Sunday, August 25, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು-33 : ಹೆಸರಿನಲ್ಲೂ ಕೊಳಕು ಧರ್ಮಕಾರಣ!

ಮನುಷ್ಯ ಹುಟ್ಟುತ್ತಲೇ ಬ್ರಾಹ್ಮಣ್ಯದ, ಪುರೋಹಿತಶಾಹಿಯ ತಂತ್ರಗಳು ಆತನನ್ನು ಸುತ್ತಿಕೊಳ್ಳುತ್ತವೆ. ಒಂದು ಶತಮಾನ ಹಿಂದಕ್ಕೆ ಹೋದರೆ, ಮಕ್ಕಳು ಹುಟ್ಟುತ್ತಲೇ ಜನರು ಪುರೋಹಿತರ ಬಳಿ ಹೆಸರಿಗಾಗಿ ಓಡುತ್ತಿದ್ದರು. ಇದು ನೂರಾರು ವರ್ಷಗಳಿಂದ ನಡೆಯುತ್ತಿದ್ದಿರಬೇಕು… ಚಿಂತಕರಾದ ನಿಖಿಲ್ ಕೋಲ್ಪೆಯವರ ಬರಹದಲ್ಲಿ

ನನ್ನ ಬಳಿ ಹಿರಿಯರಿಂದ ಬಳುವಳಿಯಾಗಿ ಬಂದ, ನನ್ನ ಗ್ರಾಮದ- ವಯಸ್ಸಿನಿಂದಾಗಿ ಮುದಿಯಾಗಿರುವ ದೇಶದ ಮೊದಲ ಮತದಾರರ ಪಟ್ಟಿಯಿಂದ ಹಿಡಿದು, ನಂತರದ ಕೆಲವು ಮತದಾರರ ಪಟ್ಟಿಗಳು ಇವೆ. ಇವುಗಳನ್ನು ಪರಿಶೀಲಿಸಿದರೆ, ಪುರೋಹಿತ ವರ್ಗಗಳು ಜನರ ಹೆಸರಿನಲ್ಲಿಯೂ ತೋರಿಸಿದ ಕೊಳಕು ರಾಜಕೀಯ ಮತ್ತು ಅವರ ಶ್ರೇಷ್ಟತೆಯ ವ್ಯಸನವು ಸ್ಪಷ್ಟವಾಗಿ ಗೊತ್ತಾಗುತ್ತದೆ. ಮೊದಲ ಮತದಾರರ ಪಟ್ಟಿ ತಕ್ಷಣ ಸಿಗದೇ ಇರುವುದರಿಂದ, “1956ರ ಮೊದಲ ಸಮಗ್ರ ಓಟರರ ಪಟ್ಟಿ”ಯನ್ನು ಪರಿಶೀಲಿಸೋಣ. ಇದನ್ನು “ಮದ್ರಾಸು ಲೆಜಿಸ್ಲೇಟಿವ್ ಎಸ್ಸೆಂಬ್ಲಿ/ ಹೌಸ್ ಆಫ್ ದಿ ಪೀಪಲ್” ಚುನಾವಣೆಗಾಗಿ ತಯಾರಿಸಿದ್ದು. ಈಗ ನಮ್ಮ ಬಂಟ್ವಾಳ ತಾಲೂಕು ಇರಲಿಲ್ಲ. ಅದು ಬೆಳ್ತಂಗಡಿ ತಾಲೂಕಾಗಿತ್ತು. ನಮ್ಮ ವಿಧಾನ ಸಭಾ ಕ್ಷೇತ್ರ ನಂತರ ವಿಟ್ಲವಾಗಿ, ಇದೀಗ ಅದು ಮಾಯವಾದ ನಂತರ ಬಂಟ್ವಾಳವಾಗಿದೆ.

