Wednesday, September 11, 2024

ಸತ್ಯ | ನ್ಯಾಯ |ಧರ್ಮ

ನಮೋ ನಾಡಿನ ಖತರ್ನಾಕ್ ಗೋರಕ್ಷಕರು (ರಾಜಕೀಯ ವಿಡಂಬನೆ)

ʼಇವನು – ಕುಮಾರಾವಸ್ಥೆಯ ಲ್ಲಿಯೇ ಮನೆಯಿಂದ ಓಡಿ ಹೋಗಿ ಅಂಡಲೆಯುತ್ತ, ಹಸಿವಿಗಾಗಿ ತಿರುಪೆ ಎತ್ತುತ್ತ ಕೊನೆಗೆ ಮಾಧವ ಕೃಪಾಕಟಾಕ್ಷ ಕುಟೀರದ ಹೊಸ್ತಿಲಿಗೆ ಬಂದು ಬಿದ್ದವನು. ಇಲ್ಲಿಯೇ ತಿಂದುಂಡು, ಮುಸುರೆ ತಿಕ್ಕುತ್ತಿದ್ದವನನ್ನು ನಿಯತ್ತಿನ ನಾಯಿಯೆಂದು ನಂಬಿ ಸಾಮ್ರಾಟನನ್ನಾಗಿ ಮಾಡಿದ್ದೇ ತಪ್ಪಾಯಿತು. ಸಿಂಹಾಸನದ ಮೇಲೆ ಅಂಡೂರಿದ್ದೇ ತಲೆಗೆ ಅಧಿಕಾರದ ಅಮಲೇರಿಸಿಕೊಂಡು ಪೂರ್ವಾಶ್ರಮದ ಋಣವನ್ನು ಮರೆಯುವುದೇ? ಇವನ ಬಾಲವನ್ನು ಆಗಾಗ ಟ್ರಿಮ್ ಮಾಡದಿದ್ದಕ್ಕೆ ಈಗ ನಮ್ಮ ತಲೆಯ ಮೇಲೆ ಮಸಾಲೆ ಅರೆಯುತ್ತಿದ್ದಾನೆʼ

ನಮೋ 3.0 ಸೀಸನ್ ಶುರುವಾದಾಗಿಂದ ಮಾ.ಕೃ.ಕುಟೀರದ ಪುರೋಹಿತನ ಹೊಟ್ಟೆ ತೊಳಸು ಹೆಚ್ಚಾಗಿತ್ತು. ಮೈಗೆಲ್ಲ ಲಂಡಭಕ್ತರ ಎಣ್ಣೆ ಸವರಿಕೊಂಡು ಹಾಕುವ ಯಾವ ಪಟ್ಟಿಗೂ ಸಿಕ್ಕಿ ಬೀಳದೆ ನುಣುಚಿಕೊಳ್ಳುವವನನ್ನು ಖೆಡ್ಡಾಕ್ಕೆ ಕೆಡವುದು ಹೇಗೆಂದು ಚಿಂತಿಸುತ್ತಿದ್ದ. ಭಕ್ತರ ಭಜನೆಯ ಉನ್ಮಾದದಲ್ಲಿ ತೇಲುತ್ತಿರುವ ನಮೋನನ್ನು ನೇರಾನೇರ ಪ್ರಶ್ನಿಸುವುದು ಸದ್ಯಕ್ಕೆ ಆಗದ ಮಾತು. ಮಂತ್ರಿಗಳನ್ನು ತರಾಟೆಗೆ ತಗೊಂಡು ಆ ಮೂಲಕ ನಮೋನನ್ನು ಅಡಕತ್ತರಿಯಲ್ಲಿ ಸಿಕ್ಕಿಸಬೇಕೆಂದು ಪುರೋಹಿತ ನೀಲನಕ್ಷೆ ಹಾಕಿದ.

ಆ ದಿನ ನಮೋನ ಚಡ್ಡಿ ದೋಸ್ತು ಕಮ್ ಮಂತ್ರಿಮಂಡಲದ ನಂಬರ್ ಟೂ ಆಗಿರುವ ಅಪರಿಮಿತ ಕುತಂತ್ರಿಯನ್ನು ಕುಟೀರಕ್ಕೆ ಬರಹೇಳಿದ.

