Saturday, August 24, 2024

ಸತ್ಯ | ನ್ಯಾಯ |ಧರ್ಮ

ಒಳಮೀಸಲಾತಿ ಹೋರಾಟದ ಸೈದ್ಧಾಂತಿಕ ಬೆನ್ನೆಲುಬು ಡಾ.ಕೆ.ಬಾಲಗೋಪಾಲ್

-ವಿ.ಎಲ್.ನರಸಿಂಹಮೂರ್ತಿ

ಒಳಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ಮೇಲೆ MRPS ನೇತಾರ ಮಂದಾಕೃಷ್ಣ ಮಾದಿಗ ಹಲವರನ್ನು ಬೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಮಂದಾಕೃಷ್ಣ ಮಾದಿಗ ಭೇಟಿ ಮಾಡಿದ ಹಲವರಲ್ಲಿ ಒಳಮೀಸಲಾತಿ ಹೋರಾಟಕ್ಕೆ ನಿಜವಾಗಿಯೂ ಬೆಂಬಲ ಕೊಟ್ಟವರ ಜೊತೆಗೆ ಬಿಜೆಪಿ-ಸಂಘಪರಿವಾರದ ಹಲವರೂ ಇದ್ದಾರೆ. ಇವೆಲ್ಲವೂ ಅವರ ರಾಜಕೀಯ ಲೆಕ್ಕಾಚಾರ.

ಆದರೆ ಇಂದು ಮಂದಾಕೃಷ್ಣ ಅವರು ಈಗ ಭೌತಿಕವಾಗಿ ನಮ್ಮ ನಡುವೆ ಇಲ್ಲದ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಡಾ. ಕೆ. ಬಾಲಗೋಪಾಲ್ ಅವರ ಮನೆಗೆ ಭೇಟಿ ಕೊಟ್ಟು ಕೃತಜ್ಞತೆ ಸಲ್ಲಿಸಿ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ನನಗೆ ಮಂದಾಕೃಷ್ಣ ಅವರ ಈ ನಡೆ ತುಂಬಾ ಖುಷಿ ಕೊಟ್ಟಿದೆ.

ಒಳಮೀಸಲಾತಿ ಹೋರಾಟ ಶುರುವಾಗಿ ಅದು ಆಂಧ್ರಪ್ರದೇಶದಲ್ಲಿ ತಾರಕಕ್ಕೆ ಹೋದಾಗ ಅದನ್ನು ಬೌದ್ಧಿಕ ವಲಯ ಅಸಂವಿಧಾನಿಕ, ದಲಿತ ಚಳುವಳಿಗೆ ಮಾರಕ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರಿಕಲ್ಪನೆಗೆ ವಿರುದ್ಧ ಅಂತ ಬಿಂಬಿಸುವುದಕ್ಕೆ ಪ್ರಯತ್ನಿಸಿತು. ಒಳಮೀಸಲಾತಿ ಹೋರಾಟವೇ ಅಪ್ರಸ್ತುತ ಎಂದು ವಾದಿಸಿದ ಚಿಂತಕರಲ್ಲಿ ದಲಿತೇತರರು, ದಲಿತ ಚಿಂತಕರು ಎಲ್ಲರೂ ಇದ್ದರು.

