಗೂ ಸಪ್ಟೆಂಬರ್‌ನಲ್ಲಿ ಜನಗಣತಿ!

ಬೆಂಗಳೂರು: ಹತ್ತು ವರ್ಷಗಳಾದರೂ ಜನಗಣತಿ ನಡೆಸದ ಭಾರತ ಸರ್ಕಾರ ಸೆಪ್ಟೆಂಬರ್‌ನಲ್ಲಿ ಜನಗಣತಿ ಪ್ರಾರಂಭಿಸಲಿದೆ ಎಂದು ಅನಾಮಧೇಯ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ .

ಕೋವಿಡ್-‌19 ಸಾಂಕ್ರಾಮಿಕ ರೋಗದಿಂದಾಗಿ ಜನಸಂಖ್ಯಾ ಗಣತಿಯು ಆರಂಭದಲ್ಲಿ ವಿಳಂಬವಾಯಿತು. ಮೋದಿ ಸರ್ಕಾರವು ಸತತ ಟೀಕೆಗಳನ್ನು ಎದುರಿಸಿದೆ. 150 ವರ್ಷಗಳ ಭಾರತದ ಇತಿಹಾಸದಲ್ಲಿ ಮೊದಲ ಬಾರಿ ದಶವಾರ್ಷಿಕ ಜನಗಣತಿ ನಡೆಯದೇ ಇರುವುದು ಇದೇ ಮೊದಲು. ಮುಂದಿನ ತಿಂಗಳು ಪ್ರಾರಂಭವಾಗುವ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು 18 ತಿಂಗಳುಗಳನ್ನು ತೆಗೆದುಕೊಳ್ಳಲಿದೆ ಎಂದು ಈ ವಿಚಾರದಲ್ಲಿ ನೇರವಾಗಿ ಭಾಗಿಯಾಗಿರುವ ಎರಡು ಸರ್ಕಾರಿ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

ಜನಗಣತಿಯನ್ನು ನಡೆಸುವಲ್ಲಿನ ವಿಳಂಬವು ಇತರ ಅಂಕಿಅಂಶಗಳ ಸಮೀಕ್ಷೆಗಳ ನಿಖರತೆಯ ಮೇಲೆ ಅದರ ಪ್ರಭಾವ ಬೀರಿರುವ ಕಾರಣ ಮೋದಿ ಸರ್ಕಾರ ಅರ್ಥಶಾಸ್ತ್ರಜ್ಞರಿಂದ ಕಟುಟೀಕೆಗೆ ಗುರಿಯಾಗಿತ್ತು. ಆರ್ಥಿಕ ಸೂಚ್ಯಂಕಗಳು, ಹಣದುಬ್ಬರ ದರಗಳು ಮತ್ತು ಉದ್ಯೋಗ ಅಂಕಿಅಂಶಗಳಂತಹ ನಿರ್ಣಾಯಕ ಡೇಟಾ ಸೆಟ್‌ಗಳು ಜನಗಣತಿಯ ಮಾಹಿತಿ ನೇರ ಸಂಬಂಧವನ್ನು ಹೊಂದಿತ್ತವೆ. ಪ್ರಸ್ತುತ, ಈ ಹಲವಾರು ಸಮೀಕ್ಷೆಗಳು ಮತ್ತು ಅವುಗಳ ಮೇಲೆ ಅವಲಂಬಿತವಾಗಿರುವ ಸರ್ಕಾರಿ ಕಾರ್ಯಕ್ರಮಗಳು 2011 ರಲ್ಲಿ ನಡೆಸಿದ ಜನಗಣತಿಯ ಡೇಟಾವನ್ನು ಆಧರಿಸಿವೆ.

ಕೇಂದ್ರ ಗೃಹ ಮತ್ತು ಅಂಕಿಅಂಶ ಸಚಿವಾಲಯಗಳು ಟೈಮ್‌ಲೈನ್ ಅನ್ನು ರಚಿಸಿದ್ದು, ಫಲಿತಾಂಶಗಳು ಮಾರ್ಚ್ 2026 ರಲ್ಲಿ ಬರಲಿವೆ ಎಂದು ಸೂಚಿಸಿವೆ. ಆದರೂ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ ಎಂದು ವರದಿ ತಿಳಿಸಿದೆ .

ಕಳೆದ ವರ್ಷ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿ ಪ್ರಕಾರ, ಕಳೆದ ವರ್ಷ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಬೆಳೆದಿದೆ. ಗೃಹ ವ್ಯವಹಾರಗಳು ಮತ್ತು ಅಂಕಿಅಂಶ ಸಚಿವಾಲಯಗಳು ಈ ವರದಿಗೆ ಪ್ರತಿಕ್ರಿಯೆ ನೀಡಿರಲಿಲ್ಲ.

ಮೋದಿ ಸರ್ಕಾರ ಜನಗಣತಿ ನಡೆಸದೇ ಇರುವುದರಿಂದ ಆಗಿರುವ ಕೋಟಲೆಗಳು:

ಹತ್ತು ವರ್ಷಗಳ ಜನಗಣತಿಯ ಮಾಹಿತಿ ಇಲ್ಲದೇ ಇರುವುದರಿಂದ ಆರೋಗ್ಯ, ಜನಸಂಖ್ಯಾಶಾಸ್ತ್ರ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಕನಿಷ್ಠ 15 ಇತರ ಪ್ರಮುಖ ಡೇಟಾ ಸೆಟ್‌ಗಳು ವಿಳಂಬವಾಗಿವೆ. ಜೊತೆಗೆ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ಸಮೀಕ್ಷೆಗಳ ಗುಣಮಟ್ಟದ ಮೇಲೆ ಪರಿಣಾಮವಾಗಿದೆ.

