ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಅವರ ಸರ್ಕಾರ ಪತನಗೊಂಡ ನಂತರ, ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಹಿಂದೂಗಳ ಮೇಲಿನ ದಾಳಿಯ ವರದಿಗಳ ಮಧ್ಯೆ ಉದ್ಭವಿಸಿದ ಪ್ರಶ್ನೆಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಕೇವಲ ನೆಪವಷ್ಟೇ ಎಂದು ಹೇಳಿದರು. ಇಂತಹ ದಾಳಿಗಳನ್ನು ದೊಡ್ಡದಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಇದರ ಹಿಂದೆ ತಮ್ಮ ಸರ್ಕಾರವನ್ನು ಕೆಟ್ಟ ಬೆಳಕಿನಲ್ಲಿ ತೋರಿಸುವ ಪ್ರಯತ್ನವಿದೆ ಎಂದು ಅವರು ಹೇಳಿದ್ದಾರೆ.
ನಿನ್ನೆಯಷ್ಟೇ ಹಿರಿಯ ಬರಹಗಾರ್ತಿ ತಸ್ಲಿಮಾ ನಸ್ರೀನ್ ಅವರು ಇನ್ನು ಕೆಲವೇ ದಿನಗಳಲ್ಲಿ ಬಾಂಗ್ಲಾ ಇನ್ನೊಂದು ಅಫ್ಘಾನಿಸ್ಥಾನವಾಗಲಿದೆ ಎಂದು ಹೇಳಿಕೆ ಕೊಟ್ಟಿದ್ದರು.
ಹೊಸ ಸರ್ಕಾರವನ್ನು ಅಫ್ಘಾನಿಸ್ತಾನದೊಂದಿಗೆ ಹೋಲಿಸಲಾಗುತ್ತಿದೆ, ಬಾಂಗ್ಲಾದೇಶವು ಶೀಘ್ರದಲ್ಲೇ ಅಫ್ಘಾನಿಸ್ತಾನವಾಗಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಮೊಹಮ್ಮದ್ ಯೂನಸ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದರು ಮತ್ತು ಬಾಂಗ್ಲಾದೇಶವನ್ನು ಯಾವುದೇ ಕಾರಣಕ್ಕೂ ಅಫ್ಘಾನಿಸ್ತಾನ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.
ಬಾಂಗ್ಲಾ ಕುರಿತು ಭಾರತವೂ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಯೂನಸ್ ಪ್ರಕಾರ, ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ಹೊರತುಪಡಿಸಿ, ಬಾಂಗ್ಲಾದೇಶದ ಉಳಿದ ರಾಜಕೀಯ ಪಕ್ಷಗಳು ಇಸ್ಲಾಮಿಕ್ ನಂಬಿಕೆಯವು ಎಂದು ಭಾರತ ಭಾವಿಸುತ್ತದೆ. ಈ ಧೋರಣೆಯನ್ನು ಭಾರತ ಬದಲಾಯಿಸಿಕೊಳ್ಳಬೇಕು ಎಂದು ಯೂನಸ್ ಹೇಳಿದ್ದಾರೆ. ಇನ್ನೊಂದು ಪಕ್ಷದ ಸರ್ಕಾರದ ಅಡಿಯಲ್ಲಿ ಬಾಂಗ್ಲಾದೇಶ ಅಫ್ಘಾನಿಸ್ತಾನವಾಗುತ್ತದೆ ಎನ್ನುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.
ಮೊಹಮ್ಮದ್ ಯೂನಸ್ ಅವರು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಬಗ್ಗೆಯೂ ಹೇಳಿಕೆ ನೀಡಿದ್ದಾರೆ. ಶೀಘ್ರವೇ ಹಸ್ತಾಂತರಕ್ಕೆ ಒತ್ತಾಯಿಸಲಾಗುವುದು ಎಂದರು. ಅಲ್ಲಿಯವರೆಗೆ ಶೇಖ್ ಹಸೀನಾ ಅವರು ಭಾರತದಲ್ಲಿಯೇ ಇದ್ದು ಹೇಳಿಕೆ ನೀಡುವುದನ್ನು ತಪ್ಪಿಸಬೇಕು ಎಂದೂ ಅವರು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ರಾಜಕೀಯ ಹೇಳಿಕೆಗಳನ್ನು ನೀಡಬಾರದು. ಅವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಸಮಸ್ಯೆಗಳು ಉದ್ಭವಿಸಬಹುದು. ಹಸ್ತಾಂತರದ ನಂತರ ಶೇಖ್ ಹಸೀನಾ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆಯೂ ಯೂನಸ್ ಸುಳಿವು ನೀಡಿದ್ದಾರೆ.
ಹಿಂದೂಗಳ ಮೇಲಿನ ದಾಳಿಯನ್ನು ದೊಡ್ಡದಾಗಿ ತೋರಿಸುವ ಪ್ರಯತ್ನ
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಯ ಸುದ್ದಿಗೂ ಯೂನಸ್ ಪ್ರತಿಕ್ರಿಯಿಸಿದ್ದಾರೆ. ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳನ್ನು ನೆಪವಾಗಿಸಿಕೊಂಡು ಮಧ್ಯಂತರ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.