Saturday, August 24, 2024

ಸತ್ಯ | ನ್ಯಾಯ |ಧರ್ಮ

ಮಕಾಡೆ ಮಲಗಿದ ನಮೋ ಮತ್ಸರದ ಬಿಲ್ಲುಗಳು (ಕಠಾರಿಯವರ ರಾಜಕೀಯ ವಿಡಂಬನೆ)

“ಪಲ್ಟು…ಪಲ್ಟು…ಬಾಬುಗಾರು…ಬಾಬುಗಾರು”

ಕೂಗುತ್ತ ರೂಮುಗಳ ಬಾಗಿಲ ಹಿಂದೆ, ಮಂಚ ಕುರ್ಚಿಯ ಕೆಳಗೆ, ಬೀರುಗಳ ಹಿಂದೆ ಎಲ್ಲಿ ಹುಡುಕಿದರೂ ಪಲ್ಟುಕುಮಾರ, ತೆಲುಗುಬಾಬು ಕಾಣದೆ ನಮೋಬಾಬಾ ಚಿಂತೆಗೀಡಾದ. ʼನಾವಷ್ಟೇ ಆಟ ಆಡೋಣ. ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ – ಎಲ್ಲರಿಗೂ ಹೊರ ಹೋಗಲು ಹೇಳಿʼ ಎಂದು ಪಲ್ಟುಕುಮಾರ, ತೆಲುಗು ಬಾಬು ಆಟಕ್ಕೆ ಮುಂಚೆ ಹೇಳಿದ್ದ ಕಾರಣ ನಮೋಗೆ ತಡವಾಗಿ ಅರಿವಾಗತೊಡಗಿತ್ತು. ʼಯಾರೂ ಇಲ್ಲದ ಸಮಯ ನೋಡಿ, ಯಾಮಾರಿಸಿ ಎಸ್ಕೇಪ್ ಆಗಿದ್ದಾರೆ! ಬಿಸಿಲಲ್ಲೂ ಜಿಗಿದಾಡೋ ಈ ಕಪ್ಪೆಗಳನ್ನ ಹೇಗಪ್ಪ ತಕ್ಕಡಿಗೆ ಹಾಕೋದು? ಅಣಬೆ ತಿನ್ಕೊಂಡ್, ಡ್ರೆಸ್ ಮಾಡ್ಕೊಂಡ್ ಹೆಂಗೊ ಮಜವಾಗಿದ್ದೆ. ನಂಬಿದ್ದ ಭಕ್ತರೇ ಕೈಕೊಟ್ಟು…ಪಲ್ಟು, ಬಾಬು ಅಂತ ಅಯೋಗ್ಯರಿಗೆ ಮಸ್ಕಾ ಹೊಡೆಯೊ ಹಂಗಾಯ್ತುʼ ಎಂದು ನಮೋ ಪರಿತಪಿಸಿದ.

ಹಾಗೂ ಹೀಗೂ ಏದುಸಿರು ಬಿಡುತ್ತ, ಸೂರ್ಯ ಮುಳುಗಿದ ಹೊತ್ತಲ್ಲಿ ಪಟ್ಟಾಭಿಷಕ್ತನಾದ ನಮೋಬಾಬಾನ ಕುಂಡಲಿಗೆ ಕತ್ತಲು ತುಂಬಿತ್ತು. ಶನಿ, ಮಂಗಳ, ಗುರು ಎಲ್ಲಾ ಗ್ರಹಗಳು ಒಟ್ಟಿಗೆ ರಾಗಾ ಮತ್ತವನ ಇಂಡಿಯಾ ಗ್ಯಾಂಗ್ ನಲ್ಲಿ ವಕ್ಕರಿಸಿಕೊಂಡು, ದಶದಿಕ್ಕುಗಳಿಂದಲೂ ಅಟಕಾಯಿಸಿಕೊಂಡು ಕೈಕಾಲು ಕಟ್ಟಿ ಹಾಕಿದ್ದವು. ಇಷ್ಟು ಸಾಲದೂಂತ, ಪದಗ್ರಹಣದ ನಂತರ ತುರ್ತಾಗಿ ಕುಟೀರಕ್ಕೆ ಬರಹೇಳಿದ್ದ ಮಾಧವ ಕೃಪಾಕಟಾಕ್ಷ ಕುಟೀರದ ಪುರೋಹಿತ, ಇಂಥದ್ದೇ ಅವಕಾಶಕ್ಕಾಗಿ ಕಾಯುತ್ತಿದ್ದವನಂತೆ ಉರಿವ ಬೆಂಕಿಗೆ ಸುರಿಯಲು ತುಪ್ಪದ ಗಿಂಡಿ ಹಿಡಿದು ನಿಂತಿದ್ದ.

