Friday, September 20, 2024

ಸತ್ಯ | ನ್ಯಾಯ |ಧರ್ಮ

ಹಿಂದೂವಿಗೇ ಏಕೆ ಹೀಗಾಗುತ್ತದೆ?

“ತುಪ್ಪಕ್ಕೆ ಹಣ ಜಾಸ್ತಿ, ದನದಕೊಬ್ಬಿಗೆ ಕಡಿಮೆ, ಅದನ್ನು ಪವಿತ್ರವಾದ ಪ್ರಸಾದದಲ್ಲಿ ಮಿಕ್ಸ್ ಮಾಡಿ ಹಾಕಿದ್ರೆ ಒಳ್ಳೆ ಹಣಮಾಡಬಹುದು ಅಂತ ಮಾಡಿದ್ದಾರೆ, ಅಲ್ಲೂ ಭ್ರಷ್ಟಾಚಾರ, scam…” ಆಕಾಶ್ ಮಂಡ್ಯ ಬರೆದಿದ್ದಾರೆ

ತಿರುಪತಿ ಲಡ್ಡಿನಲ್ಲಿ ದನದಕೊಬ್ಬು ಬಳಸುತ್ತಿದ್ದದ್ದು ಒಬ್ಬ ಶ್ರದ್ಧಾವಂತ ಹಿಂದೂವಿಗೆ ಬಹಳ ನೋವು ಉಂಟುಮಾಡೋದು ಸಹಜ. ಆದರೆ ಪ್ರತಿಬಾರಿ ಹಿಂದೂವಿಗೆ ಏಕೆ ಹೀಗಾಗುತ್ತದೆ? ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ಏಕೆ ಆಟವಾಡಲಾಗುತ್ತದೆ?

ಏಕೆಂದರೆ ಹಿಂದೂ ಯಾವತ್ತೂ ಪರೀಕ್ಷೆ ಮಾಡಿ ನೋಡಿ ಒಪ್ಪಲಾರ, ಆತನಿಗೆ ಪರೀಕ್ಷೆ ಮಾಡೋದು ಅಂದ್ರೆ ಭಯ, ಏಕೆಂದರೆ ಹಿಂದೂ ಸತ್ಯವನ್ನು ಅರಗಿಸಿಕೊಳ್ಳಲಾರ. ಅದಕ್ಕೆ ಆತನನ್ನು ನಂಬಿಸಲು ಸುಳ್ಳು-ಪೊಳ್ಳು ವಾಟ್ಸಪ್ ಯೂನಿವರ್ಸಿಟಿ ಕಥೆ ಕಟ್ಟಲಾಗುತ್ತದೆ, ಒಬ್ಬ ಸುಳ್ಳು ಭಾಷಣಕಾರ ರಾಜಾರೋಷವಾಗಿ ಸುಳ್ಳು ಹೇಳುತ್ತಾನೆ, ಆತನಿಗೆ ಭಯವಿಲ್ಲವೇ? ಅಂದ್ರೆ ಇಲ್ಲಾ. ಏಕೆಂದರೆ ಹಿಂದೂ ಒಬ್ಬ ಅದನ್ನು ಸರಿಯಿದೆಯೇ ಎಂದು ಪರೀಕ್ಷಿಸಿ ನೋಡೋದಿಲ್ಲಾ ಅಂತ ಆತನಿಗೆ ಗೊತ್ತು. ವೇದ-ಧರ್ಮಶಾಸ್ತ್ರ-ಸ್ಮೃತಿಗಳ ಹೆಸರಿನಲ್ಲಿ ನಕಲಿ ಕಥೆ ಕಟ್ಟಲಾಗುತ್ತದೆ, ಆಗಲೂ ಹಿಂದೂ ಪರೀಕ್ಷಿಸಿ ನೋಡಲಾರ ಅಂತ ಅವರಿಗೆ ಗೊತ್ತು. ಸಂಸ್ಕೃತದ ಬಗೆಗೆ ಹುಸಿ ಭ್ರಮೆ ಓಡಾಡುತ್ತವೆ, ತನಗರ್ಥವಾಗದ ಭಾಷೆಯ ಬಗೆಗೆ ಹಿಂದೂ ಯಾವತ್ತೂ ಪರೀಕ್ಷೆ ಮಾಡಿ ನೋಡಿಯೇ ಇಲ್ಲಾ.