ಅದೇನೇ ಇರಲಿ, ಈಗ ಈ ಮತದಾರರ ಪಟ್ಟಿಯಲ್ಲಿ ಇರುವ- ಪೂಜಾರಿ, ಮೂಲ್ಯ (ಕುಲಾಲ/ಕುಂಬಾರ), ಸಪಲ್ಯ (ಗಾಣಿಗ) ಮುಂತಾದ ಹಿಂದುಳಿದ ವರ್ಗಗಳು, ಕೊರಗರು, ಮೇರರು ಸೇರಿದಂತೆ ಇತರ ದಲಿತರ- “ಹಿಂದೂ ಒಂದು”ಗಳ ಕೆಲವು ಹೆಸರುಗಳನ್ನು ಇಲ್ಲಿ ನೀಡುತ್ತಿದ್ದೇನೆ: ಊನಪ್ಪ, ಮೋಂಟು, ನಕ್ಕುರ, ಮಾಂಕು, ಇಸರ (ಈಶ್ವರ), ಪೆರ್ನು, ಮುಂಡಪ್ಪ, ಮೊಡೆಂಕಿಲ, ಕುಂಡ, ಕುಕ್ಕು (ಮಾವು), ಕೋಚ… ಇವೆಲ್ಲವೂ ಗಂಡಸರ ಹೆಸರುಗಳು. ಹೆಂಗಸರು: ಸೇಸು, ಸೋಮಕ್ಕು, ರುಕ್ಕು, ಗುಡ್ಡು, ಗೊಡ್ಡು (ಬಂಜೆ), ಕೊರಪೊಳು, ನೆಮ್ಮಕ್ಕು, ಅಪ್ಪಿ, ಕರ್ಗಿ, ತಂಕರು, ಮುಂಡಿ, ಮೈರೆ, ಬಡೆದಿ, ಬೀತ್ರು, ತುಕ್ರ.

ಇನ್ನು ಮುಸ್ಲಿಮರ ಹೆಸರುಗಳು: ಸಾದುಬ್ಯಾರಿ, ಸೇಕಾಲಿ, ಚೆಯ್ಯಬ್ಯಾರಿ, ಪೊಡಿಯ, ಪಮ್ಮಬ್ಬ, ಅಚ್ಚಬ್ಬ-ಗಂಡಸರು. ಐಸಮ್ಮ, ಅಲಿಯಮ್ಮ, ಚೆಯ್ಯಮ್ಮ, ಇನ್ನಮ್ಮ- ಹೆಂಗಸರು.

ಕ್ರೈಸ್ತರ ಹೆಸರುಗಳಲ್ಲಿ, ಗಂಡಸರು: ಪೇದ್ರು, ಪೋಕ ಪೊರ್ಬು, ಬೇಜ್ಮಿ (ಬೆಂಜಮಿನ್), ಇಂತ್ರು, ದೂಜ, ಲೊರೆಸ್ (ಲಾರೆನ್ಸ್), ಬೋಸ್ತ್ಯಾಂ. ಹೆಂಗಸರು: ಮೆಗ್ವೆಲೆ, ಕೊಸೆಸ್, ದುಲ್ರೇಸ್ ಇತ್ಯಾದಿ.

ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಬ್ರಾಹ್ಮಣರು ಮತ್ತು “ಮೇಲ್ಜಾತಿ”ಯವರ ಹೆಸರುಗಳಲ್ಲಿ, ಗಂಡಸರು: ಸೂರ್ಯನಾರಾಯಣ ರಾವ್, ವಿಷ್ಣು ತುಂಗ, ಭವಾನಿ ಶಂಕರ, ನಾರಾಯಣ ಭಟ್ಟ, ಶಂಕರ ರಾವ್, ಸೀತಾರಾಮ ಐತಾಳ, ನರಸಿಂಹ ಪ್ರಭು, ಗಣಪತಿ ಪೈ. ಹೆಂಗಸರು: ಮಹಾಲಕ್ಷ್ಮೀ ಅಮ್ಮ, ಸರಸ್ವತಿ ಬಾಯಿ, ಪಾರ್ವತಿ ಅಮ್ಮ, ಕಾವೇರಮ್ಮ…

ಇಲ್ಲಿನ ಕೆಲವು ಹೆಸರುಗಳಿಗೆ ಅರ್ಥವೇ ಇಲ್ಲ. ಕೆಲವಕ್ಕೆ ನಿಕೃಷ್ಟ, ಅಶ್ಲೀಲ, ಕುಚೋದ್ಯದ ಅರ್ಥಗಳೂ ಇವೆ. ಒಂದು ವೇಳೆ ಅಪ್ಪಿತಪ್ಪಿ ದೇವರ ಹೆಸರಿದ್ದರೂ, ಅವುಗಳನ್ನು ಅಪಭ್ರಂಶಗೊಳಿಸಲಾಗಿದೆ. ಕೆಲವಕ್ಕೆ ಗ್ರಾಮ್ಯೀಕರಣ ಕಾರಣವಾಗಿರಬಹುದಾದರೂ,, ಎಲ್ಲವಕ್ಕೆ ಅಲ್ಲ. ಈ ಹೆಸರುಗಳನ್ನು ನೋಡಿಯೇ, ಅವರು ಹಿಂದುಳಿದ ವರ್ಗದವರೋ, ಅವರ ಆರ್ಥಿಕ ಸ್ಥಾನಮಾನ ಏನು, ಅವರು ದಲಿತರೋ, ಅಥವಾ “ಅಪ್ಪಟ ಮೇಲ್ಜಾತಿ”ಯವರೋ ಎಂದು ಬಹುತೇಕ ಸ್ಪಷ್ಟವಾಗಿ ಹೇಳಬಹುದು.