“ಏನು ಅಹಂಕಾರ! ಎಷ್ಟು ಕೊಬ್ಬು!”

“ಯಾರಿಗಪ್ಪ?”

“ಮರ್ಯಾದೆ…ಮರ್ಯಾದೆ. ನಾಲಿಗೆ ಮೇಲೆ ನಿಗಾ ಇರಲಿ. ಚಡ್ಡಿ ಪೂರ್ವಾಶ್ರಮದಲ್ಲಿ ಒಟ್ಟಿಗೆ ಇದ್ದು ಮೂರೊತ್ತು ಉಪ್ಪಿಟ್ಟು ತಿಂದು ಕೊಕ್ಕೊ ಕಬ್ಬಡಿ ಆಡಿರಬಹುದು. ಆಗಿನ ಪುರೋಹಿತರಿಗೆ ಇಬ್ಬರೂ ಕೂಡಿ ಬಾಡಿ ಮಸಾಜ್ ಸೇವೆ ಮಾಡಿರಬಹುದು. ಆದರೆ, ಈಗ ನಾನು ಸಾಮ್ರಾಟನನ್ನು ನಾಮಿನೇಶನ್ ಮಾಡೋನು. ಸಲಿಗೆ ಬೇಡ, ಎಚ್ಚರವಿರಲಿ”

“ಪೂಜಾರಿಗಳು ಕ್ಷಮಿಸಬೇಕು. ತಮ್ಮ ಕೋಪಕ್ಕೆ ಕಾರಣ ತಿಳಿಯಬಹುದೇ?”

“ಯಾವನೋ ಅವ್ನು…ಕಪಿ ನಡ್ಡ…ಸಾಮ್ರಾಟರಿಗೆ ಕುಟೀರದ ಅವಶ್ಯಕತೆ ಇಲ್ಲ ಅಂದವನು?”

“ಅಯ್ಯೋ ಬಿಡಿ…ಆ ದಡ್ಡನ ಮಾತು”

“ಆ ಕಪಿ ಬಾಯಿಗೆ ಆ ಮಾತನ್ನ ಯಾರು ತುರುಕಿರೋದು ನಂಗೊತ್ತು. ನಾನಷ್ಟು ದಡ್ಡ ಅಲ್ಲ. ಇರಲಿ…ದಾನದ ಹೆಸರಲ್ಲಿ ಆಸ್ತಿ ಮಾಡ್ಕೊಂಡ್ ಮಜಾ ಮಾಡ್ತಿರೊ ಸಾಬ್ರ ಬಾಲನ ಕಟ್ ಮಾಡ್ಬೇಕು. ಅದು ಬಿಟ್ಟು ಸಾಬ್ರಿಗೆ ಮೀಸಲಾತಿ ಕೊಡ್ತಿರೊ ತೆಲುಗು ಬಾಬುನ…ಮತ್ತೆ ʼಅಲ್ಲಾ….ಅಲ್ಲಾʼ ಅಂತ ಭಜನೆ ಮಾಡೋ ಪಲ್ಟುನ ಹೆಗಲ ಮೇಲೆ ಹೊತ್ತು ಮೆರೆಸ್ತಿದ್ದೀಯ!”

“ಅದೆಲ್ಲ ನಾಟಕ…ನಿಮಗೆ ಗೊತ್ತಿರೋದೆ. ಎಲ್ರನ್ನೂ ತಬ್ಕೊಬೇಕು ಅಂತ ಅದೆಷ್ಟು ಬಾರಿ ನೀವೇ ಹೇಳಿದ್ದೀರ!”