ಕೇದಾರನಾಥದಲ್ಲಿ ಸುಮಾರು ಇನ್ನೂರು ಕೆಜಿಯಷ್ಟು ಬಂಗಾರ ಕಾಣೆಯಾಗಿದೆ ಎಂದು ದೊಡ್ಡ ಜಗದ್ಗುರು ಒಬ್ಬರು ಹೇಳಿದಾಗ ಅದನ್ನು ಹಿಂದೂ ಪರೀಕ್ಷೆ ಮಾಡಿ ನೋಡಲಿಲ್ಲಾ, ಧರ್ಮಸ್ಥಳದಲ್ಲಿ ಅಧರ್ಮವೇ ನಡೆಯುತ್ತಿದೆ ಎಂದು ಸಾಕ್ಷಿ ಸಮೇತವಾಗಿ ಹೇಳಿದರೂ ಹಿಂದೂ ಪರೀಕ್ಷೆ ಮಾಡಿ ತಿಳಿಯಲೊಲ್ಲಾ. ಪರಶುರಾಮನ ವಿಗ್ರಹ ನಕಲಿ ಅಂತ ಕಣ್ಣಿಗೆ ಕಾಣುವಂತಿದ್ದರೂ ಹಿಂದೂ ಪರೀಕ್ಷೆ ಮಾಡಲಾರ. ಅದೇ ಆತನ ದೌರ್ಬಲ್ಯವನ್ನೆ ಉಳ್ಳವರು, ದೇವರ ಹೆಸರಿನಲ್ಲಿ ದಂಧೆ ಮಾಡೋರು, ದೇವರ ವ್ಯಾಪಾರ-ವ್ಯವಹಾರ ಮಾಡೋರು ಧೈರ್ಯವಾಗಿ ಅದನ್ನೆಲ್ಲಾ ಮಾಡುತ್ತಿದ್ದಾರೆ. ಯಾರಾದ್ರು ಪ್ರಶ್ನೆ ಮಾಡುವವರನ್ನು ಧರ್ಮದ್ರೋಹಿಗಳು, ದೇಶದ್ರೋಹಿಗಳು ಅಂದು ಬಿಟ್ರೆ ಮುಗಿತು, ಅದನ್ನೂ ಹಿಂದೂ ಪರೀಕ್ಷೆ ಮಾಡೋದಿಲ್ಲಾ.

ತುಪ್ಪಕ್ಕೆ ಹಣ ಜಾಸ್ತಿ, ದನದಕೊಬ್ಬಿಗೆ ಕಡಿಮೆ, ಅದನ್ನು ಪವಿತ್ರವಾದ ಪ್ರಸಾದದಲ್ಲಿ ಮಿಕ್ಸ್ ಮಾಡಿ ಹಾಕಿದ್ರೆ ಒಳ್ಳೆ ಹಣಮಾಡಬಹುದು ಅಂತ ಮಾಡಿದ್ದಾರೆ, ಅಲ್ಲೂ ಭ್ರಷ್ಟಾಚಾರ, scam. ಭಾವನೆಗೆ ಧಕ್ಕೆಯಾದರೆ ಏನು ಮಾಡೋದು? ಬೇರೆಯವರ ತೋರಿಸಿದರಾಯ್ತು, ನಿಮ್ಮೆಲ್ಲಾ ಸಮಸ್ಯೆಗೆ ಸಾಬರು, ಕ್ರಿಶ್ಚಿಯನ್ನರು ಕಾರಣ ಅಂದರೆ ಸಾಕು, ಹಿಂದೂ ಸಮಾಧಾನ ಮಾಡಿಕೊಳ್ಳುತ್ತಾನೆ, ಅದನ್ನೂ ಪರೀಕ್ಷೆ ಮಾಡೋದಿಲ್ಲಾ. ತನ್ನ ದೇಶದ ಮೂಲ ಸಮಸ್ಯೆ ಏನು ಅಂತ ಹಿಂದೂ ಯಾವತ್ತಿಗೂ ಪರೀಕ್ಷೆ ಮಾಡೋದಿಲ್ಲಾ, ಮಾಡಿದ್ರೆ ಹೀಗೆ ಭ್ರಷ್ಟಾಚಾರ ವ್ಯಾಪಕವಾಗಿ ಇರುತ್ತಿರಲಿಲ್ಲಾ, ಅವ್ಯವಸ್ಥೆ, ಅರಾಜಕತೆ ಕಾಣುತ್ತಿರಲಿಲ್ಲಾ.