“ಏನಪ್ಪ ಕುತಂತ್ರಿ…ಎಲ್ಲಿ ನಿಮ್ಮ ಸಾಮ್ರಾಟ?”

“ಪುರೋಹಿತರೇ…ಅವರು ಫಾರಿನ್ ಟೂರಲ್ಲಿದ್ದಾರೆ. ದೂರದ ಚಿನ್ನದ ದ್ವೀಪದ ನಾಡಿಗೆ. ನಮ್ಮ ನಮೋ ಸಾಹೇಬರೇ ಆ ದೇಶಕ್ಕೆ ಭೇಟಿ ಕೊಡುತ್ತಿರುವ ಮೊಟ್ಟ ಮೊದಲ ಸಾಮ್ರಾಟ. ನಾವೇ ಎಲ್ಲಾದ್ರಲ್ಲೂ ಫಸ್ಟ್”

“ನಿಮ್ಮ ಫಸ್ಟ್ ಗೆ ಬೆಂಕಿ ಬಿತ್ತು. ನಮ್ಮ ದೇಶದ ಸಾಬ್ರುನ ಕಂಡ್ರೆ ಉರಿದು ಬೀಳ್ತೀರ…ಫಾರಿನ್ ಸಾಬ್ರುನ ತಬ್ಕೊಂಡು ಕಿಸ್ ಕೊಡ್ತೀರ ಅಂತ ಜನ ಉಗೀತಿದ್ದಾರೆ. ಅದಿರಲಿ…ನಿಮ್ಮ ಮಂತ್ರಿಗಳು ಹೆಂಗೆ ಕೆಲಸ ಮಾಡ್ತಿದ್ದಾರೆ ಚೆಕ್ ಮಾಡ್ಬೇಕು. ಎಲ್ರಿಗೂ ಪ್ರೋಗ್ರೇಸ್ ರಿಪೋರ್ಟ್ ತಗೊಂಡು ಬರೋದಿಕ್ಕೆ ಹೇಳು”

“ಪುರೋಹಿತರೇ…ಈಗಷ್ಟೇ ಅಧಿಕಾರ ತುತ್ತಾಗಿ ಕೈಗೆ ಬಂದಿದೆ. ಬಾಯಿಗೆ ಹಾಕಿಕೊಳ್ಳೊಕ್ಕೆ ಆಗದಂತೆ ಎಡಬಲ ತೆಲುಗು ಬಾಬು, ಪಲ್ಟುಕುಮಾರ ಕೈಲಿ ಕೋಲು ಹಿಡಿದು ನಿಂತಿದ್ದಾರೆ. ಅದು ಅಲ್ಲದೆ ಇನ್ನೂ ಹನಿಮೂನ್ ಅವಧಿ ಮುಗಿದಿಲ್ಲ. ಆಗಲೇ…”

“ಆಗಲೇ…ಏನದು ರಾಗ? ಇಷ್ಟು ವರ್ಷ ಏನು ಕಡಿದು ಗುಡ್ಡೆ ಹಾಕಿದ್ದೀರ? ಹತ್ತು ವರ್ಷದಿಂದ ಹನಿಮೂನಲ್ಲೇ ಮಜಾ ಮಾಡಿದ್ದು ಸಾಕಾಗಲಿಲ್ಲವೊ? ಪೋಸ್ಟ್ ಫೋನ್ ಮಾಡೋಕಾಗಲ್ಲ. ಈಗಲೇ ವ್ಯಾಲುವೇಷನ್ ಆಗ್ಬೇಕು”
ಮೊದಲೇ ಪಿತ್ತನೆತ್ತಿಗೇರಿಸಿಕೊಂಡು ಅಸಿಡಿಟಿ ಎಂದು ಒದ್ದಾಡುತ್ತಿದ್ದ ಪುರೋಹಿತನಿಗೆ ಸಮಜಾಯಿಷಿ ಹೇಳಿ ಪ್ರಯೋಜನವಿಲ್ಲವೆಂದು ಬಂಗಾಲ ಕೊಲ್ಲಿ ಸಾಗರದಾಚೆಯ ದೂರದ ನಾಡಿನಲ್ಲಿದ್ದ ಸಾಮ್ರಾಟನಿಗೆ ಅ.ಕು.ಮಂತ್ರಿ ಮಾಯಾದರ್ಪಣದಲ್ಲಿ “ಪೂಜಾರಿ ಸಿಟ್ಟಾಗಿದ್ದಾನೆ! ಕೂಡಲೇ ಬರುವುದು” ಎಂದು ಸಂದೇಶ ರವಾನೆ ಮಾಡಿದ.