ನಂತರದ ವರ್ಷಗಳ ಮತದಾರರ ಪಟ್ಟಿಗಳನ್ನು ಕಾಲಾನುಕ್ರಮಣಿಕೆಯಂತೆ ನೋಡುತ್ತಾ ಬಂದರೆ, ಅವು ನಮ್ಮ ಸಾಮಾಜಿಕ ಬೆಳವಣಿಗೆಯ ಹೆಜ್ಜೆಗುರುತುಗಳಂತೆ ಭಾಸವಾಗುತ್ತವೆ. ಈಗಿನ ಮತದಾರರ ಪಟ್ಟಿಯಲ್ಲಿ ಇಂತಹ ಹೆಸರುಗಳೇ ಇಲ್ಲ. ತಮ್ಮ ಹಿರಿಯರ ಹೆಸರುಗಳು ಹೀಗಿದ್ದವು ಎಂದೂ ಈಗಿನ ಪೀಳಿಗೆಯವರು ನಂಬಲಾರರು. ಮೇಲೆ ಕಾಣಿಸಿದ ತಾರತಮ್ಯ ಮತ್ತು ತಣ್ಣಗಿನ ಕ್ರೌರ್ಯಕ್ಕೆ ಕಾರಣ ಏನು ಮತ್ತು ಯಾರು?

ಮನುಷ್ಯ ಹುಟ್ಟುತ್ತಲೇ ಬ್ರಾಹ್ಮಣ್ಯದ, ಪುರೋಹಿತಶಾಹಿಯ ತಂತ್ರಗಳು ಆತನನ್ನು ಸುತ್ತಿಕೊಳ್ಳುತ್ತವೆ. ಒಂದು ಶತಮಾನ ಹಿಂದಕ್ಕೆ ಹೋದರೆ, ಮಕ್ಕಳು ಹುಟ್ಟುತ್ತಲೇ ಜನರು ಪುರೋಹಿತರ ಬಳಿ ಹೆಸರಿಗಾಗಿ ಓಡುತ್ತಿದ್ದರು. ಇದು ನೂರಾರು ವರ್ಷಗಳಿಂದ ನಡೆಯುತ್ತಿದ್ದಿರಬೇಕು. ನಕ್ಷತ್ರಕ್ಕೆ ಅನುಗುಣವಾಗಿ ಬರುವ ಕೆ, ಕು, ಚು, ಚಿ… ಇತ್ಯಾದಿಯಾಗಿ ಪಂಚಾಂಗದಲ್ಲಿ ಇರುವ ಹೆಸರೇ ಇಡಲಾಗದ ಅಕ್ಷರಗಳಿಗೂ ಪುರೋಹಿತರು ಒಂದು ಹೆಸರು ಹೊಸೆದು ಸೂಚಿಸುತ್ತಿದ್ದರು. ಅದರೆ, ಹೆಚ್ಚಿನವರಿಗೆ ಹುಟ್ಟಿದ ದಿನಾಂಕ, ಜಾತಕ ಅಂದರೆ ನಕ್ಷತ್ರ, ಗೋತ್ರ ಇತ್ಯಾದಿ ಬರೆದುಕೊಡುತ್ತಿರಲಿಲ್ಲ. ವಾಸ್ತವವಾಗಿ ತುಳುವರಿಗೆ ಪಿತೃ ಪ್ರಧಾನವಾದ ಗೋತ್ರವೇ ಇಲ್ಲ. ಅವರಿಗಿರುವುದು ತಾಯಿ “ಬರಿ”. ಅದು ಜಾತಿಯನ್ನೂ ಸೂಚಿಸುವುದಿಲ್ಲ. ಒಂದೇ ಬರಿಯವರು ಬೇರೆಬೇರೆ ಜಾತಿಗಳಿಗೆ ಸೇರಿರಬಹುದು. (ಬಂಟರಲ್ಲಿ ಅಳಿಯ ಕಟ್ಟು ಇದೆ. ಇದೂ ಸ್ತ್ರೀ ಪ್ರಧಾನ). ಅನಕ್ಷರಸ್ಥರಿಗೆ ಬರೆದುಕೊಡುವುದೆಲ್ಲಾ ಯಾಕೆ ಅಲ್ಲವೆ?! ಬೇಕಾದರೆ ಮುಂದೆ ಅವರು ಎಲ್ಲದಕ್ಕೂ ತಮ್ಮ ಬಳಿಯೇ ಬರಬೇಕಲ್ಲ! ಇವುಗಳ ಹಿಂದಿರುವ ರಾಜಕೀಯ ಮತ್ತು ವ್ಯಾಪಾರಿ ಬುದ್ಧಿಯ ಆವಿಷ್ಕಾರಗಳನ್ನು ಗಮನಿಸೋಣ.