“ಆಯ್ತು… ಆಯ್ತು. ಹಾಗೆ ಕುಟೀರದ ವತಿಯಿಂದ ದೀಕ್ಷೆ ಪಡೆದ ಚಡ್ಡಿ ಪಂಡಿತರನ್ನು ಉನ್ನತ ಹುದ್ದೆಗೆ ಲಾಂಗಿಟ್ಯುಡಿನಲ್ಲಿ ನೇರವಾಗಿ ಅಪಾಯಿಂಟ್ ಮಾಡ್ಬೇಕು. ಜಾರಿ ಮಾಡಬೇಕಾದ ಮನುವಿಕೃತಿ ಸನಾತನಿ ಅಜೆಂಡಾಗಳು ಸಾಕಷ್ಟಿದೆ”

“ಅದು ಲಾಂಗಿಟ್ಯುಡಿನಲಿ…ಆಗಲ್ಲ…ಲ್ಯಾಟರಲಿ ಮಾಡಬಹುದು”

“ಲ್ಯಾಟರಲ್…ಪರ್ಪೆಂಡಿಕ್ಯುಲರ್…ಯಾವುದೊ ಒಂದು. ಒಟ್ನಲ್ಲಿ ಮಾಡು. ಸದ್ಯಕ್ಕೆ ಹೊರಡು. ನಂಗೆ ಬ್ರೈನ್ ವಾಶಿಂಗ್ ಟೈಮಾಯ್ತು”

ಯಾವ ಆಸೆ ತೋರಿಸಿ ಪಲ್ಟುಕುಮಾರ, ತೆಲುಗುಬಾಬುರನ್ನು ಹೊಸ ಬಿಲ್ಲಿಗೆ ಒಪ್ಪಿಸೋದು ಅಂತ ನಮೋ ಯೋಚಿಸುತ್ತಿರ ಬೇಕಾದರೆ, ಅಪರಿಮಿತ ಕುತಂತ್ರಿ ಆಯೋಜಿಸಿದ್ದ ʼಸಕಲ ಗೋದಿ ಮೀಡಿಯಾ ಪೆಡಿಗ್ರೆ ಬಿಸ್ಕತ್ ಪಾರ್ಟಿʼ ಗೆ ತಡವಾಗುತ್ತಿರುವ ಬಗ್ಗೆ ಆಪ್ತಕಾರ್ಯದರ್ಶಿ ಸೂಚನೆ ನೀಡಿದ.