ಸಂದೇಶ ಬಂದಾಗ ನಮೋ ಸಾಮ್ರಾಟ ಸಂಡಾಸಿನಲ್ಲಿದ್ದ. ಒಂದು ತಾಸು ಕಳೆದರೂ ಎದ್ದೇಳುವ ಮನಸ್ಸಾಗದೆ ಹವಾ ನಿಯಂತ್ರಿತ ಸಂಡಾಸಿನಲ್ಲಿ ಪಸರಿಸಿದ್ದ ಸುಗಂಧವನ್ನು ಆಸ್ವಾದಿಸುತ್ತ ಮೈಮರೆತಿದ್ದ. ಸುಲ್ತಾನನ ನಾಡಲ್ಲಿ ಹೆಜ್ಜೆ ಇರಿಸಿದಾಗಿನಿಂದ ಅಲ್ಲಿಯ ವೈಭೋಗ ಅವನನ್ನು ಮಾಯಾಲೋಕಕ್ಕೆ ತಳ್ಳಿತ್ತು. ಅರಮನೆಯ ಚಿನ್ನದ ಗುಮ್ಮಟ ಮಿಂಚಿನಂತೆ ಹೊಳೆಯುತ್ತಿತ್ತು. ಕಾರು, ವಿಮಾನ, ಸಿಂಹಾಸನ, ತಿನ್ನುವ ಗಂಗಳ, ಚಮಚ – ಎಲ್ಲವೂ ಹಳದಿಲೋಹದಿಂದ ತಯಾರಾಗಿ ಭೂಲೋಕದಲ್ಲಿಯೇ ಸ್ವರ್ಗ ಸೃಷ್ಟಿಯಾಗಿತ್ತು. ಹಾಗೆ ಕುಳಿತ ಸಂಡಾಸಿನ ಕಮೋಡು ಚಿನ್ನದ್ದಾಗಿ ಎದ್ದೇಳುವ ಮನಸ್ಸಾಗಿರಲಿಲ್ಲ.

ಅ.ಕು.ಮಂತ್ರಿಯ ಸಂದೇಶದಿಂದ ರಸಭಂಗವಾಗಿ “ಏನಯ್ಯ ನಿಮ್ಮಗಳ ಪ್ರಾಬ್ಲಮ್ಮು…ಅಲ್ಲಿ ರಾಗಾ ಪ್ರಶ್ನೆಗಳಿಗೆ ಉತ್ತರ ಕೊಡು ಅಂತ ತಲೆ ತಿನ್ತಾನೆ! ಇಲ್ಲಿಗೆ ಬಂದ್ರೆ ಪೂಜಾರಿ ನೆಮ್ಮದಿಯಾಗಿ ಇರೋದಿಕ್ಕೆ ಬಿಡ್ತಾಯಿಲ್ಲ. ಇನ್ನು ಸಿಂಹಪುರಕ್ಕೆ ಹೋಗೋದು ಬಾಕಿ ಇದೆ. ಅಲ್ಲಿಂದ ಬಂದು ಒಂದೊಂದು ರಾಜ್ಯವನ್ನು ಸಿಂಹಪುರ ಮಾಡ್ತೀನಿ…ಹಾಗಂತ ಪೂಜಾರಿಗೆ ಹೇಳಿ ಸಮಾಧಾನ ಮಾಡು. ಅದೇನ್ ವ್ಯಾಲುವೇಷನ್ ಮಾಡ್ತಾನೊ ಮಾಡ್ಲಿ” ಎಂದು ಸಿಡಿಮಿಡಿಗೊಂಡ.