ವ್ಯಕ್ತಿ ಮುಂದೊಮ್ಮೆ ಪೂಜೆ, ದೋಷ, ಪರಿಹಾರ ಎಂದು ಬಂದಾಗ, ಹೆಸರು ಹೇಳಿದ ಕೂಡಲೇ ಬ್ರಾಹ್ಮಣೇತರರಲ್ಲಿ ಮೇಲ್ಜಾತಿಯವನೋ, ಕೆಳಜಾತಿಯವನೋ, ಮೇಲ್ಜಾತಿಯವನಾಗಿದ್ದರೆ, ಸ್ಥಿತಿವಂತನೋ ಬಡವನೋ, ಅಥವಾ ದಲಿತ ಸಮುದಾಯದವನೋ ಎಂದು ಗೊತ್ತಾಗಬೇಕು. ಅವನ ಹುಟ್ಟಿದ ನಕ್ಷತ್ರ ಗೊತ್ತಾಗಬೇಕು. ಇಲ್ಲಿ ಪುಲ್ಲಿಂಗ ಮಾತ್ರ ಬಳಸಿರುವುದು ಉದ್ದೇಶಪೂರ್ವಕವಾಗಿಯೇ! ಪೂಜೆಗಳಲ್ಲಿ ಹೆಣ್ಣುಗಳಿಗೆ ಸ್ಥಾನ ಇಲ್ಲದುದರಿಂದ, ಅವರ ಹೆಸರುಗಳಿಗೆ ಹೆಚ್ಚು ಮಹತ್ವವಿರಲಿಲ್ಲ. ಅಪ್ಪ ಇದ್ದಲ್ಲಿ ಅಮ್ಮ ಮಾಡಿದರೆ ಆಯಿತು. ಉದಾಹರಣೆಗೆ ವೆಂಕಪ್ಪ- ವೆಂಕಮ್ಮ… ಅದು ಕೆಲವು ಸಲ ಎಂಕಪ್ಪ-ಎಂಕಮ್ಮ ಆಗುತ್ತಿತ್ತು.

ಕರಾವಳಿಯ ಮಟ್ಟಿಗೆ ಹೇಳುವುದಾದರೆ, ಬಡ ಶೂದ್ರರಾದರೆ ಚೊಂಗ, ಪೋಂಕ, ಮುದರ ಎಂಬ ಹೆಸರುಗಳು; ಸ್ವಲ್ಪ ಸ್ಥಿತಿವಂತ ಶೂದ್ರರಾದರೆ ಚೆನ್ನಪ್ಪ, ಸಂಕಪ್ಪ, ವಾಸಪ್ಪ ಇತ್ಯಾದಿ ಹೆಸರುಗಳು! ಅವೇ ಹೆಸರುಗಳು ಬ್ರಾಹ್ಮಣರಿಗಾದರೆ ಚೆನ್ನಕೇಶವ, ಶಂಕರನಾರಾಯಣ, ವಾಸುದೇವ ಮುಂತಾದ ಘನ ಹೆಸರುಗಳಾಗುತ್ತಿದ್ದವು! ಈ ಶೂದ್ರರು ಸಾಕಷ್ಟು ಸ್ಥಿತಿವಂತರಾಗಿದ್ದರೆ, ಅಥವಾ ವಿದ್ಯಾವಂತರಾಗಿದ್ದರೆ ಅಶೋಕ, ರಾಮ, ಲಕ್ಷ್ಮ ಣ, ದೇವದಾಸ ಇತ್ಯಾದಿ ಹೆಸರುಗಳು ಪ್ರಾಪ್ತವಾಗುತ್ತಿದ್ದವು.