ಕೆಲ ತಿಂಗಳ ಹಿಂದೆ “ದೇವಾಲಯಗಳಲ್ಲಿನ ಪ್ರಸಾದಗಳನ್ನು ಪರೀಕ್ಷೆ ಮಾಡಬೇಕಿದೆ” ಎಂಬ ಚರ್ಚೆ ನಡೆಯುತ್ತಿದ್ದಾಗ ಹಿಂದೂ ಇದ್ದಕ್ಕಿದ್ದಂತೆ ಎದ್ದ, ಎದ್ದು ಹಾಗಾದರೆ ಮಸೀದಿ, ಚರ್ಚಿನಲ್ಲೂ ಪರೀಕ್ಷೆ ಮಾಡಿ ಎಂದು. ತನ್ನದೆಷ್ಟೇ ಹಳಸಿಹೋದರೂ ಚಿಂತೆಯಿಲ್ಲಾ ಮೊಂಡುವಾದ ಮಾಡಲು ಸದಾ ಸಿದ್ಧ ಖಟ್ಟರ್ ಹಿಂದೂ, ಅದೇ ಹಿಂದೂವನ್ನು ಇಂದು ಹಾಳುಗೆಡವುತ್ತಿರೋದು! ಅದನ್ನು ಪರೀಕ್ಷೆ ಮಾಡಿ ನೋಡಲ್ಲಾ.

ಹಾಗಾದರೆ ಹಿಂದೂ ಪರೀಕ್ಷೆ ಮಾಡೋದು ಏನನ್ನು? ಗೊತ್ತಿಲ್ಲಾ.
ಲಡ್ಡಿಗೆ ಪರಿಕರ ಸಪ್ಲೈ ಮಾಡೋರು ಯಾರು? ಗೊತ್ತಿಲ್ಲಾ.
ಅದನ್ನು ಪರೀಕ್ಷೆ ಮಾಡಲಾಗುತ್ತಿತ್ತೇ? ಗೊತ್ತಿಲ್ಲಾ.
ಅದನ್ನು ಎಲ್ಲಿಂದ ತರಿಸಲಾಗುತ್ತಿತ್ತು? ಗೊತ್ತಿಲ್ಲಾ.
ಅವರಿಗೆ ಹೇಗೆ ದನದಕೊಬ್ಬು ಸಿಗುತ್ತಿತ್ತು? ಗೊತ್ತಿಲ್ಲಾ.
ಎಷ್ಟು ದಿನಗಳಿಂದ ಆ ದಂಧೆ ನಡೆಯುತ್ತಿದೆ? ಗೊತ್ತಿಲ್ಲಾ.
ಇಷ್ಟು ದಿನ ತಿಂದವರಿಗೆ ತಿಳಿಯಿತಾ? ಗೊತ್ತಿಲ್ಲಾ.
ಇವಾಗ ಇದಕ್ಕೆ ಯಾರು ಹೊಣೆ? ಗೊತ್ತಿಲ್ಲಾ.
ಇನ್ನೆಷ್ಟು ಕಡೆ ಹೀಗೆ ನಡೆಯುತ್ತಿದೆ? ಗೊತ್ತಿಲ್ಲಾ.
ಮುಂದೆ ಆಗದಂತೆ ತಡೆಯೋದು ಹೇಗೆ? ಗೊತ್ತಿಲ್ಲಾ.
ಇವಾಗ ಯಾರ್ಯಾರ ವಿರುದ್ಧ ಹೋರಾಟ ನಡೆಯುತ್ತೆ? ಗೊತ್ತಿಲ್ಲಾ.