ವಿತ್ತ ಮಂತ್ರಿ ಈರುಳ್ಳಿ ಮಾತೆ ಮೊದಲ್ಗೊಂಡು ಸಕಲ ನಮೋನ ಮಂತ್ರಿಮಂಡಲ ಪ್ರೊಗ್ರೆಸ್ ಕಾರ್ಡ್ ಹಿಡಿದು ಮಾ.ಕೃ.ಕುಟೀರದಲ್ಲಿ ಸಾಲಾಗಿ ನಿಂತರು. ಕೈಲಿ ಲಾಠಿ ಹಿಡಿದ ಗಣವೇಷಧಾರಿಗಳು ಅವರನ್ನು “ಸಾವಧಾನ್…ಸಾವಧಾನ್” ಎಂದು ಸಾಲನ್ನು ನಿಯಂತ್ರಿಸುತ್ತಿದ್ದರು. ಬಹಳಷ್ಟು ಮಂತ್ರಿಗಳಿಗೆ ತಮ್ಮ ಖಾತೆಯ ಹೆಸರಷ್ಟೇ ತಿಳಿದಿತ್ತು ಹೊರತು, ಕಾರ್ಯವೈಖರಿಗಳನ್ನೆಲ್ಲಾ ಸಾಮ್ರಾಟ ತನ್ನ ಮೂಗಿನಳತೆಗೆ ತಾನೇ ನಿಭಾಯಿಸುತ್ತಿದ್ದರಿಂದ ಖಾತೆಯ ಬಗ್ಗೆ ಅಆಇಈ ಗೊತ್ತಿರಲಿಲ್ಲ. ಅದೇ ಕಾರಣಕ್ಕೆ, ಪುರೋಹಿತ ಕೇಳುವ ಪ್ರಶ್ನೆಗಳಿಗೆ ಹೆದರಿದ ಮಂತ್ರಿಗಳು ಸಾಲಲ್ಲಿ ಮೊದಲು ಹೋಗಲು ಹಿಂಜರಿದು ಹಿಂದೆ ನಿಂತಿದ್ದವರನ್ನು ಮುಂದಕ್ಕೆ ಹೋಗಲು ಪ್ರೇರೇಪಿಸುತ್ತಿದ್ದರು. ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ತನ್ನ ಹೊಸ ಸಿನಿಮಾ ʼಆಪತ್ಕಾಲ್ʼ ಬಿಡುಗಡೆಯನ್ನು ತಡೆ ಹಿಡಿದದ್ದಕ್ಕೆ ಕೋಪಗೊಂಡಿದ್ದ ಬೌಬೌ ಖಾತೆಯ ಬೊಗಳೊ ಮಂತ್ರಿ ಮಂಗನಾ ಶೇಪೌಟ್ ಸಾಲಿನ ಕೊನೆಯಲ್ಲಿ ನಿಂತಿದ್ದಳು.

“ಅಯ್ಯೋ…ನೀವ್ಯಾಕೆ ಕ್ಯೂನಲ್ಲಿ ಬರೋಕ್ಕೆ ಹೋದೀರಿ. ಅಂದಾನಿ, ತುಂಬಾನಿಯರಿಗೆ ಬಜೆಟ್ಟಲ್ಲಿ ಭರಪೂರ ತಿನ್ನಿಸಿ ಜನರಿಗೆ ತೆರಿಗೆ ಸರಿಯಾಗಿ ಜಡಿದಿರ್ತೀರ…ಕುತ್ಕೊಳ್ಳಿ” ಎಂದ ಪುರೋಹಿತ ತನ್ನ ಪಕ್ಕದಲ್ಲಿದ್ದ ಕುರ್ಚಿಯನ್ನು ತೋರಿದ. ಸಾಷ್ಟಾಂಗ ವಂದಿಸಿದ ಈರುಳ್ಳಿಮಾತೆ ಕಣ್ಣರಳಿಸಿಕೊಂಡು “ನಮೋ ಸಾಹೇಬರ ಮಹಾಮಹಿಮೆಯಿಂದ ಪ್ರಜೆಗಳೆಲ್ಲಾ ಚೆನ್ನಾಗಿ ದುಡಿತಿದ್ದಾರೆ. ಎಷ್ಟು ಕಮಾಯಿ ಮಾಡುತ್ತಿದ್ದಾರೆಂದರೆ – ಮನೆಮಠ, ವೆಹಿಕಲ್, ಹಾಸ್ಪಿಟಲ್, ಟೋಲ್, ಪೆಟ್ರೋಲ್…ತಿಂದದ್ದು, ಉಟ್ಟಿದ್ದು…ಕುಂತಿದ್ದಕ್ಕೆ ನಿಂತಿದ್ದಕ್ಕೆ ಎಷ್ಟು ಟ್ಯಾಕ್ಸ್ ಹಾಕಿದ್ರು ದೇಶಕ್ಕಾಗಿ ಅಂತ ಬಹಳ ಅಭಿಮಾನ ಪಟ್ಟು ಸಂತೋಷದಿಂದ ಕುಣಿದಾಡ್ತಿದ್ದಾರೆ. ಮುಂದಿನ ಬಜೆಟ್ಟಲ್ಲಿ ಹೂಸಿದ್ದಕ್ಕು ಫರ್ಟ್ ಟ್ಯಾಕ್ಸ್ ಹಾಕೋಣಾಂತ ಇದ್ದೇನೆ” ಎಂದು ಮಾಟಗಾತಿ ನಗೆ ಬೀರಿದಳು.