ಅದರೆ, ಸಮಾಜದ ಕೆಳಸ್ತರದ ಶೋಷಿತ ಜನಾಂಗಗಳ ಮಕ್ಕಳಿಗೆ ಹೆಸರಿಡುವಾಗ ಪಂಚಾಂಗ ನೋಡುವ ಕಷ್ಟವನ್ನೂ ಯಾರೂ ತೆಗೆದುಕೊಳ್ಳುತ್ತಿರಲಿಲ್ಲ! ವಾರದ ದಿನಗಳ ಹೆಸರುಗಳಿಗೆ ಅನುಗುಣವಾಗಿ ಐತಾರ ಅಂದರೆ ಆದಿತ್ಯವಾರ ಹುಟ್ಟಿದವರಿಗೆ ಐತಾರ, ಸೋಮಾರದವರಿಗೆ ಚೋಮ, ಅಂಗಾರೆಯವರಿಗೆ ಅಂಗಾರ, ಬುದಾರದವರಿಗೆ ಬೂದ, ಗುರುವಾರದವರಿಗೆ ಗುರುವ, ಸುಕ್ರಾರದವರಿಗೆ ತುಕ್ರ, ಸನಿವಾರದವರಿಗೆ ತನಿಯ, ಚನಿಯ ಮುಂತಾದ ಹೆಸರುಗಳನ್ನು ಬಿಸಾಕಲಾಗುತ್ತಿತ್ತು! ಹೆಣ್ಣು ಮಕ್ಕಳಿಗೆ ಹೆಸರಿಡಲೂ ಒದ್ದಾಡಬೇಕಾಗಿರಲಿಲ್ಲ! ಐತನನ್ನು ಐತೆ, ಚೋಮನನ್ನು ಚೋಮು ಮಾಡಿದರೆ ಮುಗಿಯಿತು! ಎಂದಿಗೂ ಪೂಜೆ ಮಾಡಲು ಬರಲಾರದ ಬಡ ದಂಡಪಿಂಡ ಸೂದ್ರಮುಂಡೇವಕ್ಕೆ ಇವೇ ಹೆಸರುಗಳಿಗೆ ಅಪ್ಪ, ಅಮ್ಮ , ಅಕ್ಕ, ಅಕ್ಕು ಸೇರಿಸಿ ಇಟ್ಟರಾಯಿತು! ಐತಪ್ಪ-ಐತಮ್ಮ, ಐತಕ್ಕ, ಐತಕ್ಕು…ಹೀಗೆ!