ಹಾಗಾದರೆ ಇವಾಗ ಶ್ರದ್ಧಾವಂತ ಹಿಂದೂ ಏನು ಮಾಡುತ್ತಾನೆ? ಇದಕ್ಕೆ ಅನ್ಯಮತೀಯರು ಕಾರಣ ಎಂದು ಸಮಾಧಾನ ಮಾಡಿಕೊಳ್ಳುತ್ತಾನೆ. ನೈಜವಾಗಿ ಭ್ರಷ್ಟಾಚಾರ ಮಾಡಿದವರು ಹೈ-ಫೈ ಲೈಫ್ ಮಾಡಿಕೊಂಡಿರುತ್ತಾರೆ. ದೇವರೇ ಅವರನ್ನು ಶಿಕ್ಷಿಸು ಅಂತ ದೇವರ ಮೇಲೆ ಭಾರ ಹಾಕಿ ಈತ ಮತ್ತೊಂದು ಧಾರ್ಮಿಕ ಸಂಚಿಗೆ ಬಲಿಯಾಗೋಕೆ ತಯಾರಾಗ್ತಾನೆ. ಏಕೆ ಹಾಗೆ? ಏಕೆಂದರೆ ಆತನಿಗೆ ಪರೀಕ್ಷೆ ಮಾಡಿ ತಿಳಿಯೋದು ಗೊತ್ತಿಲ್ಲಾ. ಆದರೆ ಒಂದು ಕೆಜಿ ತರಕಾರಿ ತಗೊಳ್ಳುವಾಗ ಮಾತ್ರ ತುಂಬಾ ಹುಷಾರಾಗಿ ಪರೀಕ್ಷೆ ಮಾಡಿ, ಆಯ್ದು ತಗೋತಾನೆ. ಮಡಿಯ ಹುಚ್ಚಿನ ಸಾತ್ವಿಕರು ಎಲ್ಲಾದರಲ್ಲೂ ಮಡಿ, ಈಗ ಕಾಲದಿಂದಲೂ ದನದಕೊಬ್ಬು ತಿಂದದ್ದಕ್ಕೆ ಏನು ಮಾಡೋದು? ಗೋಮೂತ್ರ ಸಿಂಪಡಣೆ ಮಾಡಿಕೊಂಡ್ರೆ ಆಯ್ತು, ಉಳಿದ ಹಿಂದೂಗಳು ಮಾತ್ರ ಗೋಮಾಂಸ ತಿನ್ನದಂತೆ ನೋಡಿಕೊಳ್ಳಬೇಕು, ಯಾರು ಏನು ತಿಂತಾರೆ ಅಂತ ಪರೀಕ್ಷೆ ಮಾಡಿ ಅದರ ಆಧಾರದ ಮೇಲೆ ಗುಣಾವಗುಣ ಗುರುತಿಸಿ, ಮೇಲು-ಕೀಳು ಹಣೆಪಟ್ಟಿ ಕೊಟ್ಟು ವಿಕೃತಾನಂದ ಹೊಂದಿದರೆ ಸಾಕು. ಮತ್ತೆ ಈಗ ಏನು ಮಾಡೋದು? ಹಂಸಲೇಖ, ಸಿದ್ಧರಾಮಯ್ಯ ಬಯ್ಯೋದು, ಅಷ್ಟೇ. ಸಿಂಪಲ್.!