Kannada swing Trader, [11-09-2024 12:20]
ಸಾಮ್ರಾಟ ನಮೋನನ್ನು ಅಂಕೆಯಲ್ಲಿಡಲು ನಾಮಕಾವಾಸ್ತೆಗೆ ಮಂತ್ರಿಗಳನ್ನು – ವಿವಿಧ ಖಾತೆಗಳ ವ್ಯಾಪ್ತಿ, ಅಂಕಿಅಂಶಗಳ ತುಸು ಜ್ಞಾನವಿರದಿದ್ದರೂ ಅಭಿವೃದ್ಧಿ ನೆಪದಲ್ಲಿ ಸಂದರ್ಶನ ನಡೆಸಿದ್ದ ಪುರೋಹಿತನಿಗೆ ಗೋರಕ್ಷಕ ಖತರ್ನಾಕ್ ಮಂತ್ರಿ ಸರದಿಯಲ್ಲಿ ಬಂದಾಗ ಸನಾತನ ಅಜೆಂಡಾಗಳು ನೆನಪಾಗಿ ಗಂಭೀರತೆಯಿಂದ ಸೆಟೆದು ಕುಳಿತ.

“ಏನಯ್ಯ…ನಮೋ ಮೊದಲ ಬಾರಿಗೆ ಸಾಮ್ರಾಟನಾದಾಗ ಭಾರೀ ಸದ್ದು ಮಾಡಿದ್ದವನು…ಇತ್ತೀಚಿಗೆ ಸೈಲೆಂಟ್ ಆಗಿದ್ದೀಯ?”

“ಆಗೇನಿಲ್ಲ ಸ್ವಾಮಿಗಳೇ…ತದುಕೊ ಕೆಲಸ ಚೆನ್ನಾಗಿ ನಡೀತಿದೆ. ಸೋಷಿಯಲ್ ಮೀಡಿಯಾಕ್ಕೆ ಹೆದರಿಕೊಂಡು ಗೋದಿ ಮೀಡಿಯಾಗಳು ನ್ಯೂಸ್ ಮಾಡ್ತಿಲ್ಲ, ಅಷ್ಟೇ. ಮತ್ತೆ ಲಾಂಗು, ಮಚ್ಚು, ಕುರುಪು…ಎಲ್ಲದರ ರೇಟು ಜಾಸ್ತಿಯಾಗಿದೆ. ಈರುಳ್ಳಿಮಾತೆ ಮೇಡಮ್ ಗೆ ಹೇಳಿ ಬಜೆಟ್ಟಲ್ಲಿ ನಮ್ಮ ಖಾತೆಗೆ ಹೆಚ್ಚು ಹಣ ಕೊಡಿಸಬೇಕು. ಅದು ಅಲ್ಲದೆ ಹುಡುಗ್ರು ಮೊದಲಿನ ಹಾಗೆ – ತಮ್ಮ, ನಮೋ ಸಾಮ್ರಾಟರ, ಬುಲ್ಡೋಜರ್ ಬಾಬಾರ ಉಗ್ರ ಭಾಷಣ ಕೇಳಿ ವ್ಯಗ್ರರಾಗಿ ಸನಾತನ ಧರ್ಮ ಉಳಿಸೋಣಾಂತ ಸ್ವಯಂ ಪ್ರೇರಿತರಾಗಿ ಬರ್ತಾ ಇದ್ದವರು ಈಗ ಇಲ್ಲ. ಇತ್ತೀಚಿಗೆ ಬರೋ ಪುಂಡ ಹುಡುಗರು ಜಾಸ್ತಿ ದುಡ್ಡು ಡಿಮ್ಯಾಂಡ್ ಮಾಡ್ತಿದ್ದಾರೆ….” ಅಂತೇನೊ ಹೇಳುತ್ತಿದ್ದವನ ಮಾತಿಗೆ ಕುಪಿತನಾದ ಪುರೋಹಿತನ ಮೂಗಿನ ಹೊಳ್ಳೆಗಳಿಂದ, ಕಿವಿಗಳಿಂದ ಹೊಗೆ ಬರಲು ಶುರುವಾಯಿತು.