ದಲಿತ ಸಮುದಾಯದ ನಡುವೆ ಎದ್ದ ಪ್ರಾತಿನಿಧ್ಯದ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಎಲ್ಲರೂ ಒದ್ದಾಡುತ್ತಿದ್ದಾಗ ಡಾ. ಕೆ. ಬಾಲಗೋಪಾಲ್ EPW ಪತ್ರಿಕೆ ಅಂಕಣದಲ್ಲಿ ಒಳಮೀಸಲಾತಿ ಕುರಿತು ಬರೆದರು. ಬಾಲಗೋಪಾಲ್ ಒಳಮೀಸಲಾತಿ ಹೋರಾಟದ ಅಗತ್ಯದ ಕುರಿತು ಬರೆದ A Tangled Web: Subdivision of SC Reservations in AP(2000) ಮತ್ತು ಒಳಮೀಸಲಾತಿಯನ್ನು ಅಸಿಂಧುಗೊಳಿಸಿ ಸುಪ್ರೀಂಕೋರ್ಟ್ ನೀಡಿದ ಇ.ವಿ. ಚಿನ್ನಯ್ಯ ಕೇಸಿನ ಕುರಿತು ಬರೆದ Justice for Dalits among Dalits: All the Ghosts Resurface(2005) ಈ ಎರಡೂ ಲೇಖನಗಳು
ಒಳಮೀಸಲಾತಿ ಹೋರಾಟಕ್ಕೆ ಸ್ಪಷ್ಟ ಮತ್ತು ಬಲಿಷ್ಠವಾದ ಸೈದ್ಧಾಂತಿಕ ಚೌಕಟ್ಟನ್ನು ಒದಗಿಸಿದವು.
ಒಳಮೀಸಲಾತಿ ಹೋರಾಟ ಕೇವಲ ರಾಜಕೀಯ ಸಂಚು, ನಾಯಕತ್ವದ ಪ್ರಶ್ನೆ, ಐಡೆಂಟಿಟಿ ರಾಜಕಾರಣದ ಅಪಾಯಕಾರಿ ಬೆಳವಣಿಗೆ ಎನ್ನುವ ನೆರೇಟಿವ್‌ ಅನ್ನು ಹೊಡೆದು ಉರುಳಿಸಿದ ಬಾಲಗೋಪಾಲ್ ಚಿಂತನೆ ದಲಿತ ಮತ್ತು ದಲಿತೇತರ ಬುದ್ದಿಜೀವಿಗಳನ್ನು ಅಲುಗಾಡಿಸಿತು. ಬಾಲಗೋಪಾಲ್ ತಮ್ಮ ಓರಿಜಿನಲ್ ಅಂಬೇಡ್ಕರ್‌ವಾದಿ ಕಣ್ಣೋಟದ ಮುಖಾಂತರ ಒಳಮೀಸಲಾತಿ ಹೋರಾಟವನ್ನು ವಿಶ್ಲೇಷಿಸಿದ ನಂತರ ಅದಕ್ಕೆ ಉತ್ತರ ಕೊಡಲಾಗದೆ ಬೌದ್ಧಿಕ ವಲಯ ಮೌನಕ್ಕೆ ಶರಣಾಯಿತು.

ಈಗ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟ ಮೇಲೂ ಬೌದ್ಧಿಕ ವಲಯ ಮೀಸಲಾತಿ ಕುರಿತು ಮೇಲ್ಜಾತಿಯ ಚಿಂತಕರು ಕಟ್ಟಿರುವ ಮಿಥ್‌ಗಳನ್ನೇ ಮುಂದುವರೆಸಿಕೊಂಡು ಒಳಮೀಸಲಾತಿ ಜಾರಿಯಾದರೆ ದಲಿತ ಸಮುದಾಯದ ಒಗ್ಗಟ್ಟು ಮುರಿಯುತ್ತದೆ, ಪ್ರತಿಭೆಗೆ ಅವಕಾಶವಿಲ್ಲದಂತಾಗುತ್ತದೆ, ಮೀಸಲಾತಿ ಅಪ್ರಸ್ತುತವಾಗುತ್ತದೆ, ಸರಿಯಾದ ಅಂಕಿಅಂಶಗಳಿಲ್ಲದ ಕಾರಣ ಒಳಮೀಸಲಾತಿ ಜಾರಿ ಅಸಂಭವ ಎನ್ನುವ ಅಡ್ಡಗೋಡೆಯ ಮೇಲೆ ದೀಪ ಇಡುವ ಮಾದರಿಯ ಜಾಣ ನಡೆ ಅನುಸರಿಸುತ್ತಿದೆ. ದಲಿತರೊಳಗಿನ ಬಲಾಢ್ಯ ಜಾತಿಗಳ ನಾಯಕರು ಇದನ್ನು ಮುಂದುಮಾಡಿ ಒಳಮೀಸಲಾತಿ ಜಾರಿಯಾಗದಂತೆ ಪ್ರಯತ್ನಿಸುತ್ತಿರುವಾಗ ಬಾಲಗೋಪಾಲ್ ಬದುಕಿದ್ದರೆ ಇವರೆಲ್ಲರಿಗೂ ಉತ್ತರಿಸುತ್ತಿದ್ದರು.

ತನ್ನ ಕಾಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಬಾಲಗೋಪಾಲ್ ತರದ ಚಿಂತಕರಿಲ್ಲದೆ ಇವತ್ತು Intellectual void ಸೃಷ್ಟಿಯಾಗಿದೆ.

ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಕುರಿತಂತೆ ಡಾ.ಕೆ. ಬಾಲಗೋಪಾಲ್ ಅವರ ಕಾಣ್ಕೆಯನ್ನು ನೆನಪು ಮಾಡಿಕೊಳ್ಳುವುದು ಇವತ್ತಿನ ಬಿಕ್ಕಟ್ಟಿನ ಸಮಯದಲ್ಲಿ ಹೆಚ್ಚು ಪ್ರಸ್ತುತ.

ಜೈ ಭೀಮ್‌ ಡಾ. ಕೆ. ಬಾಲಗೋಪಾಲ್ ಸರ್…

Related Articles

ಇತ್ತೀಚಿನ ಸುದ್ದಿಗಳು

You cannot copy content of this page