Monday, September 23, 2024

ಸತ್ಯ | ನ್ಯಾಯ |ಧರ್ಮ

ತಾವು HIV ಪರೀಕ್ಷೆ ಮಾಡಿಸಿಕೊಂಡಿರಾ? ಮಾಡಿಸಿಲ್ಲವಾದರೆ ಬೇಗ ಮಾಡಿಸಿ, ರಾಜಕಾರಣಕ್ಕಿಂತ ಅರೋಗ್ಯ ಮುಖ್ಯ: ಆರ್‌ ಅಶೋಕ ಅವರಿಗೆ ಕಾಂಗ್ರೆಸ್‌ ಸಲಹೆ

ಬೆಂಗಳೂರು:ಕಾಂಗ್ರೆಸ್‌ ಪಕ್ಷದ ಕರ್ನಾಟಕದ ಟ್ವಿಟರ್‌ ಹ್ಯಾಂಡಲ್‌ ವಿಪಕ್ಷ ನಾಯಕ ಆರ್‌ ಅಶೋಕ ಅವರಿಗೆ ಆದಷ್ಟು ಬೇಗ HIV ಪರೀಕ್ಷೆ ಮಾಡಿಸಿಕೊ‍ಳ್ಳುವಂತೆ ಸಲಹೆ ನೀಡಿ ಟ್ವೀಟ್‌ ಮಾಡಿದೆ.

ಬೆಂಗಳೂರಿನ ಮಲ್ಲೇಶ್ವರದ ಉದ್ಯಾನವೊಂದರಲ್ಲಿ ಪಾರ್ಕಿನ ಗೇಟ್‌ ಮುರಿದುಬಿದ್ದು ಬಾಲಕನೊಬ್ಬ ತೀರಿಕೊಂಡಿದ್ದ. ಈ ಕುರಿತು ಆರ್‌ ಅಶೋಕ “ಫುಲ್ ಟೈಂ ಕೆಪಿಸಿಸಿ ಅಧ್ಯಕ್ಷರು ಹಾಗು ಪಾರ್ಟ್ ಟೈಂ ಬೆಂಗಳೂರು ಅಭಿವೃದ್ದಿ ಮಂತ್ರಿ ಡಿ ಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಾಗಿನಿಂದ ಬೆಂಗಳೂರು ನಗರದ ಆಡಳಿತ ಹಳ್ಳ ಹಿಡಿದಿದ್ದು, ಆಟವಾಡಲು ಪಾರ್ಕ್ ಗೆ ಹೋದ ಮಕ್ಕಳು, ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋದವರು ಸುರಕ್ಷಿತವಾಗಿ ಮನೆಗೆ ಮರಳುವ ನಂಬಿಕೆಯೇ ಇಲ್ಲದಂತಾಗಿದೆ. ‌

ಬಿಬಿಎಂಪಿ ವ್ಯಾಪ್ತಿಯ ಎಲ್ಲ ಪಾರ್ಕ್ ಗಳಲ್ಲಿರುವ ಮಕ್ಕಳ ಆಟದ ಉಪಕರಣಗಳು, ಜಿಮ್ ಉಪಕರಣಗಳು, ಆಸನಗಳು, ಗೇಟ್ ಗಳನ್ನ ಸಮೀಕ್ಷೆ ನಡೆಸಿ ಅಗತ್ಯವಿರುವ ಕಡೆಗಳಲ್ಲಿ ದುರಸ್ತಿ ಮಾಡಿಸಬೇಕು ಎಂದು ಡಿಸಿಎಂ ಅವರನ್ನ ಒತ್ತಾಯಿಸುತ್ತೇನೆ” ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಕರ್ನಾಟಕ ಕಾಂಗ್ರೆಸ್‌ ವಿಭಾಗವು “ಮಾನ್ಯ ಆರ್‌ ಅಶೋಕ ಅವರೇ, ತಾವು HIV ಪರೀಕ್ಷೆ ಮಾಡಿಸಿಕೊಂಡಿರಾ? ಮಾಡಿಸಿಲ್ಲವಾದರೆ ಬೇಗ ಮಾಡಿಸಿ, ರಾಜಕಾರಣಕ್ಕಿಂತ ಅರೋಗ್ಯ ಮುಖ್ಯ” ಎಂದು ಸಲಹೆ ನೀಡಿದೆ.