“ಬೇವಾರಿಸ್…ನಾಲಾಯಕ್…ಬೀದೀಲಿ ತಳ್ಳೊಗಾಡಿಯವರತ್ರ ಹಫ್ತಾ ವಸೂಲಿ ಮಾಡ್ತಾ ಪುಡಿರೌಡಿಯಾಗಿದ್ದ ನಿನ್ನ…ದೇಶಕ್ಕೆ, ಸನಾತನಧರ್ಮಕ್ಕೆ ಒಳ್ಳೇ ಹೆಸ್ರು ತರ್ತೀಯಾಂತ ಮಂತ್ರಿ ಮಾಡ್ದೆ. ಏನ್ ಬಂತು ಭಾಗ್ಯ? ಮುಕ್ಕೋಟಿ ದೇವರಿರುವ ಗೋಮಾತೆಯನ್ನು ದೇಶದೆಲ್ಲೆಡೆ ಜನರು – ಬೀಫ್ ಬಿರಿಯಾನಿ, ಬೀಫ್ ಚಾಪ್ ಸ್ಟಿಕ್, ಬೀಫ್ ಬರ್ಗರ್, ಬೀಫ್ ಕ್ಯಾಸರೊಲ್, ಬೀಫ್ ಪೆಪ್ಪರ್ ಡ್ರೈ ಮಾಡ್ಕೊಂಡು ಚಪ್ಪರಿಸಿ ತಿಂತಿದ್ದಾರೆ. ಅವರನ್ನ ಚಚ್ಚೋದ್ ಬಿಟ್ಟು…ಇಲ್ಲಿ ಬಂದು ಖರ್ಚಿನ ಬಾಬ್ತು ಹೇಳ್ತಿದ್ದೀಯ?”

ಕೆಂಡಾಮಂಡಲನಾದ ಪುರೋಹಿತನ ಮಾತಿನಿಂದ ಖತರ್ನಾಕ್ ಮಂತ್ರಿಗೆ ಮರ್ಮಾಘಾತವಾಗಿ “ಅಲ್ಲ ಸ್ವಾಮಿ….ನೀವು ಹೇಳೊ ಬೀಫ್ ತಿಂಡಿಗಳು ಗೋರಾಜ್ಯ, ಈಶಾನ್ಯರಾಜ್ಯಗಳ ಫೈವ್ ಸ್ಟಾರ್ ಹೋಟೆಲಲ್ಲಿ ಮಾತ್ರ ಸಿಗೋದು. ಅಲ್ಲೆಲ್ಲಾ ಸಾಮ್ರಾಟರ ಸಾಮಂತರೇ ರಾಜ್ಯಭಾರ ಮಾಡ್ತಿರೋದು. ಗೂಡಂಗಡಿಲೀ ತಿನ್ನೋರನ್ನು ಪ್ರಶ್ನಿಸಿದರೆ, ನಮ್ಮತ್ರ ಪುಂಗೋದು ಬೇಡ. ಮೊದ್ಲು ಅಲ್ಲಿ ಮಾರಾಟ ನಿಲ್ಲಿಸಿ…ಆಮೇಲೆ ಬಂದು ಗೋಮಾತೆ ಪುರಾಣ ಹೇಳಿ…ಕೇಳ್ತೀವಿ ಅಂತಾರೆ” ಎಂದ ಹುಸಿಕೋಪದಿಂದ.