ಪುರೋಹಿತರಿಗೆ ಇದರಿಂದ ಒಂದು ಅನುಕೂಲವೆಂದರೆ, ಜೀವನದಲ್ಲಿ ಈ ಶೂದ್ರರು ಮುಂದೆ ಒಂದಲ್ಲ ಒಂದು ದಿನ ತಮ್ಮ ಬಳಿಗೆ ಬರಲೇ ಬೇಕು. ಬರದಿದ್ದರೆ ಬರುವಂತೆ ಮಾಡುವ ಆವಿಷ್ಕಾರಗಳಿವೆ! ಮಾಟ, ಮಂತ್ರ, ಬೂತದ ಬಾಧೆ, ಪ್ರೇತ (ಕುಲೆ) ಬಾಧೆ ಹೀಗೆ ಹಲವು ಅಸ್ತ್ರಗಳಿವೆ. ಹಿಂದೂಗಳಿಗೆ ಪೂಜೆ ಮಾಡಿಸುವಾಗ ಹುಟ್ಟಿದ ನಕ್ಷತ್ರಗಳ ಹೆಸರು ಹೇಳಲೇಬೇಕು. ಇದೊಂದು ಯುನೀಕ್ ಐಡೆಂಟಿಫಿಕೇಶನ್ ನಂಬರ್ ಇದ್ದಂತೆ! ಇಲ್ಲದಿದ್ದಲ್ಲಿ ಸಂಬಂಧಪಟ್ಟ ದೇವರುಗಳು ಅರ್ಜಿಗಳನ್ನು ಸ್ವೀಕರಿಸುವುದಿಲ್ಲ! ದಡ್ಡ ಶೂದ್ರರಿಗೆ ಅದನ್ನು ನೆನಪಿಡುವುದು ಬಿಡಿ, ಉಚ್ಛರಿಸಲೂ ಬರುವುದಿಲ್ಲ! ಆಧಾರ್ ಕಾರ್ಡ್ ಮರೆತಂತೆ ಮರೆತು ಬಿಡುತ್ತಾರೆ. ಅದಕ್ಕೆ ಅವರನ್ನು ಈ ಕಷ್ಟದಿಂದ ಪಾರುಮಾಡಲು ಈ ಮಹಾನ್ ಆವಿಷ್ಕಾರ ಮಾಡಲಾಗಿತ್ತು! ಒಬ್ಬ ಮನುಷ್ಯ ಎಷ್ಟೇ ದಡ್ಡನಾಗಿದ್ದರೂ, ಸ್ವಂತ ಮತ್ತು ತನ್ನ ಹೆಂಡತಿ ಮಕ್ಕಳ ಹೆಸರನ್ನು ಮರೆತುಬಿಡುವುದು ಸಾಧ್ಯವಿಲ್ಲವಾದುದರಿಂದ, ಹೆಸರು ಹೇಳಿದರೆ ಸಾಕು, ಭಟ್ಟರು ಕಂಪ್ಯೂಟರಿಗಿಂತ ಬೇಗ ನಕ್ಷತ್ರವನ್ನು ಕಂಡುಹಿಡಿದುಬಿಡುತ್ತಾರೆ! ಅದುದರಿಂದ ಸ್ವಲ್ಪ ಮಂದ ಭಟ್ಟರಿಗೆ ಅನುಕೂಲವಾಗಲೆಂದು ಹುಡುಕಾಟದ ವ್ಯಾಪ್ತಿ (ಸರ್ಚ್ ಫೀಲ್ಡ್) ಕಿರಿದುಗೊಳಿಸಲಾಗಿತ್ತು. ಹೆಸರುಗಳ ಸಂಖ್ಯೆ ಕಡಿಮೆ ಇದ್ದಷ್ಟು ಅವರ ಮಸ್ತಿಷ್ಕದ ಭಾರ ಕಡಿಮೆಯಾಗುತ್ತಿತ್ತು! ಅದುದರಿಂದಲೇ ಊರಿನಲ್ಲಿ ಹತ್ತಿಪ್ಪತ್ತು ಸಂಕಪ್ಪ, ವೆಂಕಪ್ಪರು ಕಂಡುಬರುತ್ತಿದ್ದು, ಗುರುತಿಗಾಗಿ ಅವರಿಗೆ ಚಹರೆ, ಸ್ವಭಾವಗಳಿಗೆ ಅನುಗುಣವಾಗಿ ಕುಂಟೆ, ಪೆದ್ದೆ, ದೋಂಟಿ (ಸಣಕಲಾಗಿ ಉದ್ದವಿದ್ದರೆ), ಕಲ್ವೆ (ಕಳ್ಳ) ಇತ್ಯಾದಿ ಅಡ್ಡ ಹೆಸರುಗಳು ಜೀವನದುದ್ದಕ್ಕೂ ಅಂಟಿಕೊಳ್ಳುತ್ತಿದ್ದವು! ಕುಂಟೆ ಎಂಕಪ್ಪೆ, ದೋಂಟಿ ಸಂಕಪ್ಪೆ…ಹೀಗೆ.

ಇಂತಹ ಒಂದು ಸರಳವಾದ, ‘ವೈಜ್ಞಾನಿಕ’ವಾದ ‘ಹ್ಯೂಮನ್ ಕಾಸ್ಟ್ ಎಂಡ್ ಸ್ಟೇಟಸ್ ರೆಕಗ್ನಿಶನ್ ಸಿಸ್ಟಮ್’ ಭಾರತೀಯ, ಸನಾತನಿ ಪುರೋಹಿತರ ಮಹಾನ್ ಆವಿಷ್ಕಾರಗಳಲ್ಲಿ ಒಂದು! ಪ್ರಪಂಚದಲ್ಲಿ ಯಾರೂ ಇದನ್ನು ಮಾಡಿಲ್ಲ!