ವಿಶಾಲವಾದ ಕಾನ್ ಫರೆನ್ಸ್ ರೂಮಿನಲ್ಲಿ – ಬಕೆಟ್ ಗೊಸ್ವಾಮಿ, ತುತ್ತೂರಿ ಕುಮಾರಿ, ಬೆಇಜ್ಜತ್ ಶರ್ಮ, ಪಜಿತ್ ಅವನಪ್ಪನವರ್, ತಂಗಣ್ಣ, ಕುದೀರ್ ಕೌದರಿ…..ಸಕಲ ಗೋದಿ ಮೀಡಿಯಾದ ಮುಖ್ಯ ಆಂಕರ್ ಗಳು ನಮೋಬಾಬಾರ ಪಾದಗಳನ್ನು ಚುಂಬಿಸಿ, ಕುರ್ಚಿಗಳಲ್ಲಿ ಆಸೀನರಾದರು. ಅಪರಿಮಿತ ಕುತಂತ್ರಿ ಎಸೆದ ಬಿಸ್ಕತ್ ಗಳನ್ನು ಕ್ಯಾಚ್ ಹಿಡಿದು ಸವಿಯುತ್ತ ಆನಂದದಲ್ಲಿ ತೇಲಾಡುತ್ತಿರುವಾಗ, ಸಡನ್ನಾಗಿ ಅಪರಿಮಿತ ಕುತಂತ್ರಿ ಕುಪಿತನಾಗಿ “ನೀವೆಲ್ಲಾ ನಿಮ್ಮದೇ ಲೋಕದಲ್ಲಿ… ಹೊರ ಜಗತ್ತಿನ ಪರಿವೇ ಇಲ್ಲದೆ ಮೋಜು ಮಸ್ತಿ ಮಾಡ್ತಿದ್ದೀರ! ಸರ್ವೆ ರಿಪೋರ್ಟ್ ಬಂದಿದೆ. ನಿಮ್ಮ ಚಾನೆಲ್ ಗಳನ್ನ ಯಾರೂ ನೋಡ್ತಾ ಇಲ್ಲಾಂತ! ಅದರಲ್ಲೂ ನಮೋಬಾಬಾ ಸ್ಕ್ರೀನ್ ಮೇಲೆ ಕಂಡ ಕೂಡಲೇ ಟೀವಿ ಆಫ್ ಮಾಡ್ತಿದ್ದಾರಂತೆ! ಜನರು ರಾಗಾ…ರಾಗಾ ಅಂತಿದ್ದಾರೆ. ನೀವುಗಳು ಭೋಗ…ಭೋಗ ಅಂತಿದ್ದೀರ. ಜನ ನಮೋಭಜನೆ ಮಾಡ್ತಾ ಇಲ್ಲ? ನಿಮಗ್ಯಾಕೆ ಬಿಸ್ಕತ್ ಕೊಡ್ಬೇಕು?” ಎಂದು ಕಿರುಚಿದ್ದೇ, ಎಲ್ಲರ ಬಾಯಿಂದ ತಿಂದ ಬಿಸ್ಕತ್ ಹೊರ ಕಕ್ಕಿದವು.

“ಸ್ವಾಮಿಗಳೇ…ನಾವಾದ್ರೂ ಎಷ್ಟೂಂತ ಬೊಗಳೋದು? ನಮೋ ಅವರು ತುಂಬಾನಿಗೆ ಹೇಳಿ ಪುಗಸಟ್ಟೆ ಡೇಟಾ ಕೊಟ್ಟಾಗಿಂದ ಎಲ್ರೂ ಮೊಬೈಲ್, ಕಂಪ್ಯೂಟರಲ್ಲಿ ಬರೋ ಅರ್ಬನ್ ನಕ್ಸಲ್, ಟೆರರಿಸ್ಟ್ ಗಳ ನ್ಯೂಸ್ ನೋಡೋಕೆ ಮುಗಿ ಬಿದ್ದಿದ್ದಾರೆ. ಅವರೆಲ್ಲಾ ದೇಶದ್ರೋಹಿಗಳು, ಒಳಗಾಕಿ. ನಮ್ ಹೊಟ್ಟೆ ಮೇಲೆ ಬರೆ ಹಾಕ್ಬೇಡಿ” ಎಂದು ಗೋಗೆರೆದರು.

ಲ್ಯಾಟರಲ್ ಸನಾತನಿ ಎಂಟ್ರಿ, ಮುಸ್ಲಿಮ್ ಆಸ್ತಿ ಬಾಲ ಕಟ್ ಬಿಲ್ ಜೊತೆಗೆ ಆಂಟಿ ಅರ್ಬನ್ ನಕ್ಸಲ್ ಬ್ರಾಡ್ ಕಾಸ್ಟಿಂಗ್ ಬಿಲ್ಲನ್ನೂ ಒಟ್ಟಿಗೆ ತಂದರಾಯಿತು ಎಂದು ಅಪರಿಮಿತ ಕುತಂತ್ರಿ ಸಲಹೆ ಕೊಟ್ಟ. ಹಾಗೆ ಪಲ್ಟು, ಬಾಬುವನ್ನು ಯಾಮಾರಿಸಲು ʼಲಾಲಿಪಪ್ʼ ಐಡಿಯಾವನ್ನು ಕಿವಿಯಲ್ಲಿ ಸುರಿದಾಗ, ಮೂವತ್ತಾರು ಇಂಚಿಗೆ ಕುಗಿದ್ದ ಎದೆಯನ್ನು ಐವತ್ತಾರಕ್ಕೆ ಉಬ್ಬಿಸಿ ನಮೋ ಪ್ರಸನ್ನನಾದ.