ವಿಷಯ ಸುತ್ತಿ ಬಳಸಿ ತನ್ನ ಬುಡಕ್ಕೆ ಬರುತ್ತಿರುವುದನ್ನು ಗಮನಿಸಿದ ಅ.ಕು.ಮಂತ್ರಿ “ನೀನು ಹೇಳೋದು ಏನು? ಸಾಮಂತರನ್ನು ನಾವು ಕಂಟ್ರೋಲ್ ಮಾಡುತ್ತಿಲ್ಲ ಅಂತಾನ? ಮೂರ್ಖ…ಶತಮೂರ್ಖ… ಅಲ್ಲಿರೋದು ಫಾರಿನ್ ತಳಿಯ ಹಸುಗಳು, ನಮ್ಮ ದೇಶದ್ದಲ್ಲ. ಪರದೇಶದ ಹಸುಗಳಲ್ಲಿ ಯಾವ ದೇವ್ರು ಇರೋಲ್ಲ…ತಿಳ್ಕೊಂಡ್ ಮಾತಾಡು”

“ಹೋಗ್ಲಿ ಬಿಡಿ…ಕುತಂತ್ರಿಗಳೇ…ನಾವೇನು ಸುಮ್ನೆ ಕೂತಿಲ್ಲ. ನಿಮಗೇ ರಿಪೋರ್ಟ್ ಮಾಡಿದ್ದೀವಿ. ನೆನ್ನೆ ದನ ಸಾಗಿಸುತ್ತಿದ್ದ ಸಾಬ್ರ ಮುದುಕನ್ನ…ಮತ್ತೆ ಬೀಫ್ ತಿಂತಿದ್ದ ಇಬ್ರು ಯುವಕರನ್ನ ಮೇಲಕ್ಕೆ ಕಳಿಸಿದ್ದೇವೆ”

ವಾಗ್ವಾದವನ್ನು ಗಮನಿಸುತ್ತ ಪುರೋಹಿತನ ಹಿಂದೆ ಕೋಲು ಹಿಡಿದು ಕಾವಲು ನಿಂತಿದ್ದ ಗಣವೇಷಧಾರಿ ತಟ್ಟನೆ ಆ ದಿನದ ವೃತ್ತಪತ್ರಿಕೆಯನ್ನು ಅ.ಕು.ಮಂತ್ರಿಯ ಕೈಗಿತ್ತ. ಅದರ ಹೆಡ್ಡಿಂಗಲ್ಲಿ “ಬೀಫ್ ಸೇವಿಸಿದ್ದ ಎಂದು ಸಂಶಯಿಸಿ ಹಲ್ಲೆಗೊಳಗಾದ ಬ್ರಾಹ್ಮಣ ಹುಡುಗನ ದುರಂತ ಮರಣ” ಎಂದಿತ್ತು.

ಅ.ಕು.ಮಂತ್ರಿ ಕುರ್ಚಿಯಿಂದ ಎದ್ದವನೇ ಸಿಂಹಾವತಾರ ತಾಳಿ “ಹಾಳಾದವನೇ…ಸಾಬ್ರು ತಲೆ ಎತ್ತದಂತೆ ಮಾಡು ಅಂದ್ರೆ ನಮ್ಮ ಹುಡುಗ್ರನ್ನ ಸಾಯ್ಸಿದ್ದಿರಲ್ಲೋ…ನೀವೆಲ್ಲಾ ನರಕಕ್ಕೆ ಹೋಗೋದು” ಎಂದು ಕೂಗಾಡುತ್ತ ಖತರ್ನಾಕ್ ಮಂತ್ರಿಯ ಮೇಲೆ ಬಿದ್ದ. ತಟ್ಟನೆ ಛಟೀರೆಂದು ಯಾರೋ ಕೆನ್ನೆಗೆ ಬಾರಿಸಿದಂತಾಗಿ ಕುರ್ಚಿಯಲ್ಲಿ ಕುಸಿದ. ಹೊಡೆದದ್ದು ಯಾರೆಂದು ತಿಳಿಯಲಿಲ್ಲ. ನೋಡಿದರೆ ಖತರ್ನಾಕ್ ಮಂತ್ರಿ ಕೈಕಟ್ಟಿ, ತಲೆ ತಗ್ಗಿಸಿ ನಿಂತಿದ್ದ. ಬಿದ್ದ ರಭಸಕ್ಕೆ ಸುತ್ತಲಿದ್ದವರು ಗಾಬರಿಯಿಂದ ನೋಡುತ್ತಿದ್ದರು.