ನವೀಕರಿಸಿದ ಅಂಕಿಅಂಶಗಳ ಕೊರತೆ ಮತ್ತು 2021 ರ ಜನಗಣತಿಯನ್ನು ನಡೆಸುವಲ್ಲಿ ಮೋದಿ ಸರ್ಕಾರದ ವೈಫಲ್ಯದಿಂದಾಗಿ ಸುಮಾರು 10 ಕೋಟಿ ಜನರು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ (ಪಿಡಿಎಸ್) ಹೊರಗುಳಿದಿದ್ದಾರೆ. ಕಾನೂನುಗಳ ಪ್ರಕಾರ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, ನಗರದಿಂದ 50% ಮತ್ತು ಗ್ರಾಮೀಣ ಪ್ರದೇಶದ 75% ಜನಸಂಖ್ಯೆಯು PDS ವ್ಯಾಪ್ತಿಗೆ ಒಳಪಡಬೇಕು. ಆಗ ಸರ್ಕಾರ 80 ಕೋಟಿಗೆ ಬಂದಿದ್ದು ಹೀಗೆ. ಇಂದು ಜನಗಣತಿ ನಡೆಸಿದರೆ, ಸುಮಾರು 10 ಕೋಟಿ ಜನರು ಹೆಚ್ಚುವರಿಯಾಗಿ ಪಿಡಿಎಸ್‌ನ ಫಲಾನುಭವಿಗಳಾಗಿ ಸೇರ್ಪಡೆಯಾಗುತ್ತಾರೆ.

ಜಣಗಣತಿ ನಡೆಸದೆ ಇರುವುದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS) ಮೇಲೆ ಪರಿಣಾಮ ಬೀರಿದೆ. ಏಕೆಂದರೆ ಕೇಂದ್ರ ಸರ್ಕಾರವು ರಾಜ್ಯದ ಕುಟುಂಬಗಳು ಮತ್ತು ಕಾರ್ಮಿಕರ ಸಂಖ್ಯೆಯ ಆಧಾರದ ಮೇಲೆ ಪ್ರತಿ ರಾಜ್ಯಕ್ಕೆ ಹಣವನ್ನು ನಿಗದಿಪಡಿಸುತ್ತದೆ.

ಜನಗಣತಿ ಮಾಹಿತಿಯನ್ನು ಹತ್ತು ವರ್ಷಗಳಿಂದ ನವೀಕರಿಸದೆ ಇರುವುದರಿಂದ ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿ, ವೃದ್ಧಾಪ್ಯ ವೇತನ ಮತ್ತು ಬಡವರಿಗೆ ವಸತಿಗಾಗಿ ವಿವಿಧ ಯೋಜನೆಗಳಿಗೆ ಹಣವನ್ನು ವಿನಿಯೋಗಿಸಲು ರಾಜ್ಯ ಸರ್ಕಾರಗಳು ಹೆಣಗಾಡುತ್ತಿವೆ.

ಅರ್ಹ ಫಲಾನುಭವಿಗಳು ಕಲ್ಯಾಣ ಯೋಜನೆಗಳಿಂದ ಹೊರಗುಳಿಯದಂತೆ ನೋಡಿಕೊಳ್ಳುವ ಒತ್ತಡದಲ್ಲಿ, ರಾಜ್ಯ ಸರ್ಕಾರಗಳು ತಮ್ಮದೇ ಆದ ಡೇಟಾ ಸೆಟ್‌ಗಳನ್ನು ರಚಿಸಲು ಹಣವನ್ನು ಖರ್ಚು ಮಾಡುವಂತಾಗಿದೆ.

“ಭಾರತದಂತಹ ದೇಶದಲ್ಲಿ ಜನಗಣತಿಯ ಮಾಹಿತಿಯು ಬಹಳ ನಿರ್ಣಾಯಕವಾಗಿದೆ. ಇದು ಜನಸಂಖ್ಯಾ ಪ್ರೊಫೈಲ್, ಲಿಂಗ ಅನುಪಾತ, ವಲಸೆ, ಕುಟುಂಬಗಳ ಆರ್ಥಿಕ ವೈವಿಧ್ಯೀಕರಣ ಮತ್ತು ನಗರೀಕರಣದ ವ್ಯಾಪ್ತಿ ಇತ್ಯಾದಿಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಬಡತನ ಮತ್ತು ಅಸಮಾನತೆಯನ್ನು ಅಂದಾಜು ಮಾಡಲು ಯಾವುದೇ ಮಾದರಿ ಸಮೀಕ್ಷೆಗೆ ಜನಗಣತಿಯ ದತ್ತಾಂಶವು ಆಧಾರ ಅಥವಾ ಚೌಕಟ್ಟನ್ನು ರೂಪಿಸುತ್ತದೆ ”ಎಂದು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್‌ನ ಪ್ರೊಫೆಸರ್ ಎಂ.ವಿಜಯಭಾಸ್ಕರ್ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ .

Related Articles

ಇತ್ತೀಚಿನ ಸುದ್ದಿಗಳು

You cannot copy content of this page