ಲಾಲಿಪಪ್ ಆಸೆಗೆ ಜೊಲ್ಲು ಸುರಿಸುತ್ತ ಪಲ್ಟುಕುಮಾರ, ತೆಲುಗುಬಾಬು ಬಂದಾಗ ನಮೋ ಅವರನ್ನು ತಬ್ಬಿ, ಅಪ್ಪಿ ಮುದ್ದಾಡಿ ಬರಮಾಡಿಕೊಂಡ. ʼಇದ್ಯಾಕೊ ಅತಿಯಾಯಿತುʼ ಎಂದು ಪಲ್ಟು, ಬಾಬು ಮುಖಕ್ಕೆ ಮೆತ್ತಿದ್ದ ಎಂಜಲನ್ನು ಒರೆಸಿಕೊಂಡರು.

“ಪಲ್ಟು, ಬಾಬುಗಾರು…ಇದು ನಿಮಗೋಸ್ಕರ ಆರ್ಡರ್ ಮಾಡಿ ತರಿಸಿದ ಡೆಲಿಶಿಯಸ್ ಲಾಲಿಪಪ್!” ಎಂದು ಕೈಲಿಡಿದ ಚಿನ್ನಾರಿ ಪೇಪರ್ ಸುತ್ತಿಕೊಂಡ ವಿಶೇಷ ಪ್ಯಾಕೇಜನ್ನು ನಮೋ ತೋರಿಸಿದ. ಆತುರದಿಂದ ಅವರು ಪ್ಯಾಕೇಜನ್ನು ತೆಗೆದುಕೊಳ್ಳಲು ಕುರ್ಚಿಯಿಂದ ಎದ್ದಾಗ ನಮೋ ನಗುತ್ತ “ಅವಸರ ಬೇಡ…ಮಿತ್ರೋ. ಇದು ನಿಮಗಾಗಿಯೇ ಇರೋದು” ಎಂದು ಟೇಬಲ್ಲಿನ ಮೇಲಿಟ್ಟು “ಕೊಡ್ತೀನಿ. ಆದರೆ, ಅದಕ್ಕೂ ಮುಂಚೆ ಒಂದಷ್ಟು ಆಟ ಆಡೋಣ. ನನಗೂ ಇತ್ತೀಚಿಗೆ ಫೋಟೊ ಶೂಟ್ ಗಳಿಲ್ಲದೆ ಬೋರ್ ಆಗ್ತಿದೆ” ಎಂದಾಗ ನಮೋನ ಕಳ್ಳಾಟದ ವಾಸನೆ ಹಿಡಿದ ಪಲ್ಟು, ಬಾಬು ಪರಸ್ಪರ ಮುಖ ನೋಡಿಕೊಂಡರು.

ಸರಿ. ಆಪ್ತಕಾರ್ಯದರ್ಶಿ ನೆಲದಲ್ಲಿ ಚೌಕವನ್ನು ಬರೆದು, ಚೌಕಬಾರ ಆಡಲು ಕವಡೆಗಳನ್ನು ತಂದಿಟ್ಟ. ಕವಡೆಗಳನ್ನು ಚೆಲ್ಲುತ್ತ ನಾಲ್ವರು ಆಟವಾಡುವಾಗ, ಅವರನ್ನು ಸಂಪ್ರೀತಗೊಳಿಸಲು ಕುತಂತ್ರಿ ನಮೋ – ಅವಕಾಶ ಸಿಕ್ಕರೂ ಕಾಯಿಗಳನ್ನು ಹೊಡೆಯದೆ ಬೇಕಂತಲೇ ತಪ್ಪುತಪ್ಪಾಗಿ ನಡೆಸಿ ಆಟದಲ್ಲಿ ಹಿನ್ನೆಡೆ ಸಾಧಿಸುವುದನ್ನು ಪಲ್ಟು, ಬಾಬು ಗಮನಿಸಿದರು.