ಮುಂದವರೆದು “ಸುಳ್ಳಿನ ಸಾಮ್ರಾಟ್ ಅಶೋಕ್ ಅವರೇ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಅವರ ವೈಫಲ್ಯವನ್ನು ಪರೋಕ್ಷವಾಗಿ ಹೇಳಿ ಅವರ ಮೇಲಿನ ಅಸಹನೆಯನ್ನು ವ್ಯಕ್ತಪಡಿಸಿದಿರಾ? ಅಥವಾ ಆ ಕ್ಷೇತ್ರದ ಶಾಸಕ ನಿಮ್ಮದೇ ಪಕ್ಷದವರು ಎನ್ನುವುದನ್ನು ಮರೆತಿದ್ದೀರಾ?” ಎಂದು ಪ್ರಶ್ನಿಸಿದೆ.

“ಒಬ್ಬ ಶಾಸಕ ತನ್ನ ಕ್ಷೇತ್ರದ ಆಗುಹೋಗುಗಳ ಬಗ್ಗೆ ಗಮನಿಸಬೇಕಾದ ಹೊಣೆಗಾರಿಕೆಯನ್ನು ನಿಮ್ಮ ಶಾಸಕರು ಮರೆತಿದ್ದಾರೆಯೇ? ಗೇಟ್ ಮುರಿದಿದ್ದು ಹಿಂದಿನ ನಿಮ್ಮ ಸರ್ಕಾರದ 40% ಕಮಿಷನ್ನಿನ ಪ್ರಭಾವವೇ? ಹಿಂದೆ ನೀವೇ ಬೆಂಗಳೂರು ಉಸ್ತುವಾರಿಯಾಗಿದ್ದಾಗ ರಸ್ತೆ ಗುಂಡಿಗೆ ನೂರಾರು ಜನ ಬಲಿಯಾಗಿದ್ದನ್ನು, ಹೈಕೋರ್ಟ್ ಛಿಮಾರಿ ಹಾಕಿದ್ದನ್ನು ಮರೆತು ಕುಳಿತಿದ್ದೀರಾ?

ಅಶೋಕ್ ಅವರೇ, ನೀವೂ ಸೇರಿದಂತೆ ನಿಮ್ಮ ಪಕ್ಷದ ಶಾಸಕರು ಕ್ಷೇತ್ರದ ಹೊಣೆಗಾರಿಕೆ ಪ್ರದರ್ಶಿಸಲಿ, ಇಲ್ಲವೇ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಅದು ಬಿಟ್ಟು ಅರ್ಥವಿಲ್ಲದ ಆರೋಪ ಮಾಡಿದರೆ ವ್ಯರ್ಥವಾಗುತ್ತದೆ!” ಎಂದು ಕುಟುಕಿದೆ.

ಪ್ರಸ್ತುತ ಬಂಧನದಲ್ಲಿರುವ ಬಿಜೆಪಿ ಶಾಸಕ ಆರ್‌ ಅಶೋಕ್‌ ಅವರಿಗೆ HIV ಇಂಜೆಕ್ಷನ್‌ ಕೊಡಿಸುವ ಸಂಚು ರೂಪಿಸಿದ್ದರು ಎನ್ನುವ ಆರೋಪಗಳು ಇತ್ತೀಚೆಗೆ ಸುದ್ದಿ ಮಾಧ್ಯಮಗಳಲ್ಲಿ ಹರಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಈ ನಡುವೆ ಘಟನೆಯಲ್ಲಿ ಮೃತನಾದ ಬಾಲಕನ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ.

ಓದುಗರ ಗಮನಕ್ಕೆ: ಈ ವರದಿ ಪ್ರಕಟವಾದ ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆಸ್‌ ತನ್ನ ಟ್ವೀಟ್‌ ಡಿಲೀಟ್‌ ಮಾಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page