ಅಷ್ಟರಲ್ಲಿ ಅ.ಕು.ಮಂತ್ರಿಯ ಕಿವಿಯಲ್ಲಿ ಅಶರೀರವಾಣಿ ಮೊಳಗಿ, ಅವನು ಕೆನ್ನೆ ಸವರಿಕೊಳ್ಳುತ್ತ ಆಕಾಶದತ್ತ ದಿಟ್ಟಿಸಿದ.

“ಅದೇನು ಅಂತ ನನ್ನ ಹೊಟ್ಟೇಲಿ ಹುಟ್ಟಿದ್ಯೊ! ನರಹಂತಕ…ಒಬ್ರಿಗೆ ತಿನ್ನು ಅಂತೀಯ…ಮತ್ತೊಬ್ಬರಿಗೆ ತಿನ್ಬೇಡ ಅಂತೀಯ…ನೀನ್ಯಾರೊ ಇಂಥದ್ದೇ ತಿನ್ನು ಅಂತ ಹೇಳೋಕ್ಕೆ? ಅಧಮ…ಒಬ್ಬನ ಸಾಯಿಸಿ ಕುಣಿದಾಡ್ತೀಯ…ಮತ್ತೊಬ್ಬ ಸತ್ರೆ ಕಣ್ಣೀರು ಸುರುಸ್ತೀಯ! ಎಂಥಾ ಬಾಳೋ ನಿಂದು…ಎಲ್ರೂನು ನನ್ನ ಮಕ್ಕಳೇ ಅಲ್ವೇನೊ?”

ಮತ್ತೆರೆಡು ಬಾರಿ ಕಪಾಳಮೋಕ್ಷವಾಗಿ ಅ.ಕು.ಮಂತ್ರಿ ಮೂರ್ಛೆ ಹೋದ. ಏನಾಗುತ್ತಿದೆ ಎಂದು ತಿಳಿಯದೆ ವ್ಯಾಲುವೇಷನ್ ಕಾರ್ಯಕ್ರಮವನ್ನು ಪುರೋಹಿತ ಬರಖಾಸ್ತು ಮಾಡಿದ.

ಭರತಖಂಡದಿಂದ ರಫ್ತಾಗುವ ಗೋಮಾಂಸವನ್ನು ದಿನವೂ ಆಸ್ವಾದಿಸುವ ಮಧ್ಯಪ್ರಾಚ್ಯದ ದೇಶದ ಸುಲ್ತಾನರು, ಜಗತ್ತಿನಲ್ಲಿಯೇ ಹೆಚ್ಚು ಗೋಮಾಂಸ ರಫ್ತು ಮಾಡಿದ್ದಕ್ಕಾಗಿ ʼಗೋಮಾಂಸ ವೀರʼ ಎಂಬ ಪ್ರಶಸ್ತಿಯನ್ನು ಘೋಷಿಸಿ ನಮೋ ಸಾಮ್ರಾಟರನ್ನು ಅಭಿನಂದಿಸಿದರು. ತಟ್ಟನೆ “ವಿಶ್ವದೆಲ್ಲೆಡೆ ಡಂಕ ಬಾರಿಸಿ ದೇಶವನ್ನು ಕೊಂಡಾಡುವಂತೆ ಮಾಡಿದ್ದೇನೆ” ಎಂದು ಲಂಡಭಕ್ತರಿಗೆ ಸಂದೇಶ ರವಾನಿಸಿದ ನಮೋ ಸಾಮ್ರಾಟ, ಹೊಸ ಸೂಟುಬೂಟು ತೊಟ್ಟು ಪ್ರಶಸ್ತಿ ಪಡೆಯಲು ಸಿಂಹಪುರದಿಂದ ಮಧ್ಯಪ್ರಾಚ್ಯ ದೇಶಕ್ಕೆ ಪುಷ್ಪಕವಿಮಾನವನ್ನು ತಿರುಗಿಸಲು ಪೈಲೆಟ್ ಗೆ ಹೇಳಿದ.

ಚಂದ್ರಪ್ರಭ ಕಠಾರಿ
cpkatari@yahoo.com

Related Articles

ಇತ್ತೀಚಿನ ಸುದ್ದಿಗಳು

You cannot copy content of this page