ಹಿಂದೂ ಧರ್ಮದ ಮೇರುಪರ್ವತ ಸ್ವಾಮಿ ವಿವೇಕಾನಂದರು ಅದಕ್ಕೆ ಸಾರಿ ಸಾರಿ ಹೇಳಿದ್ರು “ಪರೀಕ್ಷೆ ಮಾಡದೆ ಏನು ಒಪ್ಪಬೇಡಿ” ಅಂತ, ಆದರೆ ವಾಟ್ಸಪ್ ಯೂನಿವರ್ಸಿಟಿ ಮಂಪರಿನಲ್ಲಿ ಕಳೆದುಹೋಗಿರುವ ಹಿಂದೂ ಇವಾಗ ಪರೀಕ್ಷೆ ಎಲ್ಲಾ ಮಾಡಲ್ಲಾ, ಏನೂ ಮಾಡದೆ ಪ್ರತಿಕ್ರಿಯೆ ಕೊಟ್ಟುಬಿಡುತ್ತಾನೆ. ಅದರಿಂದ ನಷ್ಟ ಯಾರಿಗೆ? ಸ್ವಯಂ ಹಿಂದೂವಿಗೆ, ಅದು ಹಿಂದೂವಿಗೆ ತಿಳಿಯುವುದೇ? ಇಲ್ಲಾ, ಏಕೆಂದರೆ ಪರೀಕ್ಷೆ ಮಾಡಿ ನೋಡಲು ಹಿಂದೂವಿಗೆ ಭಯ, ಎಲ್ಲಿ ತನ್ನ ನಂಬಿಕೆಗಳೆಲ್ಲಾ ಸತ್ಯವಾಗದೇ ಹೋಗುತ್ತವೋ ಅಂತ. ಅದಕ್ಕೆ ಸುಳ್ಳಿನ ಅಮಲಿನಲ್ಲೇ ಮತ್ತೊಬ್ಬರ ಧೂಷಣೆ ಮಾಡಿಕೊಂಡಿದ್ದಾನೆ, ಈ ದೌರ್ಬಲ್ಯವನ್ನು ಚೆನ್ನಾಗಿ ಅರಿತಿರುವ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಹೈ-ಫೈ ಲೈಫ್’ಗಾಗಿ ಹಿಂದೂವನ್ನು ಎಲ್ಲಾ ರೀತಿಯಲ್ಲೂ ಗುಲಾಮಗಿರಿಗೆ ಒಳಪಡಿಸುತ್ತಿದ್ದಾರೆ, ಮುಖ್ಯವಾಗಿ ನಿತ್ಯನಾರಕಿಗಳನ್ನು.

ಆತ ಬುದ್ಧನೋ, ಜೀಸಸ್ ನೋ, ತಿಮ್ಮಪ್ಪನೋ, ವೆಂಕಟ- ರಮಣ ಈಶ್ವರನೋ
ತನ್ನ ಅನುಯಾಯಿಗಳಿಗೆ ಪರೀಕ್ಷೆ ಮಾಡಿ ತಿಳಿಯುವ ಬುದ್ಧಿ ಕೊಡಲಿ.

ಪರೀಕ್ಷೆ ಮಾಡಿ ನೋಡೋದೆಲ್ಲಾ ಮುಖ್ಯವಲ್ಲಾ, ಮಸೀದಿ ಮುಂದೆ ಡಿಜೆ ಹಾಕೊಂಡು ಕುಣಿಯೋದು ಮುಖ್ಯ…!

ಆಕಾಶ್ ಮಂಡ್ಯ

Related Articles

ಇತ್ತೀಚಿನ ಸುದ್ದಿಗಳು

You cannot copy content of this page