ಅಮರಾವತಿ, ಗುಂಟೂರ್ ಮೆಣಸಿನಕಾಯಿ, ಗಯಾ, ಬೋಜ್ ಪುರಿ ಅಂತೆಲ್ಲ ಹರಟೆ ಮಾತಿನ ಮಧ್ಯೆ – ಲ್ಯಾಟರಲ್ ಸನಾತನಿ ಎಂಟ್ರಿ, ಮುಸ್ಲಿಮ್ ಆಸ್ತಿ ಬಾಲ ಕಟ್ ಬಿಲ್, ಆಂಟಿ ಅರ್ಬನ್ ನಕ್ಸಲ್ ಬ್ರಾಡ್ ಕಾಸ್ಟಿಂಗ್ ಬಿಲ್ಲಿನ ಪ್ರಸ್ತಾಪವನ್ನು ನಮೋ ನವಿರಾಗಿ ಜೋಡಿಸಿದ. ʼಮುಸ್ಲಿಮ್ʼ ಪದ ಕಿವಿಗೆ ಬಿದ್ದದ್ದೇ ಪಲ್ಟು, ಬಾಬು ಕೈಕೊಡವಿಕೊಂಡು ಎದ್ದದ್ದು ನೋಡಿ ನಮೋ ಆತುರ ಪಟ್ಟೆನೆಂದು ಕೈಕೈ ಹಿಸುಕಿಕೊಂಡ.

“ಏಕೆ ಆಟ ಬೇಸರ ಬಂತಾ? ನೀವೇ ಗೆಲ್ತಿದ್ದೀರಿ”

“ಚೌಕಬಾರ ಮಕ್ಕಳಾಟ…ಐಸ್ ಪೈಸ್ ಆಡೋಣ, ನಾವಷ್ಟೇ! ಚೀಟಿಂಗ್ ಬೇಡ. ಚೇಲಾಗಳು, ಸೆಕ್ರೆಟರಿ, ಕಾವಲುಗಾರ – ಎಲ್ಲರನ್ನೂ ಹೊರಗೆ ಕಳಿಸಿ” ಎಂದ ತೆಲುಗುಬಾಬು, ಯಾರು ಮೊದಲು ಹುಡುಕೋದೆಂದು ನಿರ್ಧರಿಸಲು ಹಸ್ತದ ಮೇಲೆ ಹಸ್ತ ಇರಿಸಲು ಹೇಳಿದ. ಸೋತ ನಮೋ ಗೋಡೆಗೆ ಮುಖ ಮಾಡಿ ನೂರರವರೆಗೆ ಎಣಿಸುತ್ತ ನಿಂತ.

ಸಂಖ್ಯೆಗಳನ್ನು ಎಗರಿಸಿ “ತೊಂಭತ್ತೊಂಭತ್ತು…ನೂರು” ಎಂದು ಎಣಿಕೆ ಮುಗಿಸಿ ʼಎಲ್ರೂ ಬಚ್ಚಿಟ್ ಕೊಂಡ್ರಾ…ಹುಡುಕೋಕೆ ಬರ್ಲಾʼ ಅಂತ ಹುಡುಕುತ್ತ ಹೊರಟಾಗ ಪಲ್ಟುಕುಮಾರ, ತೆಲುಗುಬಾಬು ಎಲ್ಲೂ ಕಾಣದೆ ಮಂಗಮಾಯವಾಗಿದ್ದರು.

ಜನವಿರೋಧಿ, ಅಸಮಾನತೆ ಮೆತ್ತಿಕೊಂಡ, ಸೊಲ್ಲೆತ್ತುವ ಬಾಯಿಗೆ ಬೀಗ ಜಡಿಯುವ ಮತ್ಸರದ ನಮೋ ಬಿಟ್ಟ ಬಾಣದ ಬಿಲ್ಲುಗಳು ಜನಾಕ್ರೋಶಕ್ಕೆ ಸಿಕ್ಕು ನಪಾಸಾಗಿ ಮಕಾಡೆ ಮಲಗಿದವು.

ಚಂದ್ರಪ್ರಭ ಕಠಾರಿ
cpkatari@yahoo.com

Related Articles

ಇತ್ತೀಚಿನ ಸುದ್ದಿಗಳು

You cannot copy content of this page