ಇದರಲ್ಲೂ ಇನ್ನೊಂದು ವ್ಯವಸ್ಥೆಯನ್ನು ಅಳವಡಿಸಲಾಗಿತ್ತು! ಈ ಆವಿಷ್ಕಾರದ ಹೆಸರೇ ‘ಹ್ಯೂಮನ್ ಫಿಲ್ತ್ ಸೆಪರೇಷನ್ ಸಿಸ್ಟಮ್’ ಅಂತ! ಇದನ್ನು ವಿದೇಶಗಳಲ್ಲಿ ಬಣ್ಣ ಮತ್ತು ಜನಾಂಗೀಯ ನೆಲೆಗಳಲ್ಲಿ ಮಾಡುತ್ತಿದ್ದರೆ, ನಮ್ಮ “ಹಿಂದೂ ಒಂದು” ಪುರೋಹಿತರು ಅದಕ್ಕಿಂತಲೂ ಹಿಂದೆಯೇ, ಅದಕ್ಕಿಂತಲೂ ಸೂಕ್ಷ್ಮವಾದ ಜಾತಿ ಆಧರಿತ “ವೈಜ್ಞಾನಿಕ ವ್ಯವಸ್ಥೆ” ಕಂಡುಹಿಡಿದಿದ್ದರು! ಅದುವೇ, ದಲಿತರನ್ನು ಹೆಸರಿನಿಂದಲೇ ಗುರುತಿಸಿ ಪ್ರತ್ಯೇಕಿಸುವ, ದೂರವಿಡುವ ವ್ಯವಸ್ಥೆಯಿದು!

ಇಂತಹ ಹುಲು ಮಾನವರನ್ನು ಮಾನವರೆಂದೇ ಪರಿಗಣಿಸಬಾರದು ಎಂದು ಅಂತವರಿಗೆ ಪಿಜಿನ (ಇರುವೆ) ಬೊಗ್ಗು, ಬೊಗುರ ಮತ್ತು ಬೊಗ್ಗಿ (ನಾಯಿಗಳು), ನಕ್ಕುರ (ಎರೆಹುಳ), ಕಜವು (ಕಸ), ನಾದೆಲ (ಕೊಳಕು ವಾಸನೆಯವ), ಸೀಂಕ್ರ (ಕಸಬರಿಕೆಯ ಕಡ್ಡಿ), ಮೈಪು (ಕಸಬರಿಕೆ) ಮುಂತಾದ ಪವಿತ್ರ ಹೆಸರುಗಳನ್ನು ದಯಪಾಲಿಸಲಾಗುತ್ತಿತ್ತು! ಇವರಲ್ಲಿ ಇಂದು ನಕ್ಕುರ (ಎರೆಹುಳ) ಮಾತ್ರ ಮೇಲ್ಜಾತಿಯವರ ಮನಸ್ಸಿನಲ್ಲಿ ಸಾವಯವ ಕೃಷಿಯ ಹೆಸರಿನಲ್ಲಿ ಸ್ವಲ್ಪ ಸ್ಥಾನಮಾನ ಪಡೆದಿದ್ದಾನೆ!

ಕರಾವಳಿಯ ಶೂದ್ರಾದಿಗಳ ಬೂತ (ಇದು ಭೂತವಲ್ಲ!)ದ ನಡಾವಳಿಗಳು “ಭೂತಾರಾಧನೆ”ಗಳಾಗಿ, ಕೋಲ, ನೇಮಗಳು, ಕೋಲೋತ್ಸವ, ನೇಮೋತ್ಸವಗಳಾಗಿವೆ. ಅಷ್ಟೇಕೆ ದೈವಗಳ ಹೆಸರೂ ಸಂಸ್ಕೃತಮಯ. ಲೆಕ್ಕೆಸಿರಿ-ರಕ್ತೇಶ್ವರಿ, ಕಲ್ಲುಟ್ಟಿ- ಕಲ್ಲುರ್ಟಿ ಸತ್ಯಜಾವದೆ- ಸತ್ಯದೇವತೆ; ಅಷ್ಟೇ ಏಕೆ ಮುಸ್ಲಿಂ ಬೂತವಾದ ಬೊಬ್ಬರ್ಯ-ಬಬ್ರುವಾಹನ… ಹೀಗೆ…!

ಯಾಕೆಂದರೆ, ಕಾಲ ಬದಲಾದಂತೆ ಸಾಫ್ಟ್‌ವೇರ್ ಅಪ್‌ಗ್ರೇಡ್ ಆಗುತ್ತಲೇ ಇದೆ. ಮೊದಲಿಗೆ ಮೇಲ್ಜಾತಿಯ ಹೆಸರುಗಳು ಕೆಳಕ್ಕೂ ಇಳಿಯಲಾರಂಭಿಸಿದವು. ದಲಿತರಲ್ಲಿಯೂ ಶಂಕರ, ರಾಮರು ಕಾಣಿಸಿಕೊಳ್ಳಲಾರಂಭಿಸಿದರು. ಎಲ್ಲರಿಗೂ ಅನುಕೂಲವಾಗಲಿ ಎಂದು ಪಂಚಾಂಗಗಳಲ್ಲಿಯೇ ನಕ್ಷತ್ರಗಳ ಮುಂದೆ ಹೆಸರುಗಳ ಆರಂಭದ ಅಕ್ಷರಗಳನ್ನು ಕೊಡಲಾಯಿತು. ಆಧುನಿಕ ಹೆಸರುಗಳು ಬಂದಂತೆ, ಜನರು ತಮ್ಮ ಹುಟ್ಟಿದ ನಕ್ಷತ್ರಗಳನ್ನು ನೆನಪಿಡಲು ಆರಂಭಿಸಿದುದರಿಂದ, ದೊಡ್ಡ ಪ್ರಮಾದಗಳೇನೂ ಆಗುತ್ತಿಲ್ಲ. ಇದರಿಂದ ಆಗುವ ಅರ್ಥಿಕ ನಷ್ಟವೂ ಲೆಕ್ಕಕ್ಕಿಲ್ಲ. ಜನರು ಅವರದ್ದೇ ಸಿಸ್ಟಮ್ ಕಂಡುಹಿಡಿದಿದ್ದಾರೆ. ಹೆಚ್ಚಿನವರು ವಾಡಿಕೆ ಹೆಸರು, ಜಾತಕದ ಹೆಸರು ಎಂದು ಎರಡೆರಡು ಹೆಸರು ಇಟ್ಟುಕೊಂಡಿರುತ್ತಾರೆ!

ಆರ್ಥಿಕ ನಷ್ಟ ಇಲ್ಲ ಯಾಕೆಂದರೆ, ಪುರೋಹಿತರು ಎಂತೆಂತಹಾ ಮಹಾನ್ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ, ಲಕ್ಷಗಟ್ಟಲೆ ಸಂಪಾದನೆಯ ಕ್ರಿಯಾಕರ್ಮಗಳ ನಡುವೆ ಜುಜುಬಿ ಚಿಲ್ಲರೆ ದಕ್ಷಿಣೆಯ ನಾಮಕರಣ ಮಾಡುತ್ತಾ ಕೂರಲು ಪುರುಸೊತ್ತಾದರೂ ಯಾರಿಗಿದೆ!? ಕಾಲಕ್ಕೆ ಅನುಗುಣವಾಗಿ ಬದಲಾಗುತ್ತಾ, ಆಧುನಿಕವಾಗುತ್ತಾ ಹೋಗಿರುವ ಹೆಸರುಗಳನ್ನು ಕ್ರಮವಾಗಿ ಮೊದಲ ಮತದಾರರ ಪಟ್ಟಿಯಿಂದ ಹಿಡಿದು ಇತ್ತೀಚಿನ ಮತದಾರರ ಪಟ್ಟಿಯ ತನಕ ಅವುಗಳಲ್ಲಿರುವ ಹೆಸರುಗಳನ್ನು ಪರಿಶೀಲಿಸುತ್ತಾ ಹೋದರೆ ಗೊತ್ತಾಗುತ್ತದೆ. ಆ ಕುರಿತು ಪುರೋಹಿತರಿಗೀಗ ಯಾವ ಅಡಚಣೆಯೂ ಇಲ್ಲ. ಯಾಕೆ?

ಇವರು ಎಷ್ಟು ನಾಜೂಕಿನ ಜನಗಳೆಂದರೆ, ಶೂದ್ರ, ದಲಿತರಿಗೆ ಇರುವ ಕೀಳರಿಮೆಯನ್ನು ಬಳಸಿಕೊಂಡು, ತಮ್ಮ ಶ್ರೇಷ್ಠತೆಯನ್ನು ಉಳಿಸಿಕೊಳ್ಳುತ್ತಾರೆ. ದೇಶಪ್ರೇಮ, ಸನಾತನ, ಭವ್ಯ ಪರಂಪರೆ, ಸಂಪ್ರದಾಯ, ಮಣ್ಣುಮಸಿ ಎಂದು ಶೂದ್ರ, ದಲಿತರಿಗೆ ಮಂಕುಬೂದಿ ಎರಚಿ, ತಮ್ಮ ರಾಜಕೀಯ, ಸಾಮಾಜಿಕ ಬೇಳೆ ಬೇಯಿಸುತ್ತಾ ಸದಾ ಮುಂಚೂಣಿಯಲ್ಲಿಯೇ ಇರುತ್ತಾರೆ. ಇದು ಹೇಗೆ ಎಂಬುದನ್ನು ಮುಂದೆ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page